Wednesday, October 30, 2013

ಗಾಂಧಿ ಎಂಬ ಹೆಮ್ಮರದ ಕೆಳಗೆ ಹೂತುಹಾಕುವ ಮುನ್ನ…



ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!
ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ.
ಇದಾಗಿ ಎರಡು ವಾರಗಳಾಗಿವೆಯಷ್ಟೆ.
ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು ’10 ಜನಪಥ್‌’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು. ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು. ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು.
ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು.
ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. ‘ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ’ ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು!
ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು. ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು ‘ಅಸಲ್ ಉತ್ತರ್‌’ (True North)  ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು  ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.
ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರು ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ. ಹಾಗಾಗಿಯೇ ‘ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ’ ಎಂಬ ಕರೆಗೆ 50 ಕೋಟಿ ಭಾರತೀಯರು ಮನಃಪೂರ್ವಕವಾಗಿ ಓಗೊಟ್ಟಿದ್ದರು. ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು. ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕುಗಳು.
ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು. ಸೋವಿಯತ್ ರಷ್ಯಾ, ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.
ಮುಂದಿನದ್ದು ಮಹಾನ್ ದುರಂತ!
ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. ‘ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ’ ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು. ಅಯೂಬ್‌ಖಾನ್ ಒಪ್ಪದೇ ಹೋದಾಗ,”Then you will have to find another PM” (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯಬೇಕಾಗುತ್ತದೆ!) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು. ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು! ಶಾಸ್ತ್ರೀಜಿ ಅನುಮಾನಾಸ್ಪದವಾಗಿ, ‘ಹೃದಯಾಘಾತ’ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು. ಹಾಗಾಗಿ ಶಾಸ್ತ್ರಿಯವರ ದುರಂತಮಯ ಅಧ್ಯಾಯ ಸಾವಿನ ನಂತರವೂ ಮುಂದುವರಿಯಿತು.
ನೀಲಿಗಟ್ಟಿದ್ದ ದೇಹ ಭಾರತಕ್ಕೆ ಬಂತು!
ಆದರೆ ಶವ ಪರೀಕ್ಷೆ ನಡೆಯಲಿಲ್ಲ. ಕೆಲವು ಕೃತಘ್ನ ಭಾರತೀಯರೇ ಶಾಸ್ತ್ರಿಯವರನ್ನು ಇತಿಹಾಸದ ಕಸದ ತೊಟ್ಟಿಗೆ ದೂಡಿ ಕೈ ತೊಳೆದುಕೊಳ್ಳಲು ವ್ಯವಸ್ಥಿತ ಪಿತೂರಿ ನಡೆಸಿದ್ದರು. ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ಹವಣಿಸಿದರು. ಮೊದಲೇ ನೊಂದಿದ್ದ ಪತ್ನಿ ಲಲಿತಾಶಾಸ್ತ್ರಿ ದೇಶದ ಜನರ ಮುಂದೆ ಬಣ್ಣ ಬಯಲು ಮಾಡುವ ಬೆದರಿಕೆ ಹಾಕಿದಾಗ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಲಾಯಿತು. ಅಷ್ಟೇ ಅಲ್ಲ, ಶಾಸ್ತ್ರೀಜಿಯವರ ಸಮಾಧಿ ಮೇಲೆ ಅವರದ್ದೇ ಆದ ‘ಜೈ ಜವಾನ್, ಜೈ ಕಿಸಾನ್‌’ ಘೋಷಣೆಯನ್ನು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಮತ್ತೆ ಲಲಿತಾಶಾಸ್ತ್ರಿ ಉಪವಾಸ ಸತ್ಯಾಗ್ರಹ ಮಾಡುವೆನೆಂದು ಬೆದರಿಕೆಯೊಡ್ಡಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಶಾಸ್ತ್ರೀಜಿ ಭಾವಚಿತ್ರ ಕಾಂಗ್ರೆಸ್ ಕಾರ್ಯಾಲಯದಿಂದಲೂ ಕಣ್ಮರೆಯಾಯಿತು. ಇಂದಿರಾಪ್ರೇರಿತ ಕಾಂಗ್ರೆಸ್ಸಿಗರ ಪಿತೂರಿ ಆ ಮಟ್ಟಿಗಿತ್ತು.
1904, ಅಕ್ಟೋಬರ್ 2ರಂದು ಕಾಶಿ ಸಮೀಪದ ಮೊಘಲ್ ಸರಾಯ್‌ನಲ್ಲಿ ಬಡ ಶಿಕ್ಷಕರ ಮಗನಾಗಿ ಹುಟ್ಟಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರದ್ದು ಏಳುಬೀಳಿನ ಹಾದಿ. ಪ್ರಧಾನಿ ಸ್ಥಾನ ಪಿತ್ರಾರ್ಜಿತ ಆಸ್ತಿಯಂತೆ ಬಂದಿದ್ದಲ್ಲ. ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ಅವರು 1921ರಲ್ಲಿ ಶಿಕ್ಷಣಕ್ಕೆ ಶರಣು ಹೊಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಆರು ವರ್ಷ ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಕೇಂದ್ರ ಸಚಿವರಾದ ಶಾಸ್ತ್ರಿಯವರ ಏಳಿಗೆಯನ್ನು ನೆಹರು ಸಹಿಸದಾದರು. ಅವರ ಅಸಹನೆ ಯಾವ ಮಟ್ಟಕ್ಕೆ ತಲುಪಿತೆಂದರೆ ಎಲ್ಲ ಖಾತೆಗಳನ್ನು ಕಿತ್ತುಕೊಂಡು ‘ಖಾತೆ ರಹಿತ’ ಮಂತ್ರಿಯಾಗಿಸಿ ಅವಮಾನವನ್ನೂ ಮಾಡಿದರು. ಎಲ್ಲಿ ಶಾಸ್ತ್ರಿಯವರು ಅಡ್ಡಗಾಲಾಗುತ್ತಾರೋ ಎಂಬ ಭಯದಿಂದ ‘ನೆಹರು ನಂತರ ಯಾರು?’ ಎಂಬ ಪ್ರಶ್ನೆಯನ್ನು ಸ್ವತಃ ಹುಟ್ಟು ಹಾಕಿ ತನ್ನ ಮಗಳು ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹವಣಿಸಿದರು. ಶಾಸ್ತ್ರಿಯವರ ನಿಗೂಢ ಮರಣದೊಂದಿಗೆ ನೆಹರು ಆಸೆ ಈಡೇರಿತು. ಇಂದಿರಾ ಪ್ರಧಾನಿಯಾದರು. ಭಾರತ ಮತ್ತೆ ನೆಹರು ಕುಟುಂಬಕ್ಕೆ ನೇಣು ಹಾಕಿಕೊಂಡಿತು. ಶಾಸ್ತ್ರೀಜಿ ಪಠ್ಯ ಪುಸ್ತಕಗಳ ಒಂದೆರಡು ಪ್ಯಾರಾಗಳಿಗೆ ಸೀಮಿತರಾದರು. ಇತಿಹಾಸ ತನ್ನ ಧೀರ ಪುತ್ರನನ್ನೇ ಮರೆಯುವಂತಾಯಿತು.
ಏಕೆ ಈ ಮಾತು ಹೇಳಬೇಕಾಗಿದೆ ಗೊತ್ತಾ?
ಟ್ವಿಟ್ಟರ್‌ನಲ್ಲಿ ಭಾರತದ ಪ್ರಧಾನಿಯವರ ಅಧಿಕೃತ ಹ್ಯಾಂಡಲ್ @PMOIndia ಇದೆ. “ಗಾಂಧೀಜಿಯವರ 144ನೇ ಹುಟ್ಟುಹಬ್ಬವಾದ ಇಂದು ಪ್ರಧಾನಿ ಮನಮೋಹನ್ ಸಿಂಗ್ ರಾಜಘಾಟ್‌ಗೆ ತೆರಳಿ ಗೌರವ ಸಲ್ಲಿಸಿದರು” ಎಂದು ಅಕ್ಟೋಬರ್ 2ರಂದು ಟ್ವೀಟ್ ಕೂಡ ಮಾಡಿದ್ದಾರೆ. ಆದರೆ ತೀರಾ ಬೇಸರದ ಸಂಗತಿಯೆಂದರೆ ಅಕ್ಟೋಬರ್ 2ರಂದೇ ಜನಿಸಿದ ಈ ದೇಶದ ಮತ್ತೊಬ್ಬ ಸುಪುತ್ರ ಹಾಗೂ ಜನಪ್ರಿಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಒಂದು ಸಣ್ಣ ಉಲ್ಲೇಖ ಮಾಡುವ ಸೌಜನ್ಯವನ್ನೂ ತೋರಲಿಲ್ಲ. ಮೊನ್ನೆ ಆಗಸ್ಟ್ 20 ರಾಜೀವ್ ಗಾಂಧಿಯವರ ಜನ್ಮದಿನದಂದು ಕೇವಲ 3 ಪ್ರಮುಖ ಇಂಗ್ಲಿಷ್ ಪತ್ರಿಕೆಗಳಿಗೆ ಭಾರತ ಸರ್ಕಾರ ರಾಜೀವ್ ಭಜನೆ ಮಾಡುವ 48 ಜಾಹೀರಾತು ನೀಡಿತ್ತು! ಇದು ದೇಶವನ್ನಾಳುತ್ತಿರುವವರ ಮನಸ್ಥಿತಿ ನೋಡಿ…
ಆದರೇನಂತೆ…
ಬಹಳ ಖುಷಿ ಕೊಡುವ ಸಂಗತಿಯೆಂದರೆ ಟ್ವಿಟ್ಟರ್‌ನಲ್ಲಿ ಈ ದೇಶದ ಯುವ ಜನ ಗಾಂಧೀಜಿಗೆ ಸರಿಸಮನಾಗಿ ಶಾಸ್ತ್ರೀಜಿಯವರನ್ನೂ ನೆನಪಿಸಿಕೊಂಡರು.
ನಾವೂ ಮರೆಯುವುದು ಬೇಡ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...