ಡಿ ವಿ ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಅಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.
ಶಿಕ್ಷಣ
ಡಿ ವಿ ಜಿ ಅವರು 1887, ಮಾರ್ಚ್ 17 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ 1905 ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.
ವೃತ್ತಿ ಜೀವನ
ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.
ಪತ್ರಿಕೋದ್ಯಮ
ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು “ಸೂರ್ಯೋದಯ ಪ್ರಕಾಶಿಕ” ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. “ವೀರಕೇಸರಿ” ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ “ಹಿಂದೂ” ಪತ್ರಿಕೆಗೆ ಬರೆದರು. ನಂತರ “ಮೈಸೂರು ಟೈಮ್ಸ್” ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.
ಸಾಹಿತ್ಯ
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಬರೆದ ಲೇಖನ ಡಿ ವಿ ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.
ಕನ್ನಡ ಕಾವ್ಯಕ್ಷೇತ್ರದಲ್ಲಿ “ಮಂಕುತಿಮ್ಮನ ಕಗ್ಗ” ಹಾಗೂ “ಮರುಳ ಮುನಿಯನ ಕಗ್ಗ” ದ ಮೂಲಕ ಡಿ ವಿ ಜಿ ಮನೆಯ ಮಾತಾದವರು:
“ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು — ಮಂಕುತಿಮ್ಮ ||”
ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು. ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ “ಮಹನೀಯರು”, “ಜ್ಞಾಪಕ ಚಿತ್ರಶಾಲೆ” ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.
ಡಿ ವಿ ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು “ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ” ಎಂದಿದ್ದಾರೆ.
ಕರ್ನಾಟಕ ಸರ್ಕಾರ ಡಿ ವಿ ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ “ಡಿ ವಿ ಜಿ ಕೃತಿ ಶ್ರೇಣಿ”ಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ ೧-೨, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ.
ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.
ಗೌರವಗಳು / ಪ್ರಶಸ್ತಿಗಳು
ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ ಪ್ರಶಸ್ತಿ” ನೀಡಿ ಗೌರವಿಸಿತು.
ನಿಧನ
೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.
ಗುಂಡಪ್ಪನವರ ಸಮಗ್ರ ಸಾಹಿತ್ಯ
ಕವಿತೆ
- ನಿವೇದನ
- ಉಮರನ ಒಸಗೆ
- ಮಂಕುತಿಮ್ಮನ ಕಗ್ಗ – I
- ಮರುಳ ಮುನಿಯನ ಕಗ್ಗ – II
- ಶ್ರೀರಾಮ ಪರೀಕ್ಷಣಂ
- ಅ೦ತಃ ಪುರಗೀತೆ
- ಗೀತ ಶಾಕುಂತಲಾ
ನಿಬಂಧ
- ಜೀವನ ಸೌಂದರ್ಯ ಮತ್ತು ಸಾಹಿತ್ಯ
- ಸಾಹಿತ್ಯ ಶಕ್ತಿ
- ಸಂಸ್ಕೃತಿ
- ಬಾಳಿಗೊಂದು ನಂಬಿಕೆ
ನಾಟಕ
- ವಿದ್ಯಾರಣ್ಯ ವಿಜಯ
- ಜಾಕ್ ಕೇಡ್
- ಮ್ಯಾಕ್ ಬೆಥ್
ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ — ಮಂಕುತಿಮ್ಮ ||
ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? — ಮಂಕುತಿಮ್ಮ ।।
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು — ಮಂಕುತಿಮ್ಮ ||
ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ — ಮಂಕುತಿಮ್ಮ |
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು — ಮಂಕುತಿಮ್ಮ ||
ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು — ಮಂಕುತಿಮ್ಮ ||
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ — ಮಂಕುತಿಮ್ಮ ।।
ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ — ಮಂಕುತಿಮ್ಮ ।।
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು — ಮಂಕುತಿಮ್ಮ ।।
ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ — ಮಂಕುತಿಮ್ಮ ||
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು — ಮಂಕುತಿಮ್ಮ ||
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು — ಮಂಕುತಿಮ್ಮ ||
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ — ಮಂಕುತಿಮ್ಮ ||
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ — ಮಂಕುತಿಮ್ಮ ।।
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ — ಮಂಕುತಿಮ್ಮ ।।
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ — ಮಂಕುತಿಮ್ಮ ।
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ — ಮಂಕುತಿಮ್ಮ ।।
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ — ಮಂಕುತಿಮ್ಮ ।।
ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು – ಮರಳ ಮುನಿಯ ।।
ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? — ಮಂಕುತಿಮ್ಮ ।।
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು — ಮಂಕುತಿಮ್ಮ ।।
ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ — ಮಂಕುತಿಮ್ಮ ।।
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು — ಮಂಕುತಿಮ್ಮ ।।
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು — ಮಂಕುತಿಮ್ಮ ||
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಓಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು? – ಮಂಕುತಿಮ್ಮ ||
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಓಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು? – ಮಂಕುತಿಮ್ಮ ||
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||
ಮುಸುಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ? – ಮಂಕುತಿಮ್ಮ ||
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟೂ |
ಓದವಿಪರು ದಿಟದರಿವ – ಮಂಕುತಿಮ್ಮ ||
ಆಹ | ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟೊ? – ಮಂಕುತಿಮ್ಮ ||
ಮೇಲೆ ಕೆಳಗೊಳಗೆ ಬಿಳಿಸುತ್ತಲೆತ್ತೆತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧುಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡುಕೊಡದೆ – ಮಂಕುತಿಮ್ಮ ||
ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ |
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು|
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ದಾಳಿ|
ಉಗ್ಗು ಬಾಯ್ಚಪಲವಿದು -ಮರುಳಮುನಿಯ|
ಮರುಳಮುನಿಯನ ಮನಸು ಸರಳಬಾಳ್ವೆಯ ಕನಸು|
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು ||
ಕೆರೆಯಿನೆದ್ದೆಲೆಯೆರಚಿ ತಣಿವು ತುಂತುರನಿನಿತು |
ಮರಳಿ ತೆರೆ ಸೇರ್‍ವುದಲ-ಮರುಳಮುನಿಯ|
ತುರಿಬಂದ ಮೈಯ ಬೆರಲಿಂ ಕೆರೆವುದೊಂದು ಸುಖ |
ಎರೆದು ಬಿಸಿನೀರ ಪಲ್ಕಿರಿವುದೊಂದು ಸುಖ ||
ಉರಿಯೆಂದು ಲೇಪಗಳ ಸವರಲಿನ್ನೊಂದು ಸುಖ |
ನರಸುಖಗಳಿವು ತಾನೆ? – ಮರುಳಮುನಿಯ ||
ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಜನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ | ಮರುಳಮುನಿಯ ||
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು — ಮಂಕುತಿಮ್ಮ ||
ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ
ಅನುಭವಿಸಿ ಚಪ್ಪರಿಸೊ-ಮರುಳಮುನಿಯ ||
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|
ಇಂದು ನಂಬಿಹುದೆ ಮುಂದೆಂದುಮೆಂದಲ್ಲ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು|
ಇಂದಿಗೀ ಮತವುಚಿತ – ಮಂಕುತಿಮ್ಮ||
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ|
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ|
ಸ್ಪರ್ಧಿಯೆ ತ್ರಿವಿಕ್ರಮಗೆ? – ಮಂಕುತಿಮ್ಮ||
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ,
ಹಿತವಿರಲಿ ವಚನದಲಿ, ಋತವ ಬಿಡದಿರಲಿ;
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ,
ಅತಿಬೇಡವೆಲ್ಲಿಯುಂ – ಮಂಕುತಿಮ್ಮ
ಬಂಧನವದೇನಲ್ಲ ಜೀವಜೀವಪ್ರೇಮ
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ – ಮಂಕುತಿಮ್ಮ
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಉನ್ನು ತೊಂದೆ ನೀರು ಕುಡಿದು||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? – ಮಂಕುತಿಮ್ಮ ||
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ|
ಜೀವನಪರೀಕ್ಷೆ ಬಂದಿದಿರು ನಿಲುವನಕ||
ಭಾವಮರ್ಮಂಗಳೇಳುವುವಾಗ ತಳದಿಂದ|
ದೇವರೇ ಗತಿಯಾಗ – ಮಂಕುತಿಮ್ಮ