*ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ |*
*ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ || (೧೧.೪೫)*ವಿಶ್ವರೂಪದರ್ಶನದಿಂದ ಮನಸ್ಸಿನಲ್ಲಿ ತುಂಬಾ ತಲ್ಲಣಗೊಂಡಿರುವ ಅರ್ಜುನನು ಅದೇ ಮನಃಸ್ಥಿತಿಯಲ್ಲಿಯೇ ತನ್ನ ಜೀವನದಲ್ಲಿ ಹಿಂದೆ ಘಟಿಸಿರಬಹುದಾದ ತಪ್ಪುಗಳ ಬಗ್ಗೆ ಕ್ಷಮಾಪಣೆಯನ್ನು ಭಕ್ತಿಯಿಂದ ಪ್ರಾರ್ಥಿಸಿಕೊಂಡಿದ್ದನ್ನು ಹಿಂದಿನ ನಾಲ್ಕು ಶ್ಲೋಕಗಳಲ್ಲಿ ಗಮನಿಸಿದ್ದಾಗಿದೆ. ಇದೀಗ ಎರಡು ಶ್ಲೋಕಗಳಲ್ಲಿ ಅರ್ಜುನನು ವಿಶ್ವರೂಪದ ಉಪಸಂಹಾರ ಮಾಡಿಕೊಳ್ಳುವಂತೆ ಭಗವಂತನಲ್ಲಿ ಕೇಳಿಕೊಳ್ಳುತ್ತಿದ್ದಾನೆ.
ಶ್ಲೋಕದ ಸಂಕ್ಷಿಪ್ತಾರ್ಥ- `ಹೇ ದೇವ! ದೇವೇಶ! ಜಗನ್ನಿವಾಸ! ಹಿಂದೆಂದೂ ನೋಡಿರದ ನಿನ್ನ ಈ ವಿಶ್ವರೂಪವನ್ನು ನೋಡಿ ಹರ್ಷಾತಿರೇಕದಿಂದ ರೋಮಾಂಚಿತನಾಗಿದ್ದೇನೆ. ಅಲ್ಲದೇ ಜೊತೆಯಲ್ಲಿ ಭಯಾತಿರೇಕವೂ ಆಗಿರುವುದರಿಂದ ನನ್ನ ಮೈ-ಮನಗಳು ನಡುಗುತ್ತಿವೆ. ಆದ್ದರಿಂದ ನಿನ್ನ ಮೊದಲಿನ ರೂಪವನ್ನು ನನಗೆ ತೋರಿಸು’.
ಈ ಶ್ಲೋಕದಲ್ಲಿ ಅರ್ಜುನನು ಭಗವಂತನನ್ನು ದೇವ! ದೇವೇಶ! ಜಗನ್ನಿವಾಸ! ಈ ಮೂರು ಶಬ್ದಗಳಿಂದ ಸಂಬೋಧಿಸಿದ್ದಾನೆ. ದೇವ ಎಂದರೆ ಪ್ರಕಾಶಸ್ವರೂಪನು. ದೇವೇಶನೆಂದರೆ ಇಂದ್ರಾದಿ ಸಮಸ್ತ ದೇವತಾಗಣಗಳಿಗೂ ಒಡೆಯನು, ಮತ್ತು ಜಗನ್ನಿವಾಸನೆಂದರೆ ಜಗತ್ತಿಗೆ ಆಶ್ರಯನು ಎಂದರ್ಥ.
ಅರ್ಜುನನಿಗೆ ವಿಶ್ವರೂಪದರ್ಶನದಿಂದ ಬಹಳ ಹರ್ಷವೂ ಆಗಿದೆ, ಬಹಳ ಭಯವೂ ಆಗಿದೆ. ಅವನಲ್ಲಿ ಹರ್ಷಾತಿರೇಕದ ಚಿಹ್ನೆಗಳಾದ ರೋಮಾಂಚನವೇ ಮೊದಲಾದವುಗಳು ತೋರಿಕೊಂಡಿವೆ. ಹಾಗೆಯೇ ಭಯಾತಿರೇಕದಿಂದುಂಟಾಗುವ ಮೈನಡುಕವೇ ಮುಂತಾದವುಗಳೂ ಉಂಟಾಗಿವೆ. ಇವೆರಡೂ ಭಾವಗಳೂ ಒಟ್ಟಿಗೇ ಉಂಟಾಗುವುದು ತುಂಬಾ ದುರ್ಲಭವೇ ಸರಿ. ಆದರೂ ತೀರಾ ಅಪರೂಪಕ್ಕೊಮ್ಮೆ ಈ ರೀತಿಯ ಭಾವಾತಿರೇಕಗಳು ಒಟ್ಟಿಗೇ ಆಗುವುದುಂಟು. ಇದಕ್ಕೆ ಕಾರಣವೂ ಉಂಟು; ಅರ್ಜುನನಿಗೆ ಭಗವಂತನ ಈಶ್ವರೀಯ ಸ್ವರೂಪವನ್ನು ನೋಡಬೇಕೆಂಬ ಕುತೂಹಲವಿತ್ತು. ಆ ಕುತೂಹಲಕ್ಕೆ ತಕ್ಕಂತೆ ದೇವರ ದರ್ಶನವಾದಾಗ ಹರ್ಷವಾಗುವುದು ಸಹಜ. ಅಲ್ಲದೇ ಭಗವಂತನ ಸ್ವರೂಪ ಆನಂದಮಯವಾದದ್ದು. ಅವನು ಯಾವುದೇ ಸ್ವರೂಪದಲ್ಲಿ ಪ್ರಕಟನಾದರೂ ಆನಂದವನ್ನೇ ಉಂಟುಮಾಡುತ್ತಾನೆ. ಇದು ಅವನ ಹರ್ಷಕ್ಕೆ ಕಾರಣ. ವಿಶ್ವರೂಪದರ್ಶನದಲ್ಲಿ ಅನೇಕ ಭಯಾನಕ ದೃಶ್ಯಗಳಿವೆ. ಉರಿಯುವ ಉಂಡೆಯಂತೆ ಸುಡುವ ಕಣ್ಣುಗಳು, ಮೃತ್ಯುರೂಪದಂತೆ ಕಾಣುವ ಅನೇಕ ಬಾಯಿಗಳು, ಅವುಗಳಲ್ಲಿ ಪ್ರವೇಶಿಸುತ್ತಿರುವ ಯೋಧರು, ಹೀಗೆ ಇನ್ನೂ ಅನೇಕ ಭಯಾನಕ ದೃಶ್ಯಗಳು ವಿಶ್ವರೂಪದಲ್ಲಿವೆ. ಇದು ಅರ್ಜುನನ ಭಯಕ್ಕೆ ಕಾರಣ. ಹೀಗಾಗಿ ಅವನಿಗೆ ಹರ್ಷ ಮತ್ತು ಭಯ ಎರಡೂ ಒಮ್ಮೆಲೇ ಉಂಟಾಗಿವೆ. ಹಿಂದೆಂದಿಗೂ ನೋಡಿರದ, ನಿರೀಕ್ಷಿಸಿಯೂ ಇರದ ಅದ್ಭುತರೂಪವನ್ನು ನೋಡಿದ್ದರಿಂದ ಅರ್ಜುನನ ಮನಸ್ಸು ಮತ್ತು ಶರೀರಗಳು ಕಂಪಿಸುತ್ತಿವೆ. ಆದ್ದರಿಂದ ವಿಶ್ವರೂಪವನ್ನು ಉಪಸಂಹಾರ ಮಾಡಿ, ಕೃಷ್ಣನ ರೂಪವನ್ನೇ ತನಗೆ ತೋರಿಸು ಎಂದು ಕೇಳಿಕೊಳ್ಳುತ್ತಿದ್ದಾನೆ.
ಅರ್ಜುನನಿಗೆ ಕೃಷ್ಣನ ರೂಪದಲ್ಲಿಯೇ ಭಕ್ತಿ. ಒಬ್ಬೊಬ್ಬರಿಗೆ ಭಗವಂತನ ಒಂದೊಂದು ರೂಪದಲ್ಲಿ ಭಕ್ತಿಯಿರುತ್ತದೆ. ಅನೇಕ ರೂಪದಿಂದ ಇರುವ ದೇವರು ಒಬ್ಬನೇ ಆಗಿದ್ದರೂ ಭಕ್ತರ ಭಕ್ತಿ ವಿಚಿತ್ರವಾಗಿರುತ್ತದೆ. ಯಾವುದೋ ಒಂದು ರೂಪವನ್ನು ಕಂಡರೆ, ಅವರಿಗೆ ಅತಿ ಇಷ್ಟವಾಗಿರುತ್ತದೆ. ಕೃಷ್ಣಾವತಾರದಲ್ಲಿಯೇ ಸ್ಯಮಂತಕೋಪಾಖ್ಯಾನ ಬರುತ್ತದೆ. ಅದರಲ್ಲಿ ಸ್ಯಮಂತಕ ಮಣಿಯನ್ನು ಹುಡುಕುತ್ತಾ ಶ್ರೀಕೃಷ್ಣನು ಜಾಂಬವಂತನ ಗುಹೆಯನ್ನು ಹೊಕ್ಕ ಕಥೆ ಬರುತ್ತದೆ. ಜಾಂಬವಂತನು ಶ್ರೀರಾಮನ ಭಕ್ತನು. ಮೊದಲು ಅವನಿಗೆ ಕೃಷ್ಣನ ಪರಿಚಯವೇ ಹತ್ತಲಿಲ್ಲ. ಸ್ಯಮಂತಕ ಮಣಿಗೋಸ್ಕರ ಅವನು ಕೃಷ್ಣನ ಜೊತೆಯಲ್ಲಿ ಬಾಹುಯುದ್ಧ ಮಾಡಿದನು. ಯುದ್ಧದಲ್ಲಿ ಆತನಿಗೆ ಕೃಷ್ಣನು ಯಾವುದೋ ವೈಷ್ಣವಶಕ್ತಿ ಇರಬಹುದೆಂಬ ಸಂಶಯ ಮೂಡಿತು. ಶ್ರೀಕೃಷ್ಣನು ಆಗ ಅವನಿಗೆ ರಾಮನ ರೂಪದಲ್ಲಿಯೇ ದರ್ಶನ ಕೊಟ್ಟನು. ಏಕೆಂದರೆ ಜಾಂಬವಂತನಿಗೆ ರಾಮನೆಂದರೆ ಇಷ್ಟ. ಈ ರೀತಿಯ ಭಕ್ತಿಗೆ ರಾಗಭಕ್ತಿ ಎಂದು ಕರೆಯುತ್ತಾರೆ. ಅರ್ಜುನನದು ರಾಗಭಕ್ತಿ. ಆದ್ದರಿಂದಲೇ ಆತ ಕೃಷ್ಣರೂಪವನ್ನೇ ನೋಡಲು ಬಯಸುತ್ತಿದ್ದಾನೆ. ಇನ್ನೊಂದು ವಿಧದ ಭಕ್ತಿ ಇರುತ್ತದೆ. ದೇವರ ಯಾವ ಸ್ವರೂಪವನ್ನು ನೋಡಿದರೂ ಇಷ್ಟವೆಂಬ ಮನಃಸ್ಥಿತಿ. ಈ ರೀತಿಯ ಭಕ್ತಿಗೆ ನಿಷ್ಠಾಭಕ್ತಿ ಎಂದು ಹೆಸರು. ವಸಿಷ್ಠ, ವ್ಯಾಸ, ಶುಕ ಮುಂತಾದವರಿಗೆ ನಿಷ್ಠಾಭಕ್ತಿ ಇತ್ತು.
ಅರ್ಜುನನ ರಾಗಭಕ್ತಿಯ ಪ್ರಾರ್ಥನೆ ಮುಂದಿನ ಶ್ಲೋಕದಲ್ಲಿಯೂ ಮುಂದುವರಿಯಲಿದೆ. ಅದನ್ನು ಮುಂದಿನ ಲೇಖನದಲ್ಲಿ ಗಮನಿಸೋಣ.