ಉತ್ತರ ಪಥೇಶ್ವರ ಎಂದು ಯಾವ ರಾಜನಿಗೆ ಕರೆಯುತ್ತಾರೆ?

SANTOSH KULKARNI
By -
0

 ಕನೋಜದ ಅರಸು ಹರ್ಷವರ್ಧನ

ಪಂಜಾಬ ರಾಜ್ಯದಲ್ಲಿ ಸ್ಥಾನೇಶ್ವರ ಎಂಬ ಒಂದು ಪಟ್ಟಣವಿದೆ. ಹಿಂದೆ ಅಲ್ಲಿ ಪ್ರಭಾಕರವರ್ಧನ ಎಂಬ ರಾಜನು ಆಳುತ್ತಿದ್ದನು. ಅವನ ರಾಣಿ ಯಶೋಮತಿ, ಆಕೆಯ ಹೊಟ್ಟೆಯಿಂದ ರಾಜವರ್ಧನ, ಹರ್ಷವರ್ಧನ ಎಂದು ಇಬ್ಬರು ಗಂಡುಮಕ್ಕಳು, ರಾಜಶ್ರೀ ಎಂಬ ಒಬ್ಬಳು ಹೆಣ್ಣು ಮಗಳೂ ಹುಟ್ಟಿದರು. ಮೂವರೂ ಅರಸುಮಕ್ಕಳು ಸುಖದಿಂದ ಬೆಳೆದರು. ಒಳ್ಳೆಯ ಗುರುವಿನಿಂದ ವಿದ್ಯೆ-ಬುದ್ಧಿಗಳನ್ನು ಕಲಿತರು. ಅಣ್ಣನಾದ ರಾಜವರ್ಧನನಿಗಿಂತ ಹರ್ಷವರ್ಧನನು, ಎಲ್ಲ ವಿಷಯಗಳಲ್ಲಿಯೂ ಒಂದು ಹೆಜ್ಜೆ ಮುಂದೆ ಇದ್ದನು. ಅವನು ರಾಜಕಾರಣ ಮತ್ತು ಯುದ್ಧ ವಿದ್ಯೆಗಳಲ್ಲಿ ಪ್ರವೀಣನಾದಂತೆ ಸಂಸ್ಕೃತ ಭಾಷೆಯಲ್ಲಿಯೂ ಪಂಡಿತನಾದನು.

ರಾಜವರ್ಧನನು ಬೆಳೆದು ಪ್ರಾಯಕ್ಕೆ ಬಂದಿದ್ದ. ಆಗ ಪ್ರಭಾಕರವರ್ಧನನ ರಾಜ್ಯದ ಮೇಲೆ ಹೂಣರು ದಾಳಿಯನ್ನು ಮಾಡಿದರು. ಅರಸನು ಮುಪ್ಪಿನವನಾದ ಕಾರಣ, ಯುವ ರಾಜನಾದ ರಾಜವರ್ಧನನು ಹೂಣರನ್ನು ಇದಿರಿಸಬೇಕಾಯಿತು. ಆಗ ಹರ್ಷವರ್ಧನನು ಚಿಕ್ಕವನಿದ್ದನು; ಆದರೂ ಅಣ್ಣನೊಡನೆ ಯುದ್ಧಕ್ಕೆ ಹೋದನು. ಇತ್ತ ಸ್ಥಾನೇಶ್ವರದಲ್ಲಿ ಪ್ರಭಾಕರವರ್ಧನನ ಆರೋಗ್ಯವು ಕೆಟ್ಟಿತು. ಈ ಸುದ್ದಿಯನ್ನು ಕೇಳಿ ಹರ್ಷವರ್ಧನನು ತಿರುಗಿಬಂದನು. ಕೆಲವೆ ದಿನಗಳಲ್ಲಿ ರಾಜನು ತೀರಿಕೊಂಡನು. ರಾಣಿ ಯಶೋಮತೀದೇವಿಯು ಗಂಡನೊಡನೆ ಸಹಗಮನ ಮಾಡಿದಳು. ರಾಜವರ್ಧನನು ಹೂಣರ ದಾಳಿಯನ್ನು ಅಡಗಿಸಿ, ಜಯಶಾಲಿಯಾಗಿ ತಿರುಗಿ ಬಂದನು. ತಂದೆಯ ಮರಣದ ಸುದ್ದಿಯನ್ನು ಕೇಳಿ ಅವನು ಬಹಳ ದುಃಖಬಟ್ಟನು. ಆದರೆ ಮಾಡುವುದೇನು? ನಿಯಮದಂತೆ ಹಿರಿಯನಾದ ರಾಜವರ್ಧನನಿಗೆ ಪಟ್ಟಾಭಿಷೇಕವಾಯಿತು.

ಅರಸನಾದ ಕೆಲವು ದಿನಗಳಲ್ಲಿಯೆ, ರಾಜವರ್ಧನನಿಗೆ ಇನ್ನೊಂದು ಸಂಕಟವು ಬಂದೊದಗಿತು; ತಂಗಿ ರಾಜಶ್ರೀಯ ಗಂಡನಾದೆ ಕನೋಜದ ಗ್ರಹವರ್ಮನು ಯುದ್ಧದಲ್ಲಿ ಮಡಿದನೆಂದೂ, ಮಾಳವದ ರಾಜನಾದ ದೇವಗುಪ್ತನು ರಾಜಶ್ರೀಯನ್ನು ಕಾರಾಗೃಹದಲ್ಲಿ ಇಟ್ಟಿರುವನೆಂದೂ ಸುದ್ದಿ ಬಂದಿತು. ತಂಗಿಯ ಸಂಕಟವನ್ನು ಕೇಳಿ ರಾಜವರ್ಧನನು ಕಳವಳಪಟ್ಟನು; ದೇವಗುಪ್ತನನ್ನು ಚೆನ್ನಾಗಿ ದಂಡಿಸಬೇಕೆಂದು ನಿಶ್ಚಯಮಾಡಿದನು; ದೊಡ್ಡ ದಂಡು ತಕ್ಕೊಂಡು ಅವನು ಕನೋಜಕ್ಕೆ ಹೋದನು. ಯುದ್ಧ ಮಾಡಿ ದೇವಗುಪ್ತನನ್ನು ಸೋಲಿಸಿದನು. ಆಗ ದೇವಗುಪ್ತನ ಸಹಾಯಕನಾದ ವಂಗರಾಜ ಶಶಾಂಕನು, ರಾಜವರ್ಧನನ ಸಂಗಡ ಒಪ್ಪಂದ ಮಾಡಿಕೊಂಡನು. ಆದರೆ ಅವನ ಒಳಸಂಚು ಬೇರೆಯಾಗಿತ್ತು. ರಾಜವರ್ಧನನನ್ನು ಮೋಸದಿಂದ ಕೊಲ್ಲಬೇಕೆಂದು ಅವನು ಮನಸ್ಸು ಮಾಡಿದ್ದನು. ಪಾಪ ! ರಾಜವರ್ಧನನಿಗೆ ಇದು ತಿಳಿಯಲಿಲ್ಲ. ಶಶಾಂಕನು ರಾಜವರ್ಧನನನ್ನು ಊಟಕ್ಕೆಂದು ಕರೆಸಿ, ಅವನನ್ನು ಮೋಸದಿಂದ ಕೊಲ್ಲಿಸಿದನು. ಈ ಸುದ್ದಿಯು ತಿಳಿಯುತ್ತಲೆ ರಾಜಶ್ರೀಯು ಹೇಗೋ ಪಾರಾಗಿ, ದಾಸಿಯರೊಡನೆ ವಿಂಧ್ಯ ಪರ್ವತದ ಕಡೆಗೆ ಓಡಿಹೋದಳು.

ಅಣ್ಣನ ಮರಣದ ವಾರ್ತೆಯನ್ನು ಕೇಳಿ ಹರ್ಷವರ್ಧನನಿಗೆ ಸಿಡಿಲು ಬಡಿದಂತಾಯಿತು. ದುಃಖಿಸುತ್ತ ಕುಳಿತುಕೊಳ್ಳುವ ಕಾಲವಲ್ಲವೆಂದು ಸರದಾರರು ಅವನಿಗೆ ಸಮಾಧಾನ ಹೇಳಿದರು. ಮುಂದೆ ಅವನನ್ನೇ ಪಟ್ಟಕ್ಕೆ ಕುಳ್ಳಿರಿಸಿದರು.

ಹರ್ಷವರ್ಧನನಿಗೆ ಆಗ ಇನ್ನೂ ಹದಿನಾರು ವರುಷ. ಇಷ್ಟು ಚಿಕ್ಕವನಾಗಿದ್ದರೂ ಅವನಲ್ಲಿ ಅದ್ಭುತ ಪರಾಕ್ರಮ, ಧೈರ್ಯ ಹಾಗು ಸಾಹಸಗಳು ತುಂಬಿದ್ದುವು. ಆದುದರಿಂದ ಅವನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನ್ನ ಅಣ್ಣನನ್ನು ಕೊಂದ, ತಂಗಿಯನ್ನು ಕಷ್ಟಕ್ಕೆ ಗುರಿಮಾಡಿದ ದುಷ್ಟರಾಜನನ್ನು ಕೊನೆಗಾಣಿಸುವವರೆಗೆ, ತಿರುಗಿ ರಾಜಧಾನಿಗೆ ಬರುವುದಿಲ್ಲವೆಂದು ಪಣತೊಟ್ಟನು. ದಂಡಿನೊಡನೆ ಕನೋಜದ ಕಡೆಗೆ ನಡೆದನು. ಮುಂದೆ ಹೋಗುವಷ್ಟರಲ್ಲಿ ರಾಜಶ್ರೀಯು ಕನೋಜದಿಂದ ತಪ್ಪಿಸಿಕೊಂಡು ವಿಂಧ್ಯಪರ್ವತಕ್ಕೆ ಹೋಗಿರುವಳೆಂದು ತಿಳಿಯಿತು. ಆಗ ಹರ್ಷವರ್ಧನನು ದಂಡನ್ನು ಅಲ್ಲಿಯೆ ಬಿಟ್ಟು ತಂಗಿಯನ್ನು ಹುಡುಕಲು ವಿಂಧ್ಯಪರ್ವತದ ಕಡೆಗೆ ನಡೆದನು. ಆ ಕಾಡಿನಲ್ಲಿ ಎಲ್ಲೆಲ್ಲಿಯೂ ಹುಡುಕಿದನು. ಕೊನೆಗೆ ‘ರಾಜಶ್ರೀಯು ಅಗ್ನಿಪ್ರವೇಶ ಮಾಡಲು ಸಿದ್ಧಳಾಗಿರುವಳು’ ಎಂದು ದಿವಾಕರಮಿತ್ರನೆಂಬ ಬೌದ್ಧ ಸಾಧುವಿನಿಂದ ತಿಳಿಯಿತು. ಹರ್ಷವರ್ಧನನು ಅಲ್ಲಿಗೆ ಓಡಿಹೋದನು; ಅಗ್ನಿಪ್ರವೇಶ ಮಾಡುವುದನ್ನು ಬಿಡಿಸಿ ತಂಗಿಯನ್ನು ಕರೆದುಕೊಂಡು ಬಂದನು.

ಇತ್ತ ಹರ್ಷವರ್ಧನನ ಸೇನಾಪತಿಯಾದ ಭಂಡಿಯು ಶಶಾಂಕನನ್ನು ಕೊಂದನು; ಅವನ ರಾಜ್ಯವನ್ನೂ ವಶಪಡಿಸಿಕೊಂಡನು. ಕನೋಜವು ಹರ್ಷವರ್ಧನನ ವಶವಾಯಿತು. ಮುಂದೆ ಆ ರಾಜನು, ಸ್ಥಾನೇಶ್ವರವನ್ನು ಬಿಟ್ಟು ಕನೋಜವನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಬಳಿಕ ಅವನು, ದೊಡ್ಡ ಸೈನ್ಯದೊಡನೆ ಸತತವಾಗಿ ಆರು ವರುಷಗಳವರೆಗೆ ದಿಗ್ವಿಜಯ ನಡೆಸಿದನು. ಪಂಜಾಬ, ಸಿಂಧ, ಮಧ್ಯಪ್ರದೇಶ, ಬಂಗಾಲ, ಗುಜರಾಥ, ರಾಜಸ್ಥಾನ ಮೊದಲಾದ ಎಲ್ಲ ಪ್ರದೇಶಗಳನ್ನು ಗೆದ್ದನು; ಉತ್ತರಭಾರತಕ್ಕೆಲ್ಲ ತಾನೆ ಚಕ್ರವರ್ತಿಯಾದನು.

ಈಗ ಹರ್ಷವರ್ಧನನಿಗೆ ದಕ್ಷಿಣ ಭಾರತವನ್ನೂ ಗೆಲ್ಲಬೇಕೆಂಬ ಆಶೆಯುಂಟಾಯಿತು. ದಕ್ಷಿಣಕ್ಕೆ ದಂಡೆತ್ತಿ ಬಂದನು. ಆಗ ದಕ್ಷಿಣದಲ್ಲಿ ಚಾಲುಕ್ಯರ ೨ನೆಯ ಪುಲಿಕೇಶಿಯು ಸಾರ್ವಭೌಮನಾಗಿ ಆಳುತ್ತಿದ್ದನು. ಇಬ್ಬರಿಗೂ ನರ್ಮದಾನದಿಯ ದಂಡೆಯಮೇಲೆ ಘನಘೋರ ಕಾಳಗವಾಯಿತು. ಕೆಚ್ಚೆದೆಯ ಕನ್ನಡ ಬಂಟರ ಹೊಡೆತಕ್ಕೆ ಹರವರ್ಧನನ ಸೈನಿಕರು ತಡೆಯಲಿಲ್ಲ. ಅವನು ಸೋತು ಕನೋಜಕ್ಕೆ ಹಿಂದಿರುಗಿದನು. ಮುಂದೆ ಅವನು ದಕ್ಷಿಣಕ್ಕೆ ದಂಡೆತ್ತಿ ಹೋಗಬೇಕೆಂಬ ವಿಚಾರವನ್ನು ಎಂದೂ ಮಾಡಲಿಲ್ಲ. ಕ್ರಿ. ಶ. 647ರಲ್ಲಿ ಹರ್ಷವರ್ಧನನು ಮರಣಹೊಂದಿದನು.

Post a Comment

0Comments

Post a Comment (0)