ಮಧುಮೇಹ ಬಂತೆಂದರೆ ಹಣ್ಣು ತಿನ್ನುವ ಕಾಲ ಮುಗಿಯಿತು ಎಂದು ಪೇಚಾಡುವ ಕಾಲ ಒಂದಿತ್ತು.ಇಂದು ಮಧುಮೇಹಿಗಳೂ ಹಣ್ಣುಗಳನ್ನು ತಿನ್ನಬಹುದು ಎಂಬ ಅರಿವು ಮಧುಮೇಹಿಗಳಿಗೆ ಸಂತೋಷ ನೀಡಿದೆ. ಆದರೆ ಯಾವ ಹಣ್ಣು ತಿನ್ನಬೇಕು, ಯಾವುದನ್ನು ತಿನ್ನಬಾರದು,ಯಾವ ಹಣ್ಣನ್ನು ಮಿತವಾಗಿ ತಿನ್ನಬೇಕು ಎಂಬ ತಿಳುವಳಿಕೆ ಇದ್ದರೆ ಒಳ್ಳೆಯದು.
ಇವರು ಪ್ರತಿನಿತ್ಯ ಕನಿಷ್ಠ ಒಂದು ಹಣ್ಣನ್ನು ತಿನ್ನಬಹುದು. ರಕ್ತದ ಸಕ್ಕರೆಯ ಪ್ರಮಾಣವನ್ನು ಹಠಾತ್ತಾಗಿ ಹೆಚ್ಚಿಸುವುದರಿಂದ ಬಾಳೆಹಣ್ಣು, ಮಾವಿನ ಹಣ್ಣು,ಚಿಕ್ಕು, ದ್ರಾಕ್ಷಿಗಳು ಬೇಡ. ಗೋಡಂಬಿಯಲ್ಲಿ ಅಧಿಕ ಕೊಬ್ಬಿನ ಅಂಶವಿರುವುದರಿಂದ, ಒಣದ್ರಾಕ್ಷಿಯಲ್ಲಿ ಸಕ್ಕರೆಯ ಪ್ರಮಾಣ ಅಧಿಕವಿರುವುದರಿಂದ, ಅವನ್ನು ಸೇವಿಸದಿರುವುದೇ ಒಳ್ಳೆಯದು.
ನೇರಳೆಹಣ್ಣು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.ದೇಹದಲ್ಲಿನ ಸಕ್ಕರೆಯ ಅಂಶ ನಿಯಂತ್ರಿಸುವ ನೇರಳೆಹಣ್ಣು, ದೇಹಕ್ಕೆ ವಿವಿಧ ಪೋಷಕಾಂಶಗಳನ್ನು ಪೂರೈಸುತ್ತದೆ. ರಕ್ತಕಣಗಳ ಹೆಚ್ಚಳಕ್ಕೂ ಪೂರಕವಾಗಿದೆ. ಇದು ಎಲ್ಲಾ ವೇಳೆಯಲ್ಲಿ ಸಿಗದೇ ಇರುವುದರಿಂದ ಬೀಜಗಳನ್ನು ಪುಡಿಮಾಡಿ ಪ್ರತಿದಿನ ಅದರ ಕಷಾಯವನ್ನು ಕುಡಿಯಬಹುದು.
ನಿತ್ಯವೂ 50 ಗ್ರಾಂನಷ್ಟು ಪಪ್ಪಾಯ ಸೇವಿಸಿ ಜತೆಗೆ ಮಧ್ಯಮ ಗಾತ್ರದ ಸೇಬು, ಕಿತ್ತಳೆ,ಪೇರಳೆ ಹಣ್ಣುಗಳು ಇರಲಿ.
ವಿಟಮಿನ್ ಗಳು, ಖನಿಜಾಂಶ ಅಧಿಕವಾಗಿದ್ದು ಕಡಿಮೆ ಕ್ಯಾಲೋರಿಯುಳ್ಳ ಪಪ್ಪಾಯಿ ಕಣ್ಣಿನ ಆರೋಗ್ಯಕ್ಕೂ ಪೂರಕ. ಇದು ಗ್ಲುಕೋಸ್ ಮಟ್ಟವನ್ನು, ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ.
ಅಂಜೂರವೂ ಇನ್ಸುಲಿನ್ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಬಿಳೀ ಜಂಬೂ (ಜಾಮೂನು) ಹಣ್ಣು ನಾರಿನಂಶ ಅಧಿಕವಾಗಿದ್ದು, ತುಂಬಾ ಒಳ್ಳೆಯದು.
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸೇಬು, ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೇಹಕ್ಕೆ ಬೇಕಾದ ಉತ್ತಮ ಕೊಬ್ಬನ್ನು ಒದಗಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಸೇಬು ದೊಡ್ಡ ಮತ್ತು ಸಣ್ಣ ಕರುಳಿನ ಕ್ಯಾನ್ಸರ್ ತಡೆಗೆ ಸಹಕಾರಿ.
ಕಿತ್ತಳೆ ಹಣ್ಣು ವಿಟಮಿನ್ ಸಿ ಹೊಂದಿದ್ದು, ಜೀರ್ಣಕ್ರಿಯೆಗೆ ಸಹಕಾರಿ. ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದಲ್ಲದೆ, ಮೂಳೆ ಮತ್ತು ಕೀಲುಗಳಿಗೆ ಶಕ್ತಿ ತುಂಬುವ ಮೂಲಕ ದೇಹವನ್ನು ಬಲಿಷ್ಠಗೊಳಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
ವಿಟಮಿನ್ ಇ ಮತ್ತು ಸಿ ಮತ್ತು ನಾರಿನ ಅಂಶ ಅಧಿಕವಾಗುಳ್ಳ ಪೇರಳೆ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ.
ದಾಳಿಂಬೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಎಂಟಿ ಆಕ್ಸಿಡೆಂಟ್ ಅಂಶಗಳಿಂದ ಸಮೃದ್ಧವಾಗಿರುವ ದಾಳಿಂಬೆ ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಪೂರಕವಾಗಿದೆ.
ನಕ್ಷತ್ರ ಹಣ್ಣು ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ ಆದರೆ ಇದನ್ನು ತಿಂದ ಮೇಲೆ ಸ್ವಲ್ಪ ವ್ಯಾಯಾಮ ಅಗತ್ಯ.
ಅಧಿಕ ಖನಿಜ ಮತ್ತು ವಿಟಮಿನ್ ನಿಂದ ಕೂಡಿರುವ, ಹೆಚ್ಚು ಪೋಷಕಾಂಶವುಳ್ಳ ಒಣ ಹಣ್ಣುಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಬಹುದು.ಒಣ ಹಣ್ಣುಗಳಾದ ಬಾದಾಮಿ, ವಾಲ್ನಟ್ ತಿನ್ನಬಹುದು.
ಆಹಾರದಲ್ಲಿ ಹಾಗಲಕಾಯಿ ನುಗ್ಗೆ ಎಲೆ, ಮೆಂತ್ಯದ ಸೊಪ್ಪು, ನೋಲ್ ಕೋಲ್ ಇರಲಿ. ಕ್ಯಾರೆಟ್ ಬಿಟ್ರೂಟ್ ಇತರ ತರಕಾರಿಗಳೊಡನೆ ಸೇವಿಸಬಹುದು. ಬಟಾಟೆ ಸಿಹಿಗೆಣಸುಗಳನ್ನು ದೂರವಿಡಿ.ಜೊತೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ಮುನ್ನ ಹಸಿ ತರಕಾರಿಯ ಸಲಾಡ್ ಯಥೇಚ್ಛವಾಗಿ ಸೇವಿಸಿ. ಅಧಿಕ ನಾರಿನಂಶ ಮತ್ತು ಕಡಿಮೆ ಕ್ಯಾಲೋರಿ ಇರುವ ಇದು ರಕ್ತದ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದಲ್ಲದೇ, ಮಲಬದ್ಧತೆಯನ್ನು ದೂರೀಕರಿಸಲು ಸಹಕಾರಿಯಾಗಿದೆ.