ಭಗೀರಥನು ತಪಸ್ಸುಮಾಡಿ ಭೂಮಿಗೆ ಇಳಿಸಿದ ಗಂಗೆಯನ್ನು ಭಾಗೀರಥಿ ಎಂದು ಕರೆಯುತ್ತಾರೆ. ಗಂಗೆ ಮೊದಲು ಭಾಗೀರತಿ ಯಾಗಿದ್ದು ನಂತರ ದೇವ ಪ್ರಯಾಗದಲ್ಲಿ ಅಲಕಾನಂದ ನದಿಯಲ್ಲಿ ಸಂಗಮಿಸಿದ ಮೇಲೆ ಗಂಗೆ ಯಾಗುತ್ತಾಳೆ. ಗಂಗೆ ಮಲಿನವಾಗುವುದಿಲ್ಲ. ಔಷಧಿ ಗುಣವುಳ್ಳದ್ದು ಎಂಬುದಕ್ಕೆ ವೈಜ್ಞಾನಿಕವಾಗಿ ಕಾರಣ ಇದೆ. ಗಂಗಾ ನದಿಯಲ್ಲಿ ವಿಶೇಷವಾದ ವೈರಸ್ ಇದೆ, ಪ್ರಾಣವಾಯುವಿನ ಪ್ರಮಾಣ ಹೆಚ್ಚು ಇದೆ ಎಂದು ತಿಳಿಸಲಾಗಿದೆ.
ಗಂಗೆ ಭೂಮಿಗೆ ಬಂದ ಕಥೆ:-
ಸನಾತನ ಧರ್ಮದಲ್ಲಿ ನಾಲ್ಕು ವಿಷಯಗಳನ್ನು ಅನುಸರಣೆ ಮಾಡಲೇಬೇಕು. ಅವು ನಾಲ್ಕು "ಗ" ಕಾರಗಳು ಮುಖ್ಯವಾದದ್ದು. ಅವುಗಳಲ್ಲಿ ಗೀತಾ, ಗಂಗಾ, ಗೋವಿಂದ, ಗೋವು. ಇದರಲ್ಲಿ ಗಂಗೆ ನಮ್ಮೆಲ್ಲ ಪಾಪಗಳನ್ನು ಕಳೆಯುವವಳು. ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಅವತರಿಸಿದ್ದು, ಜೇಷ್ಠ ಮಾಸದ ಶುಕ್ಲಪಕ್ಷದ ದಶಮಿ ದಿನ ಹಸ್ತಾ ನಕ್ಷತ್ರದಲ್ಲಿ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಪರೀಕ್ಷಿತ ಮಹಾರಾಜನು ತನ್ನ ಸಾವು ಸಮೀಪಿಸಿದೆ ಎಂದು ತಿಳಿದಾಗ, ರಾಜ್ಯಕೋಶ ಪತ್ನಿ ಪುತ್ರರು, ಪ್ರಜೆಗಳು ಎಲ್ಲರನ್ನೂ ತ್ಯಾಗ ಮಾಡಿ ಗಂಗಾ ನದಿ ಕ್ಷೇತ್ರಕ್ಕೆ ಬಂದನು. ಏಕೆಂದರೆ ತನ್ನ ಮರಣ ಆಗುವುದಾದರೆ ಗಂಗಾ ಕ್ಷೇತ್ರದಲ್ಲಿ ಆಗಬೇಕೆಂದು. ಇದಕ್ಕಿಂತ ಪುಣ್ಯಕರವಾದ ಸ್ಥಳ ಮತ್ತೊಂದು ಇಲ್ಲ ಎಂಬುದು. ಶ್ರೀಹರಿಯ ಪಾದವನ್ನು ತೊಳೆದು ಹರಿದುಬಂದ ಪವಿತ್ರ ಗಂಗೆ. ಮಹಾವಿಷ್ಣುವು ವಾಮನ ಅವತಾರ ತಾಳಿ ಬಲಿಚಕ್ರವರ್ತಿ ಮಾಡುವ ಯಾಗಕ್ಕೆ ಬಾಲ ಬ್ರಹ್ಮಚಾರಿಯಾಗಿ ಬಂದು, ಅವನ ಬಳಿ ಮೂರು ಪಾದದಷ್ಟು ಭೂಮಿಯನ್ನು ಕೇಳಿ, ತ್ರಿವಿಕ್ರಮನಾಗಿ ಬೆಳೆದು ನಿಂತನು, ಹೀಗೆ ಬೆಳೆದಾಗ ಶ್ರೀಹರಿಯ ಪಾದದ ಅಂಗುಷ್ಟದ ತುದಿ ದೇವಲೋಕದ ಬಂಗಾರದ ಗೋಡೆಗೆ ತಗುಲಿ, ಅಲ್ಲಿಂದ ಪ್ರಳಯದಂತೆ ನೀರು ನುಗ್ಗಿ ಬಂದಿತು. ಅದನ್ನು ಬ್ರಹ್ಮನು ಕಮಂಡಲದಲ್ಲಿ ತುಂಬಿಸಿ ಶ್ರೀಹರಿಯ ಪಾದ ತೊಳೆದಾಗ ಅಲ್ಲಿಂದ ಹರಿದು ಬಂದ ಗಂಗೆ ನದಿ ಯಾದಳು.
ಆ ನಂತರ ಗಂಗೆ ಹತ್ತು ಸಾವಿರ ವರ್ಷಗಳ ಕಾಲ ಸತ್ಯಲೋಕದಲ್ಲಿದ್ದು , ನಂತರ ಭಗವಂತನ ರೂಪವಾದ ಶಿಂಶುಮಾರ ಲೋಕಕ್ಕೆ ಬರುತ್ತಾಳೆ. ಶಿಂಶುಮಾರ ಅಂದರೆ "ಚೇಳು" ಇದರ ಬಾಲದ ತುದಿಯಲ್ಲಿದ್ದ ನೀರನ್ನು ಧ್ರುವ ಪ್ರೋಕ್ಷಣೆ ಮಾಡಿಕೊಂಡನು . ನಂತರ ಸಪ್ತರ್ಷಿ ಲೋಕಕ್ಕೆ ಬಂದಳು. ಅಲ್ಲಿ ಸಪ್ತರ್ಷಿಗಳು ಗಂಗೆಯನ್ನು ಪ್ರೋಕ್ಷಣೆ ಮಾಡಿಕೊಂಡರು. ಆ ನಂತರ ಚಂದ್ರಮಂಡಲ ಮತ್ತು ಮೇರು ಪರ್ವತಕ್ಕೆ ಹೋಗುತ್ತಾಳೆ. ಮೇರು ಪರ್ವತದಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ. ಪೂರ್ವದಿಕ್ಕಿನಲ್ಲಿ ಸೀತಾ ಎಂದು, ಪಶ್ಚಿಮ ದಿಕ್ಕಿನಲ್ಲಿ ಚಕ್ಷು, ಉತ್ತರ ದಿಕ್ಕಿನಲ್ಲಿ ಭದ್ರ, ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ ಎಂದು ಹೆಸರಿಸಲಾಗಿದೆ. ಅಲಕಾನಂದ ಬಿಂದು ಮಾಧವನ ಪರ್ವತಕ್ಕೆ ಹರಿದು ನಂತರ ಮಾನಸ ಸರೋವರದಲ್ಲಿ ತುಂಬಿ ತುಳಕಿ, ಸರಯು ನದಿಯಾಗಿ ಹರಿದು ಹಿಮಾಲಯಪರ್ವತ ಸೇರುತ್ತಾಳೆ. ಇವಳೇ ಹಿಮವಂತನ ಪುತ್ರಿ ಗಂಗೆ ಇಂತಹ ಗಂಗೆ, ಭಗೀರಥನ ತಪಸ್ಸು ಮೆಚ್ಚಿ, ನಾನು ಭೂಮಿಗೆ ಬರುತ್ತದೆ ಆದರೆ ನನ್ನ ರಭಸದಿಂದ ಲೋಕವೇ ಕೊಚ್ಚಿ ಹೋಗುತ್ತದೆ. ನೀನು ಅದನ್ನು ತಡೆಯಬೇಕು ಎಂದು ಹೇಳುತ್ತಾಳೆ. ಆಗ ಭಗೀರಥನು ಶಿವನನ್ನು ಪ್ರಾರ್ಥಿಸುತ್ತಾನೆ. ಶಿವನು ರಭಸದಿಂದ ಭೂಮಿಗೆ ಬರುವ ಗಂಗೆಯನ್ನು ತನ್ನ ಜಟೆಯಲ್ಲಿ ಬಂಧಿಸುತ್ತಾನೆ. ಅಲ್ಲೇ ತಡೆದ, ಗಂಗೆಯನ್ನು ಭೂಮಿಗೆ ಹರಿಸುವಂತೆ, ಶಿವನನ್ನು ಪ್ರಾರ್ಥಿಸಿ ಭಗೀರಥ ತಪಸ್ಸು ಮಾಡಿದಾಗ ಶಿವನು ಬಿಡುತ್ತಾನೆ. ಆದರೂ ಶಿವನ ಜಟೆಯ ಮೂಲಕ ಗಂಗೆ ಇಳಿದುಬರುವ ರಭಸದಲ್ಲಿ ಜುಹ್ನು ಮಹರ್ಷಿಯ ಗುಡಿಸಲನ್ನು ಕೊಚ್ಚಿಕೊಂಡು ಹೋದಳು.
ಸಿಟ್ಟಿನಿಂದ ಮಹರ್ಷಿಗಳು ಗಂಗೆಯನ್ನು ಆಪೋಷನ ಮಾಡುತ್ತಾರೆ. ಮತ್ತೆ ಭಗೀರಥ ಮಹರ್ಷಿಗಳನ್ನು ಪ್ರಾರ್ಥಿಸಿದಾಗ ಅವರು, ಕಿವಿಯ ಮೂಲಕ ಗಂಗೆಯನ್ನು ಬಿಡುತ್ತಾರೆ. ಇದರಿಂದ ಗಂಗೆ ಜಾಹ್ನವಿ ಯಾಗಿ, ಪಾತಾಳಲೋಕಕ್ಕೆ ಹರಿದು ಸಗರನ ಮೊಮ್ಮಕ್ಕಳಿಗೆ ಮೋಕ್ಷ ಕರುಣಿಸುತ್ತಾಳೆ.
ಈ ರೀತಿ ಗಂಗೆ ದೇವಲೋಕ, ಭೂಲೋಕ, ಪಾತಾಳಲೋಕದಲ್ಲಿ, ಹರಿದ ಕಾರಣ ತ್ರಿಪಸಗ ಎಂದು ಕರೆಯುತ್ತಾರೆ. ದೇವಲೋಕದಲ್ಲಿ ಮಂದಾಕಿನಿ ಯಾಗಿ ಭೂಲೋಕದಲ್ಲಿ ಭಾಗೀರಥಿಯಾಗಿ, ಪಾತಾಳ ಲೋಕದಲ್ಲಿ ಭೋಗವತಿ ಯಾಗಿ ಹರಿಯುತ್ತಾಳೆ. ಹೀಗೆ ಮೇಲಿಂದ ಕೆಳಗಿನ ತನಕ ಬಂದ ಗಂಗಾಮಾತೆ ಯನ್ನು ಪಾಪ ಪರಿಹಾರ ಮಾಡುವವಳು ಎಂದು ಪೂಜಿಸುತ್ತಾರೆ. ಗಂಗೆಯನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಯಾವುದೇ ನದಿಯಲ್ಲಿ ಸ್ನಾನ ಮಾಡಿದರೆ, ಗಂಗಾನದಿಯಲ್ಲಿ ಸ್ನಾನ ಮಾಡಿದಂತಹ ಪುಣ್ಯವನ್ನು ಗಂಗೆ ನಮಗೆ ಕೊಡುತ್ತಾಳೆ.
ಗಂಗೆ ಕುರಿತು ನಂಬಿಕೆಗಳು:
ಹಿಂದೂ ಧರ್ಮದಲ್ಲಿ ಗಂಗಾಜಲ ಪರಿಶುದ್ಧವಾದದ್ದು, ಪವಿತ್ರವಾದದ್ದು, ಎಂದು ಪರಿಗಣಿಸಲಾಗಿದೆ. ಮನೆ, ಮನೆಯಲ್ಲೂ ದೇವರ ಗೂಡಿನಲ್ಲಿ ಕಾಶಿ ಗಂಗೆಯನ್ನು ಇಟ್ಟು ಪೂಜಿಸುತ್ತಾರೆ. ಗಂಗೆಯನ್ನು ಕೆಲವೊಂದು ಮಹತ್ವದ ಸಂದರ್ಭಗಳಲ್ಲಿ ಬಳಸುತ್ತಾರೆ. ಹೆಣ್ಣುಮಕ್ಕಳ ಮದುವೆಯ ಸಂದರ್ಭದಲ್ಲಿ ಧಾರೆ ಎರೆದು ಕೊಡುವಾಗ, ಪುರೋಹಿತರು ಕಾಶಿ ಗಂಗೆಯನ್ನು ಹುಡುಗಿಯ ತಂದೆ ತಾಯಿ ಕೈಯಲ್ಲಿ ಹಾಕಿ ಹೆಣ್ಣುಮಕ್ಕಳನ್ನು ಧಾರೆ ಎರೆಸುತ್ತಾರೆ. ಕಾಶಿಗೆ ಹೋದವರು ಬರುವಾಗ, ಕಾಶಿ ಗಂಗೆ ತುಂಬಿದ ಪುಟ್ಟ ಗಿಂಡಿಯನ್ನು ತಂದು ಬಂಧು ಬಳಗದವರಿಗೆ ಆತ್ಮೀಯರಿಗೆ ಕೊಡುತ್ತಾರೆ. ಗಂಗೆಯನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಅದಕ್ಕೆ ಸ್ವಲ್ಪ ಶುದ್ಧವಾದ ಮರಳನ್ನು ಹಾಕಿ ದೇವರ ಮುಂದೆ ಇಟ್ಟುಕೊಂಡು ಪ್ರತಿದಿವಸ ತೀರ್ಥವನ್ನು ಸೇವಿಸುತ್ತಾರೆ. ವಯಸ್ಸಾದ ಹಿರಿಯರು ಸಾಯುವ ಸಮಯದಲ್ಲಿ ಕಾಶಿ ಗಂಗೆ ಬಾಯಿಗೆ ಬಿಡುತ್ತಾರೆ ಇದರಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ. ಕಾಶಿ ಗಂಗೆಯನ್ನು ಎಷ್ಟೇ ವರ್ಷಗಟ್ಟಲೇ ಸಂಗ್ರಹಿಸಿಟ್ಟರೂ ಕೆಡುವುದಿಲ್ಲ.
ಗಂಗಾನದಿಯನ್ನು ದೇವನದಿ ಎಂದು ಕರೆಯುತ್ತಾರೆ. ದೇವಗಂಗೆ ಹುಟ್ಟುವ ಸ್ಥಳ ಗಂಗೋತ್ರಿ. ಹಿಮಾಲಯದಲ್ಲಿ ಹುಟ್ಟಿದ ಗಂಗಾನದಿ ಭಾರತದ ಉದ್ದಗಲಕ್ಕೂ ಹರಿದು ಅವೆಲ್ಲ ಪವಿತ್ರ ಸ್ಥಳಗಳಾಗಿದೆ. ಹಿಮಾಲಯದಲ್ಲಿ ಹುಟ್ಟಿದ ಗಂಗೆಗೆ ಅಲ್ಲಿ ದೇವಾಲಯವನ್ನು ಕಟ್ಟಿ ವಿಶೇಷ ಪೂಜೆ ಆರಾಧನೆಗಳನ್ನು ನಡೆಸುತ್ತಾರೆ. ಗಂಗಾ ದೇಗುಲಕ್ಕೆ ಬಂದು ಗಂಗಾವತಾರಣವನ್ನು ನೋಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು!
ಗಂಗೆ ಯಮುನೆಯರೇ, ಗೋದಾವರಿ ಸರಸ್ವತಿಯರೇ,
ನರ್ಮದೆಯೇ, ಸಿಂಧು ಕಾವೇರಿಗಳೇ, ( ನಾನು ಸ್ನಾನ ಮಾಡುವ)
ಈ ನೀರಿನಲ್ಲಿ ನೆಲೆಸಿರಿ.
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.