ಕವಿರಾಜಮಾರ್ಗ ಬರೆದಿರುವ ಶ್ರೀವಿಜಯನ ಕವಿ ಪರಿಚಯ

SANTOSH KULKARNI
By -
0

 ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತಿಚಿಗೆ ಈ ಕೃತಿಯ ಕರ್ತೃ ಶ್ರೀವಿಜಯನೆಂದು ದೃಢಪಟ್ಟಿದೆ.

ಕವಿರಾಜಮಾರ್ಗವು 'ದಂಡಿ'ಯ 'ಕಾವ್ಯಾದರ್ಶದ' ಅನುವಾದವಾಗಿದೆ.

ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕರ್ನಾಟಕದ ಕುರಿತು ವರ್ಣಿಸಿದ್ದಾನೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆವಿಗೆ ಹರಡಿತ್ತು ಎಂದು ತಿಳಿಸಿದ್ದಾನೆ.

ಪದನರಿದುನುಡಿಯಲುಂ ನುಡಿದುದನರಿದಾರಯಲು ಮಾರ್ಪರಾನಾಡವರ್ಗಳದ, ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತ ಮತಿಗಳ್.

ಎಂದೂ ಕವಿರಾಜಮಾರ್ಗನು ಮನತುಂಬಿ ಹಾಡಿ ಹೊಗಳಿದ್ದಾನೆ.

ಕನ್ನಡಿಗರ ಗುಣ ಸ್ವಭಾವ ಕುರಿತು ಹೇಳುತ್ತಾ, ಕವಿರಾಜಮಾರ್ಗಕಾರನು ತನ್ನ ಕಾಲದ ಭಾಷಾ ಸಾಹಿತ್ಯಗಳನ್ನು ಕುರಿತು ಅಮೂಲ್ಯವಾದ ವಿಷಯಗಳನ್ನು ತಿಳಿಸುತ್ತಾನೆ. ಕನ್ನಡದಲ್ಲಿ 'ಚತ್ತಾಣ', 'ಬೆದಂಡೆ' ಎಂಬ ಎರಡು ಕಾವ್ಯ ರೂಪಗಳನ್ನು ಹೆಸರಿಸಿ, ಇತರ ಸಾಹಿತ್ಯ ಪ್ರಕಾರಗಳನ್ನು ತಿಳಿಸುತ್ತಾನೆ.

-ಕೃಪೆ ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ - ಸಂಪಾದಕ ಡಾ. ಚಿ.ಸಿ. ನಿಂಗಣ್ಣ.

ಸುಮಾರು ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ನಿತ್ಯವರ್ಷನು ಕಡಪ ಜಿಲ್ಲೆಯ ಜಮ್ಮಲಮಡುಗುವಿನ ದಾನವುಲಪಾಡು ಎನ್ನುವ ಊರಿನಲ್ಲಿ ಒಂದು ಕನ್ನಡ ಲಿಪಿಯಲ್ಲಿ, ಕನ್ನಡದ ಶಾಸನ ಬರೆಸುತ್ತಾನೆ. ಇದು ಆಲಂಕಾರಿಕ ಮಾರ್ಗಕಾರ ಕವಿರಾಜಮಾರ್ಗದ ಕರ್ತೃ ಶ್ರೀವಿಜಯನ ಕುರಿತಾಗಿ ಉಲ್ಲೇಖವಿರುವ ಇರುವ ಮೊದಲ ಕನ್ನಡಶಾಸನ. ಅನುಪಮ ಕವಿ, ಮಹಾದಂಡನಾಯಕ ಎಂದು ಶ್ರೀವಿಜಯನನ್ನು ಉಲ್ಲೇಖಿಸುವ ಈ ಶಾಸನ ಅನುಪಮಕವಿ ಶ್ರೀವಿಜಯನ ಸೇನಬೋವ ಗುಣವರ್ಮನು ಬರೆದದ್ದು, ಈ ಶಾಸನದ ಮಹತ್ವ ಎಂದರೆ ಸುಮಾರು 8ಬಾರಿ ಶ್ರೀವಿಜಯನನ್ನು ಉಲ್ಲೇಖಿಸಲಾಗಿದೆ. 8 ಮತ್ತು 9ನೇ ಸಾಲಿನಲ್ಲಿ “ಅನೂನ ಸುಖಾಸ್ಪದಮನೞ್ತಿಯೊಳ್ ಶ್ರೀವಿಜಯಂ”ಎಂದು ಮೊದಲ ಉಲ್ಲೇಖ. 17 – 18 ನೇ ಸಾಲಿನಲ್ಲಿ, “ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ ಶ್ರೀವಿಜಯಂ”ಎಂದು ಶ್ರೀ ವಿಜಯನನ್ನು ದಂಡನಾಯಕ ಎನ್ನಲಾಗಿದೆ.22ನೇ ಸಾಲಿನಲ್ಲಿ ಶ್ರೀ ವಿಜಯನನ್ನು. “ಶ್ರೀವಿಜಯಂ ಅನುಪಮ ಕವಿ” ಎಂದು ಬಣ್ಣಿಸಲಾಗಿದೆ. ಪುನಃ 30 ಮತ್ತು31ನೇ ಸಾಲಿನಲ್ಲಿ “ದಣ್ಡನಾಯಕಂ ಶ್ರೀ ವಿಜಯಂ”ಎನ್ನಲಾಗಿದೆ. 38ನೇ ಸಾಲಿನಿಂದ 41ರ ವರೆಗೆ “ಕರಮರಿದು ರಣದೊಳನುಪಮಕವಿಯಾ ಕುಪಿತವತಿ ಶ್ರೀ ವಿಜಯೇ”ಎಂದು ಅನುಪಮ ಕವಿಯಾಗಿ ವರ್ಣಿಸಿದ್ದಾರೆ. 59ನೇ ಸಾಲಿನಿಂದ 65ನೇ ಸಾಲಿನ ತನಕ 2 ಸಲ ಶ್ರೀವಿಜಯನನ್ನು ಸ್ಮರಿಸಲಾಗಿದೆ. “ಶ್ರೀವಿಜಯಾ ಚತುರುದಧಿ ವಲಯವಲಯಿತ ವಸುನ್ಧರಾಮಿನ್ದ್ರಶಾಸನಾತ್ಸಂರಕ್ಷನ್ ಶ್ರೀವಿಜಯ ದಣ್ಡನಾಯಕ ಜೀವಚಿರಂ” ಎಂದು ಶಾಸನ ವಾಕ್ಯವನ್ನು ಕೊನೆಗೊಳಿಸಲಾಗಿದೆ.
“ಕನ್ನಡದೊಳು ಚಂಪೂಕಾವ್ಯವ ನೆಱೆ ಪೇೞ್ದ | ಸನ್ನುತ ಸತ್ಕವೀಶ್ವರರ” ಹೆಸರನ್ನು ಹೇಳುತ್ತೇನೆ ಎಂದು ಆರಂಭಿಸಿ“ದೇವಚಂದ್ರ ಪ್ರಭರನ್ನು ಕೊಂಡಾಡಿದ | ಶ್ರೀ ವಿಜಯರ . . .”ಎನ್ನುವುದಾಗಿ ಸುಮಾರು 1508ನೇ ಇಸವಿಯಲ್ಲಿದ್ದ ಮಂಗರಸನು ತನ್ನ ನೇಮಿಜಿನೇಶ ಸಂಗತಿಯಲ್ಲಿ ಕನ್ನಡಭಾಷೆಯಲ್ಲಿ ಚಂದ್ರಪ್ರಭಪುರಾಣವನ್ನು ಚಂಪೂ ಶೈಲಿಯಲ್ಲಿ ಬರೆದ ಎಂದು ಹೇಳಿಕೊಂಡಿದ್ದಾನೆ.(ಈ ಮಂಗರಸನೇ ಸೂಪಶಾಸ್ತ್ರ(ಪಾಕ ಶಾಸ್ತ್ರ ಗ್ರಂಥ) ಬರೆದ ಎಂದು ಹೇಳಲಾಗುತ್ತದೆ.) ಶ್ರೀ ವಿಜಯ ಒಬ್ಬ ಜೈನ ಕವಿ. ಸುಮಾರು 1550 ಇಸವಿಯಲ್ಲಿ ಜೀವಿಸಿದ್ದ ಪಿರಿಯಾ ಪಟ್ಟಣದ ದೊಡ್ಡಯ್ಯನು ತನ್ನ ಚಂದ್ರಪ್ರಭಾಸಾಂಗತ್ಯದಲ್ಲಿ“ಚಂದ್ರಪ್ರಭ ಪುರಾಣವ ಪೇೞ್ದ ವಿಜಯ ಕವೀಂದ್ರ” ಎಂದು ಶ್ರೀ ವಿಜಯನನ್ನು ಸ್ಮರಿಸಿದ್ದಾನೆ.

“ಶ್ರೀವಿಜಯ ಕವಿಮಾರ್ಗಂ | ಭಾವಿಪ ಕವಿಜನದ ಮನಕೆ ಕನ್ನಡಿಯುಂಕೆ | ಯ್ದೀವಿಗೆಯುಮಾದುವದಱಿಂ | ಶ್ರೀ ವಿಜಯರಂ ದೇವರವರನೇ ವಣ್ಣಿಪುದೋ ||” ಎನ್ನುವುದಾಗಿ ಶ್ರೀ ವಿಜಯನನ್ನು ದುರ್ಗಸಿಂಹನು ೧೦೨೫ರಲ್ಲಿ ತನ್ನಪಂಚತಂತ್ರದಲ್ಲಿ ಹೊಗಳುತ್ತಾನೆ. ವೈಯ್ಯಾಕರಣಿ ಕೇಶಿರಾಜನು ಶಬ್ದಮಣಿ ದರ್ಪಣದಲ್ಲಿ“ಸುಮಾರ್ಗಮಿದಱೊಳೆ ಲಕ್ಷ್ಯಂ” ಎಂದು ಹೇಳಿದ್ದಾನೆ.“ಪ್ರಾಗಾಸೀತ್ ಸುಚಿರಾಭಿಯೋಗ ಬಲತೋ ನೀತಂ ಪರಾಮುನ್ನತಿಂ ಪ್ರಾಯಃ ಶ್ರೀ ವಿಜಯೇ ತದೇತದಖಿಲಂ ತತ್ವೀರಿಕಾಯಾಂ ಸ್ಥಿತೇ ಸಂಕ್ರಾನ್ತಂ ಕಥಮನ್ಯತಾನತಿ ಚರಾದ್ವಿದ್ಯೇದೃಗೀದೃಕ್ತಪಃ ||” ಎನ್ನುವುದಾಗಿ ಶ್ರವಣಬೆಳಗೊಳದಲ್ಲಿರುವ ಬಿ ಎಲ್ ರೈಸ್ ಸಂಗ್ರಹಿಸಿದ ಎಪಿಗ್ರಾಫಿಯಾ ಕರ್ನಾಟಕದ ಶ್ರವಣಬೆಳಗೊಳ 67ನೇ ಸಂಖ್ಯೆಯ ಶಾಸನದಲ್ಲಿ ಶ್ರೀವಿಜಯನೆನ್ನುವವನೊಬ್ಬ ಗಂಗರಾಜನಿಗೆ ಗುರುವಾಗಿದ್ದ. ಆತನಲ್ಲಿ ಹೇಮಸೇನ ಮುನಿಯ ತಪಸ್ಸಿನ ಫಲವು ಶ್ರೀವಿಜಯನಲ್ಲಿ ಸೇರಿಕೊಂಡಿತು ಎನ್ನುವುದಾಗಿಯೂ ಉಲ್ಲೇಖಿಸಿದ್ದಾರೆ.

ಶ್ರೀವಿಜಯ ಕನ್ನಡಕ್ಕೊಬ್ಬ ಮಾರ್ಗಕಾರನಾಗಿ, ಅಲಂಕಾರ ಶಾಸ್ತ್ರಕ್ಕೆ ಮಾರ್ಗದರ್ಶಕನಾಗಿದ್ದದು ನಿಜ. ಈತನು ನೃಪತುಂಗನ ಆಸ್ಥಾನದಲ್ಲಿ ಸಭಾಸದನಾಗಿದ್ದಂತೆ ನೃಪತುಂಗ ರಾಜನ ಹೆಸರಿನಲ್ಲಿ ಅಲಂಕಾರ ಗ್ರಂಥವಾದ ಕವಿರಾಜ ಮಾರ್ಗವನ್ನು ರಚಿಸಿದ್ದನೆನ್ನಬಹುದಾಗಿದೆ. ದುರ್ಗಸಿಂಗ ಮತ್ತು ಕೇಶೀರಾಜನು ಶ್ರೀವಿಜಯನನ್ನು ಹೋಗಳಿರುವುದು ಗಮನಿಸಿದರೆ ಶ್ರೀವಿಜಯ ಪ್ರೌಢ ಕವಿಯಾಗಿದ್ದ ಎನ್ನ ಬಹುದಾಗಿದೆ. ಆದರೆ ಈತ ಬರೆದ ಚಂದ್ರಪ್ರಭ ಚಂಪೂ ಈ ವರೆಗೂ ಲಭ್ಯವಾಗದೇ ಇರುವುದು ಕನ್ನಡ ಭಾಷೆಗೆ ತುಂಬಲಾರದ ನಷ್ಟ ಎನ್ನಬಹುದು. ಅಲ್ಲದೇ ಈತನು ಚಂದ್ರಪ್ರಭಚಂಪು ವಲ್ಲದೇ ಮತ್ತಿನ್ನೇನಾದರೂ ಬರೆದಿದ್ದಾನೋ ಎನ್ನುವುದು ಎಲ್ಲಿಯೂ ತಿಳಿದು ಬರುವುದಿಲ್ಲ.

ಆದರೆ ಇದಕ್ಕೆ ಅಪವಾದ ವೆನ್ನುವಂತೆ ನೃಪತುಂಗನೇ ಈ ಅಲಂಕಾರ ಗ್ರಂಥವನ್ನು ಬರೆದ ಎನ್ನುವ ಮಾತುಗಳಿವೆ ಆದರೆ ಅದು ಎಷ್ಟು ಸತ್ಯವೋ ತಿಳಿಯುತ್ತಿಲ್ಲ. ನಾನಿಲ್ಲ ಶಾಸನಕ್ಕೆ ಪ್ರಾಧಾನ್ಯತೆ ಕೊ‌ಟ್ಟಿರುವುದರಿಂದ ಶ್ರೀವಿಜಯನೇ ಕವಿ ಎಂದು ಉಲ್ಲೇಖಿಸಿರುವೆ ಮತ್ತು ಕವಿರಾಜಮಾರ್ಗದಲ್ಲಿಯೂ ಕವಿಯ ಉಲ್ಲೇಖ ಇರುವುದು ಕಂಡುಬರುತ್ತದೆ.

ಕವಿರಾಜಮಾರ್ಗ'ವು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ. ಅದು ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ ಮುಂತಾದ ವಿಷಯಗಳನ್ನು ಒಳಗೊಂಡ ಸಾಹಿತ್ಯತತ್ವಕ್ಕೆ ಸಂಬಂಧಿಸಿದ ಬರವಣಿಗೆಯೆನ್ನುವುದು ಕುತೂಹಲಕರವಾದ ಸಂಗತಿ. ಇದಲ್ಲದೆ, 'ಕವಿರಾಜಮಾರ್ಗ'ವು ಕರ್ನಾಟಕದ ನಾಡು, ನುಡಿ, ಜನ ಮತ್ತು ಸಂಸ್ಕೃತಿಗಳನ್ನು ಕುರಿತ ಸಮೃದ್ಧ ಮಾಹಿತಿಯನ್ನು ಒಳಗೊಂಡಿದೆ. ನಮ್ಮ ನಾಡಿನ ಭೌಗೋಳಿಕವಾದ ಮತ್ತು ಸಾಂಸ್ಕೃತಿಕವಾದ ಗಡಿಗೆರೆಗಳನ್ನು ಗುರುತಿಸುವ ಮೊದಲ ಪ್ರಯತ್ನವನ್ನು ಮಾಡಿದ ಪುಸ್ತಕವೂ 'ಕವಿರಾಜಮಾರ್ಗ'ವೇ ಆಗಿದೆ. ಆದರೂ ಈ ಗ್ರಂಥವು ದಕ್ಷಿಣ ಭಾರತದ ಲಾಕ್ಷಣಿಕನಾದ ದಂಡಿಯ ಸಂಸ್ಕೃತ ಕೃತಿ 'ಕಾವ್ಯಾದರ್ಶ'ವನ್ನು ಸಾಕಷ್ಟು ಅವಲಂಬಿಸಿದೆ.

'ಕವಿರಾಜಮಾರ್ಗ'ವನ್ನು ಬರೆದವರು ಯಾರೆಂಬುದನ್ನು ಕುರಿತ ಚರ್ಚೆಯು ಈಗ ಶ್ರೀವಿಜಯನ ಪರವಾಗಿ ತೀರ್ಮಾನವಾಗಿದೆ. ಅವನು ಕ್ರಿ.ಶ.814-878 ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದ ಲೇಖಕ. ಆದರೂ ಕೂಡ ಆ ಕೃತಿಯೊಳಗಿರುವ ವಿಷಯಗಳನ್ನು ಕುರಿತು ರಾಜ ಮತ್ತು ಕವಿಗಳ ನಡುವೆ ಸಹಮತವಿರುವಂತೆ ತೋರುತ್ತದೆ. ಕೃತಿಯಲ್ಲಿಯೇ ಬರುವ 'ನೃಪತುಂಗದೇವಾನುಮತ' ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ.

Post a Comment

0Comments

Please Select Embedded Mode To show the Comment System.*