ಆತನ ಹೆಸರು ‘ಚೇತನ್’ ಜೀವನದಲ್ಲಿ ಅದೆಷ್ಟು ಬಾರಿ ಸೋತಿದ್ದನೋ ಲೆಕ್ಕವೇ ಇಲ್ಲ. ಈಗಲೂ ಅವನಿಗೆ ಸೋಲೇ ಇತ್ತು. ಕೈ ಹಾಕಿದ ಎಲ್ಲಾ ಕೆಲಸದಲ್ಲಿ ಸೋಲು. ಖಚಿತವಾಗಿತ್ತು. ಬಿ.ಕಾಂ ಮುಗಿಸಿ ಕೆಲಸಕ್ಕಾಗಿ ಅಲೆದ ಸಿಗಲಿಲ್ಲ. ದೊಡ್ಡ ಕೆಲಸ ಅಂತೇನು ಅಲ್ಲ ಓದಿಗೆ ತಕ್ಕಂತೆ ಕೆಲಸ, ಜೀವನೊಪಾಯಕ್ಕೆ ಆಗುವಷ್ಟು ಸಂಪಾದನೆ. ಕೆಲಸಗಳಿಗೆ ಅರ್ಜಿ ಹಾಕಿ ಸೋತು ಸಿಗದೇ, ಇಷ್ಟವಿಲ್ಲದಿದ್ದರೂ ಒಲ್ಲದ ಮನಸ್ಸಿ ನಿಂದ ಶಿಕ್ಷಕ ವೃತ್ತಿಯನ್ನು ಮಾಡಬೇಕಾಗಿ ಬಂದಿತು. ಪ್ರವೇಟ್ ಶಾಲೆ ಒಂದರಲ್ಲಿ ಕೆಲಸ ಸಿಕ್ಕಿತು, ಬಿಟ್ಟರೆ ಇದು ಇಲ್ಲ ಎಂಬುದು ಗೊತ್ತಿತ್ತು. ಅವನಿಗೆ ಮಕ್ಕಳನ್ನು ಮಾತಾಡಿಸಲು, ನಗಿಸಲು, ಅವುಗಳ ಜೊತೆ ಆಡಲು ಬರುವುದೂ ಇಲ್ಲ, ಇಷ್ಟವೂ ಇಲ್ಲ. ಆದರೂ ಹೇಗೋ ಸಂಭಾಳಿಸಿ ಕೊಂಡಿದ್ದ . ಇದರ ನಡುವೆ ಅವನ ವಿವಾಹವಾಯಿತು. ಮಡದಿ ಅವನ ಬದುಕಿಗೆ ಬೆಳಕಾದಳು. ಕೆಲಸ ಮುಗಿಸಿ ಉಸ್ಸಪ್ಪಾ ಎಂದು ಮನೆಗೆ ಬಂದರೆ ತಂಪೆರವ ಮಡದಿ ಇದ್ದುದರಿಂದ ಅವನಿಗೆ ಅಷ್ಟು ಕಷ್ಟ ಎನಿಸಲಿಲ್ಲ. ಇತ್ತೀಚೆಗೆ ಶಾಲಾ ಮಕ್ಕಳ ಬಗ್ಗೆ ಅವನಿಗೆ ಆಸಕ್ತಿ ಹುಟ್ಟಿತು.
ಅವನ ದುರಾದೃಷ್ಟವೋ ಎಂಬಂತೆ ಪ್ರವೇಟ್ ಶಾಲೆ ಆದುದರಿಂದ, ಇದ್ದಕ್ಕಿದ್ದಂತೆ ಶಾಲೆ ನಡೆಸುವುದು ಕಷ್ಟ ಎಂದು ಕೆಲಸದಿಂದ ತೆಗೆದರು. ಮತ್ತೆ ತಲೆ ಮೇಲೆ ಕೈ ಹೊತ್ತು ಕೂತ. ಈ ಕೆಲಸ ಅಲ್ಲದಿದ್ದರೆ ಇನ್ನೊಂದು ಸಿಕ್ಕೇ ಸಿಗುತ್ತದೆ ಎಂದು ಪತ್ನಿ ಸಮಾಧಾನ ಮಾಡಿದಳು. ಅವಳು ಸಹ ಮನೆ ಹತ್ತಿರದ ಚಿಕ್ಕ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಂಬಳದಿಂದಲೇ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಗಂಡನಿಗೆ ಕೆಲಸ ಹುಡುಕಿ, ನಾನೊಬ್ಬಳೇ ದುಡಿಯ ಬೇಕು ಎಂಬ ಕಟಕು ಮಾತನ್ನು ಅಪ್ಪಿ ತಪ್ಪಿಯು ಆಡಲಿಲ್ಲ.
ಒಂದು ಮಧ್ಯಾಹ್ನ ಮನೆಗೆ ಹೋಗಲಾಗದೆ, ರಸ್ತೆಯಲ್ಲೂ ಅಲೆಯಲಾಗದೆ, ಹಳೆ ದೇವಸ್ಥಾನದ ಹೊರಜಗಲಿಯ ಮೇಲೆ ಮಲಗಿದ್ದನು. ಚಿಂತೆಯಲ್ಲಿರುವಾಗಲೇ ಯಾರೋ ಡಬ ದಬ ಹೊಡೆದಂತಾಯಿತು. ಆತ ಎಚ್ಚರಗೊಂಡು ನೋಡುತ್ತಾನೆ
ಒಬ್ಬ ಬಾಲಕ ಅವನ ಮೈ ಮೇಲೆ ಹೊಡೆಯುತ್ತಿತ್ತು. ಅವನಿಗೆ ಸಿಟ್ಟು ಬಂದಿತು ಎದ್ದು ಆ ಮಗುವನ್ನು ಹೊಡೆಯಬೇಕೆಂದು ಕೊಂಡ ಆದರೆ ಅದು ಬುದ್ಧಿಮಾಂದ್ಯ ಮಗುವಾಗಿತ್ತು. ಕೈ ಹಿಂತೆಗೆದುಕೊಂಡ. ಅಷ್ಟು ಹೊತ್ತಿಗೆ ಆ ಹುಡುಗನ ತಾಯಿ ಬಂದು ಕ್ಷಮೆ ಕೇಳುವಂತೆ ಆತನನ್ನು ನೋಡಿದಳು. ಅವನ ಕರುಳು ಚುರಕ್ಕಂತು ಆ ಬಾಲಕನನ್ನು ಎತ್ತಿ ಮುದ್ದು ಮಾಡಿ ತಾಯಿಯ ಜೊತೆ ಕಳಿಸಿಕೊಟ್ಟ. ಆಕೆ ಮಾತಾಡಿ ದಾಗ ಅವನ ಮನೆಯ ಪಕ್ಕದಲ್ಲಿ ಅವಳ ಮನೆ ಇರುವುದು ತಿಳಿಯಿತು. ಆತ ಮನೆಗೆ ಬಂದ ಮೇಲೆ ಪತ್ನಿಗೆ ಎಲ್ಲವನ್ನು ಹೇಳಿದ.
ಆಕೆ ಹೇಳಿದಳು ನೀವು ಬೇಜಾರು ಕಳೆಯಲು, ಪಕ್ಕದ ಮನೆಗೆ ಹೋಗಿ ಸ್ವಲ್ಪ ಹೊತ್ತು ಆ ಮಗುವಿನ ಜೊತೆ ಆಟವಾಡಿ, ನಿಮಗೂ ಸಮಯ ಕಳೆಯುತ್ತೆ ಆ ತಾಯಿಗೂ ಹಗುರವಾಗುತ್ತದೆ ಎಂದಳು. ಮರುದಿನದಿಂದ ಆತ ಆ ಮಗುವಿನ ಬಳಿ ಹೋಗಿ ಸ್ವಲ್ಪ ಹೊತ್ತು ಮಾತಾಡಿ ಆಟವಾಡಿಸಿ ಬರುತ್ತಿದ್ದ. ಆ ಬಾಲಕನ ತಾಯಿಗೆ ಇದರಿಂದ ತುಂಬಾ ಅನುಕೂಲವಾಯಿತು. ಆಟ ಆಡಿಸಿದ, ಮಾತನಾಡಿಸಿದ, ಚೆನ್ನಾಗಿ ಹೊಂದಿಕೊಂಡನು. ಇದನ್ನು ಗಮನಿಸಿದ ಆ ಬಾಲಕನ ತಾಯಿ ಹೇಳಿದಳು, ನೋಡು ಸದ್ಯಕ್ಕೆ ನಿನಗೂ ಕೆಲಸವಿಲ್ಲ, ಈ ಕಾಲೋನಿಯಲ್ಲಿ ಮಾನಸಿಕ ಸಮಸ್ಯೆ ಇರುವ ಕೆಲವು ಮಕ್ಕಳು ಇದ್ದಾವೆ. ಅವುಗಳನ್ನೆಲ್ಲ ಒಂದು ಕಡೆ ಸೇರಿಸಲು ನೀವೇಕೆ ಒಂದು ಶಾಲೆ ನಡೆಸ ಬಾರದು, ಈ ಮೊದಲೇ ನೀವು ಶಾಲೆಯಲ್ಲಿ ಶಿಕ್ಷಕರಾದ ಅನುಭವ ಇದೆ ಶಾಲೆ ನಡೆಸಿ ಪೋಷಕರೆಲ್ಲ್ ಸೇರಿ ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತಾರೆ ಎಂದಳು. ಮತ್ತೆ ಶಿಕ್ಷಕ ವೃತ್ತಿನಾ ಎಂದು ಮನಸ್ಸು ಹಿಂಜರಿದರೂ
ಅವನಿಗೆ ಹೌದೇನಿಸಿ ಒಪ್ಪಿಕೊಂಡನು.
ಮುಖ್ಯ ಕಚೇರಿಗಳಿಗೆ ಹೋಗಿ ಶಾಲೆ ಮಾಡುವ ಅನುಮತಿ ಪಡೆದುಕೊಂಡು ಬಂದ. ಆ ತಾಯಿ ಎಲ್ಲಾ ಕಡೆ ಹೇಳಿ ಬಂದಳು. ಶಾಲೆಗೆ ಸ್ಥಳವು ಸಿಕ್ಕಿತು. ಕೆಲಸ ಮತ್ತು ವೇತನ ದೊರೆಯಿತು. ಮತ್ತಷ್ಟು ಮಕ್ಕಳನ್ನು ಸೇರಿಸಿದರು. ಆ ಮಕ್ಕಳನ್ನು ಬಹಳ ಪ್ರೀತಿ ಯಿಂದ ನೋಡಿಕೊಂಡ, ಆಟ ಆಡಿಸಲು ಆ ಮಕ್ಕಳಿಗೆ ಪೂರಕವಾದ ಆಟದ ಸಾಮಾನುಗಳನ್ನು ತಾನೇ ಮಾಡಿದ. ಮಕ್ಕಳ ಪೋಷಕರನ್ನು ಕರೆಸಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು. ಎಂಬುದನ್ನು ವಿವರಿಸುತ್ತಿದ್ದ. ಮನೆಯಲ್ಲಿ ಮಕ್ಕಳ ಜೊತೆ ತಾಳ್ಮೆಯಿಂದ ವರ್ತಿಸಿ ಎಂದು ಹೇಳುತ್ತಿದ್ದ. ಇವನು ಸಕಾರಾತ್ಮಕ ಕೆಲಸ ಚಟುವಟಿಕೆಗಳನ್ನು ಗುರುತಿಸಿದ ಎಲ್ಲಾ ತಾಯಂದಿರ ಬಾಯಿಂದ ಬಾಯಿಗೆ ಹರಡಿ
ಗ್ರಾಮ, ಪಟ್ಟಣಗಳವರೆಗೂ ವಿಷಯ ಹೋಯಿತು. ಇನ್ನಷ್ಟು ಮಕ್ಕಳು ಶಾಲೆಗೆ ಸೇರಿದರು. ಅವನ ಸ್ಥಿತಿ ಈಗ ಉತ್ತಮ ಮಟ್ಟಕ್ಕೆ ಏರಿತು. ಸಮಾಜದಿಂದ ಅವನಿಗೆ ಒಳ್ಳೆಯ ಹೆಸರು ಬಂದಿತು. ಸರ್ಕಾರಿ ಅಧಿಕಾರಿಗಳು ಬಂದು ಶಾಲೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಸಿರಿವಂತ ತಂದೆ ತಾಯಿ ಯರು ಆ ಶಾಲೆಗೆ ಹಲವು ಕೊಡುಗೆಗಳನ್ನು ಕೊಟ್ಟರು.
ಆ ಶಾಲೆಗೆ ಅವನೇ ಮುಖ್ಯಸ್ಥನಾದನು. ಈಗ ಅವನ ಜೊತೆಗೆ ನಾಲ್ಕಾರು ಸಹ ಶಿಕ್ಷಕರು ಬಂದರು. ಸರ್ಕಾರದ ವತಿಯಿಂದ ಹಾಗೂ ಖಾಸಗಿ ವತಿಯಿಂದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಬಂದವು. ಇಷ್ಟೇ ಅಲ್ಲದೆ ಅವನು ಮಾಡಿದ ಆಟದ ಸಾಮಾನುಗಳಿಗೆ, ಆನ್ಲೈನ್ ಬೇಡಿಕೆ ಹೆಚ್ಚಿತು. ತಾನು ದುರಾದೃಷ್ಟ ವಂತ ಎಂದು ಎಷ್ಟು ಹೀಗಳೆದುಕೊಂಡಿದ್ದನೋ, ಈಗ ಅಷ್ಟೇ ಪ್ರಸಿದ್ಧಿ ಹೆಸರು ಬೇರೆ ರಾಜ್ಯಗಳ ತನಕ ಹರಡಿತು. ಆ ಮಕ್ಕಳಿಗೂ ಅವನಿಗೂ ಆವಿನ ಭಾವ ಸಂಬಂಧ ಬೆಳೆದು ಬಂದಿತ್ತು ಒಂದು ದಿನ ಮಕ್ಕಳ ಜೊತೆ ಕಳೆಯದಿದ್ದರೆ ಅವನಿಗೆ ಗೊತ್ತಿಲ್ಲ ದಂತೆ ಅವನ ಮನಸ್ಸಿಗೆ ಕಸಿ ವಿಸಿ ಆಗುತ್ತಿತ್ತು. ಹಾಗಾಗಿ, ಎಷ್ಟೇ ಅವಸರದ ಕೆಲಸ ಅಥವಾ ಒತ್ತಡ ಗಳಿದ್ದರೂ ಶಾಲೆಗೆ ಬಂದು ಮಕ್ಕಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಿದ್ದ.
ಒಮ್ಮೆ ಅವನೇ ಅಂದುಕೊಂಡ ನಾನು ಹೇಗಿದ್ದವನು ಈಗ ಹೇಗಾಗಿದ್ದೇನೆ ಎಂದು ಯೋಚಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪತ್ನಿಯ ನೆನಪಾಯಿತು. ಮನೆಗೆ ಬಂದು ಪತ್ನಿ ಯನ್ನು ಕೇಳಿದ, ನಾನು ಎಷ್ಟು ಸಲ ಚಿಂತಿತನಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದೆ, ಇದ್ದ ಕೆಲಸವೂ ಹೋಗಿತ್ತು. ನನ್ನ ಕೈಲಿ ಬಿಡಿಗಾಸು ಇಲ್ಲದಿದ್ದಾಗಲೂ ನೀನು ಜೀವನವನ್ನು ನಿರ್ವಹಣೆ ಮಾಡಿದ್ದು, ನಾನು ಜೀವನದಲ್ಲಿ ಗೆಲ್ಲುತ್ತೇನೆ ಎಂಬ ನಂಬಿಕೆ ನನಗಿರಲಿಲ್ಲ, ಒಂದು ದಿನವೂ ನೀನು ನನ್ನ ಬಗ್ಗೆ ಒಂದು ಕೆಟ್ಟ ಮಾತಾಗಲಿ, ಅಥವಾ ತಿರಸ್ಕಾರದ ನೋಟವಾಗಲಿ ತೋರಿಸಲಿಲ್ಲ ನಿನಗೆ ನನ್ನ ಮೇಲೆ ಅಷ್ಟೊಂದು ನಂಬಿಕೆ, ಜೀವನದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ, ನನಗೂ ಒಳ್ಳೆಯ ದಿನಗಳು ಬರುತ್ತವೆ ಎಂಬ ವಿಶ್ವಾಸ ನನ್ನ ಮೇಲೆ ನಿನಗಿತ್ತಾ ಎಂದು ಕೇಳಿದ.
ಆಕೆ ಹೇಳಿದಳು. ನಿಮಗೆ ಹೊಲದ ಬಗ್ಗೆ ಗೊತ್ತಾ? ನಾನು ರೈತರ ಕುಟುಂಬದಿಂದ ಬಂದವಳು ಹೊಲದಲ್ಲಿ ಒಮ್ಮೆ ರಾಗಿ ಹಾಕುತ್ತೇವೆ ಅದು ನಾಶವಾಗುತ್ತದೆ, ಮತ್ತೊಮ್ಮೆ ಜೋಳ ಹಾಕುತ್ತೇವೆ ಅದೂ ನಾಶವಾಗುತ್ತದೆ.
ಹೀಗೆ ನಾಶವಾದಷ್ಟು ಮತ್ತೆ ಮತ್ತೆ ಕಡಲೆ, ಉದ್ದು, ಹೆಸರು ಎಲ್ಲಾ ಹಾಕುತ್ತೇವೆ. ಕೊನೆಗೆ ನಾವು ಅಂದುಕೊಂಡಿರದೆ ಇದ್ದ ಬೆಳೆ ಚೆನ್ನಾಗಿ ಬಂದು ಅದು ನಮ್ಮ ಕೈ ಹಿಡಿಯುತ್ತದೆ. ಮನುಷ್ಯನ ಬದುಕು ಹೀಗೆ ಹುಡುಕುತ್ತಾ ಇರಬೇಕು ಯಾವುದೋ ಒಂದು ಕಡೆ ನಮಗೆ ಬೇಕಾದ್ದು ಸಿಗುತ್ತದೆ. ಅದರಿಂದಲೇ ಬದುಕು ಚೆನ್ನಾಗಿ ಆಗುತ್ತದೆ. ನನಗೆ ನಿಮ್ಮ ಮೇಲೆ ವಿಶ್ವಾಸವಿತ್ತು. ಒಳ್ಳೆಯ ದಿನಗಳು ಕೊನೆತನಕ ಉಳಿಯುವುದಿಲ್ಲ ಎಂದಾದರೆ, ಕೆಟ್ಟ ದಿನಗಳು ಎಲ್ಲೀಯ ತನಕ ಉಳಿಯಲು ಸಾಧ್ಯ. ಕತ್ತಲು ಬಂದಮೇಲೆ ಬೆಳಕು ಬರಲೇಬೇಕು ಅಲ್ಲವೇ? ಹಾಗೆ ಬೆಳಕು ಬಂದ ಮೇಲೆ ಜೀವನ ರಂಗು ರಂಗಾಗುತ್ತದೆ. ಜೀವನದಲ್ಲಿ ಎಲ್ಲಾ ಬರುತ್ತದೆ ಹೋಗುತ್ತದೆ.
ಬದಲಾವಣೆ ಎನ್ನುವುದು ಜಗದ ನಿಯಮ ಆದರೆ ಪ್ರಾಣ ಹೋದರೆ ಎಂದಿಗೂ ಬರುವುದಿಲ್ಲ.
ದಾಸರು ಹೇಳಿರುವುದು ಇದನ್ನೆ.
ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು !!
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ!!
*ಗೋಪಾಲ ಬುಟ್ಟಿ ಹಿಡಿಯುವುದಕ್ಕೆ*
*ಭೂಪತಿಯೆಂದು ಗರ್ವಿಸುತ್ತಿದ್ದೆ*
*ಆ ಪತ್ನಿ ಕುಲ ಸಾವಿರವಾಗಲಿ*
*ಗೋಪಾಲ ಬುಟ್ಟಿ ಹಿಡಿಸಿದಳಯ್ಯ!!*
*ತುಳಸಿ ಮಾಲೆ ಹಾಕುವುದಕ್ಕೆ*
*ಅರಸನೆಂದು ತಿರುಗುತಲಿದ್ದೆ*
*ಸರಸಿ ಜಾಕ್ಷ ಶ್ರೀ ಪುರಂದರ ವಿಠಲನು*
*ತುಳಸಿ ಮಾಲೆ ಹಾಕಿದನಯ್ಯ !!*
No comments:
Post a Comment