ಒಬ್ಬ ಮನುಷ್ಯನು ದೇಹ ಬಿಟ್ಟಿದ್ದ. ಶವ ಸಂಸ್ಕಾರಕ್ಕೆ ಅವನ ಗೆಳೆಯನು ಸ್ಮಶಾನಕ್ಕೆ ಹೋಗಿದ್ದ. ಅಲ್ಲಿ ತನ್ನ ಗೆಳೆಯನ ದೇಹವು ಅಗ್ನಿಗೆ ಆಹುತಿಯಾಗುವುದನ್ನು ಕಣ್ಣಾರೆ ಕಂಡ. ಜೀವನವು ಎಷ್ಟು ಅಸ್ಥಿರ, ನಶ್ವರ ಎನಿಸಿತು. 'ಮನುಷ್ಯನು ಈ ನಶ್ವರ ಜೀವನಕ್ಕಾಗಿ, ಸಂಸ್ಕಾರಕ್ಕಾಗಿ ಆಶೆಪಡಬಾರದು, ಹೋರಾಡಬಾರದು !' ಎಂದು ಅಲ್ಲಿರುವವರಿಗೆ ಈತ ಹೇಳಿದ. ಜನರು ಈತನ ಉಪದೇಶಕ್ಕೆ ಮೌನವಾಗಿ ಸಮ್ಮತಿಸಿ ಮನೆಗೆ ಹೊರಟರು. ಅಷ್ಟರಲ್ಲಿ ಯಾರೋ ಈತನ ಕಾಲಮೇಲೆ ಕಾಲಿಟ್ಟಿದ್ದರಿಂದ ಇವನ ಹಳೆ ಚಪ್ಪಲಿ ಹರಿಯಿತು. 'ಕಣ್ಣು ಕಾಣುವುದಿಲ್ಲವೆ ? ಹೇಗೆ ನಡೆಯುತ್ತೀರಿ ?' ಎಂದು ಅವರೊಂದಿಗೆ ಈತ ವಾದವಿವಾದಕ್ಕೆ ಇಳಿದು ಹೋರಾಡತೊಡಗಿದ . ಅಲ್ಲಿದ್ದ ಜನರೆಲ್ಲ ಈತನಿಗೆ ಸಮಾಧಾನ ಹೇಳಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಒಂದು ಕ್ಷಣದ ಹಿಂದೆಯೇ 'ಮಾನವ ಜೀವನ ಅಸ್ಥಿರ-ನಶ್ವರ' ಎಂದು ಹೇಳಿದವನೇ ತನ್ನ ಹಳೆಯ ಚಪ್ಪಲಿಗಳಿಗಾಗಿ ವಾದಿಸಿದ ! ಇದೇ ಮಾಯೆ, ಮೋಹ!.
ಕೃಪೆ: ಸಿದ್ದೇಶ್ವರ ಸ್ವಾಮೀಜಿಗಳು.*********************************************
*ತಾಯಿಯ ಪ್ರೀತಿಗೆ ಸಮಾನವಾದದ್ದು ಬೇರೊಂದಿಲ್ಲ.*
ಒಂದು ಕಾಡಿನಲ್ಲಿ ಸಂಗೀತದ ಆಶ್ರಮವೊಂದಿತ್ತು . ಆಶ್ರಮದ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ನದಿ ದಂಡೆಯ ಮೇಲೆ, ಕುಳಿತು ತಬಲ, ಪಿಯಾನೋ ವೈಲೀನ್ ನುಡಿಸುತ್ತಿದ್ದರು.
ಆಶ್ರಮದ ಕೆಲವು ಹುಡುಗರು ಒಂದೊಂದು ಮರದ ಕೆಳಗೆ ಕುಳಿತು ಸಂಗೀತದ ಅಭ್ಯಾಸ ನಡೆಸುತ್ತಿದ್ದರು. ಕೆಲವು ಕುರಿ ಕಾಯುವ ಹುಡುಗರು ಕುರಿ ಮೇಯಿಸಲು ಕುರಿಗಳೊಂದಿಗೆ ಆ ಕಾಡಿಗೆ ಬರುತ್ತಿದ್ದರು.
ಒಂದು ದಿನ ಒಬ್ಬ ಹುಡುಗ ಮೃದಂಗ ಬಾರಿಸುತ್ತಿದ್ದ. ಕುರಿ ಹಿಂಡಿನಲ್ಲಿದ್ದ ಒಂದು ಕುರಿಮರಿ, ಓಡೋಡಿ ಇವನ ಹತ್ತಿರ ಬಂದಿತು. ಮೃದಂಗದ ಶಬ್ದಕ್ಕೆ ತಾನು ಕೂಡ ತಲೆ ಅಲ್ಲಾಡಿಸುತ್ತಿತ್ತು. ಈ ಹುಡುಗ ಅಭ್ಯಾಸ ಮುಗಿಸಿ ಒಳಗೆ ಹೋದಾಗ, ಪುನಹ ಈ ಕುರಿಮರಿ ತನ್ನ ಗುಂಪಿನ ಕಡೆಗೆ ಓಡಿಹೋಯಿತು. ಪ್ರತಿದಿನವೂ ಇದೇ ರೀತಿ ನಡೆಯುತ್ತಿತ್ತು, ಈ ಹುಡುಗ ಮೃದಂಗ ಬಾರಿಸಿದಾಗಲೆಲ್ಲಾ, ಅದರ ಶಬ್ದ ಕಿವಿಗೆ ಬಿದ್ದ ತಕ್ಷಣ ಈ ಕುರಿಮರಿ ಓಡಿ ಬಂದು , ತಲೆ ಅಲ್ಲಾಡಿಸುತ್ತಾ ನಿಲ್ಲುತ್ತಿತ್ತು. ಮೃದಂಗದ ಶಬ್ದ ನಿಂತ ಕ್ಷಣ ತನ್ನ ಮಂದೆಯ ಕಡೆಗೆ ಓಡಿ ಹೋಗುತ್ತಿತ್ತು. ಈ ಹುಡುಗನಿಗೆ ಆಶ್ಚರ್ಯವಾಗಿ, ಒಂದು ದಿನ ಕುರಿಯನ್ನು , ಮೃದಂಗದ ಶಬ್ದ ಕೇಳಿದ ತಕ್ಷಣ ನೀನೇಕೆ ಹಾಗೆ ತಲೆ ಅಲ್ಲಾಡಿಸುವೆ ? ಎಂದು ಕೇಳಿದ.
ಮೃದಂಗದ ಶಬ್ದ ನನ್ನ ಕಿವಿಯ ಮೇಲೆ ಬಿದ್ದಾಗ, ನನ್ನ ಹೃದಯದಲ್ಲಿ ಪ್ರೇಮದ ತರಂಗಗಳು ಏಳಲು ಶುರುವಾಗುತ್ತದೆ, ಎಂದಿತು ಕುರಿ.
ಮೃದಂಗದ ಶಬ್ದಕ್ಕೂ ನಿನ್ನ ಹೃದಯದಲ್ಲಿ ಪ್ರೇಮ ತರಂಗ ಏಳುವುದಕ್ಕೂ ಏನು ಸಂಬಂಧ ? ಎಂದು ಕೇಳಿದ ಹುಡುಗ.
ಏಕೆಂದರೆ, ನಿನ್ನ ಮೃದಂಗ ತಯಾರಾಗಿದ್ದು ನನ್ನ ತಾಯಿಯ ಚರ್ಮದಿಂದ, ಅದಕ್ಕಾಗಿ ನನಗೆ, ಹಾಗೆ ಅನ್ನಿಸುತ್ತದೆ. ನನ್ನ ತಾಯಿ ಈಗ ಜೀವಂತ ಇಲ್ಲ, ಆದರೆ ಅವಳು ನಿನ್ನ ಮೃದಂಗದ ಮೂಲಕ ಅವಳ ಪ್ರೇಮವನ್ನು ಬಿಟ್ಟು ಹೋಗಿದ್ದಾಳೆ, ಅದರಲ್ಲೇ ಅವಳನ್ನು ಕಾಣುತ್ತೇನೆ,ಎಂದು ಕಣ್ಣೀರು ಸುರಿಸಿತು ಕುರಿ.
ಜಗತ್ತಿನಲ್ಲಿ ತಾಯಿಯ ಪ್ರೇಮವೇ ಹಾಗೆ. ಎಲ್ಲ ಪ್ರೇಮಕ್ಕಿಂತಲೂ, ತಾಯಿಯ ಪ್ರೇಮ ದೊಡ್ಡದು. ತಾಯಿಯ ಪ್ರೇಮಕ್ಕಿಂತಲೂ ಬೇರೆ ಯಾವುದೂ ದೊಡ್ಡದಲ್ಲ.
ನಾವು ದೊಡ್ಡ ದೊಡ್ಡ ಹೋಟಲ್ ನಲ್ಲಿ, ಸಾವಿರಾರು ರೂಪಾಯಿಗಳನ್ನು ಕೊಟ್ಟು ಬೇಕಾದದ್ದನ್ನು ಕೊಂಡು ತಿನ್ನಬಹುದು. ಆದರೆ ಮನೆಯಲ್ಲಿ ತಾಯಿ ಮಾಡಿಕೊಟ್ಟ ರೊಟ್ಟಿ, ಚಟ್ನಿಯ ರುಚಿ ಅದಕ್ಕಿರುವುದಿಲ್ಲ. ಏಕೆಂದರೆ ಹೋಟೆಲ್ ನವನು ನಾವು ಕೇಳಿದ್ದನ್ನೇ ಕೊಟ್ಟರೂ ಅವನ ಕಣ್ಣು , ನಾವು ಕೊಡುವ ಹಣದ ಮೇಲಿರುತ್ತದೆ. ಆದರೆ ಅಮ್ಮನ ಕಣ್ಣು ಮಗ ಚೆನ್ನಾಗಿ ತಿಂದು ಆರೋಗ್ಯವಂತನಾಗಬೇಕು ಎಂಬುದರ ಬಗ್ಗೆ ಇರುತ್ತದೆ . ಅಮ್ಮ ಕೊಡುವ ರೊಟ್ಟಿ ಗಟ್ಟಿಯಾಗಿದ್ದರೂ, ಅಮ್ಮನ ಹೃದಯ , ಮೃದುವಾಗಿರುತ್ತದೆ.
ನಾವು ದೊಡ್ಡವರಾಗಿ ದುಡಿಯ ತೊಡಗಿದಾಗ, ದುಡಿದು ಮನೆಗೆ ಬಂದಾಗ, ನಮ್ಮ ಮಕ್ಕಳು ನನಗೇನು ತಂದಿ? ಎಂದು ಕೇಳುತ್ತಾರೆ . ಆದರೆ ತಾಯಿ ಮಾತ್ರ , ಇವತ್ತು ಅಲ್ಲಿ ಏನು ತಿಂದಿ ? ಹೊಟ್ಟೆ ತುಂಬಿತಾ? ಎಂದು ಕೇಳುತ್ತಾಳೆ. ಹಾಗೆ ಕೇಳುವವಳು ಅಮ್ಮ ಮಾತ್ರ.
ತಾಯಿ ಪ್ರೀತಿಗೆ ಎಂದೂ ಬೆಲೆಕಟ್ಟಲು ಸಾಧ್ಯವಿಲ್ಲ.
No comments:
Post a Comment