ಸತ್ಯಜಿತ್ ಎಂಬ ಬ್ರಾಹ್ಮಣ. ಆತ ಸದಾಚಾರ ಸಂಪನ್ನ. ಅಲ್ಲದೆ ಆತ ಗಂಗೆಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ ಮಾಡುತಿದ್ದ. ಯವಾಗಲೂ ತೀರ್ಥ ಯಾತ್ರೆ ಮಾಡುತಿದ್ದ.
ಒಮ್ಮೆ ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲದಿಂದ ಹೊರಟ. ಕುರುಕ್ಷೇತ್ರ ಎನ್ನುವ ಊರಿಗೆ ಬರುತ್ತಾನೆ. ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ. ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ಆತ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ, ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದೆಂದು ಹೇಳಿದರು.
ಸತ್ಯಜಿತ್ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು 'ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ, ಆಗಮನ ನನ್ನ ಜನ್ಮಾಂತರದ ಪುಣ್ಯದ ಫಲ, ನಮ್ಮಪಿತೃದೇವತೆಗಳು ಇಂದು ಸಂತೃಪ್ತಿ ಹೊಂದುವರು. ಅಲ್ಲದೆ ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು. ಏಳಿ, ತಮ್ಮ ಸ್ನಾನ ಆಹ್ನೀಕಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಸಿದ್ದರಾಗಿ ಎಂದು ಕೈಮುಗಿದು ವಿಜ್ಞಾಪಿಸಿದ.
ಸತ್ಯಜಿತ್ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು 'ಅಯ್ಯಾ, ಸತ್ಯಕೇತು ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯದಾತ ನಾಗಿದ್ದೀ, ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ" ಎನ್ನುತ್ತ, "ನೀನು ಗಂಗಾಸ್ನಾನ ಮಾಡಿರುವೆಯಾ?" ಎಂದು ಕೇಳಿದ. ಅದಕ್ಕೆ ಸತ್ಯಕೇತು "ಕ್ಷಮಿಸಿ. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ. ನಾನು ಗಂಗಾಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ. ಮತ್ತು ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ. ಹಾಗಾಗಿ ಹೋಗಿಲ್ಲ. ಎಂದು ಉತ್ತರಿರಿಸಿದ. ಈ ಮಾತನ್ನು ಕೇಳಿ ಸತ್ಯಜಿತ್ 'ಛೇ! ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ, ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ, ತಿಳಿಯದೆ ನಿನ್ನ ಮನೆಗೆ ಬಂದೆ" ಎಂದು ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ.
ಅಲ್ಲಿಂದ ಗಂಗಾನದಿಯ ದಡಕ್ಕೆ ಬಂದು ನೋಡಿದ, ಸುತ್ತಲೂ ಬರಿ ಮರುಳು. ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ "ಅಮ್ಮಾ, ಗಂಗಾ ಮಾತೆ!" ನಾನು ಯಾವ ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ, ದಯವಿಟ್ಟು ಕೃಪೆ ಮಾಡೆಂದು ಮರುಳಲ್ಲಿ ಬಿದ್ದು ಗೋಳಾಡಿದ. ಆಗ ತಾಯಿ ಗಂಗೆ "ಎಲೈ ಮೂಢ! ಸತ್ಯಕೇತುವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ" ಎಂದಳು. "ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ. ನಿತ್ಯ ಅನ್ನದಾನ ಮಾಡುತ್ತಾ, ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ, ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ. ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ" ಎಂದು ಗಂಗಾದೇವಿ ಆದೇಶಿಸಿದಳು.
ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಹೊರಡುತ್ತನೆ. ಅಲ್ಲಿ ಬಂದಂತಹ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ ಸತ್ಯಕೇತು ಕುಳಿತಿದ್ದ. ಮತ್ತೆ ತಿರುಗಿ ಬಂದ ಬ್ರಾಹ್ಮಣನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.
ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿನಗೆ ನಿಂದಿಸಿದೆ, ನನ್ನ ಕ್ಷಮಿಸಿ" ಎಂದು ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ. ಆಗ ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾಗುತ್ತಾನೆ ಸತ್ಯಜಿತ್.
ನೀತಿ :-- ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ. ಅನ್ನವೇ ಪ್ರಾಣ. ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ. ಅನ್ನದಾನವನ್ನು ಯಾರು ಮಾಡುತ್ತಾರೆಯೋ ಅವರು ಉತ್ತಮ ಲೋಕವನ್ನು ಪಡೆದು, ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.