ಆನೆಯ ಬೆನ್ನ ಮೇಲಿನ ಸವಾರಿ

SANTOSH KULKARNI
By -
0

 ಒಂದು ದಟ್ಟವಾದ ಕಾಡು. ಅಲ್ಲಿ ಆನೆಯೊಂದಿತ್ತು. ದಿನಾಲೂ ನೀರು ಕುಡಿಯಲು ಸಮೀಪದ ಕೊಳಕ್ಕೆ ಹೋಗಿ, ನೀರು ಕುಡಿದು ಸಂಗಡಿಗರೊಂದಿಗೆ ಕೊಳದಲ್ಲಿ ಈಜುತ್ತಿತ್ತು. ಆ ಕೊಳದಲ್ಲೊಂದು ಕಪ್ಪೆ ವಾಸವಾಗಿತ್ತು. ಆನೆ ನೀರು ಕುಡಿದು ಈಜಾಡುವುದನ್ನು ಅದು ದಿನವೂ ನೋಡುತ್ತಿತ್ತು. ಅದಕ್ಕೆ ಒಮ್ಮೆಯಾದರೂ ಆನೆಯ ಬೆನ್ನನ್ನೇರಿ ಸವಾರಿ ಮಾಡಬೇಕೆಂಬ ಆಸೆಯಾಗಿತ್ತು. ಆದರೆ ಆನೆಯನ್ನು ಕೇಳಲು ಭಯ. ಹಾಗೂಹೀಗೂ ಒಂದು ದಿನ ಧೈರ್ಯ ಮಾಡಿ "ಆಯ್ಯಾ, ಆನೆ ನನ್ನದೊಂದು ಕೋರಿಕೆ ಇದೆ. ಸಾಯುವ ಮೊದಲು ನಿನ್ನ ಬೆನ್ನನ್ನು ಏರಿ ಕಾಡಿನಲ್ಲಿ ಸವಾರಿ ಮಾಡಬೇಕು" ಎಂದು ಕೇಳಿಯೇ ಬಿಟ್ಟಿತು. ಆನೆಗೆ ಕಪ್ಪೆಯ ಮೇಲೆ ಕನಿಕರ ಪಟ್ಟು ಅಷ್ಟೇ ತಾನೇ ಎಂದು ಅನುಮತಿ ನೀಡಿತು.

ಒಂದು ದಿನ ಬಿಡುವು ಮಾಡಿಕೊಂಡು ಆನೆ, ಕಪ್ಪೆ ಬಳಿಗೆ ಬಂದಿತು. ಕಪ್ಪೆಯ ಮುಂದೆ ಮಂಡಿಯೂರಿ ನೆಲದತ್ತ ಬಾಗಿತು. ಕಪ್ಪೆ ಆನೆಯ ಬೆನ್ನ ಮೇಲೆ ಹಾರಿತು. ಆನೆ ಕಪ್ಪೆಯನ್ನು ಸವಾರಿ ಕರೆದೊಯ್ಯಿತು. ಕಡೆಗೂ ಕಪ್ಪೆಯ ಬಹುದಿನಗಳ ಕನಸು ನೆರವೇರಿತ್ತು. ಆನೆ ಮತ್ತೆ ಕೊಳದ ಬಳಿ ತಂದುಬಿಟ್ಟಿತು. ಆದರೆ ಕಪ್ಪೆಗೆ ಆನೆಯ ಬೆನ್ನ ಮೇಲಿನ ಸವಾರಿ ತುಂಬಾ ಹಿಡಿಸಿತ್ತು. ಅದು ಕೆಳಕ್ಕಿಳಿಯಲು ಒಪ್ಪಲಿಲ್ಲ. ಆನೆ ಕಪ್ಪೆಯನ್ನು ಎಷ್ಟು ಕೇಳಿಕೊಂಡರೂ ಕಪ್ಪೆ ಹಿಡಿದ ಹಠವನ್ನು ಬಿಡಲಿಲ್ಲ. ಆನೆಗೆ ಸಿಟ್ಟು ಬಂದು ಸೊಂಡಿಲಿನಲ್ಲಿ ಕಪ್ಪೆಯನ್ನು ಬೀಳಿಸಲು ಯತ್ನಿಸಿತು. ಆದರೆ ಆಗಲಿಲ್ಲ. ಕಡೆಗೆ ಒಂದುಪಾಯ ಮಾಡಿತು. ದಾರಿಯಲ್ಲಿ ಸಿಕ್ಕ ಹಾವನ್ನು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿತು. ಹಾವು ಆನೆಯ ಬೆನ್ನನ್ನೇರಿತು. ಹಾವನ್ನು ನೋಡುತ್ತಲೇ ದಿಗಿಲು ಬಿದ್ದ ಕಪ್ಪೆ ಜಾಗ ಖಾಲಿ ಮಾಡಿತು.

ಹಾವು ಆನೆಯನ್ನು ಸವಾರಿ ಮಾಡಿಸುವಂತೆ ಕೇಳಿಕೊಂಡಿತು. ಕಪ್ಪೆಯನ್ನು ಓಡಿಸಿ ಸಹಾಯ ಮಾಡಿದ್ದರಿಂದ ಆನೆ ಅದರ ಕೋರಿಕೆಯನ್ನು ಮನ್ನಿಸಿತು. ಸವಾರಿ ಮುಗಿಯುವಷ್ಟರಲ್ಲಿ ಹಾವಿಗೆ ಆನೆಯ ಬೆನ್ನು ತುಂಬಾ ಹಿಡಿಸಿತ್ತು. ಅದು ಮೆತ್ತನೆಯ ಹಾಸಿಗೆಯಂತೆ ತೋರಿತ್ತು. ಹೀಗಾಗಿ ಹಾವು ಕೂಡಾ ಬೆನ್ನ ಮೇಲಿಂದ ಕೆಳಕ್ಕಿಳಿಯಲು ಒಪ್ಪಲಿಲ್ಲ. ಇದ್ಯಾವ ಗ್ರಹಚಾರವೆಂದು ಆನೆ ಹಣೆ ಚಚ್ಚಿಕೊಂಡಿತು. ಅದೇ ಸಮಯಕ್ಕೆ ಮುಂಗುಸಿಯೊಂದು ಬಂದಿತು. ಹಾವು ಮುಂಗುಸಿಯ ಶತ್ರುವಾಗಿದ್ದರಿಂದ ಆನೆ ಅದರ ಸಹಾಯ ಕೋರಿತು. ಮುಂಗುಸಿ ಒಂದೇ ಏಟಿಗೆ ಆನೆಯ ಬೆನ್ನನ್ನೇರಿದ ಮರುಕ್ಷಣವೇ ಹಾವು ಕೆಟ್ಟೆನೋ ಬಿಟ್ಟೆನೋ ಎಂದು ಸರಸರನೆ ಪಲಾಯನಗೈದಿತು.

ಆನೆಗೆ ನೆಮ್ಮದಿಯಾಯಿತು. ಆದರೆ ಅದರ ನೆಮ್ಮದಿ ಬಹಳ ಕಾಲ ಉಳಿಯಲಿಲ್ಲ. ಆನೆಯ ಗ್ರಹಾಚಾರಕ್ಕೆ ಮುಂಗುಸಿ ಕೂಡಾ ಕೆಳಕ್ಕಿಳಿಯಲಿಲ್ಲ. ಆನೆಯ ಬೆನ್ನ ಮೇಲೆಯೇ ಅದೂ ಲಂಗರು ಹಾಕಿತು. ಮುಂಗುಸಿಯನ್ನು ಕೆಳಗಿಳಿಸಲು ಆನೆ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ನೋಡಿತು. ಅದೆಲ್ಲವೂ ನಿರರ್ಥಕ ಎಂದು ಆನೆಗೆ ಅನಿಸಿದಾಗ ಅದು ಕೆಂಡಾಮಂಡಲವಾಯಿತು. ನಾಯಿಯೊಂದು ಅಲೆಯುತ್ತಾ ಆ ದಾರಿಯಾಗಿ ಬಂದಿತು. ಆನೆ, ನಾಯಿಯನ್ನು ಸಹಾಯ ಮಾಡುವಂತೆ ಕೇಳಿಕೊಂಡಿತು. ನಾಯಿ ಬೊಗಳಿ ಬೊಗಳಿ ದಂತಕೋರೆಗಳನ್ನು ಪ್ರದರ್ಶಿಸಿ ಮುಂಗುಸಿಯನ್ನು ಹೆದರಿಸಿತು. ಮುಂಗುಸಿಯೂ ಅಲ್ಲಿಂದ ಓಡಿ ಹೋಯಿತು. ಈಗ ಮುಂಗುಸಿಯ ಸ್ಥಾನವನ್ನು ನಾಯಿ ಅಲಂಕರಿಸಿತು. ರಾಜಾರೋಷವಾಗಿ ಆನೆಯ ಬೆನ್ನ ಮೇಲೆ ಸವಾರಿ ಮಾಡಿತು.

ಆನೆಯ ಬೆನ್ನ ಮೇಲೆ ಕೂತಾಗ ಇತರೆ ಪ್ರಾಣಿಗಳು ತನ್ನನ್ನು ಗೌರವಯುತವಾಗಿ ಕಾಣುವುದನ್ನು ನಾಯಿ ಗಮನಿಸಿತು. ಹೀಗಾಗಿ ಅದು ಕೂಡಾ ಅಲ್ಲಿಂದ ಕಾಲ್ದೆಗೆಯಲು ಒಪ್ಪಲಿಲ್ಲ. ಆನೆಗೆ ಯಾಕೋ ಇದು ಅತಿಯಾಯಿತು ಎಂದೆನಿಸಿತು. ಯಾರ ಸಹಾಯವನ್ನು ಕೇಳಲೂ ಹಿಂದೆಗೆಯಿತು. ನಾಯಿಯನ್ನು ಬೆನ್ನ ಮೇಲಿಂದ ಓಡಿಸಲು ಉಪಾಯ ಹೊಳೆಯಿತು. ಆನೆ ಕೊಳದ ಬಳಿ ಬಂದಿತು. ಅದಕ್ಕೆ ನಾಯಿಯ ದೌರ್ಬಲ್ಯ ಗೊತ್ತಿತ್ತು. ನಾಯಿಗೆ ನೀರನ್ನು ಕಂಡರೆ ಆಗುತ್ತಿರಲಿಲ್ಲ. ಆನೆ ಕೊಳದಲ್ಲಿ ಎರಡು ಮೂರು ಡುಬುಕಿ ಹೊಡೆಯಿತು. ಜನ್ಮದಲ್ಲಿ ಮೈಗೆ ನೀರು ಸೋಕಿಸಿಕೊಳ್ಳದ ನಾಯಿ ಬೊಬ್ಬೆ ಹೊಡೆಯುತ್ತಾ ಕೊಳದಿಂದ ಎದ್ದು ಓಡಿ ಹೋಯಿತು. ಆನೆ ಕಡೆಗೂ ನಿಟ್ಟುಸಿರು ಬಿಟ್ಟಿತು. ಸಂಗಡಿಗರೆಲ್ಲ ಅದರ ಬುದ್ಧಿವಂತಿಕೆಗೆ ಬೆನ್ನುತಟ್ಟಿದವು.

ನೀತಿ :-- ಅತಿಯಾದ ಆಸೆ ಒಳ್ಳೆಯದಲ್ಲ. ಕಪ್ಪೆ, ಹಾವು, ಮುಂಗುಸಿ ಮತ್ತು ನಾಯಿ ತಮ್ಮ ಆಸೆಗೆ ಆನೆಯ ಸಹಾಯ ಪಡೆಯಲು ಪ್ರಯತ್ನಿಸಿದವು. ಆದರೆ ಅವುಗಳ ಆಸೆ ಅತಿಯಾಗಿಯಾದರೆ ಆಗುವ ಪರಿಣಾಮ ಇಲ್ಲಿ ಕಾಣಬಹುದು.

Post a Comment

0Comments

Please Select Embedded Mode To show the Comment System.*