Saturday, January 27, 2024

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

 ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ:

  1. ತಿಮ್ಮರಸ,
  2. ಸಾಳುವ ಗೋವಿಂದರಾಜ,
  3. ಗೌರವ ನರಸಯ್ಯ,
  4. ದೇವರಸಯ್ಯ,
  5. ವಿಜಯಪೊಡೆಯ,
  6. ವಿಠರಸವೊಡೆಯ,
  7. ಲಿಂಗರಸವೊಡೆಯ,
  8. ಕೃಷ್ಣರಾಯ ನಾಯಕ ರಾಯಸ್ತ ನಾರಣಪ್ಪ,
  9. ಪಡುಮೂಲದೇವಿ ಅಮ್ಮ,
  10. ಬಾಗೂರು ಮಲ್ಲರಸಯ್ಯಾ,
  11. ವೀರವೊಡೆಯ,
  12. ಆದಪ್ಪನಾಯಡು,
  13. ಯಲ್ಲಪ್ಪನಾಯ್ಕ,
  14. ಹೊನ್ನಿಸೆಟ್ಟಿ,
  15. ನರಸನಾಯಕ,
  16. ಅಜಪತಿನರಸಯ್ಯ,
  17. ಕೆಂಚಸೋಮಣ್ಣವೊಡೆಯ,
  18. ಸೋಮರಸ,
  19. ತಿಪ್ಪ ಸೋಮರಸ,
  20. ಕೆಂಚಸೋಮಣ್ಣ,
  21. ತಿಮ್ಮಪ್ಪನಾಯಕ,
  22. ತ್ರಿಯಂಬಕರಸ,
  23. ಧನಂಜಯ,
  24. ರಾಮವೊಡೆಯರು,
  25. ಇಮ್ಮಡಿ ಭೈರರಸ ಒಡೆಯ,
  26. ಅರುಹತಿಮ್ಮಣ್ಣನಾಯಕ,
  27. ಮಲ್ಲರಸ,
  28. ಬಾಗೂರುಮಾರಯ್ಯ,
  29. ಕಂಪ ಒಡೆಯ ದಣ್ಣಾಯಕ,
  30. ಸೋಮಣ್ಣ ಒಡೆಯ,
  31. ನಂಜಯ್ಯ,
  32. ತಿಮ್ಮರಾಜ,
  33. ವೀರನರಸಿಂಹನಾಯಕ,
  34. ಸಂಕಣ್ಣನಾಯಕ,
  35. ದೀಕ್ಷಿತಯ್ಯ,
  36. ಪೆದ್ದಿನಾಯಕ

ಮುಂತಾದವರು.

ಪೂರ್ವದ ಹಳಗನ್ನಡದ ಕಾಲದಿಂದ ಈಗಿನವರೆಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟು ಎಷ್ಟು ಇದ್ದಿರಬಹುದು?

 ಈಗಿನ ಮಟ್ಟಿಗೆ (2023) ಭಾರತದ ಜನಸಂಖ್ಯೆ 143 ಕೋಟಿ. ಅದರಲ್ಲಿ ಕರ್ನಾಟಕದ ಜನಸಂಖ್ಯೆ 6.8 ಕೋಟಿ ಮತ್ತು ಕನ್ನಡಿಗರ (ಮಾತೃಭಾಷೆ ಆಗಿರುವ + ಮಾತನಾಡಬಲ್ಲ) ಜನಸಂಖ್ಯೆ 600 ಲಕ್ಷ.

ಕನ್ನಡ ಭಾಷೆಗೆ ಸುಮಾರು 2500 ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾರಂಭದಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟು ಇದ್ದಿರಬಹುದು ಎಂದು ನಾನು ಅನೇಕ ಸಾರಿ ಯೋಚಿಸುತ್ತಿದ್ದೆ. ಈಗಿನ ಭಾರತದ ಜನಸಂಖ್ಯೆಯ ಎಷ್ಟು ಪ್ರತಿಶತ ಕನ್ನಡಿಗರು ಇದ್ದಾರೋ ಅದೇ ಪ್ರಮಾಣದಲ್ಲಿ ಚರಿತ್ರೆಯ ಕಾಲದ ಭಾರತದ ಜನಸಂಖ್ಯೆಯ ಆಧಾರದ ಮೇಲೆ ಕನ್ನಡಿಗರ ಸಂಖ್ಯೆಯ ಅಂದಾಜು ಮಾಡಿದೆ.

ಅದರ ಫಲಿತಾಂಶ ಹೀಗಿದೆ:

ವರ್ಷ—ಭಾರತ(ಕೋಟಿ)— ಕನ್ನಡಿಗರು (ಲಕ್ಷ)

————————————————————-

ಕ್ರಿಪೂ5೦೦ — 2.5— 10

ಕ್ರಿಪೂ4೦೦ — 2.8— 12

ಕ್ರಿಪೂ2೦೦ — 3.3— 14

ಕ್ರಿಶ 1 — 4.6 — 19

200 — 4.7 — 20

400 — 4.6 — 19

500 — 4.7 — 20

600 — 4.8 — 20

700 — 5.1 — 21

800 — 5.1 — 21

900 — 5.1 — 21

1000 — 5.2 — 22

1100 — 5.6 — 23

1200 — 6.2 — 26

1300 — 6.7 — 29

1400 — 7.2 — 30

1500 — 7.7 — 32

1600 — 10 — 42

1700 — 13.4 — 56

1800 — 17 — 71

1900 — 24 — 100

1911 — 25.2 — 116

1921 — 25.1 — 115

1931 — 27.9 — 129

1941 — 31.9 — 148

1947 — 36 — 166

1951 — 36.1 — 167

1961 — 43.9 — 203

1971 — 54.8 — 253

1981 — 68.3 — 320

1991 — 84.6 — 388

2001 — 102.9 — 456

2011 — 121.0 — 527

2021 — 139.0 — 583

2023 — 143.0 — 600

----------------------——————-

ಈ ಲೆಕ್ಕಾಚಾರದ ಸಾರಾಂಶ ಏನೆಂದರೆ, ಇತಿಹಾಸದ ಪ್ರಸಿದ್ಧ ಕಾಲಘಟ್ಟಗಳಲ್ಲಿ ಕನ್ನಡಿಗರ ಅಂದಾಜು ಜನಸಂಖ್ಯೆ ಹೀಗಿತ್ತು:

ಗೌತಮ ಬುದ್ಧ/ಮಹಾವೀರನ ಕಾಲದಲ್ಲಿ 10 ಲಕ್ಷ,

ಅಶೋಕ ಚಕ್ರವರ್ತಿಯ ಕಾಲದಲ್ಲಿ 14 ಲಕ್ಷ,

ಹಳೆಗನ್ನಡದ ಕಾಲದಲ್ಲಿ 20–25 ಲಕ್ಷ,

ಕದಂಬರು/ಗಂಗರು/ಬಾದಾಮಿ ಚಾಲುಕ್ಯರು/ರಾಷ್ಟ್ರಕೂಟರ ಕಾಲದಲ್ಲಿ 20–22 ಲಕ್ಷ,

ಕಲ್ಯಾಣ ಚಾಲುಕ್ಯರ ಕಾಲದಲ್ಲಿ 22–26 ಲಕ್ಷ,

ತಾಳಗುಂದ/ಹಲ್ಮಿಡಿ ಶಾಸನದ ಕಾಲದಲ್ಲಿ 20 ಲಕ್ಷ,

ಶ್ಯಾಮಕುಂದಾಚಾರ್ಯರ ಕಾಲದಲ್ಲಿ 20 ಲಕ್ಷ,

ಆದಿಕವಿ ಪಂಪನ ಕಾಲದಲ್ಲಿ 20 ಲಕ್ಷ,

ಕಾಳಿದಾಸನ ಕಾಲದಲ್ಲಿ 20 ಲಕ್ಷ,

ಇಮ್ಮಡಿ ಪುಲಿಕೇಶಿ ಕಾಲದಲ್ಲಿ 20 ಲಕ್ಷ,

ಶಂಕರಾಚಾರ್ಯರ ಕಾಲದಲ್ಲಿ 21 ಲಕ್ಷ,

ಚಾವುಂಡರಾಯನ ಕಾಲದಲ್ಲಿ 22 ಲಕ್ಷ,

ರಾಮಾನುಜಾಚಾರ್ಯರ ಕಾಲದಲ್ಲಿ 24 ಲಕ್ಷ,

ವಿಷ್ಣುವರ್ಧನನ ಕಾಲದಲ್ಲಿ 24 ಲಕ್ಷ,

ನಡುಗನ್ನಡದ ಕಾಲದಲ್ಲಿ 25–90 ಲಕ್ಷ,

ಬಸವಣ್ಣನವರ ಕಾಲದಲ್ಲಿ 25 ಲಕ್ಷ,

ಹರಿಹರನ ಕಾಲದಲ್ಲಿ 25 ಲಕ್ಷ,

ಕೊಂಕಣಿಗರು ಕರ್ನಾಟಕಕ್ಕೆ ಬಂದಾಗ 25 ಲಕ್ಷ,

ಮಧ್ವಾಚಾರ್ಯರ ಕಾಲದಲ್ಲಿ 30 ಲಕ್ಷ,

ಹಕ್ಕಬುಕ್ಕರ ಕಾಲದಲ್ಲಿ 30 ಲಕ್ಷ,

ಯದುರಾಯ ಒಡೆಯರ್ ಕಾಲದಲ್ಲಿ 30 ಲಕ್ಷ,

ಕೃಷ್ಣದೇವರಾಯನ ಕಾಲದಲ್ಲಿ 32 ಲಕ್ಷ,

ವಾಸ್ಕೋ ಡಗಾಮ ಕಾಲದಲ್ಲಿ 32 ಲಕ್ಷ,

ಗುರುನಾನಕ್ ಬೀದರಿಗೆ ಬಂದಾಗ 32 ಲಕ್ಷ,

ಪುರಂದರ/ಕನಕದಾಸರ ಕಾಲದಲ್ಲಿ 35 ಲಕ್ಷ,

ಅಕ್ಬರ್ ಕಾಲದಲ್ಲಿ 42 ಲಕ್ಷ,

ಈಸ್ಟ್ ಇಂಡಿಯಾ ಕಂಪನಿ ಬಂದಾಗ 42 ಲಕ್ಷ,

ಶಿವಾಜಿ ಕಾಲದಲ್ಲಿ 55 ಲಕ್ಷ,

ಟಿಪ್ಪು ಕಾಲದಲ್ಲಿ 70 ಲಕ್ಷ,

ಕನ್ನಡದ ಮೊದಲ ಪುಸ್ತಕ (A grammar of the Kurnata language) ಮುದ್ರಣಗೊಂಡಾಗ 75 ಲಕ್ಷ,

ಕಿತ್ತೂರು ಚೆನ್ನಮ್ಮನ ಕಾಲದಲ್ಲಿ 75 ಲಕ್ಷ,

ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 90 ಲಕ್ಷ,

ಕಿಟ್ಟೆಲ್ ನಿಘಂಟು ಮುದ್ರಣಗೊಂಡಾಗ 98 ಲಕ್ಷ,

ಪ್ಲೇಗ್ ಕಾಲದಲ್ಲಿ 100 ಲಕ್ಷ,

ಕನ್ನಡದ ಮೊದಲ ಪತ್ರಿಕೆ (ಮಂಗಳೂರ ಸಮಾಚಾರ) ಪ್ರಾರಂಭದಲ್ಲಿ 100 ಲಕ್ಷ,

ಕನ್ನಂಬಾಡಿ ಕಟ್ಟೆ ಕಟ್ಟಿದ ಕಾಲದಲ್ಲಿ 130 ಲಕ್ಷ,

ಹಾಗೂ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 140 ಲಕ್ಷ ಇತ್ತು.


920 ನೇ ಇಸವಿಯ ವಡ್ಡಾರಾಧನೆ ಲಭ್ಯವಿರುವ ಕನ್ನಡದ ಗ್ರಂಥಗಳಲ್ಲಿ ಮೊದಲನೆಯದು. ಆದರೆ ಏಳನೇ ಶತಮಾನದಲ್ಲಿ ಶ್ಯಾಮಕುಂದಾಚಾರ್ಯರು ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿ ಗ್ರಂಥಗಳನ್ನು ರಚಿಸಿದುದರ ಬಗ್ಗೆ ದಾಖಲೆಯಿದೆ, ಆದರೆ ಗ್ರಂಥಗಳು ಲಭ್ಯವಿಲ್ಲ!


ಕನ್ನಡದ ಮೊದಲ ಶಾಸನ ಯಾವದು?

 2013–14ರಲ್ಲಿ ಪತ್ತೆಯಾದ ತಾಳಗುಂದ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಶಾಸನವೇ ಇದುವರೆಗೆ ಕನ್ನಡದ ಪ್ರಾಚೀನ ಶಾಸನ ಎಂದು ಇತಿಹಾಸದಲ್ಲಿ ದಾಖಲಾಗಿತ್ತು.

ಹಲವು ವರ್ಷಗಳ ಹಿಂದೆ ತಾಳಗುಂದದಲ್ಲೇ ಪತ್ತೆಯಾಗಿದ್ದ ಶಾಂತಿವರ್ಮನ ಕಾಲದ (ಕ್ರಿ.ಶ. 450) ಇನ್ನೊಂದು ಸ್ತಂಭ ಶಾಸನಕ್ಕಿಂತಲೂ ಈ ಶಾಸನ ಹಳೆಯದು ಎಂದು ಖಚಿತವಾಗಿದೆ.

ಪತ್ತೆಯಾದ ಶಾಸನದ ಕಾಲ ಕುರಿತು ಸಾಕಷ್ಟು ಚರ್ಚೆ ನಡೆದಿದ್ದವು. ತಾಳಗುಂದದಲ್ಲಿ ದೊರೆತ ಶಾಸನದ ಕಾಲ ಕ್ರಿ.ಶ. 370 ರಿಂದ 450ರ ಮಧ್ಯದ ಅವಧಿ ಎಂದು ಕೇಂದ್ರ ಪುರಾತತ್ವ ಇಲಾಖೆ ದೃಢಪಡಿಸಿದೆ.

ಶಿಕಾರಿಪುರ ತಾಲ್ಲೂಕು ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ 2013–14ರಲ್ಲಿ ನಡೆಸಿದ ಉತ್ಖನನದಲ್ಲಿ ಹಲ್ಮಿಡಿಗಿಂತಲೂ ಹಿಂದಿನ ಕನ್ನಡದ ಶಾಸನ ಪತ್ತೆಯಾಗಿತ್ತು.

ಕ್ರಿ.ಶ. 345ರಲ್ಲಿ ಮಯೂರ ವರ್ಮ ಕದಂಬ ಸಾಮ್ರಾಜ್ಯ ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿ. ಮಯೂರ ವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ (365–425) ಆಳ್ವಿಕೆ ನಡೆಸಿದ್ದರು.

425–455ರವರೆಗೆ ಕಾಕುತ್ಸ ವರ್ಮ ಅಧಿಕಾರ ನಡೆಸಿದ್ದರು. 450ರಲ್ಲಿ ಹಲ್ಮಿಡಿ ಶಾಸನ ಹೊರಡಿಸಿದ್ದು ಇದೇ ಕಾಕುತ್ಸವರ್ಮ. ತಾಳಗುಂದ ಶಾಸನ ಕಾಕುತ್ಸವರ್ಮನಿಗಿಂತ ಮೊದಲೇ ಹೊರಡಿಸಲಾಗಿತ್ತು ಎಂದು ಖಚಿತವಾಗಿದೆ.

ದೇವಾಲಯದ ಉತ್ತರ ಭಾಗದಲ್ಲಿ ಪತ್ತೆಯಾಗಿದ್ದ ಈ ಶಾಸನ ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆ, ಭೂಮಿಯನ್ನು ಇನಾಮು ಆಗಿ ನೀಡಿದ ಮಾಹಿತಿ ಒಳಗೊಂಡಿದೆ. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಲಾಗಿದೆ. ಹಾಗಾಗಿ, ಶಾಸನಶಾಸ್ತ್ರದಲ್ಲಿ ಕನ್ನಡ ಶಾಸನ ಎಂದೇ ನಮೂದಿಸಲಾಗಿದೆ.

ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ರಾಜ ಯಾರು?

 ಕನ್ನಡದ ಅತ್ಯಂತ ಶ್ರೇಷ್ಟ ರಾಜವಂಶಗಳಲ್ಲಿ ಒಂದಾದಂತಹ ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ "ಸಳ" ಅಥವಾ 'ನೃಪಕಾಮ." ಜೈನ ಮುನಿಯಾದ ಸುದತ್ತಾಚಾರ್ಯರ ಪ್ರಭಾವದಿಂದ ಸಳನು ಹೊಯ್ಸಳ ಸಾಮ್ರಾಜ್ಯವನ್ನು ಕಟ್ಟಿದನೆಂದು ತಿಳಿದುಬರುತ್ತದೆ.

ಈ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸನೆಂದರೆ ಅದು ಬಿಟ್ಟಿಗ ಅಥವಾ ಬಿಟ್ಟಿದೇವ ಈತನೂ ಸಹ ಜೈನ ಮತಾವಲಂಬಿಯಾಗಿದ್ದನು.

ಚೋಳ ಅರಸನಾದಂತಹ ಒಂದನೇ ಕುಲೋತುಂಗನ ಕಾಲದಲ್ಲಿ ಶ್ರೀ ರಾಮನುಜಾಚಾರ್ಯರು ಅವನ ರಾಜ್ಯದಲ್ಲಿ ವಾಸವಾಗಿದ್ದರು. ಕುಲೋತ್ತುಂಗನು ಶೈವ ಮತ ಅವಲಂಬಿಯಾಗಿದ್ದು ಶ್ರೀ ರಾಮಾನುಜಾಚಾರ್ಯರು ವೈಷ್ಣವ ಮತಾವಲಂಬಿಯಾಗಿದ್ದ ಕಾರಣ ಕುಲೋತ್ತುಂಗನು ರಾಮಾನುಜಾಚಾರ್ಯರನ್ನು ತನ್ನ ಶೈವ ಮತಕ್ಕೆ ಪರಿವರ್ತನೆಯಾಗುವಂತೆ ಒತ್ತಾಯಿಸುತ್ತಾನೆ. ಶ್ರೀ ರಾಮಾನುಜಾಚಾರ್ಯರು ಅದಕ್ಕೆ ಒಪ್ಪಲಿಲ್ಲವಾದ ಕಾರಣ ಅವರನ್ನು ರಾಜ್ಯದಿಂದ ಓಡಿಸಲಾಗುತ್ತದೆ. (ಅಥವಾ ಅವರೇ ರಾಜನ ಕಿರುಕುಳ ಸಹಿಸಲಾರದೇ ರಾಜ್ಯವನ್ನು ಬಿಟ್ಟು ಹೊರಡುತ್ತಾರೆ.)

ಹೀಗೆ ತಮ್ಮ ಅನುಯಾಯಿಗಳೊಂದಿಗೆ ಹೊರಟ ಆಚಾರ್ಯರು ಈಗಿನ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಬಂದು ನೆಲೆಸುತ್ತಾರೆ. ಆಗ ಮೇಲುಕೋಟೆ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿತ್ತು. ದೊರೆ ಬಿಟ್ಟಿದೇವನಾಗಿದ್ದ. ಮೇಲುಕೋಟೆಯಲ್ಲಿ ನೆಲೆಸಿದಂತಹ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ಜೈನ ಮತಾವಲಂಬಿಯಾಗಿದ್ದ ಬಿಟ್ಟಿದೇವನು ವೈಷ್ಣವ ಮತವನ್ನು ಸ್ವೀಕರಿಸಿದನು. ಮತ್ತು ತನ್ನ ಹೆಸರನ್ನು "ವಿಷ್ಣುವರ್ಧನ" ಎಂದು ಬದಲಾಯಿಸಿಕೊಂಡನು.

ಆತನೇ ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸ ಹೊಯ್ಸಳೇಶ್ವರ ವಿಷ್ಣುವರ್ಧನ.


ಭಾರತದ ಕೊನೆಯ ಗ್ರಾಮ ಯಾವುದು? ಅದರ ವಿಶೇಷತೆಯೇನು?

 "ಭಾರತದ ಕೊನೆಯ ಗ್ರಾಮ ಯಾವುದು" ಅನ್ನುವುದಕ್ಕಿಂತ "ಭಾರತದ ಕೊನೆಯ ಗ್ರಾಮಗಳು ಯಾವವು" ಅನ್ನುವುದು ಸೂಕ್ತವೇನೋ ಅನಿಸುತ್ತದೆ ನನಗೆ.

ಯಾಕೆಂದರೆ,

ಭಾರತದ ಸುತ್ತಲೂ ಬೇರೆ ದೇಶದೊಂದಿಗಿನ ಗಡಿಯಲ್ಲಿ ಇರುವ ಎಲ್ಲ ಗ್ರಾಮಗಳೂ ಭಾರತದ ಕೊನೆಯ ಗ್ರಾಮಗಳೇ ಆಗುತ್ತವೆ.

ಆದರೆ,

  • ಅಧಿಕೃತವಾಗಿ ನಾವು ಘೋಷಣೆ ಮಾಡಿದ ಗ್ರಾಮ ಎಂದರೆ ಮಾನಾ.
  • ಇದು, ದೇವಭೂಮಿ, ಭೂಮಿಯ ಮೇಲಿನ ಸ್ವರ್ಗ ಎನಿಸಿಕೊಂಡಿರುವ ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿದೆ.

ಭಾರತ ಮತ್ತು ಟಿಬೆಟ್ ಗಡಿಯಲ್ಲಿರುವ ಮಾನಾ ಭಾರತದ ಕೊನೆಯ ಗ್ರಾಮ ಎನಿಸಿಕೊಂಡಿದೆ.

ಏನಿದರ ವಿಶೇಷತೆ?

  • ಸಮುದ್ರ ಮಟ್ಟದಿಂದ ಸುಮಾರು 10500 ಅಡಿಗಳ ಎತ್ತರದಲ್ಲಿ ಪವಿತ್ರವಾದ ಸರಸ್ವತಿ ನದಿಯ ದಡದಲ್ಲಿ ಇರುವುದು ಇದರ ವಿಶೇಷ.
  • ಅದಕ್ಕಿಂತ ಹೆಚ್ಚಾಗಿ, ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥ ದೇವಾಲಯದಿಂದ ಇದು ಕೇವಲ ಐದು ಕಿ.ಮಿ ದೂರದಲ್ಲಿದೆ.
  • ಇನ್ನು, ಈ ಪ್ರದೇಶವು ದೇಶದ ಪ್ರಸಿದ್ಧ ಟ್ರೆಕ್ಕಿಂಗ್ ಪ್ರದೇಶಗಳಲ್ಲಿ ಒಂದು.
  • ಪಾಂಡವರು ಸ್ವರ್ಗಕ್ಕೆ ಹೋಗುವಾಗ ಇದೇ ಗ್ರಾಮದ ಮೂಲಕ ಪ್ರಯಾಣಿಸಿದ್ದರು ಎನ್ನುವ ಐತಿಹ್ಯ ಇದೆ.
  • ಹಾಗೆ ಹೋಗುವಾಗ ಸರಸ್ವತಿ ನದಿಗೆ ಅಡ್ಡವಾಗಿ ಕಟ್ಟಿದ ಸೇತುವೆ ಇಂದಿಗೂ ಇದೆ. ಅದನ್ನ ಭೀಮ ಸೇತು ಅನ್ನುತ್ತಾರೆ.

ಮಾನಾದ ಸುತ್ತಲೂ ಪೌರಾಣಿಕ ಮತ್ತು ಧಾರ್ಮಿಕ ಸ್ಥಳಗಳು ಕೂಡಾ ಇವೆ.

ಅವುಗಳಲ್ಲಿ ಕೆಲವು.

ನೀಲಕಾಂತ ಶಿಖರ.

  • ಅತ್ಯಂತ ಸುಂದರವಾದ ಹಿಮಾಚ್ಛಾದಿತ ಶಿಖರ. ಪರ್ವತಾರೋಹಣ ಮಾಡುವವರನ್ನ ಕೈಬೀಸಿ ಕರೆಯುತ್ತದೆ.

ತಪ್ತ ಕುಂಡ.

  • ವರ್ಷಪೂರ್ತಿ ನೈಸರ್ಗಿಕವಾಗಿ ಇದರಲ್ಲಿ ಬಿಸಿನೀರು ಬರುತ್ತಿರುತ್ತದೆ. ಈ ಕುಂಡದ ಸ್ನಾನ ಎಲ್ಲಾ ಚರ್ಮರೋಗಗಳನ್ನ ವಾಸಿ ಮಾಡುತ್ತದೆ ಅನ್ನುವುದು ನಂಬಿಕೆ.

ವ್ಯಾಸ ಗುಹೆ.

  • ಮಹಾಭಾರತದ ಕರ್ತೃ ವ್ಯಾಸ ಋಷಿಗಳು ಈ ಗುಹೆಯಲ್ಲಿ ವಾಸಿಸುತ್ತಿದ್ದರು ಅನ್ನುವುದು ಪ್ರತೀತಿ.

ಚರಣ ಪಾದುಕಾ.

  • ವಿಷ್ಣುವಿನ ಪಾದದ ಗುರುತು ಇರುವ ಸುಂದರವಾದ ಕಲ್ಲಿನ ಬೆಟ್ಟ.

ಇದನ್ನ ಬಿಟ್ಟರೆ, ಸುಂದರವಾದ ಜಲಪಾತಗಳು ಇಲ್ಲಿನ ವಿಶೇಷ.

  • ಭಾರದತ ಕೊನೆಯ ಟೀ ಸ್ಟಾಲ್, ಕೊನೆಯ ಗ್ರಾಮದ ಊಟ, ಲಾಸ್ಟ್ ವಿಲೇಜ್ ಪ್ರಾಡಕ್ಟ್ , ಇನ್ನೂ ಬೇರೆ ಬೇರೆ ಕೂಗುಗಳೊಂದಿಗೆ ವ್ಯಾಪಾರ ಮಾಡುತ್ತ ತಮ್ಮ ಬದುಕನ್ನ ರೂಪಿಸಿಕೊಂಡಿರುವ ಅಂಗಡಿಕಾರರು ಕೂಡಾ ಇಲ್ಲಿನ ವಿಶೇಷವೇ.

ಇದು ಭಾರತದ ಅಧಿಕೃತ ಕೊನೆಯ ಗ್ರಾಮ ಮಾನಾ.

ಹಾಗೆಯೇ, ದೇಶದ ಗಡಿಯುದ್ದಕ್ಕೂ ಇರುವ ಇನ್ನೂ ಕೆಲವು ಕೊನೆಯ ಊರು ಮತ್ತು ಪಟ್ಟಣಗಳನ್ನು ನೋಡೋಣ ‌

ಅವು ಅಧಿಕೃತ ಅಲ್ಲದಿದ್ದರೂ ಕೊನೆಯ ಊರಂತೂ ನಿಜ ಅಲ್ಲವೆ?

ಚಿತ್ಕುಲ್.

  • ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಇದು ಟಿಬೆಟ್ (Old Tibet) ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.

ಮೋರ್ಹೆ.

  • ಮಣಿಪುರದಲ್ಲಿರುವ ಇದು ಮೈನ್ಮಾರ್ ಗಡಿಯಲ್ಲಿರುವ ಭಾರತದ ಕೊನೆಯ ಪಟ್ಟಣ. ಮೈನ್ಮಾರ್ ನೊಂದಿಗಿನ ವ್ಯಾಪಾರ ವಹಿವಾಟಿನ ರಸ್ತೆಯಲ್ಲಿರುವ ಇದು ವಾಣಿಜ್ಯ ಕೇಂದ್ರ.

ಧನುಷ್ಕೋಟಿ (ಧನುಷ್ಕೋಡಿ).

  • ತಮಿಳುನಾಡಿನಲ್ಲಿರುವ ಇದು ಶ್ರೀಲಂಕಾ ಗಡಿಯಲ್ಲಿರುವ ಭಾರತದ ಕೊನೆಯ ಪಟ್ಟಣ.
  • ರಾಮಸೇತುವಿನಂತಹ ಪೌರಾಣಿಕ ಹಿನ್ನೆಲೆ ಇರುವ ಈ ಪುಟ್ಟ ಪಟ್ಟಣವು ದಶಕಗಳ ಹಿಂದೆ ಸಂಭವಿಸಿದ ಭೀಕರ ಚಂಡಮಾರುತಕ್ಕೆ ಸರ್ವನಾಶ ಆಯಿತು. ಅಂದಿನಿಂದ ಅಲ್ಲಿ ಜನವಸತಿ ಇಲ್ಲದೆ ದೇಶದ ಒಂದು ಭಯಾನಕ ಗ್ರಾಮ ಎನ್ನುವ ಹಣೆಪಟ್ಟಿ ಬರೆದುಕೊಂಡಿತು. ದೆವ್ವಗಳ ಬೀಡಾಯಿತು.
  • ಈಗ ಈ ಪಟ್ಟಣದ ಪುನರ್ನಿರ್ಮಾಣ ಆಗುತ್ತಿದೆ.

ಝುಲಾಘಾಟ್.

  • ಭಾರತ ಮತ್ತು ನೇಪಾಳದ ಗಡಿಯಲ್ಲಿರುವ ಈ ಪಟ್ಟಣವು ಉತ್ತರಾಖಂಡದ ಪಿಥೋರ್ ಘರ್ ಜಿಲ್ಲೆಯಲ್ಲಿರುವ ನೇಪಾಳ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.
  • ಭಾರತದ ಝುಲಾಘಾಟ್ ಮತ್ತು ನೇಪಾಳದ ಜುಲಾಘಾಟ್ ಪಟ್ಟಣಗಳನ್ನು ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ತೂಗು ಸೇತುವೆ ಸಂಪರ್ಕಿಸುತ್ತದೆ.

ತುರ್ತುಕ್.

  • ಲಢಾಕ್ ನಲ್ಲಿರುವ ಇದು ಪಾಕಿಸ್ತಾನ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.
  • ಎಲೆಕ್ಟ್ರಿಕ್ ಪವರ್ ಮತ್ತು ಮೊಬೈಲ್ ನೆಟ್ವರ್ಕ್ ಗಳು ಇಲ್ಲದ ಈ ಗ್ರಾಮವು ಲಡಾಕ್ ನ ಪರಿಸರದ ಸುಂದರ ಗ್ರಾಮ.

ಜೈಗಾನ್.

  • ಭಾರತ ಮತ್ತು ಭೂತಾನ್ ಗಡಿಯಲ್ಲಿನ ಈ ಗ್ರಾಮವು ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ.
  • ಚಹಾ ತೋಟದ ಘಮವನ್ನ ಹೊಂದಿದ ಈ ಕಣಿವೆ ಪಟ್ಟಣವು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ.
  • ಭಾರತ ಮತ್ತು ಭೂತಾನ್ ದೇಶಗಳನ್ನ ಬೇರ್ಪಡಿಸಲು ಇಲ್ಲಿ ಒಂದು ಗೇಟನ್ನು ಮಾತ್ರ ಹಾಕಲಾಗಿದೆ.

ಇವು ಭಾರತದ ಕೊನೆಯ ಊರುಗಳು.

ಚಿತ್ರಗಳು :- ಗೂಗಲ್ ನಿಂದ.

ವಿವರಗಳು :- ಓದಿದ್ದು ಮತ್ತು ಕೇಳಿದ್ದು.

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...