"ಭಾರತದ ಕೊನೆಯ ಗ್ರಾಮ ಯಾವುದು" ಅನ್ನುವುದಕ್ಕಿಂತ "ಭಾರತದ ಕೊನೆಯ ಗ್ರಾಮಗಳು ಯಾವವು" ಅನ್ನುವುದು ಸೂಕ್ತವೇನೋ ಅನಿಸುತ್ತದೆ ನನಗೆ.
ಯಾಕೆಂದರೆ,
ಭಾರತದ ಸುತ್ತಲೂ ಬೇರೆ ದೇಶದೊಂದಿಗಿನ ಗಡಿಯಲ್ಲಿ ಇರುವ ಎಲ್ಲ ಗ್ರಾಮಗಳೂ ಭಾರತದ ಕೊನೆಯ ಗ್ರಾಮಗಳೇ ಆಗುತ್ತವೆ.
ಆದರೆ,
- ಅಧಿಕೃತವಾಗಿ ನಾವು ಘೋಷಣೆ ಮಾಡಿದ ಗ್ರಾಮ ಎಂದರೆ ಮಾನಾ.
- ಇದು, ದೇವಭೂಮಿ, ಭೂಮಿಯ ಮೇಲಿನ ಸ್ವರ್ಗ ಎನಿಸಿಕೊಂಡಿರುವ ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿದೆ.
ಭಾರತ ಮತ್ತು ಟಿಬೆಟ್ ಗಡಿಯಲ್ಲಿರುವ ಮಾನಾ ಭಾರತದ ಕೊನೆಯ ಗ್ರಾಮ ಎನಿಸಿಕೊಂಡಿದೆ.
ಏನಿದರ ವಿಶೇಷತೆ?
- ಸಮುದ್ರ ಮಟ್ಟದಿಂದ ಸುಮಾರು 10500 ಅಡಿಗಳ ಎತ್ತರದಲ್ಲಿ ಪವಿತ್ರವಾದ ಸರಸ್ವತಿ ನದಿಯ ದಡದಲ್ಲಿ ಇರುವುದು ಇದರ ವಿಶೇಷ.
- ಅದಕ್ಕಿಂತ ಹೆಚ್ಚಾಗಿ, ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥ ದೇವಾಲಯದಿಂದ ಇದು ಕೇವಲ ಐದು ಕಿ.ಮಿ ದೂರದಲ್ಲಿದೆ.
- ಇನ್ನು, ಈ ಪ್ರದೇಶವು ದೇಶದ ಪ್ರಸಿದ್ಧ ಟ್ರೆಕ್ಕಿಂಗ್ ಪ್ರದೇಶಗಳಲ್ಲಿ ಒಂದು.
- ಪಾಂಡವರು ಸ್ವರ್ಗಕ್ಕೆ ಹೋಗುವಾಗ ಇದೇ ಗ್ರಾಮದ ಮೂಲಕ ಪ್ರಯಾಣಿಸಿದ್ದರು ಎನ್ನುವ ಐತಿಹ್ಯ ಇದೆ.
- ಹಾಗೆ ಹೋಗುವಾಗ ಸರಸ್ವತಿ ನದಿಗೆ ಅಡ್ಡವಾಗಿ ಕಟ್ಟಿದ ಸೇತುವೆ ಇಂದಿಗೂ ಇದೆ. ಅದನ್ನ ಭೀಮ ಸೇತು ಅನ್ನುತ್ತಾರೆ.
ಮಾನಾದ ಸುತ್ತಲೂ ಪೌರಾಣಿಕ ಮತ್ತು ಧಾರ್ಮಿಕ ಸ್ಥಳಗಳು ಕೂಡಾ ಇವೆ.
ಅವುಗಳಲ್ಲಿ ಕೆಲವು.
ನೀಲಕಾಂತ ಶಿಖರ.
- ಅತ್ಯಂತ ಸುಂದರವಾದ ಹಿಮಾಚ್ಛಾದಿತ ಶಿಖರ. ಪರ್ವತಾರೋಹಣ ಮಾಡುವವರನ್ನ ಕೈಬೀಸಿ ಕರೆಯುತ್ತದೆ.
ತಪ್ತ ಕುಂಡ.
- ವರ್ಷಪೂರ್ತಿ ನೈಸರ್ಗಿಕವಾಗಿ ಇದರಲ್ಲಿ ಬಿಸಿನೀರು ಬರುತ್ತಿರುತ್ತದೆ. ಈ ಕುಂಡದ ಸ್ನಾನ ಎಲ್ಲಾ ಚರ್ಮರೋಗಗಳನ್ನ ವಾಸಿ ಮಾಡುತ್ತದೆ ಅನ್ನುವುದು ನಂಬಿಕೆ.
ವ್ಯಾಸ ಗುಹೆ.
- ಮಹಾಭಾರತದ ಕರ್ತೃ ವ್ಯಾಸ ಋಷಿಗಳು ಈ ಗುಹೆಯಲ್ಲಿ ವಾಸಿಸುತ್ತಿದ್ದರು ಅನ್ನುವುದು ಪ್ರತೀತಿ.
ಚರಣ ಪಾದುಕಾ.
- ವಿಷ್ಣುವಿನ ಪಾದದ ಗುರುತು ಇರುವ ಸುಂದರವಾದ ಕಲ್ಲಿನ ಬೆಟ್ಟ.
ಇದನ್ನ ಬಿಟ್ಟರೆ, ಸುಂದರವಾದ ಜಲಪಾತಗಳು ಇಲ್ಲಿನ ವಿಶೇಷ.
- ಭಾರದತ ಕೊನೆಯ ಟೀ ಸ್ಟಾಲ್, ಕೊನೆಯ ಗ್ರಾಮದ ಊಟ, ಲಾಸ್ಟ್ ವಿಲೇಜ್ ಪ್ರಾಡಕ್ಟ್ , ಇನ್ನೂ ಬೇರೆ ಬೇರೆ ಕೂಗುಗಳೊಂದಿಗೆ ವ್ಯಾಪಾರ ಮಾಡುತ್ತ ತಮ್ಮ ಬದುಕನ್ನ ರೂಪಿಸಿಕೊಂಡಿರುವ ಅಂಗಡಿಕಾರರು ಕೂಡಾ ಇಲ್ಲಿನ ವಿಶೇಷವೇ.
ಇದು ಭಾರತದ ಅಧಿಕೃತ ಕೊನೆಯ ಗ್ರಾಮ ಮಾನಾ.
ಹಾಗೆಯೇ, ದೇಶದ ಗಡಿಯುದ್ದಕ್ಕೂ ಇರುವ ಇನ್ನೂ ಕೆಲವು ಕೊನೆಯ ಊರು ಮತ್ತು ಪಟ್ಟಣಗಳನ್ನು ನೋಡೋಣ
ಅವು ಅಧಿಕೃತ ಅಲ್ಲದಿದ್ದರೂ ಕೊನೆಯ ಊರಂತೂ ನಿಜ ಅಲ್ಲವೆ?
ಚಿತ್ಕುಲ್.
- ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಇದು ಟಿಬೆಟ್ (Old Tibet) ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.
ಮೋರ್ಹೆ.
- ಮಣಿಪುರದಲ್ಲಿರುವ ಇದು ಮೈನ್ಮಾರ್ ಗಡಿಯಲ್ಲಿರುವ ಭಾರತದ ಕೊನೆಯ ಪಟ್ಟಣ. ಮೈನ್ಮಾರ್ ನೊಂದಿಗಿನ ವ್ಯಾಪಾರ ವಹಿವಾಟಿನ ರಸ್ತೆಯಲ್ಲಿರುವ ಇದು ವಾಣಿಜ್ಯ ಕೇಂದ್ರ.
ಧನುಷ್ಕೋಟಿ (ಧನುಷ್ಕೋಡಿ).
- ತಮಿಳುನಾಡಿನಲ್ಲಿರುವ ಇದು ಶ್ರೀಲಂಕಾ ಗಡಿಯಲ್ಲಿರುವ ಭಾರತದ ಕೊನೆಯ ಪಟ್ಟಣ.
- ರಾಮಸೇತುವಿನಂತಹ ಪೌರಾಣಿಕ ಹಿನ್ನೆಲೆ ಇರುವ ಈ ಪುಟ್ಟ ಪಟ್ಟಣವು ದಶಕಗಳ ಹಿಂದೆ ಸಂಭವಿಸಿದ ಭೀಕರ ಚಂಡಮಾರುತಕ್ಕೆ ಸರ್ವನಾಶ ಆಯಿತು. ಅಂದಿನಿಂದ ಅಲ್ಲಿ ಜನವಸತಿ ಇಲ್ಲದೆ ದೇಶದ ಒಂದು ಭಯಾನಕ ಗ್ರಾಮ ಎನ್ನುವ ಹಣೆಪಟ್ಟಿ ಬರೆದುಕೊಂಡಿತು. ದೆವ್ವಗಳ ಬೀಡಾಯಿತು.
- ಈಗ ಈ ಪಟ್ಟಣದ ಪುನರ್ನಿರ್ಮಾಣ ಆಗುತ್ತಿದೆ.
ಝುಲಾಘಾಟ್.
- ಭಾರತ ಮತ್ತು ನೇಪಾಳದ ಗಡಿಯಲ್ಲಿರುವ ಈ ಪಟ್ಟಣವು ಉತ್ತರಾಖಂಡದ ಪಿಥೋರ್ ಘರ್ ಜಿಲ್ಲೆಯಲ್ಲಿರುವ ನೇಪಾಳ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.
- ಭಾರತದ ಝುಲಾಘಾಟ್ ಮತ್ತು ನೇಪಾಳದ ಜುಲಾಘಾಟ್ ಪಟ್ಟಣಗಳನ್ನು ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ತೂಗು ಸೇತುವೆ ಸಂಪರ್ಕಿಸುತ್ತದೆ.
ತುರ್ತುಕ್.
- ಲಢಾಕ್ ನಲ್ಲಿರುವ ಇದು ಪಾಕಿಸ್ತಾನ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ.
- ಎಲೆಕ್ಟ್ರಿಕ್ ಪವರ್ ಮತ್ತು ಮೊಬೈಲ್ ನೆಟ್ವರ್ಕ್ ಗಳು ಇಲ್ಲದ ಈ ಗ್ರಾಮವು ಲಡಾಕ್ ನ ಪರಿಸರದ ಸುಂದರ ಗ್ರಾಮ.
ಜೈಗಾನ್.
- ಭಾರತ ಮತ್ತು ಭೂತಾನ್ ಗಡಿಯಲ್ಲಿನ ಈ ಗ್ರಾಮವು ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ.
- ಚಹಾ ತೋಟದ ಘಮವನ್ನ ಹೊಂದಿದ ಈ ಕಣಿವೆ ಪಟ್ಟಣವು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ.
- ಭಾರತ ಮತ್ತು ಭೂತಾನ್ ದೇಶಗಳನ್ನ ಬೇರ್ಪಡಿಸಲು ಇಲ್ಲಿ ಒಂದು ಗೇಟನ್ನು ಮಾತ್ರ ಹಾಕಲಾಗಿದೆ.
ಇವು ಭಾರತದ ಕೊನೆಯ ಊರುಗಳು.
ಚಿತ್ರಗಳು :- ಗೂಗಲ್ ನಿಂದ.
ವಿವರಗಳು :- ಓದಿದ್ದು ಮತ್ತು ಕೇಳಿದ್ದು.