ನಮ್ಮ ನಗರದಲ್ಲಿ ಒಂದೇ ಒಂದು ಡಾಮಿನೋ ಪೀಟ್ಸಾ ಪಾರ್ಲರ್ ಇದೆ ಎಂದಿಟ್ಟುಕೊಳ್ಳಿ. ಗಂಟೆಗೆ ನೂರಾರು ಆರ್ಡರ್ ಗಳು ಬಂದರೆ ಮನೆಮನೆಗೂ ಅರ್ಧ ಗಂಟೆಯ ಒಳಗೆ ತಲುಪಿಸುವುದು ಕಷ್ಟಸಾಧ್ಯ. ಒಂದೇ ಪಾರ್ಲರ್ ಬದಲು ಪ್ರತಿ ಬಡಾವಣೆಯಲ್ಲೂ ಒಂದೊಂದು ಪೀಟ್ಸಾ ಪಾರ್ಲರ್ ಇದ್ದರೆ ಎಲ್ಲ ಗ್ರಾಹಕರಿಗೂ ಬೇಗ ಬೇಗ ಪೀಟ್ಸಾ ಸಿಗುವುದರಿಂದ ಎಲ್ಲರಿಗೂ ಖುಷಿಯಾಗುತ್ತದೆ.
ಎಜ್ ಕಂಪ್ಯೂಟಿಂಗ್ ಉದ್ದೇಶವೂ ಅದೇ. ಎಲ್ಲಿ ಡೇಟಾ (ಅಂಕಿಅಂಶಗಳು ಅಥವಾ ಇನ್ಸ್ಟ್ರುಮೆಂಟ್ ರೀಡಿಂಗುಗಳು) ಉತ್ಪತ್ತಿಯಾಗುತ್ತೋ ಅದನ್ನು ದೂರದ ಸರ್ವರ್ ಗೆ ಕಳಿಸಿ ಅಲ್ಲಿ ಅದರ ವಿಶ್ಲೇಷಣೆ ಮಾಡಿಸಿ ಅಲ್ಲಿಂದ ಫಲಿತಾಂಶವನ್ನು ಪಡೆಯುವುದು ನಿಧಾನದ ಕೆಲಸ. ಡೇಟಾದಿಂದ ಪಡೆಯುವ ತೀರ್ಮಾನ ಕೂಡಲೇ ಬೇಕಾಗಿದ್ದರೆ ಡೇಟಾದ ವಿಶ್ಲೇಷಣೆ ಹತ್ತಿರದಲ್ಲೇ ಮಾಡುವುದು ವಿವೇಕದ ಕೆಲಸ. ಇದನ್ನೇ ಎಜ್ ಕಂಪ್ಯೂಟಿಂಗ್ ಎಂದು ಕರೆಯುತ್ತಾರೆ.
ದೂರದ ಸರ್ವರಿನಲ್ಲಿ ಡೇಟಾ ಪ್ರಾಸೆಸಿಂಗ್ ಮಾಡುವುದು ಕ್ಲೌಡ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.
ಸ್ಥಳೀಯ ನೆಟ್ವರ್ಕ್ ನಲ್ಲಿ ಡೇಟಾ ಪ್ರಾಸೆಸಿಂಗ್ ಮಾಡುವುದು ಫಾಗ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.
ಡೇಟಾ ಉತ್ಪತ್ತಿ ಮಾಡುವ ಯಂತ್ರದಲ್ಲೇ ಡೇಟಾ ಪ್ರಾಸೆಸಿಂಗ್ ಮಾಡುವುದು ಎಜ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.