ಕನ್ನಡದ ಅತ್ಯಂತ ಶ್ರೇಷ್ಟ ರಾಜವಂಶಗಳಲ್ಲಿ ಒಂದಾದಂತಹ ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ "ಸಳ" ಅಥವಾ 'ನೃಪಕಾಮ." ಜೈನ ಮುನಿಯಾದ ಸುದತ್ತಾಚಾರ್ಯರ ಪ್ರಭಾವದಿಂದ ಸಳನು ಹೊಯ್ಸಳ ಸಾಮ್ರಾಜ್ಯವನ್ನು ಕಟ್ಟಿದನೆಂದು ತಿಳಿದುಬರುತ್ತದೆ.
ಈ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸನೆಂದರೆ ಅದು ಬಿಟ್ಟಿಗ ಅಥವಾ ಬಿಟ್ಟಿದೇವ ಈತನೂ ಸಹ ಜೈನ ಮತಾವಲಂಬಿಯಾಗಿದ್ದನು.
ಚೋಳ ಅರಸನಾದಂತಹ ಒಂದನೇ ಕುಲೋತುಂಗನ ಕಾಲದಲ್ಲಿ ಶ್ರೀ ರಾಮನುಜಾಚಾರ್ಯರು ಅವನ ರಾಜ್ಯದಲ್ಲಿ ವಾಸವಾಗಿದ್ದರು. ಕುಲೋತ್ತುಂಗನು ಶೈವ ಮತ ಅವಲಂಬಿಯಾಗಿದ್ದು ಶ್ರೀ ರಾಮಾನುಜಾಚಾರ್ಯರು ವೈಷ್ಣವ ಮತಾವಲಂಬಿಯಾಗಿದ್ದ ಕಾರಣ ಕುಲೋತ್ತುಂಗನು ರಾಮಾನುಜಾಚಾರ್ಯರನ್ನು ತನ್ನ ಶೈವ ಮತಕ್ಕೆ ಪರಿವರ್ತನೆಯಾಗುವಂತೆ ಒತ್ತಾಯಿಸುತ್ತಾನೆ. ಶ್ರೀ ರಾಮಾನುಜಾಚಾರ್ಯರು ಅದಕ್ಕೆ ಒಪ್ಪಲಿಲ್ಲವಾದ ಕಾರಣ ಅವರನ್ನು ರಾಜ್ಯದಿಂದ ಓಡಿಸಲಾಗುತ್ತದೆ. (ಅಥವಾ ಅವರೇ ರಾಜನ ಕಿರುಕುಳ ಸಹಿಸಲಾರದೇ ರಾಜ್ಯವನ್ನು ಬಿಟ್ಟು ಹೊರಡುತ್ತಾರೆ.)
ಹೀಗೆ ತಮ್ಮ ಅನುಯಾಯಿಗಳೊಂದಿಗೆ ಹೊರಟ ಆಚಾರ್ಯರು ಈಗಿನ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಬಂದು ನೆಲೆಸುತ್ತಾರೆ. ಆಗ ಮೇಲುಕೋಟೆ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿತ್ತು. ದೊರೆ ಬಿಟ್ಟಿದೇವನಾಗಿದ್ದ. ಮೇಲುಕೋಟೆಯಲ್ಲಿ ನೆಲೆಸಿದಂತಹ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ಜೈನ ಮತಾವಲಂಬಿಯಾಗಿದ್ದ ಬಿಟ್ಟಿದೇವನು ವೈಷ್ಣವ ಮತವನ್ನು ಸ್ವೀಕರಿಸಿದನು. ಮತ್ತು ತನ್ನ ಹೆಸರನ್ನು "ವಿಷ್ಣುವರ್ಧನ" ಎಂದು ಬದಲಾಯಿಸಿಕೊಂಡನು.
ಆತನೇ ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸ ಹೊಯ್ಸಳೇಶ್ವರ ವಿಷ್ಣುವರ್ಧನ.