2013–14ರಲ್ಲಿ ಪತ್ತೆಯಾದ ತಾಳಗುಂದ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಶಾಸನವೇ ಇದುವರೆಗೆ ಕನ್ನಡದ ಪ್ರಾಚೀನ ಶಾಸನ ಎಂದು ಇತಿಹಾಸದಲ್ಲಿ ದಾಖಲಾಗಿತ್ತು.
ಹಲವು ವರ್ಷಗಳ ಹಿಂದೆ ತಾಳಗುಂದದಲ್ಲೇ ಪತ್ತೆಯಾಗಿದ್ದ ಶಾಂತಿವರ್ಮನ ಕಾಲದ (ಕ್ರಿ.ಶ. 450) ಇನ್ನೊಂದು ಸ್ತಂಭ ಶಾಸನಕ್ಕಿಂತಲೂ ಈ ಶಾಸನ ಹಳೆಯದು ಎಂದು ಖಚಿತವಾಗಿದೆ.
ಪತ್ತೆಯಾದ ಶಾಸನದ ಕಾಲ ಕುರಿತು ಸಾಕಷ್ಟು ಚರ್ಚೆ ನಡೆದಿದ್ದವು. ತಾಳಗುಂದದಲ್ಲಿ ದೊರೆತ ಶಾಸನದ ಕಾಲ ಕ್ರಿ.ಶ. 370 ರಿಂದ 450ರ ಮಧ್ಯದ ಅವಧಿ ಎಂದು ಕೇಂದ್ರ ಪುರಾತತ್ವ ಇಲಾಖೆ ದೃಢಪಡಿಸಿದೆ.
ಶಿಕಾರಿಪುರ ತಾಲ್ಲೂಕು ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ 2013–14ರಲ್ಲಿ ನಡೆಸಿದ ಉತ್ಖನನದಲ್ಲಿ ಹಲ್ಮಿಡಿಗಿಂತಲೂ ಹಿಂದಿನ ಕನ್ನಡದ ಶಾಸನ ಪತ್ತೆಯಾಗಿತ್ತು.
ಕ್ರಿ.ಶ. 345ರಲ್ಲಿ ಮಯೂರ ವರ್ಮ ಕದಂಬ ಸಾಮ್ರಾಜ್ಯ ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿ. ಮಯೂರ ವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ (365–425) ಆಳ್ವಿಕೆ ನಡೆಸಿದ್ದರು.
425–455ರವರೆಗೆ ಕಾಕುತ್ಸ ವರ್ಮ ಅಧಿಕಾರ ನಡೆಸಿದ್ದರು. 450ರಲ್ಲಿ ಹಲ್ಮಿಡಿ ಶಾಸನ ಹೊರಡಿಸಿದ್ದು ಇದೇ ಕಾಕುತ್ಸವರ್ಮ. ತಾಳಗುಂದ ಶಾಸನ ಕಾಕುತ್ಸವರ್ಮನಿಗಿಂತ ಮೊದಲೇ ಹೊರಡಿಸಲಾಗಿತ್ತು ಎಂದು ಖಚಿತವಾಗಿದೆ.
ದೇವಾಲಯದ ಉತ್ತರ ಭಾಗದಲ್ಲಿ ಪತ್ತೆಯಾಗಿದ್ದ ಈ ಶಾಸನ ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆ, ಭೂಮಿಯನ್ನು ಇನಾಮು ಆಗಿ ನೀಡಿದ ಮಾಹಿತಿ ಒಳಗೊಂಡಿದೆ. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಲಾಗಿದೆ. ಹಾಗಾಗಿ, ಶಾಸನಶಾಸ್ತ್ರದಲ್ಲಿ ಕನ್ನಡ ಶಾಸನ ಎಂದೇ ನಮೂದಿಸಲಾಗಿದೆ.