Showing posts with label kannada bhavageetegalu. Show all posts
Showing posts with label kannada bhavageetegalu. Show all posts

Saturday, June 13, 2020

ಹೊತ್ತಿತೋ ಹೊತ್ತಿತು ಕನ್ನಡದ ದೀಪ.......

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

                                            - ಡಾ.ಸಿದ್ದಯ್ಯ ಪುರಾಣಿಕ  

ಕಟ್ಟುವೆವು ನಾವು......

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ  

ನಿನ್ನ ಕಂಗಳ ಕೊಳದಿ.....

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.

ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.

ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

                                        - ಎಮ್. ಎನ್. ವ್ಯಾಸ ರಾವ್  

ಬದುಕು ಮಾಯೆಯ ಮಾಟ

  ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

                                      - ಅಂಬಿಕಾತನಯದತ್ತ     

ಪಾತರಗಿತ್ತೀ ಪಕ್ಕಾ.......

ಪಾತರಗಿತ್ತೀ ಪಕ್ಕಾ
ನೋಡೀದೇನS  ಅಕ್ಕಾ!  ॥ ಪ ॥


ಹಸಿರು ಹಚ್ಚಿ ಚುಚ್ಚಿ
ಮೇಲSಕರಿಸಿಣ ಹಚ್ಚಿ,

ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ,

ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ,

ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫  
ನೂರು ಆರು ಪಾರು
ಯಾರು ಮಾಡಿದ್ದಾರು!

ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ!

ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ!

ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ?

ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ,
೧೦
ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ;
೧೧
ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ -
೧೨
ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ.
೧೩
ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು;
೧೬
ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ,
೧೭
ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ,
೧೮
ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು 
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧ 
ಸೀಗಿಬಳ್ಳಿ ತಾಗಿ 
ಪಕ್ಕಾ ಬೆಳ್ಳಗಾಗಿ,
೨೨  
ಗೊರಟಿಗೆಗೆ ಶರಣ 
ಮಾಡಿ ದೂರಿಂದSನ 
೨೩
ಮಾಲಿಂಗನ ಬಳ್ಳಿ 
ತೂಗೂ ಮಂಚದಲ್ಲಿ,
೨೪  
ತೂಗಿ ತೂಗಿ ತೂಗಿ 
ದಣಿದ್ಹಾಂಗ ಆಗಿ,
೨೫ 
ಬೇಲೀ ಬಳ್ಳಿಯೊಳಗ 
ಅದರ ನೆರಳ ತೆಳಗ 
೨೬ 
ನಿದ್ದಿಗುಳ್ಯಾಡಿ 
ಪಗಡಿ ಪಕ್ಕಾ ಆಡಿ,
೨೭  
ಗುಲಬಾಕ್ಷಿಯ ಹೂವ 
ಕುಶಲ ಕೇಳತಾವ;
೨೮ 
ಹುಡಿಯ ನೀರಿನ್ಯಾಗ 
ತುಳಕಿಸುತ್ತ ಬ್ಯಾಗ 
೨೯ 
ಹಡಿಯೆ ಬೀಜ ಗಂಡು 
ಹಾರಹರಿಕಿ ಅಂದು,
೩೦  
ಅಡವಿ ಮಲ್ಲಿಗಿ ಕಂಡು 
ಅದರ ಕಂಪನುಂಡು,
೩೧  
ಹುಲ್ಲ ಹೊಲಕ ಬಂದು 
ಗುಬ್ಬಿ ಬೆಳಸಿ ತಿಂದು,
೩೨ 
ಇಷ್ಟು ಎಲ್ಲಾ ಮಾಡಿ 
ಸಪ್ಪಳಿಲ್ಲದಾಡಿ,
೩೩ 
ತಾಳ ಚವ್ವ ಚಕ್ಕ 
ಕುಣಿತ ತಕ್ಕ ತಕ್ಕ;
೩೪ 
ಆಸಿ ಹಚ್ಚಿ ಹ್ಯಾಂಗ 
ಕಂಡು ಸಿಕ್ಕಧಾಂಗ 
೩೫ 
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS. 
೩೬ 
ಕಾಣದೆಲ್ಲೋ ಮೂಡಿ 
ಬಂದು ಗಾಳಿ ಗೂಡಿ,
೩೭ 
ಇನ್ನು ಎಲ್ಲಿಗೋಟ?
ನಂದನದ ತೋಟ!

                                                  - ಅಂಬಿಕಾತನಯದತ್ತ   

ಕೊಲ್ಲುವುದಾದರೆ ಕೊಂದುಬಿಡು......

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ.

ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ.

ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು.

ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು.

                                            -  ಬಿ ಆರ್ ಲಕ್ಷ್ಮಣರಾವ್


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ .....

ರಚನೆ; ಕೆ.ಸ್. ನಿಸಾರ್ ಅಹಮದ್ 


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ........

ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.


ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು,

ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,

ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ -

ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ.


ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ;  

ಬರುವೆಯೋ, ಬಾರೆಯೋ ನೀನೆನ್ನುತಿದೆ ಹಾ! ಸಂದೇಹ.

ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ!

ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!


ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ;

ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.

ವೆಚ್ಚವಾಗುತ್ತಿದೆ ಸವಿ ಚಣಗಳ ಧನ ದುಂದಾಗಿ;

ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.


ನನ್ನ ನಲವಿನ ಬಳ್ಳಿ.....

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

                                          ನನ್ನ ನಲವಿನ ಬಳ್ಳಿ.....

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

                                          ನನ್ನ ನಲವಿನ ಬಳ್ಳಿ.....

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          ನನ್ನ ನಲವಿನ ಬಳ್ಳಿ.....

                                                                                 - ಕೆ. ಎಸ್. ನಿಸಾರ್ ಅಹಮದ್ 


ಎಲ್ಲ ಮರೆತಿರುವಾಗ...

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ ||

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ ||

                                                    - ಕೆ. ಎಸ್. ನಿಸಾರ್ ಅಹಮದ್   

ನಿತ್ಯೋತ್ಸವ.....

ರಚನೆ; ಕೆ. ಸ್. ನಿಸಾರ್ ಅಹಮದ್ 

ಜೋಗದ ಸಿರಿ ಬೆಳಕಿನಲ್ಲಿ,

ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,ನಿತ್ಯೋತ್ಸವ,

ತಾಯಿ, ನಿತ್ಯೋತ್ಸವ, ನಿನಗೆ......

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......

 ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......