ಕಟ್ಟುವೆವು ನಾವು......

SANTOSH KULKARNI
By -
0

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ  

Post a Comment

0Comments

Please Select Embedded Mode To show the Comment System.*