ಗುಜರಾತ್‌ನ ಭಾವನಗರದ ಸಾರಂಗಪುರದಲ್ಲಿರುವ ಕಷ್ಟಭಂಜನ ಹನುಮಾನ್ ದೇವಸ್ಥಾನವು ವಿಶೇಷ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ. ಇದು ಅನೇಕ ಭಕ್ತರ ಅಪಾರ ನಂಬಿಕೆಯ ಶ್ರದ್ಧಾ ಕೇಂದ್ರವಾಗಿದೆ. ಬಜರಂಗಬಲಿಯ ಪಾದದ ಬಳಿ ಶನಿದೇವನು ಕುಳಿತಿರುವುದು ಈ ದೇವಾಲಯದಲ್ಲಿನ ವಿಶೇಷವಾಗಿದೆ. ಅಷ್ಟೇ ಅಲ್ಲ, ಇಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಕಂಡುಬರುವುದು ಇನ್ನೊಂದು ವಿಶೇಷ ಅಂಶ. ಈ ಅದ್ಭುತ ದೃಶ್ಯದ ಹಿಂದೆ ಒಂದು ಆಸಕ್ತಿದಾಯಕ ಕಥೆ ಅಡಗಿದೆ.
ಒಮ್ಮೆ ಶನಿದೇವನ ಕೋಪವು ಭೂಮಿಯ ಮೇಲೆ ತುಂಬಾ ಹೆಚ್ಚಾಯಿತು. ಅವನ ಕೋಪದಿಂದ ಆಗ ಜನರು ತುಂಬಾ ಕಷ್ಟಪಡುತ್ತಿದ್ದರು. ಕೆಟ್ಟ ಸಂಭವಗಳು, ರೋಗಗಳು ಮತ್ತು ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದ್ದವು. ಜನರು ತಮ್ಮ ಸಂಕಷ್ಟಗಳಿಂದ ಮುಕ್ತಿ ಹೊಂದಲು ಹನುಮಂತನನ್ನು ಪ್ರಾರ್ಥಿಸಲು ಶುರು ಮಾಡಿದರು. "ಓ ದೇವರೇ, ನಮ್ಮನ್ನು ರಕ್ಷಿಸು" ಎಂದು.
ಅವರು ಹನುಮಂತನನ್ನು ಬೇಡಿಕೊಳ್ಳುತ್ತಿದ್ದರು.
ಹನುಮಂತನು ತನ್ನ ಭಕ್ತರ ಕೂಗನ್ನು ಕೇಳಿ ಕೋಪಗೊಂಡು. ಶನಿಯು ತನ್ನ ಭಕ್ತರಿಗೆ ತೊಂದರೆ ಕೊಡುತ್ತಿರುವುದನ್ನು ಸಹಿಸಲಾಗದೆ, ಅವನು ತನ್ನ ಗಧೆಯನ್ನು ಎತ್ತಿಕೊಂಡು ಶನಿಯನ್ನು ಹುಡುಕಲು ಹೊರಟ. ಈ ವಿಷಯ ತಿಳಿದ ಶನಿಗೆ ತುಂಬಾ ಭಯವಾಯಿತು. ಅವನಿಗೆ ಈಗ ಯಾರು ತನ್ನನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಮಾರ್ಗ ಸಿಗದಿದ್ದಾಗ, ಅವನು ಒಂದು ಕುತಂತ್ರವನ್ನು ರೂಪಿಸಿ, ಶನಿ ತನ್ನನ್ನು ತಾನು ಸ್ತ್ರೀ ವೇಷಕ್ಕೆ ಹಾಕಿಕೊಂಡ.
ಹನುಮಂತನು ಬ್ರಹ್ಮಚಾರಿ ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ಸ್ತ್ರೀ ವೇಷದಲ್ಲಿ ಇದ್ದರೆ ಹನುಮಂತನು ತನ್ನನ್ನು ಮುಟ್ಟುವುದಿಲ್ಲ ಅಥವಾ ತನ್ನ ಮೇಲೆ ಕೈ ಎತ್ತುವುದಿಲ್ಲ ಎಂದು ಭಾವಿಸಿದ. ಹೀಗೆ ಸ್ತ್ರೀ ವೇಷದಲ್ಲಿ ಹನುಮಂತನ ಪಾದದ ಬಳಿ ಕುಳಿತು ಕ್ಷಮೆಯಾಚಿಸಿದ. ಹನುಮಂತನು ಶನಿಯ ಕ್ಷಮೆಯಾಚನೆಯನ್ನು ಸ್ವೀಕರಿಸಿ ಅವನ ತಪ್ಪನ್ನು ಮನ್ನಿಸಿದ. ಅಂದಿನಿಂದ ಶನಿಯು ಹನುಮಂತನ ಪಾದದ ಬಳಿಯೇ ಕುಳಿತುಕೊಂಡಿದ್ದಾನೆ. ಇದೇ ಕಾರಣಕ್ಕೆ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನದಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಹನುಮಂತನ ಪಾದದ ಬಳಿ ಕುಳಿತಿರುವ ದೃಶ್ಯವನ್ನು ನೋಡಬಹುದು.
ನೀತಿ :-- ಕಥೆಯು ಭಕ್ತಿಯ ಶಕ್ತಿ ಮತ್ತು ಕ್ಷಮೆಯ ಮಹತ್ವ. ಶನಿಯ ಕೋಪ ಮತ್ತು ಅದರ ಪರಿಣಾಮ, ಹನುಮಂತನ ಕರುಣೆ ಮತ್ತು ಕ್ಷಮೆ, ಶನಿಯ ಕುತಂತ್ರ ಮತ್ತು ವೇಷ ಬದಲಾವಣೆ ಹಾಗೂ ಸಾರಂಗಪುರದ ದೇವಾಲಯದ ವಿಶೇಷತೆ ತಿಳಿಸುತ್ತದೆ.