ದಟ್ಟವಾದ ಕಾಡು, ಅಲ್ಲೊಂದು ಸರೋವರ, ಬದಿಯಲ್ಲಿ ಸಾವಿರಾರು ಮೊಲಗಳು, ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವುಗಳ ಪರಿವಾರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾದರೂ ಹೆದರಿ ಓಡುವಂಥ ಜೀವಿಗಳು.
ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲವೊಂದು ಗಂಭೀರವಾಗಿ "ಬಂಧುಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರುವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ. ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿಯದು" ಎಂದು ಮಾತನಾಡಿತು.
ಅಲ್ಲದೆ, ಮಾಂಸಾಹಾರಿಗಳಾದ ಪ್ರಾಣಿಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನುತ್ತವೆ. ಇನ್ನೊಂದೆಡೆಗೆ ಬೇಟೆಗಾರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ. ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು ಹಿಡಿಯುತ್ತಾರೆ. ಸಿಕ್ಕವರನ್ನು ಹಿಡಿದುಕೊಂಡು ಹೋಗಿ ಕೆಲವರನ್ನು ಕೊಂದು ಮಾಂಸ ಮಾರುತ್ತಾರೆ. ಇನ್ನೂ ಕೆಲವರನ್ನು ಹಿಡಿದುಕೊಂಡು ಹೋಗಿ ಪಂಜರದಲ್ಲಿಟ್ಟು ಸಾಕುತ್ತಾರೆ. ಪಾಪ! ಆ ಮೊಲಗಳಿಗೆ ಜೀವನಪರ್ಯಂತ ಜೈಲು ವಾಸ. ನಾವು ಏನು ಮಾಡಬೇಕು ಎಂಬುದು ತಿಳಿಯದಾಗಿದೆ ಎಂದಿತ್ತು ಇನ್ನೊಂದು ಮೊಲ.
ಒಂದೆಡೆಗೆ ನಮ್ಮನ್ನು ಬೇಟೆಯಾಡುವ ಕಾಡುಪ್ರಾಣಿಗಳು, ಮತ್ತೊಂದೆಡೆಗೆ ಬೇಟೆಗಾರರು. ಇಬ್ಬರಿಂದಲೂ ಹೇಗೆ ಪಾರಾಗಬೇಕೆಂಬುದನ್ನು ನಾವು ಯೋಚಿಸಬೇಕಲ್ಲವೇ? ಹಿರಿಯ ಮೊಲದ ಮಾತುಗಳನ್ನು ಶ್ರದ್ಧೆಯಿಂದ ಎಲ್ಲ ಮೊಲಗಳು ಕೇಳಿದವು. ಅವುಗಳ ಕಣ್ಣ ಮುಂದೆ ತಮ್ಮ ಅತ್ಯಂತ ಅನಿಶ್ಚಿತವಾದ ಬದುಕು ತೇಲಿಬಂತು. ಪ್ರತಿಕ್ಷಣವೂ ಸಾವಿಗೆ ಹೆದರಿ ಓಡಬೇಕಾದ ಪರಿಸ್ಥಿತಿ ತಮ್ಮದು ಎಂದು ಚಿಂತಿಸಿ ಕಂಗಾಲಾದವು.
ಆಗ ಮತ್ತೊಂದು ಮೊಲ ಎದ್ದು ನಿಂತಿತು. ಅದು ಕಣ್ಣೀರು ಸುರಿಸುತ್ತಲೇ, "ಹೌದು, ಹಿರಿಯರು ಹೇಳಿದಂತೆ ನಮ್ಮ ಬದುಕಿಗೆ ಯಾವ ಅರ್ಥವೂ ಇಲ್ಲ. ಹೀಗೆ ಕ್ಷಣಕ್ಷಣವೂ ಸಾಯುವುದಕ್ಕಿಂತ ಒಮ್ಮೆಯೇ ಸತ್ತು ಹೋಗುವುದು ವಾಸಿ. ನನ್ನ ಮಾತು ಕೇಳುವುದಾದರೆ ನಾವೆಲ್ಲ ಒಂದೇ ಬಾರಿ ಕೊಳದಲ್ಲಿ ಮುಳುಗಿ ಸತ್ತು ಹೋಗುವುದು ಸರಿಯಾದ ದಾರಿ" ಎಂದಿತು. ಅಲ್ಲಿ ಸೇರಿದ ಎಲ್ಲ ಮೊಲಗಳಿಗೆ ಈ ವಿಚಾರ ಅತ್ಯಂತ ಸರಿ ಎನ್ನಿಸಿತು. ಹಾಗಾದರೆ ತಡವೇಕೆ? ಇಂದೇ, ಈಗಲೇ ಹೋಗಿ ಕೊಳದಲ್ಲಿ ಹಾರಿಕೊಳ್ಳೋಣ ಎಂದು ಸಾವಿರಾರು ಮೊಲಗಳು ಕೊಳದ ಕಡೆಗೆ ನಡೆದವು.
ಆಗ ಒಂದು ಘಟನೆ ನಡೆಯಿತು. ಸಾವಿರಾರು ಮೊಲಗಳು ಕೊಳದ ಹತ್ತಿರ ಬಂದಾಗ ದಂಡೆಯಲ್ಲಿ ಕುಳಿತಿದ್ದ ಸಾವಿರಾರು ಕಪ್ಪೆಗಳು ಗಾಬರಿಯಾಗಿ ನೀರಿಗೆ ಹಾರಿದವು. ಇದನ್ನು ಕಂಡ ಒಂದು ತರುಣ ಮೊಲ, "ಎಲ್ಲರೂ ನಿಲ್ಲಿ, ಯಾರೂ ನೀರಿಗೆ ಹಾರಬೇಕಿಲ್ಲ. ನಾವು ಬರುವುದನ್ನು ಕಂಡು ಗಾಬರಿಯಾಗಿ ಹಾರಿದ ಕಪ್ಪೆಗಳನ್ನು ಕಂಡಿರಾ? ಅಂದರೆ ನಮ್ಮಂತಹ ಪುಕ್ಕಲು ಪ್ರಾಣಿಗಳಿಗೂ ಹೆದರುವ ಪ್ರಾಣಿಗಳಿವೆಯಲ್ಲ! ನಮ್ಮ ಬದುಕು ಅವುಗಳಿಗಿಂತ ಎಷ್ಟೋ ವಾಸಿ. ಕಪ್ಪೆಗಳೇ ಬದುಕುವುದಕ್ಕೆ ಉತ್ಸಾಹ ತೋರುವಾಗ ನಾವೇಕೆ ಬದುಕಿನಿಂದ ಮುಖ ತಿರುಗಿಸಬೇಕು?" ಎಂದಿತು. ಮೊಲಗಳಿಗೆ ಈ ಮಾತು ಸರಿ ಎನ್ನಿಸಿತು. ಅವುಗಳ ಮುಖದಲ್ಲಿ ಸಂತೋಷ ತೇಲಾಡಿತು. ಅವು ಮತ್ತೆ ಕುಪ್ಪಳಿಸುತ್ತ ಕಾಡಿಗೆ ನಡೆದವು.
ನೀತಿ :-- ನಮಗೂ ಅನೇಕ ಬಾರಿ ಹೀಗೆಯೇ ಎನ್ನಿಸಿ, ನಿರಾಸೆ ಮೂಡುತ್ತದೆ. ಬದುಕು ವ್ಯರ್ಥವೆನ್ನಿಸುತ್ತದೆ. ಆಗ ಸುತ್ತಲೂ ಕಣ್ತೆರದು ನೋಡಿದರೆ ನಮಗಿಂತ ಹೆಚ್ಚು ಕಷ್ಟದಲ್ಲಿರುವವರು ನಗುನಗುತ್ತ ಬದುಕುವುದು ಕಾಣುತ್ತದೆ. ಅವರೇ ಸಂತೋಷವಾಗಿರುವಾಗ ನಮಗೇಕೆ ಕೊರಗು ಎಂಬ ಧೈರ್ಯ ಮೂಡುತ್ತದೆ. ಕಾರಿನಲ್ಲಿ ಹೋಗುವವರನ್ನು ನೋಡಿ ಸಂಕಟಪಡುವುದಕ್ಕಿಂತ ಕಾಲಿನಲ್ಲಿ ಚಪ್ಪಲಿ ಕೂಡ ಇಲ್ಲದವರನ್ನು ನೋಡಿ ಸಮಾಧಾನ ಪಡುವುದು ಒಳ್ಳೆಯದು.