*ಶ್ರೀ ಮದ್ಭಗವದ್ಗೀತಾ* *ಅಧ್ಯಾಯ - 01 : ಶ್ಲೋಕ – 14*

SANTOSH KULKARNI
By -
0

 *ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸೈಂದನೇ ಸ್ಥಿತೌ ।*

*ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥೧೪॥*
*ತತಃ ಶ್ವೇತೈಃ ಹಯೈಃ ಯುಕ್ತೇ ಮಹತಿ ಸೈಂದನೇ ಸ್ಥಿತೌ*
*ಮಾಧವಃ ಪಾಂಡವಃ ಚ ಏವ ದಿವ್ಯೌ ಶಂಖೌ ಪ್ರದಧ್ಮತುಃ

- ಆ ಬಳಿಕ ಬಿಳಿಯ ಕುದುರೆಗಳಿಂದ ಸಜ್ಜುಗೊಂಡ ಹಿರಿಯ ರಥದಲ್ಲಿ ಕುಳಿತ ಶ್ರೀಕೃಷ್ಣ ಮತ್ತು ಅರ್ಜುನ ವೆಗ್ಗಳದ ಶಂಖಗಳನ್ನು ಊದಿದರು.*

*ಕೌರವ ಸೇನೆಯ ಶಂಖ ನಗಾರಿ ಗದ್ದಲದ ನಂತರ ನಾಲ್ಕು ಬಿಳಿ ಕುದುರೆಗಳಿಂದ ಸಜ್ಜುಗೊಂಡ, ಅಲ್ಲಿ ಇರುವ ರಥಗಳಲ್ಲೇ ಅತಿ ದೊಡ್ಡ ರಥದಲ್ಲಿ ಕುಳಿತ ಶ್ರೀಕೃಷ್ಣ ಮತ್ತು ಅರ್ಜುನರು ತಮ್ಮ ದಿವ್ಯ ಶಂಖ ನಾದವನ್ನು ಮಾಡುತ್ತಾರೆ.(ಮೊದಲು ಶ್ರೀಕೃಷ್ಣ ಆ ನಂತರ ಅರ್ಜುನ).*

*ಈ ಶ್ಲೋಕದಲ್ಲಿ ಮಾಧವ ಮತ್ತು ಪಾಂಡವ ಎನ್ನುವ ಎರಡು ವಿಶೇಷಣ ಬಳಕೆಯಾಗಿದೆ. ಇಲ್ಲಿ ಭಗವಂತನನ್ನು ಮಾಧವಃ ಎಂದು ಸಂಬೋಧಿಸಿದ್ದಾರೆ. 'ಮಾ' ಅಂದರೆ ಮಾತೆ ಲಕ್ಷ್ಮಿ. ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ-ಶ್ರೀಮನ್ನಾರಾಯಣ . ಇನ್ನು 'ಮಾ' ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾಧವ.* *ಶ್ರೀಕೃಷ್ಣ-ಅವತಾರದಲ್ಲಿ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದು ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಗ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ,ಅಥರ್ವವೇದ, ರಾಮಾಯಣ, ಮಹಾಭಾರತ ಹಾಗು ಪುರಾಣಗಳನ್ನು ಮಾತೃ ಎನ್ನುತ್ತಾರೆ.ಅದ್ದರಿಂದ ಸಮಸ್ತ ವೈದಿಕ ವಾಗ್ಮಯ ಪ್ರತಿಪಾದನಾದ ಭಗವಂತ ಮಾಧವ.*

*ಇಲ್ಲಿ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸಿದ್ದಾರೆ. ಅರ್ಜುನ ಕುಂತಿಯ ಮೂರು ಮಂದಿ ಮಕ್ಕಳಲ್ಲಿ ಕೊನೆಯವನು, ಯಾವಾಗಲೂ ಕೊನೆಯ ಮಗನ ಮೇಲೆ ಪ್ರೀತಿ ಹೆಚ್ಚು. ಅದಕ್ಕಾಗಿ ಆತನನ್ನು ಪಾರ್ಥ, ಕೌಂತೇಯ, ಪಾಂಡವ ಎಂದು ಕರೆಯುತ್ತಿದ್ದರು. ಅರ್ಜುನನಲ್ಲಿ ಭಗವಂತನ ವಿಶೇಷ ಸನ್ನಿಧಾನವಿತ್ತು. ಆತ ನಾರಾಯಣನ ಜೊತೆಗಾರನಾದ 'ನರನ' ರೂಪ ಕೂಡಾ ಹೌದು.*
*ನಮ್ಮ ದೇಹ ಕೂಡಾ ಒಂದು ರಥ. ಅಂತಹ ರಥದಲ್ಲಿ ಜೀವನನ್ನು ನಡೆಸುವ ಭಗವಂತನ ಸನ್ನಿಧಾನವಿದೆ. ನಾಲ್ಕು ಕುದುರೆಗಳೆಂದರೆ ನಾಲ್ಕು ವೇದಗಳು. ಬಿಳಿ ಬಣ್ಣ ಸತ್ವ ಗುಣದ ಸಂಕೇತ.*

*ಕೃಪೆ : ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು*
Tags:

Post a Comment

0Comments

Please Select Embedded Mode To show the Comment System.*