ಹನುಮಂತನಲ್ಲಿ ಕ್ಷಮೆ ಮತ್ತು ಸಹನಾ ಗುಣಗಳು ಕಾಣಬಹುದು. ಇಂತಹ ಅನೇಕ ಗುಣಗಳಿರುವ ಹನುಮಂತನ ಅಪಾರ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಒಂದು ಸುಂದರ ಕಥೆ ನೋಡಬಹುದು. ಅವನು ಶನಿದೇವನಂತಹ ಶಕ್ತಿಶಾಲಿ ದೇವತೆಯನ್ನು ಸಹ ತನ್ನ ಇಚ್ಛೆಗೆ ಒಳಪಡಿಸಿದ. ಮತ್ತು ಭಗವಂತನ ಆಶ್ರಯದಲ್ಲಿ ಇದ್ದರೆ ಯಾವುದೇ ಕಷ್ಟವನ್ನು ಸುಲಭವಾಗಿ ಜಯಿಸಬಹುದು ಎಂಬ ವಿಶ್ವಾಸವನ್ನು ನೀಡುವ ಹನುಮಂತ ಹಾಗೂ ಶನಿಯ ಕುರಿತ ಕಥೆ ಇಲ್ಲಿ ನೋಡಬಹುದು.
ಕಲಿಯುಗದ ಆಗಮನದೊಂದಿಗೆ ಭೂಮಿಯಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ಧರ್ಮ ಕ್ಷೀಣಿಸಿ ಅಧರ್ಮ ಬೆಳೆಯುತ್ತಿತ್ತು. ಈ ಮಹಾಪರಿವರ್ತನದ ಸಮಯದಲ್ಲಿ ಶನಿದೇವನು ಹನುಮಂತನನ್ನು ಭೇಟಿಯಾಗಲು ನಿರ್ಧರಿಸಿದ. ಹನುಮಂತನಂತಹ ಭಕ್ತನ ಮೇಲೂ ತನ್ನ ಗ್ರಹದೋಷದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಚಿಂತೆಯಿಂದಲೇ ಅವನು ಹನುಮಂತನ ಆಶ್ರಯಕ್ಕೆ ಬಂದಿದ್ದ. "ಆಂಜನೇಯ, ಕಲಿಯುಗದ ಆಗಮನದಿಂದ ದೇವತೆಗಳಿಗೆ ಭೂಮಿಯಲ್ಲಿ ಇರುವುದು ಕಷ್ಟವಾಗಿದೆ. ಎಲ್ಲರ ಮೇಲೂ ನನ್ನ ಗ್ರಹದೋಷದ ಪ್ರಭಾವ ಬೀರುತ್ತಿದೆ. ನಿನು ರಾಮನ ಅಪಾರ ಭಕ್ತ. ಆದ್ದರಿಂದ ನನ್ನ ದೋಷವು ನಿನ್ನ ಮೇಲೆ ಪ್ರಭಾವ ಬೀರದಿರಬಹುದು. ಆದ್ದರಿಂದ ನೀನು ನನ್ನನ್ನು ಬಿಟ್ಟು ಬೇರೆ ಕಡೆ ಹೋಗು," ಎಂದು ಶನಿದೇವ ವಿಜ್ಞಾಪಿಸಿದ.
ಹನುಮಂತನು ಶಾಂತವಾಗಿ ನಗುತ್ತಾ, "ಶನಿದೇವ, ನೀನು ಧರ್ಮದ ರಕ್ಷಕ. ನಿನ್ನ ಕರ್ಮವನ್ನು ನಿರ್ವಹಿಸು. ನಾನು ನನ್ನ ಕರ್ಮವನ್ನು ನಿರ್ವಹಿಸುತ್ತೇನೆ," ಎಂದು ಹೇಳಿದ.
ಶನಿದೇವನಿಗೆ ಹನುಮಂತನ ಈ ಉತ್ತರ ಅಚ್ಚರಿಯನ್ನುಂಟು ಮಾಡಿತು. ಅವನು ತನ್ನ ಕೆಲಸವನ್ನು ಮಾಡಲು ನಿರ್ಧರಿಸಿ ಹನುಮಂತನ ಹಣೆಯ ಮೇಲೆ ಕುಳಿತುಕೊಂಡನು. ತಕ್ಷಣವೇ ಹನುಮಂತನ ಹಣೆಯಲ್ಲಿ ತುರಿಕೆ ಶುರುವಾಯಿತು. ಅವನು ಸಹಿಸಲಾಗದ ನೋವಿನಿಂದ ಪರ್ವತವೊಂದನ್ನು ಎತ್ತಿ ತನ್ನ ಹಣೆಯ ಮೇಲೆ ಇಟ್ಟುಕೊಂಡ. "ಆಂಜನೇಯ, ನೀನು ಏನು ಮಾಡುತ್ತಿದ್ದೀಯ?" ಎಂದು ಶನಿದೇವನು ಆತಂಕದಿಂದ ಕೇಳಿದ. "ನೀನು ನಿನ್ನ ಕೆಲಸ ಮಾಡು, ನಾನು ನನ್ನ ಕೆಲಸ ಮಾಡುತ್ತೇನೆ," ಎಂದು ಹನುಮಂತ ಶಾಂತವಾಗಿ ಹೇಳಿದ.
ತುರಿಕೆ ಇನ್ನೂ ನಿಲ್ಲದಿದ್ದರಿಂದ ಹನುಮಂತನು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪರ್ವತದ ಭಾರವನ್ನು ತಾಳಲಾರದೆ ಶನಿದೇವನು ಹನುಮಂತನನ್ನು ಬಿಟ್ಟುಬಿಡುವಂತೆ ಬೇಡಿಕೊಂಡ. ಆದರೆ ಹನುಮಂತ ಶನಿಯ ಸೊಕ್ಕನ್ನು ಮುರಿಯಲು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವನಿಗೆ ಹನುಮಂತನ ಈ ಕೃತ್ಯ ಆಘಾತವನ್ನುಂಟು ಮಾಡಿತು. ಅವನು ತನ್ನ ತಪ್ಪನ್ನು ಅರಿತು ಹನುಮಂತನಲ್ಲಿ ಕ್ಷಮೆಯಾಚಿಸಿದ. ಆದರೆ ಹನುಮಂತನು ನಾಲ್ಕನೇ ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವ ದುಃಖದಿಂದ ಹನುಮಂತನನ್ನು ಬಿಟ್ಟುಬಿಡುವಂತೆ ಕೇಳಿಕೊಂಡ. ಅಂತಿಮವಾಗಿ ಹನುಮಂತನು ಶನಿಯನ್ನು ನೋವಿನಿಂದ ಮುಕ್ತಗೊಳಿಸಿದ.
ಈ ಘಟನೆಯ ನಂತರ ಶನಿದೇವನಿಗೆ ಹನುಮಂತನ ಬಗ್ಗೆ ಅಪಾರ ಗೌರವ ಮೂಡಿತು. ಅವನು ಹನುಮಂತನನ್ನು ತನ್ನ ಗುರುವಾಗಿ ಸ್ವೀಕರಿಸಿ ಅವನ ಆಜ್ಞೆಯನ್ನು ಪಾಲಿಸುವೆನೆಂದು ಪ್ರತಿಜ್ಞೆ ಮಾಡಿದ.
ನೀತಿ :-- ಭಕ್ತಿಯ ಶಕ್ತಿ ಅಪಾರ. ಸತ್ಯ ಮತ್ತು ಧರ್ಮವನ್ನು ಎಂದಿಗೂ ಬಿಡಬಾರದು. ಅಲ್ಲದೆ ಸೊಕ್ಕು ಮತ್ತು ಅಹಂಕಾರವು ನಮ್ಮನ್ನು ನಾಶ ಮಾಡುತ್ತದೆ.