ಅವರವರ ಕರ್ಮದ ಫಲ ಅವರೇ ಅನುಭವಿಸಬೇಕು

SANTOSH KULKARNI
By -
0

 ಒಂದೂರಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು. ಆದರೆ ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ಅವಲಕ್ಷಿಸುತ್ತಿದ್ದರು. ಇದರಿಂದ ಪ್ರಾಮಾಣಿಕನಿಗೆ ಬೆಲೆ ಇಲ್ಲವಾಗುತ್ತದೆ.

ಒಂದು ದಿನ ರಾಜ ತನ್ನ ಮೂರು ಮಂತ್ರಿಗಳನ್ನು ಕರೆಯುತ್ತಾನೆ. ಮೂರು ಜನರಿಗೆ ಒಂದೊಂದು ಗೋಣಿ ಚೀಲವನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡಿದ.

ಮೂರು ಮಂತ್ರಿಗಳಲ್ಲಿ ಒಬ್ಬ ರಾಜನ ಆಜ್ಞೆಯನ್ನು ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ. ಎರಡನೆಯವನು "ಅಯ್ಯೋ ರಾಜರು ಒಳಗೆಲ್ಲಿ ನೋಡುತ್ತಾರೆ?" ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು ಮೂರನೆಯವನು "ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು ?" ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ.

ಮಾರನೇ ದಿನ ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ ಮುಂದಿಡುತ್ತಾರೆ. ಅರಸ ಅದನ್ನು ಪರೀಕ್ಷಿಸುವುದಿಲ್ಲ. ಬದಲಾಗಿ ಭಟರನ್ನು ಕರೆದು ಹೇಳುತ್ತಾನೆ "ಈ ಮೂರು ಜನರನ್ನು ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ ಬಳಿ ಇರಲಿ. ಒಂದು ತಿಂಗಳು ತಿನ್ನಲು ಏನನ್ನೂ ಕೊಡಬೇಡಿ" ಎಂದು ಆಜ್ಞೆ ಮಾಡಿದ.

ಒಂದು ತಿಂಗಳ ನಂತರ ಬಾಗಿಲು ತೆರೆದಾಗ, ಪ್ರಾಮಾಣಿಕವಾಗಿ ಉತ್ತಮವಾದ ಹಣ್ಣುಗಳನ್ನು ತಂದವ ಆರೋಗ್ಯವಂತನಾಗಿ ಹೊರ ಬರುತ್ತಾನೆ. ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಂದ ಮಂತ್ರಿ ಕೊನೆಯುಸಿರೆಳೆದಿದ್ದ.

ನೀತಿ :-- ಇದೆ ಕರ್ಮದ ಫಲ. ಉತ್ತಮವಾದ ಕೆಲಸಕ್ಕೆ ಉತ್ತಮವಾದ ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ.

Post a Comment

0Comments

Please Select Embedded Mode To show the Comment System.*