ಒಬ್ಬ ತಂದೆ ತನ್ನ ಮಗಳ ಮದುವೆ ಮಾಡಲು ಯೋಚಿಸಿ, ಒಬ್ಬಳೇ ಮುದ್ದಿನ ಮಗಳನ್ನು ಕೇಳಿದ. ಮಗಳೇ ಹೇಳು, ನಿನಗೆ ಎಂಥ ಗಂಡು ಬೇಕು ಅಂಥ ಗಂಡನ್ನೇ ಹುಡುಕಿ ಅದ್ಧೂರಿಯಾಗಿ ಮದುವೆ ಮಾಡುವೆ ಎಂದನು. ಮಗಳು ಹೇಳಿದಳು, ಅಪ್ಪಾ ನಾನು ಮದುವೆಯಾಗುವ ಹುಡುಗ ನೋಡಲು ಚೆನ್ನಾಗಿದ್ದು, ದೊಡ್ಡ ಹುದ್ದೆ. ಇರಬೇಕು. ಹೈಟು- ವೆಯ್ಟು- ವೈಟ್ ಹದವಾಗಿದ್ದು ನಮ್ಮಿಬ್ಬರ ಜೋಡಿ ಮೇಡ್ ಫಾರ್ ಈಚ್ ಅದರ್ ಎನ್ನುವಂತಿರಬೇಕು. ಇಂಜಿನಿಯರ್- ಡಾಕ್ಟರ್- ಬಿಜಿನೆಸ್ ಮ್ಯಾನ್ ಅಲ್ಲದಿದ್ದರೂ ಕೊನೆ ಪಕ್ಷ ಮಾಸ್ಟರ್ ಡಿಗ್ರಿ ಯಾದರು ಆಗಿರಬೇಕು. ನನಗೆ ಹಳ್ಳಿ ಯಲ್ಲಿ ಇರಲು ಇಷ್ಟವಿಲ್ಲ ಸಿಟಿಯಲ್ಲಿ ಸ್ವಂತ ಮನೆ ಅಥವಾ ಫ್ಲಾಟ್ ಇರಬೇಕು.
ಮಗಳ ಅಭಿಪ್ರಾಯ ಕೇಳಿದ ತಂದೆ ಒಳ್ಳೆಯದು ಮಗಳೇ, ನಾನು ಯೌವನದಲ್ಲಿ ನಿನ್ನಂತೆ ಹೇಳುತ್ತಿದ್ದೆ. ಅಂತ ಹುಡುಗಿಯನ್ನು ಹುಡುಕಿ ಹುಡುಕಿ ಸಿಗದೇ ಸುಸ್ತಾಗಿ ಕೊನೆಗೆ ನಿನ್ನ ತಾಯಿಯನ್ನೇ ಮದುವೆ ಮಾಡಿಕೊಂಡೆ. ನಿನ್ನ ವರನ ಹುಡುಕಾಟಕ್ಕೆ ನೀನೇ ಹೋಗು ಅವನಿಗೆ ಕೊಟ್ಟು ಮದುವೆ ಮಾಡುವೆ ಎಂದನು. ಮಗಳಿಗೆ ಬಹಳ ಖುಷಿಯಾಯಿತು. ತನ್ನಿಷ್ಟದಂತ ಗಂಡು ಹುಡುಕಲು ಹೊರಟಳು. ಎಲ್ಲಾ ಸಣ್ಣ ದೊಡ್ಡ ಪಟ್ಟಣಗಳನ್ನೆಲ್ಲ ಸುತ್ತಾಡುತ್ತಾ ದೇಶವನ್ನೇ ಸುತ್ತಿದಳು. ಹುಡುಕಿದ ಗಂಡು ಗಳಲ್ಲಿ ಕೊರತೆ ಕಾಣುತ್ತಿತ್ತು, ಕಪ್ಪು, ಕುಳ್ಳ, ದಪ್ಪ, ಸಣಕಲ, ಉಬ್ಬಲ್ಲು, ಪೀಚು ಮುಖ, ಸರಿಯಾಗಿ ಮಾತಾಡಕ್ಕೆ ಬರಲ್ಲ ಹೀಗೆ ಒಂದಿಲ್ಲೊಂದು ಕೊರತೆ ಅವಳಿಗೆ ಕಾಣುತ್ತಿತ್ತು. ಗಂಡು ಹುಡುಕುವ ಕೆಲಸ ಮುಂದುವರಿಸಿ ಕೆಲವು ವರ್ಷಗಳೇ ಉರುಳಿತು. ಅವಳ ಯೌವ್ವನ ಕುಸಿದಿದ್ದು ಅವಳಿಗೆ ತಿಳಿಯಲಿಲ್ಲ.ಅದು ಹೇಗೋ ಅವಳಿಷ್ಟದಂತ ಗಂಡು ಸಿಕ್ಕನು. ಅವನನ್ನು ನೋಡಿ ಮಾತನಾಡಿಸಿ
ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕೆಂದು ಬಹಳ ದಿನದಿಂದ ಹುಡುಕುತ್ತಿದ್ದೆ ಅಂತೂ ನೀನು ಸಿಕ್ಕಿದೆ ಎಂದು ಖುಷಿಯಿಂದ ಹೇಳಿದಳು. ಹುಡುಗ ಹೇಳಿದ, ನಾಲ್ಕು ವರ್ಷಗಳ ಹಿಂದೆ ನೀನು ನನ್ನ ಬಳಿಯೂ ಬಂದಿದ್ದೆ ಆಗ ನಿನ್ನನ್ನು ನೋಡಿ ಮದುವೆಯಾಗುವುದಾದರೆ ಇಂಥ ಹುಡುಗಿಯನ್ನೇ ಆಗಬೇಕು ಎಂದು ನಿನ್ನನ್ನು ಮದುವೆಯಾಗಲು ಕೇಳಿದೆ ಆದರೆ ನೀನು ಒಪ್ಪಲಿಲ್ಲ. ಈಗ ನಿನಗೆ ವಯಸ್ಸಾಗಿದೆ, ನನಗೆ ಚಂದದ ಹುಡುಗಿ ಸಿಕ್ಕು ಅವಳ ಜೊತೆ ನನ್ನ ಮದುವೆ ನಿಶ್ಚಯವಾಗಿದೆ ಎಂದು ಆಹ್ವಾನ ಕೊಟ್ಟನು.
ಹುಡುಕಾಟಕ್ಕೆ ಕೊನೆ ಎನ್ನುವುದು ಇರಲ್ಲ. ಸೀರೆ ಅಂಗಡಿಗೆ ಹೋದರೆ, ಆ ಸೀರೆ ಬಣ್ಣ ಚಂದ, ಇನ್ನೊಂದು ಸೀರೆಯ ಡಿಸೈನ್ ಅಂದ ಎಂದುಕೊಳ್ಳುತ್ತಾ, ಮತ್ತೆ ಸುತ್ತಮುತ್ತ ಸೀರೆಗಳನ್ನು ನೋಡಿ ಓ ಅದು ಇನ್ನೂ ಚೆನ್ನಾಗಿದೆ ಎಂದು ತೆಗೆಸಿ ನೋಡುತ್ತೇವೆ. ಹೀಗೆ ಸಂಜೆವರೆಗೂ ಹುಡುಕಾಟ ನಡೆಸುತ್ತಾ ಸುಸ್ತಾಗಿ ಕೊನೆಗೆ ಹೊತ್ತಾಯ್ತು ಯಾವುದೋ ಒಂದು ಎಂದು ಕಣ್ಣಿಗೆ ಕಂಡ ಸೀರೆ ತೆಗೆದುಕೊಂಡು ಮನೆಗೆ ಬರುತ್ತೆವೆ. ಅದನ್ನು ಉಟ್ಟು ನೋಡಿದಾಗ ತೀರ ಸಾಧಾರಣ ಎನಿಸುತ್ತದೆ. ಹೀಗೆ ಕೆದಕಿ ಬೆದಕಿ ಹುಡುಕುತ್ತಾ ಹೋದರೆ ಕಲ್ಪನೆಯಂತಿರುವ ಗಂಡು-ಹೆಣ್ಣು ಸಿಗುವುದಿಲ್ಲ. ಹಾಗಂತ ಹುಡುಕುವುದು ತಪ್ಪಲ್ಲ. ತುಂಬಾ ನಿರೀಕ್ಷೆಗಳು ಇರಬಾರ ದು. ಒಂದು ಕಣ್ಣಳತೆ ಅಥವಾ ಅಂದಾಜೀಗೆ ಸರಿ ಹೋದರೆ ಸಿಕ್ಕಿರುವುದನ್ನು ಒಪ್ಪಬೇಕು. ಸಂತೋಷದಿಂದ ಜೀವನ ಸಾಗಿಸಬೇಕು.
ಜಗತ್ತಿನಲ್ಲಿ ಯಾವುದು ಪೂರ್ಣವಲ್ಲ. ಭಗವಂತ ಮಾತ್ರ ಪೂರ್ಣ. ಪ್ರಪಂಚ
ಹೇಗಿದಿಯೋ ಹಾಗೆ ಸ್ವೀಕರಿಸಬೇಕು. ಎಲ್ಲರಿಗೂ ಆಸೆ ಆಕಾಂಕ್ಷೆ ಕನಸು ಕಲ್ಪನೆಗಳು
ಬೆಟ್ಟದಷ್ಟು ಇರುತ್ತದೆ. ಆದರೆ ಹಾಗೆ ಜಗತ್ತು ಇರುವುದಿಲ್ಲ. ಪರ್ಫೆಕ್ಟ್ ನ್ನು ಹುಡುಕಲು ಹೊರಟವರೇ ಕೊನೆಗೆ ಅನ್ಫಿಟ್ಟಂತ ಮೂಲೆ ಗುಂಪಾಗುತ್ತಾರೆ. ಭಗವಂತ ಕೊಟ್ಟಿದ್ದನ್ನು ಸ್ವೀಕರಿಸಬೇಕು. ಸುಂದರವಾಗಿ ಬದುಕುವುದನ್ನು ಕಲಿಯಬೇಕು.
No comments:
Post a Comment