ಸಪ್ತ ಋಷಿಗಳು (ಸಪ್ತರ್ಷಿಗಳು)

SANTOSH KULKARNI
By -
0

 


ಈ ಸಪ್ತರ್ಷಿಗಳು ಯಾರು?

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಒಂದೊಂದು ಕಡೆ ಒಬ್ಬೊಬ್ಬರನ್ನು ಹೆಸರಿಸಿದ್ದಾರೆ.
ಮಹಾಭಾರತದ ಶಲ್ಯ ಪರ್ವದಲ್ಲಿ
ಈ ರೀತಿ ಇದೆ
ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ.
ಇದೇ ಮಹಾಭಾರತದ ಶಾಂತಿ ಪರ್ವದಲ್ಲಿ
ಇನ್ನೊಂದು ರೀತಿ ಇದೆ.
ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು ಮತ್ತು ವಸಿಷ್ಠ.
ನಾನು ಸಂಧ್ಯಾವಂದನೆಯಲ್ಲಿ ಸಪ್ತರ್ಷಿಗಳನು ಈ ರೀತಿ ನೆನೆಸಿಕೊಳ್ಳುತ್ತಿದ್ದೇನೆ.
ಅತ್ರಿ, ಭೃಗು, ಕುತ್ಸ, ವಸಿಷ್ಠ, ಗೌತಮ ಕಶ್ಯಪ ಮತ್ತು ಅಂಗೀರಸ.
ಯಾಕೆ ಈ ರೀತಿಯ ವ್ಯತ್ಯಾಸ ಎಂದು ಪ್ರಶ್ನಿಸಿದರೆ ಬರುವ ಉತ್ತರವೇನೆಂದರೆ ಸಪ್ತರ್ಷಿಗಳು ಕಲ್ಪಾಂತರದಲ್ಲಿ ಬದಲಾಗುತ್ತಾರೆ. ಈ ಉತ್ತರ ನನಗೆ ಸಮಾಧಾನ ತರುತ್ತಿಲ್ಲ.
ಇರಲಿ,
ಈ ಋಷಿಗಳ ವಿವರಗಳನ್ನು ಅರಿಯೋಣ.
೧. ಕಶ್ಯಪ:
ಈತನನ್ನು ಕಶ್ಯಪ ಬ್ರಹ್ಮ ಎಂದೇ ಕರೆಯುತ್ತಾರೆ. ಕಶ್ಯಪನು ಬ್ರಹ್ಮನ ಮಗನಾದ ಮರೀಚಿಗೆ ಕಲಾ ಎನ್ನುವ ಮಡದಿಯಲ್ಲಿ ಜನಿಸಿದವ.
ದಕ್ಷಬ್ರಹ್ಮನ ಹದಿಮೂರು ಹೆಣ್ಣು ಮಕ್ಕಳನ್ನು ಈತ ವಿವಾಹವಾಗಿದ್ದ.
ಇದಲ್ಲದೆ ವೈಶ್ವಾನರನ ಕುವರಿಯರಾದ ಕಾಲಾ ಮತ್ತು ಪುಲೋಮಾರನ್ನೂ ಮದುವೆಯಾಗಿದ್ದ.
ದೇವತೆಗಳು, ದೈತ್ಯರು, ರಾಕ್ಷಸರು, ಮಾನವರಾದ ನಾವುಗಳು ಎಲ್ಲರೂ ಕಶ್ಯಪನ ಸಂತತಿಯವರೇ.
ಕಶ್ಯಪ ಗೋತ್ರ ಪ್ರವರ್ತಕ ಋಷಿಗಳಲ್ಲಿ ಪ್ರಥಮ. ‌ ಆದುದರಿಂದ ಪ್ರಸ್ತುತ ಯಾರಿಗಾದರೂ ತಮ್ಮ ಗೋತ್ರದ ಅರಿವಿಲ್ಲದಿದ್ದರೆ‌ ಕಾಶ್ಯಪ ಗೋತ್ರ ಎಂದು ಹೇಳಿಕೊಳ್ಳಬಹುದು.
೨. ಅತ್ರಿ :
ಅತ್ರಿ ಬ್ರಹ್ಮ ಮಾನಸಪುತ್ರರಲ್ಲಿ ಒಬ್ಬ. ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬ.
ಕರ್ದಮ ಬ್ರಹ್ಮನ ಮಗಳಾದ ಅನಸೂಯೆ ಈತನ ಮಡದಿ. ಈ ದಂಪತಿಗಳಿಗೆ ದೂರ್ವಾಸ ಮುನಿ, ದತ್ತಾತ್ರೇಯ ಮತ್ತು ಚಂದ್ರ ಮಕ್ಕಳು.
ಭರದ್ವಾಜ :
ಕೆಲವರು ಈತನನ್ನು ಭಾರದ್ವಾಜನೆಂದೂ ಕರೆಯುವರು.
ನಮ್ಮ ಪುರಾಣೇತಿಹಾಸಗಳಲ್ಲಿ ಒಬ್ಬರಿಗಿಂತ ಹೆಚ್ಚು ಭರದ್ವಾಜರ ಪ್ರಸ್ತಾಪವಿದೆ.
೧. ಭಾರದ್ವಾಜ- ಈತ ಉಚಥ್ಯ ಮುನಿಯ ಹೆಂಡತಿ ಮಮತಾ ಎಂಬುವವಳಲ್ಲಿ ದೇವಗುರು ಬೃಹಸ್ಪತಿಯಿಂದ ಹುಟ್ಟಿದವ. ಭಾರದ್ವಾಜ ಮುನಿಯ ಮಗ ದ್ರೋಣಾಚಾರ್ಯ.
೨.ಭಾರದ್ವಾಜ- ಈತ ಒಬ್ಬ ಮಹರ್ಷಿ. ಈತನ ಮಗ ಯವಕ್ರೀತ.‌ ಕ್ಷುದ್ರದೇವತೆಯೊಬ್ಬಳಿಂದ ಯವಕ್ರೀತ ಕೊಲ್ಲಲ್ಪಟ್ಟ. ಪುತ್ರಶೋಕವನ್ನು ತಾಳಲಾರದೆ ಭರದ್ವಾಜನು ಅಗ್ನಿಪ್ರವೇಶ ಮಾಡಿ ಆತ್ಮಹತ್ಯೆ ಮಾಡಿಕೊಂಡ.
೩. ಭಾರದ್ವಾಜ- ಇನ್ನೊಬ್ಬ ಮಹರ್ಷಿ. ಈತ ಘೃತಾಚಿ ಎನ್ನುವ ಹೆಸರಿನ ಅಪ್ಸರೆಯಲ್ಲಿ ಶ್ರುತಾವತಿ ಹೆಣ್ಣು ಮಗಳನ್ನು ಪಡೆದ.
೪.ಭಾರದ್ವಾಜ- ವಾಲ್ಮೀಕಿ ಮಹರ್ಷಿಯ ಶಿಷ್ಯ.
೪. ವಿಶ್ವಾಮಿತ್ರ :
ವಿಶ್ವಾಮಿತ್ರನ ಕುರಿತು ಬರೆಯಬೇಕೆಂದರೆ ಮಹಾತ್ಮ ಕಬೀರರ ಒಂದು ದೋಹೆ(,ದ್ವಿಪದಿ) ನೆನಪಿಗೆ ಬರುತ್ತದೆ. ‌
" ಸಬ್ ಧರತಿ ಕಾಗದ ಕರೂಮ್
ಲೇಖನಿ ಸಬ್ ಬನರಾಯ್
ಸಪ್ತ ಸಮುಂದರ್ ಕೀ ಕಾಗಜ್ ಕರೂಮ್
ಗುರುಗುನ್‌ ಲಿಖಾ ನ ಜಾಯ್".
ವಿಶ್ವಾಮಿತ್ರರ ಬಗ್ಗೆ ಬರೆಯಬೇಕೆಂದರೆ ನನಗೆ ಮೇಲಿನಂತೆಯೇ ಆಗುವುದು.
ಜನ್ಮತಃ ಈತ ಕ್ಷತ್ರಿಯ ರಾಜ. ಚಂದ್ರವಂಶ ಗಾಧಿ ರಾಜನ ಮಗ. ವಸಿಷ್ಠರೊಂದಿಗಿನ ವೈಮನಸ್ಯದಿಂದಾಗಿ ತನ್ನ ತಪೋಬಲ ಮಹಿಮೆಯಿಂದಲೇ ಬ್ರಹ್ಮರ್ಷಿ ಪಟ್ಟವನ್ನು ಪಡೆದವ. ಈತನಿಗೆ ಅನೇಕ ಮಡದಿಯರೂ, ಪುತ್ರರೂ ಇದ್ದರು. ಕುಶಿಕ ರಾಜನ ವಂಶದವನಾದುದರಿಂದ ಕೌಶಿಕ ಎಂದೂ ಕರೆಯುತ್ತಿದ್ದರು.
ವಿಶ್ವಾಮಿತ್ರರದು ಪುರಾಣಗಳಲ್ಲೇ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ.
ಮೇನಕೆಯ ಸಂಗ ಮಾಡಿ ಶಕುಂತಲೆಯ ಜನನಕ್ಕೆ ಕಾರಣನಾಗುತ್ತಾನೆ.
ರಾಜ ತ್ರಿಶಂಕುವಿಗಾಗಿ ಪ್ರತ್ಯೇಕ ಸ್ವರ್ಗವನ್ನೇ ಸೃಷ್ಟಿಸುತ್ತಾನೆ.
ರಾಜ ಹರಿಶ್ಚಂದ್ರನ ಸತ್ಯನಿಷ್ಠತೆಯನ್ನು ಜಗತ್ತಿಗೆ ತೋರಿಸಲು ಆತನಿಗೆ ತಾಳಲಾರದಷ್ಟು ಕಾಟ ಕೊಟ್ಟ.
೫. ಗೌತಮ :
ಒಬ್ಬ ಮಹರ್ಷಿ. ಉಚಥ್ಯನ ಮಗನಾದ ದೀರ್ಘತಮನ ಪುತ್ರ. ಈತನ ಹೆಂಡತಿ ಅಹಲ್ಯೆ. ಮಗ ಶತಾನಂದ ಸೀತೆ ತಂದೆ ಜನಕ ರಾಜನ ಕುಲ ಪುರೋಹಿತ.
( ಪುರಾಣದ ಒಂದು ಕಥೆ ಹೇಳುತ್ತದೆ- ಚತುರ್ಮುಖ ಬ್ರಹ್ಮನು ಮಾನವ ಸೃಷ್ಟಿಯ ಆರಂಭದಲ್ಲಿ ಗಂಡು-ಹೆಣ್ಣುಗಳಲ್ಲಿ ಶಾರೀರಿಕ ವ್ಯತ್ಯಾಸ ಇರಲಿಲ್ಲ. ಎಷ್ಟೋ ಕಾಲದ ನಂತರ ಹೆಣ್ಣಿಗೆ ಪ್ರತ್ಯೇಕ ರೂಪ ನೀಡಬೇಕೆಂಬ ಆಲೋಚನೆ ಬ್ರಹ್ಮನಿಗೆ ಬಂತು. ಆಗ ಸೃಷ್ಟಿಸಿದ ಪ್ರಥಮ ‌ಮಹಿಳೆಯೇ ಈ ಅಹಲ್ಯೆ. ಈ ಅಹಲ್ಯೆ ಅತ್ಯಂತ ರೂಪವತಿಯಾಗಿದ್ದಳು. ದೇವೇಂದ್ರ ಈಕೆಯನ್ನು ಮೋಹಿಸಿದ. ಈ ಕಥೆ ಎಲ್ಲರಿಗೂ ಗೊತ್ತಿರುವುದೇ.
ಮಹಾಭಾರತ ಕಥೆಯಲ್ಲಿ ಬರುವ ಕೃಪಾಚಾರ್ಯ ಗೌತಮ ಗೋತ್ರದಲ್ಲಿ ಜನಿಸಿದವನು. ಕೃಪಾಚಾರ್ಯನ ಸೋದರಿ ಕೃಪೆ ದ್ರೋಣಾಚಾರ್ಯರ ಹೆಂಡತಿ.
೬. ಜಮದಗ್ನಿ :
‌ ಒಬ್ಬ ಋಷಿ. ಭೃಗು ವಂಶದಲ್ಲಿ ಜನಿಸಿದ ಋಚೀಕ ಮುನಿಗೆ ಗಾಧಿ ರಾಜನ ಮಗಳಾದ ಸತ್ಯವತಿಯ ಗರ್ಭದಲ್ಲಿ ಜನಿಸಿದ. ಹೀಗಾಗಿ ಜಮದಗ್ನಿ ವಿಶ್ವಾಮಿತ್ರ ಋಷಿಗೆ ಸೋದರಳಿಯ ಆಗಬೇಕು. ಜಮದಗ್ನಿಯ ಮಡದಿ ರೇಣುಕೆ. ಇವರಿಬ್ಬರ ಮಗನೇ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಪರಶುರಾಮ. ಜಮದಗ್ನಿ ಆಗಿನ ಅರಸ ಕಾರ್ತವೀರ್ಯಾಜುನನ ಮಗ ಶೂರಸೇನನಿಂದ ಕೊಲೆಯಾದ.
೭. ವಸಿಷ್ಠ :
‌ಒಬ್ಬ ಮಹರ್ಷಿ. ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬ. ಈತ ಕರ್ದಮ ಮುನಿಯ ಮಗಳಾದ ಊರ್ಜಾದೇವಿಯನ್ನು ವಿವಾಹವಾಗಿ ಏಳು ಮಂದಿ ಪುತ್ರರನ್ನು ಪಡೆದ. ವಸಿಷ್ಠನಿಗೆ ಅರುಂಧತಿ ಎಂಬ ಇನ್ನೊಬ್ಬ ಮಡದಿಯೂ ಇದ್ದಳು.
ಇವರಿಬ್ಬರ ಮಗ ಶಕ್ತಿ ಮಹರ್ಷಿ. ಶಕ್ತಿ ಮಹರ್ಷಿಯ ಮಗನಾದ ಪರಾಶರನೇ ವೇದವ್ಯಾಸರ‌ ತಂದೆ. ವೇದವ್ಯಾಸರು ಮುಂದೆ ಬರುವ ಸಾವರ್ಣಿ ಮನ್ವಂತರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬನಾಗುವರು.
ವಸಿಷ್ಠ ಇಕ್ಷ್ವಾಕು ವಂಶದ ಅರಸರಿಗೆ ಕುಲ ಪುರೋಹಿತನಾಗಿದ್ದ.
-------------------------------------------------
೮. ಮರೀಚಿ :
ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮ ಮಾನಸ ಪುತ್ರರಲ್ಲಿ ಈತನೂ ಒಬ್ಬ.
ಮರೀಚಿಯ ಮಗ ಕಶ್ಯಪ.
೯. ಅಂಗೀರಸ :
‌‌ ಅಂಗೀರಸ(ಅಂಙ್ಗೀರಸ) ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬನೆಂದು ಮಹಾಭಾರತದಲ್ಲಿ ಒಂದು ಕಡೆ ಹೇಳಿದೆ. ಇದೇ ಮಹಾಭಾರತದಲ್ಲಿ ಇನ್ನೊಂದೆಡೆ ವೈವಸ್ವತ ಮನ್ವಂತರದಲ್ಲಿ ವರುಣ ನಡೆಸುತ್ತಿದ್ದ ಯಾಗದಲ್ಲಿ ಅಗ್ನಿಕುಂಡದಲ್ಲಿ ಜನಿಸಿದನೆಂದು ಹೇಳಿದೆ. ಈತನ ಒಬ್ಬ ಮಡದಿ ವಸುಧೆಯಲ್ಲಿ ಏಳು ಗಂಡು, ಏಳು ಹೆಣ್ಣು ಮಕ್ಕಳು ಜನಿಸಿದರು. ಇನ್ನೊಬ್ಬ ಹೆಂಡತಿ ಕರ್ದಮನ ಮಗಳಾದ ಶ್ರದ್ಧಾ ಎಂಬುವವಳಲ್ಲಿ ಬೃಹಸ್ಪತಿ, ಉಚಥ್ಯ ಮತ್ತು ಸಂವರ್ತ(ವಯಸ್ಯ) ಮೂವರು ಮಕ್ಕಳು ಆದರು. ಸ್ವಧಾ ಎನ್ನುವ ಮೂರನೆಯ ಮಡದಿಯಲ್ಲಿ ಪಿತೃ ದೇವತೆಗಳು ಜನಿಸಿದರು. ನಾಲ್ಕನೇ ಹೆಂಡತಿ ಸತಿ ಅಥರ್ವಾಂಗಿರಸರಿಗೆ ಜನ್ಮ ನೀಡಿದಳು.
೧೦. ಪುಲಸ್ತ್ಯ :
ಪುಲಸ್ತ್ಯ ಕೃತಯುಗದ ಅಂತಿಮ ‌ಭಾಗದಲ್ಲಿ ಚತುರ್ಮುಖ ಬ್ರಹ್ಮನಿಗೆ ಜನಿಸಿದ ಮಾನಸ ಪುತ್ರ. ತೃಣಬಿಂದು ಮುನಿಯ ಮಗಳು ಗೋ ಎಂಬಾಕೆ ಪುಲಸ್ತ್ಯನ ಮಡದಿ. ಈ ದಂಪತಿಗಳಿಗೆ ಜನಿಸಿದವ ವಿಶ್ರವಸ್ ಋಷಿ. ಪುಲಸ್ತ್ಯ ಋಷಿಯನ್ನು ಪುಲಸ್ತ್ಯ ಬ್ರಹ್ಮ ಎಂದೂ ಕರೆಯುತ್ತಾರೆ.
ವಿಶ್ರವಸ್ ಮುನಿಯ ಮಕ್ಕಳು ಕುಬೇರ, ರಾವಣ, ಕುಂಭಕರ್ಣ, ವಿಭೀಷಣ. ಹೀಗಾಗಿ ಪುಲಸ್ತ್ಯ ಬ್ರಹ್ಮ ರಾವಣಾದಿಗಳಿಗೆ ಅಜ್ಜನಾಗಬೇಕು.
೧೧. ಪುಲಹ :
ಪುಲಹ ಚತುರ್ಮುಖ ಬ್ರಹ್ಮನ ನಾಭಿಯಿಂದ ಜನಿಸಿದ ಒಬ್ಬ ಬ್ರಹ್ಮರ್ಷಿ.
ಕರ್ದಮ‌ ಬ್ರಹ್ಮನ ಮಗಳು ‌ಗತಿ ಪುಲಹನ ಹೆಂಡತಿ. ಈ ದಂಪತಿಗಳಿಗೆ ಕರ್ಮಶ್ರೇಷ್ಠ, ವರೀಯಸ್ ಮತ್ತು ಸಹಿಷ್ಣು ಎನ್ನುವ ಮೂರು ಗಂಡುಮಕ್ಕಳು.
೧೨. ಕ್ರತು :
ಕ್ರತು ಸ್ವಾಯಂಭುವ ಮನ್ವಂತರದಲ್ಲಿ ಜನಿಸಿದ ಬ್ರಹ್ಮ ಮಾನಸ ಪುತ್ರ. ಈತ ಬ್ರಹ್ಮನ ಅಂಗೈಯಲ್ಲಿ ಜನಿಸಿದವ. ಕ್ರತುವಿಗೆ ಕ್ರಿಯಾ ಮತ್ತು ಸನ್ನತಿ ಎಂಬ ಇಬ್ಬರು ಹೆಂಡತಿಯರು.
ವಾಲಖಿಲ್ಯರು ಎನ್ನುವ ತಾಪಸಿಗಳು ಕ್ರತುವಿನ ಸಂತಾನ.
೧೩. ಭೃಗು :
ಭೃಗು ಒಬ್ಬ ಬ್ರಹ್ಮರ್ಷಿ. ‌ಸ್ವಾಯಂಭುವ ಮನ್ವಂತರದಲ್ಲಿ ಚತುರ್ಮುಖ ಬ್ರಹ್ಮನಿಗೆ ಹೃದಯದಲ್ಲಿ ಜನಿಸಿದ.‌ಭೃಗು ಮಹರ್ಷಿಯ ಮಡದಿಯ ಹೆಸರು ಖ್ಯಾತಿ. ಈ ದಂಪತಿಗಳಿಗೆ ಲಕ್ಷ್ಮೀ ಎಂಬ ಹೆಣ್ಣು ಮಗಳೂ, ಕವಿ ಮತ್ತು ಚ್ಯವನ ಗಂಡು ಮಕ್ಕಳೂ ಜನಿಸಿದರು.
‌ಈ ಲಕ್ಷ್ಮೀಯೇ ಶ್ರೀಮನ್ನಾರಾಯಣನ ಹೆಂಡತಿ.
ಲಕ್ಷ್ಮೀ ಭೃಗು ಮಹರ್ಷಿಯ ಮಗಳಾದುದರಿಂದ ಆಕೆಗೆ ಭಾರ್ಗವಿ ಎನ್ನುವ ಹೆಸರೂ ಇದೆ. ಮಗ ಚ್ಯವನ ಪ್ರಸಿದ್ಧ ಋಷಿ.
ರಾಕ್ಷಸರ ಕುಲಗುರು ಶುಕ್ರಾಚಾರ್ಯರು ಭೃಗು ಮಹರ್ಷಿಯ ಮಗ.
೧೪. ಕುತ್ಸ(ಕೃತ್ಸ,) :
ಈ ಋಷಿಯ ಬಗ್ಗೆ ನನಗೆ ಯಾವುದೇ ಮಾಹಿತಿ ದೊರಕಿಲ್ಲ. ತಿಳಿದವರು ದಯವಿಟ್ಟು ವಿವರಿಸಬೇಕೆಂದು ವಿನಂತಿಸುತ್ತೇನೆ.
ಟಿಪ್ಪಣಿ : ಮೇಲಿನ ವಿವರಗಳಿಗೆ ನಾನು ಆಧರಿಸಿರುವುದು ಮಹಾಭಾರತದ ಆದಿಪರ್ವ ಮತ್ತು ರಾಮಾಯಣ. ಪ್ರಸಂಗವತ್ತಾಗಿ ಪುರಾಣಗಳಲ್ಲಿಯೂ ಈ ಮಾಹಿತಿ ಬಂದಿರಬಹುದು. ಆದರೆ ಪುರಾಣಗಳ ಮೇಲೆ ಭರವಸೆ ಇಡಲಾಗದು.

Post a Comment

0Comments

Post a Comment (0)