ಮಾಡುವ ದಿನ:- ಹುಣ್ಣಿಮೆ, ಅಥವಾ ಅನುಕೂಲವಾದ ದಿನ ಆಗುತ್ತದೆ ಹಿಂದಿನ ದಿನವೇ ಹೂವು, ಹಣ್ಣು, ವೀಳ್ಯದೆಲೆ ಅಡಿಕೆ, ಗೆಜ್ಜೆ ವಸ್ತ್ರ, ಕರ್ಪೂರ,
ಅರಿಶಿನ -ಕುಂಕುಮ, ಅಕ್ಷತೆ, ಗಂಧ, ಘಂಟೆ, ಧೂಪ, ದೀಪ, ತುಪ್ಪದಲ್ಲಿ ನೆನೆಸಿದ ಎರಡೆರಡು ಹೂಬತ್ತಿಗಳನ್ನು ಎರಡು ಸೊಡ್ಲಿಗೆ ಹಾಕಿದ ಆರತಿ ತಟ್ಟೆ:
ಕುಳಿತುಕೊಳ್ಳಲು ಮಣೆ, ಕೈ ಒರೆಸುವ ವಸ್ತ್ರ, (ಟಿಶ್ಯೂ ಪೇಪರ್) ಉದ್ಧರಣೆ ಥಾಲಿ , ಚಿಕ್ಕ ಪೀಠ ಅಥವಾ ಮಣೆ, ಸತ್ಯನಾರಾಯಣ ಫೋಟೋ, ಅಥವಾ ಪ್ರಿಂಟ್ ಔಟ್ ತೆಗೆದು ರೊಟ್ಟಿಗಂಟಿಸಿ ಪ್ಲಾಸ್ಟಿಕ್ ಕವರಲ್ಲಿ ಹಾಕಿ ಇಟ್ಟುಕೊಂಡರಾಯಿತು.
ಪೂಜೆ ಮಾಡುವ ಜಾಗ ಸ್ವಚ್ಛಗೊಳಿಸಿ, ಗಣಪತಿ ಮಂಡಲ ಬರೆದು ಅದರ ಮೇಲೆ ಚಿಕ್ಕಮಣೆ ಅಥವಾ ಪೀಠ ಇಟ್ಟು, ಪೀಠದ ಮೇಲೆ ರಂಗೋಲಿ ಬರೆದು, ಸತ್ಯನಾರಾಯಣ ಫೋಟೋ ಇಡಬೇಕು, ಒಂದು ಹಿತ್ತಾಳೆ ,ಕಂಚು, (ತಾಮ್ರ ಬೇಡ) ಅಥವಾ ಬೆಳ್ಳಿ, ಲೋಟದ (ಕಳಶಕ್ಕೆ) ಕಂಠದ ಕೆಳಭಾಗಕ್ಕೆ ಸುಣ್ಣದಿಂದ ಸುತ್ತಲು ಎಳೆ ಎಳೆದು ಅರಿಶಿನ ಕುಂಕುಮ ಹಚ್ಚಿ, ಅದರಲ್ಲಿ ಅಕ್ಕಿ ತುಂಬಿ, ಅದರ ಮೇಲೆ ಲಕ್ಷ್ಮೀನಾರಾಯಣ, ಕೃಷ್ಣ ಅಥವಾ ಲಕ್ಷ್ಮಿ ವಿಗ್ರಹ ಇಡಬೇಕು. (ತೆಂಗಿನಕಾಯಿ ಕಲಶ ಇಟ್ಟು ಮಾಡುವುದಾದರೆ ಪುರೋಹಿತರ ಹತ್ತಿರ ಮಾಡಿಸಿದರೆ ಒಳ್ಳೆಯದು)
ಪಂಚಾಮೃತ:- ರಾತ್ರಿಯೇ, ಚಿಕ್ಕ ಲೋಟದಲ್ಲಿ ಹಸಿ ಹಾಲು, ಬಾಳೆ ಹಣ್ಣಿನ ಚೂರು ಅಥವಾ ಶುದ್ಧವಾದ ಸ್ವಲ್ಪ ಮೊಸರು ಹಾಕಿ ಇಡಬೇಕು. ಬೆಳಿಗ್ಗೆ ಅದಕ್ಕೆ ಬಾಳೆ ಹಣ್ಣಿನ ತುಂಡು, ಸಕ್ಕರೆ, ತುಪ್ಪ, ಜೇನುತುಪ್ಪ ಹಾಕಬೇಕು. (ಪಂಚಾಮೃತ ಮಾಡದಿದ್ದರೆ ಹೂವಿನಿಂದ ನೀರನ್ನೇ ಪ್ರೋಕ್ಷಣೆ ಮಾಡುತ್ತಾ ಹೇಳಬಹುದು.)
ಪ್ರಸಾದ:- ತುಪ್ಪದಲ್ಲಿ ರವೆ ಹುರಿದಿಟ್ಟುಕೊಂಡರೆ, ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮುಗಿಸಿ, ಹಾಲು, ನೀರು ಕುದಿಯುವಾಗ ರವೆ ಹಾಕಿ ಬೇಯುವಾಗ ತುಪ್ಪ ಸಕ್ಕರೆ, ಏಲಕ್ಕಿ ಹಾಕಿದರೆ ಪ್ರಸಾದವಾಯಿತು. ರುಚಿಗೆ ಬೇಕಿದ್ದರೆ ತುಪ್ಪದಲ್ಲಿ ಕರಿದ ಗೋಡಂಬಿ- ದ್ರಾಕ್ಷಿ ಹಾಕಬೇಕು.
ಪ್ರಸಾದದ ಅಳತೆ:- ಒಂದು ಅಳತೆ ಕಪ್ಪಿನಲ್ಲಿ
ರವೆ -ತುಪ್ಪ -ಸಕ್ಕರೆ -ಹಾಲು -ಬಾಳೆಹಣ್ಣು ಸಮ ಪ್ರಮಾಣದಲ್ಲಿ ಇರಬೇಕು
ಅವರವರ ಅನುಕೂಲಕ್ಕೆ ತಕ್ಕಂತೆ :- ಎಲ್ಲರೂ ಏಳುವ ಮೊದಲೇ ಎದ್ದು, ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚಿ. ನಿತ್ಯ ದೇವರ ಪೂಜೆ ಮಾಡಿ ಸತ್ಯನಾರಾಯಣ ಪೂಜೆಗೆ ಸಂಕಲ್ಪ ಮಾಡಿಕೊಳ್ಳಬೇಕು.
ಸಂಕಲ್ಪ ಸಹಿತ ಪೂಜೆ ಮಾಡುವ ಕ್ರಮ :-
ಶ್ರೀ ಸತ್ಯನಾರಾಯಣ ವ್ರತಕಲ್ಪ:
ಅಪವಿತ್ರ: ಪವಿತ್ರೋ ವಾ ಸರ್ವಾ ವಸ್ಥಾಂ ಗತೋಪಿ ವಾ! ಯ: ಪುಂಡರೀಕಾಕ್ಷಂ ಸ
ಬಾಹ್ಯಾಭ್ಯಂತರಶ್ಯುಚಿ:!!
!! ಶ್ರೀ ಗುರುಭ್ಯೋನಮಃ !!( ಹೇಳಿಕೊಂಡು ಎರಡು ಅಕ್ಷತೆ ಕಾಳು ಹಾಕಿ ದೇವರಿಗೆ ಕೈ ಮುಗಿಯಿರಿ
ಶ್ರೀ ಗುರುಭ್ಯೋ ನಮಃ ಮಾತೃಭ್ಯೋ ನಮಃ ! ಪಿತೃಭ್ಯೋ ನಮಃ ! ಆಚಾರ್ಯೇಭ್ಯೋನಮಃ !! ಇಷ್ಟು ಹೇಳಿ ಕೈ ಮುಗಿದು ಮತ್ತೆ ಅಕ್ಷತೆ ಕಾಳು ಹಿಡಿದು ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುದೇವೋ ಮಹೇಶ್ವರ: ! ಗುರು ಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ !! ಮತ್ತೆ ಅಕ್ಷತೆ ಕಾಳು ಹಾಕಿ ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ! ಚತುರ್ಭುಜಮ್! ಪ್ರಸನ್ನ ವದನಮ್ ! ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ!! ಅಕ್ಷತೆ ಕಾಳು ಹಾಕಬೇಕು . (ಗಣಪತಿ ವಿಗ್ರಹ ಇಟ್ಟುಕೊಳ್ಳಬೇಕು. ಅಥವಾ ಎರಡು ವೀಳ್ಯದೆಲೆ ಮೇಲೆ ಗೋಟಡಿಕೆ ಇಟ್ಟುಕೊಂಡರೆ ಗಣಪತಿ ಆಗುತ್ತದೆ.
'ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್! ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ !! ಇತಿ ಘಂಟಾರವಂ ಕೃತ್ವಾ !! ಎಂದು ಘಂಟಾನಾದ ಮಾಡಬೇಕು.
ಸಂಕಲ್ಪ:- ಶುಭೆ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ, ಕಲಿಯುಗೆ ಪ್ರಥಮ ಪಾದೇ ಜಂಬೂದ್ವೀಪೇ ಭಾರತವರ್ಷೇ ಭರತ ಖಂಡೇ ದಂಡಕಾರಣ್ಯೇ ಗೋದಾ ವರ್ಯಾ: ದಕ್ಷಿಣೇ ತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನ ವ್ಯಾವಹಾರಿಕೇ ಚಾಂದ್ರಮಾನೇನ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ " ಶ್ರೀಮತ್ ---- ನಾಮ ಸಂವತ್ಸರೇ, ----ಯಣ, -----ಋತು, ------ಮಾಸ, ---- ಪಕ್ಷ, -----ತಿಥಿ, ಆಯಾ ವಾರ ಇಷ್ಟು ಸಾಕು. ಶುಭ ತಿಥೌ 'ಮಮ'ಎಂದು ಹೇಳಬೇಕು. ಉಪಾತ್ತ - ಸಮಸ್ತ - ದುರಿತಕ್ಷಯದ್ವಾರಾ ಶ್ರೀ ವಿಷ್ಣು ಪ್ರಿತ್ಯರ್ಥಂ ಅಸ್ಮಾಕಂ ಸಹ ಕುಟುಂಬಾನಾಂ ಕ್ಷೇಮ- ಸ್ಥೈರ್ಯ- ವಿಜಯ- ವೀರ್ಯ- ಆಯುರಾರೋಗ್ಯ ಐಶ್ವರ್ಯ -ಅಭಿವೃದ್ಧ್ಯರ್ಥಂ, ಧರ್ಮ- ಅರ್ಥ- ಕಾಮ- ಮೋಕ್ಷ- ಚತುರ್ವಿಧಫಲ - ಪುರುಷಾರ್ಥಸಿದ್ಧ್ಯರ್ಥಂ, ಅಪ ಮೃತ್ಯು ಪೀಡಾ- ಪರಿಹಾರ ದ್ವಾರಾ, ದೀರ್ಘಾಯುಷ್ಯ ಅಭಿವೃದ್ಧ್ಯರ್ಥಂ, ಸತ್ಸಂತಾನ - ಸೌಭಾಗ್ಯ -ಫಲ ಸಿದ್ಧ್ಯರ್ಥಂ ದೇವತಾ ಮುದ್ದಿಶ್ಯ, ದೇವತಾಪ್ರಿತ್ಯರ್ಥಂ, ಮಹಾಗಣಪತಿ, ಆದಿತ್ಯಾದಿ ನವಗ್ರಹ ಸಹಿತ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀ ಸತ್ಯನಾರಾಯಣ ದೇವತಾ ಪ್ರಿತ್ಯರ್ಥಂ ಕಲ್ಪೋಕ್ತ ಪ್ರಕಾರೇಣ ( ಪುರುಷ ಸೂಕ್ತಾದಿ ಶ್ರೀ ಸೂಕ್ತಾದಿ) ಯಾವಚ್ಛಕ್ತಿ ಧ್ಯಾನಾವಾಹನಾದಿಷೋಡಶೋಪಚಾರ ಪೂಜಾ ಕರಿಷ್ಯೇ !! ( ಈ ಸಂಕಲ್ಪ ಭಕ್ತಿಯಿಂದ ಹೇಳಿ ಪೂಜೆಗೆ ಕುಳಿತರೆ ಅರ್ಧ ಪೂಜೆ ಆದಷ್ಟೇ ಆಗಿರುತ್ತದೆ. ಭಗವಂತನ ಸ್ಮರಣೆ, ಸಕಲ ಮನದಿಷ್ಟಾರ್ಥಗಳ ಬೇಡಿಕೆಗಳು, ಇದರಲ್ಲಿ ಅಡಗಿದೆ)
ಕಲಶ ಪೂಜೆ:- ನೀರು ತುಂಬಿದ ಥಾಲಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ ಹೂವನ್ನು ಇಟ್ಟು ಮೇಲೆ ಕೈ ಮುಚ್ಚಿ, 'ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ! ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' !! ಎಂದು ಹೇಳಿ ನಂತರ ಉದ್ದರಣೆಯಲ್ಲಿ ನೀರು ಹಿಡಿದು ಹೂವಿನಿಂದ ಪೂಜಾದ್ರವ್ಯಗಳ ಮೇಲೆ ಪ್ರೋಕ್ಷಣೆ ಮಾಡಿ, ನಂತರ ದೇವರಿಗೆ ಪ್ರೋಕ್ಷಣೆ ಮಾಡಿ ಆಮೇಲೆ ನಮಗೆ ಅಂದ್ರೆ ಪೂಜೆಗೆ ಕುಳಿತವರು ಪ್ರೋಕ್ಷಣೆ ಮಾಡಿಕೊಳ್ಳಬೇಕು. ಉಳಿದ ನೀರನ್ನು ಅರ್ಘ್ಯಪಾತ್ರೆಗೆ ಹಾಕಬೇಕು.
'ಶಂಖ'ಗಾಯತ್ರಿ ಮಂತ್ರ ' :-
ಶಂಖಮೂಲೇ ಬ್ರಹ್ಮಾಣಮಾವಾಹಯಾಮಿ !
ಶಂಖ ಮಧ್ಯೇ ವಿಷ್ಣು ಮಾವಾಹಯಾಮಿ !
ಶಂಖಾಗ್ರೇ ರುದ್ರ ಮಾಮಾಹಯಾಮಿ!
ತನ್ನೋ ಶಂಖ: ಪ್ರಚೋದಯಾತ್!
ಗಣಪತಿ ಪೂಜೆ:-
ಓಂ ಗಣಾನಾಂ ತ್ವಾ ಗಣಪತಿಗ್ಂ ಹವಾಮಹೇ ಕವಿಂ ಕವೀನಾಮು ಪಮಶ್ರವಸ್ತಮಮ್ ಜ್ಯೀಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನ:
ಶೃಣ್ವನ್ನೂತಿಭಿಸ್ಸೀದ ಸಾಧನಮ್ !! ( ಗಣಪತಿ ಸ್ತೋತ್ರ ಯಾವುದೇ ಬೇಕಾದರೂ ಹೇಳಿಕೊಂಡು) ಅಕ್ಷತೆ ಕಾಳು, ಅರಿಶಿಣ ಕುಂಕುಮ ಹೂ ಏರಿಸಿ, ಊದಿನ ಕಡ್ಡಿ ಹಚ್ಚಿ , ಬೆಲ್ಲ ಅಥವಾ ಖರ್ಜೂರ, ದ್ರಾಕ್ಷಿ ಏನಾದರೂ ನೈವೇದ್ಯ ಮಾಡಿ ಕರ್ಪೂರದಾರತಿ ಎತ್ತಿ ನಮಸ್ಕರಿಸಿ ಪ್ರಾರ್ಥಿಸಿ ಸತ್ಯನಾರಾಯಣ ಪೂಜೆ ಶುರು ಮಾಡಬೇಕು.
ಶ್ರೀ ಸತ್ಯನಾರಾಯಣ ಸ್ವಾಮಿ ದೇವತಾಭ್ಯೋ ನಮಃ: ಎಂದು ಒಂದು ಹೂವನ್ನು ಫೋಟೋದ ಮೇಲೆ ಇಟ್ಟು ಅಕ್ಷತೆ ಕಾಳು ಹಾಕಿ ಕೈ ಮುಗಿದು.
ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು, ಹೂವಿನಿಂದ ಪ್ರೋಕ್ಷಣೆ ಮಾಡಬೇಕು.
ನವಗ್ರಹಗಳಿಗೆ ನಮಸ್ಕಾರ:-
ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ
ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ದೀಮಹಿ,
ತನ್ನೋ ವಿಷ್ಣು: ಪ್ರಚೋದಯಾತ್ !!
ಓಂ ಮಹಾಲಕ್ಷ್ಮೈ ಚ ವಿದ್ಮಹೇ
ವಿಷ್ಣು ಪತ್ನ್ಯೈ ಚ ಧೀಮಹಿ
ತನ್ನೋ ಲಕ್ಷ್ಮಿ ಲಕ್ಷ್ಮೀ: ಪ್ರಚೋದಯಾತ್!!
ಶ್ರೀ ಸತ್ಯನಾರಾಯಣ ಸ್ವಾಮಿ ದೇವತಾಭ್ಯೋ ನಮಃ
ಓಂ ಸತ್ಯನಾರಾಯಣ ಸ್ವಾಮಿ ಆವಾಹಯಾಮಿ! ( ಹೇಳಿ ಅಕ್ಷತೆ ಹಾಕಬೇಕು)
ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ!
ಆವಹ ಯಾಮಿ ಆಸನಂ ಸಮರ್ಪಯಾಮಿ!
ಪಾದಯೋ: ಪಾದ್ಯಂ ಪಾದ್ಯಂ ಸಮರ್ಪಯಾಮಿ!
ಹಸ್ತ ಯೋ: ಅರ್ಘ್ಯ ಮರ್ಘ್ಯಂ ಸಮರ್ಪಯಾಮಿ!
ಮುಖೇ ಆಚಮನೀಯಂ ಸಮರ್ಪಯಾಮಿ!
ಶುದ್ಧೋದಕ ಸ್ನಾನಂ ಸಮರ್ಪಯಾಮಿ!
ಪಂಚಾಮೃತ ಸ್ನಾನ:- ಉದ್ದರಣೆಯಲ್ಲಿ ಪಂಚಾಮೃತ ತೆಗೆದುಕೊಂಡು ಶ್ರೀ ಸತ್ಯನಾರಾಯಣ ಸ್ವಾಮಿನೇ ನಮಃ, ಪಂಚಾಮೃತವನ್ನು ಹೂವಿನಲ್ಲಿ ಅದ್ದಿ
ಪ್ರೋಕ್ಷಣೆ ಮಾಡಬೇಕು. ಇದೇ ರೀತಿ, ಕ್ಷೀರ (ಹಾಲು) ಸ್ನಾನಂ ಸಮರ್ಪ ಯಾಮಿ, ಕ್ಷೀರ ಸ್ನಾನ ನಂತರ ಶುದ್ಧೋದಕ ಸ್ನಾನಂ ಸಮರ್ಪಯಾಮಿ, ಸತ್ಯನಾರಾಯಣ ಸ್ವಾಮಿನೇ ನಮಃ ದಧಿ ಸ್ನಾನಂ ಸಮರ್ಪಯಾಮಿ. ದಧಿ: (ಮೊಸರು) ಸ್ನಾನಾನಂತರ ನೀರಿನಿಂದ ಶುದ್ಧೋದಕಸ್ನಾನಂ ಸಮರ್ಪಯಾಮಿ
ಇದೇ ತರ:- ಆಜ್ಯೇನ ಸ್ನಾನಮ್( ತುಪ್ಪ) ಮಧು ಸ್ನಾನ ( ಜೇನುತುಪ್ಪ) ಶರ್ಕರ ಸ್ನಾನ ( ಸಕ್ಕರೆ) ಫಲ ಸ್ನಾನಮ್ ( ಹಣ್ಣು) ನಾರಿಕೇಲಾ, ಪಂಚಾಮೃತ ಸ್ನಾನ ನಂತರ ಶುದ್ಧೋದಕ ಸ್ನಾನಮ್ ಸಮರ್ಪಯಾಮಿ. ಸ್ನಾನ ನಂತರ ಗೆಜ್ಜೆ ವಸ್ತ್ರ ಏರಿಸಬೇಕು( ಸಮರ್ಪಯಾಮಿ) ಕ್ರಮವಾಗಿ ಯಜ್ಞೋಪವೀತ, ಗಂಧ, ಅರಿಶಿನ, ಕುಂಕುಮ, ಹೂವು, ಹೂವಿನ ಮಾಲೆ, ಅಕ್ಷತೆ, ಎಲ್ಲಾ ಏರಿಸಬೇಕು.
ಅಂಗ ಪೂಜಾ ಸಮರ್ಪಯಾಮಿ: ಅಕ್ಷತೆ ಕಾಳು ಹಾಕಿ ಕೈ ಮುಗಿಯಬೇಕು,
ಇದೇ ರೀತಿ ಒಂದೆರಡು ಹೂವು ಏರಿಸಿ ಪುಷ್ಪ ಪೂಜಾಂ, ಸಮರ್ಪಯಾಮಿ, ಪತ್ರ ಪೂಜಾಂ ಸಮರ್ಪಯಾಮಿ ಎಂದು ಒಂದು ಪತ್ರೆ ಏರಿಸಿ. ನಂತರ ನಾಮ ಪೂಜೆ ಮಾಡಬೇಕು,
ಸತ್ಯನಾರಾಯಣ ನಾಮಪೂಜೆ:-
1.ಓಂ ಕೇಶವಾಯ ನಮಃ, 2. ಓಂ ನಾರಾಯಣಾಯ ನಮಃ,
ಓಂ ಮಾಧವಾಯ ನಮಃ, , ಓಂ ಗೋವಿಂದಾಯ ನಮಃ,
ಓಂ ವಿಷ್ಣುವೇ ನಮಃ, ಓಂ ಮಧುಸೂಧನಾಯ ನಮಃ
ಓಂ ತ್ರಿವಿಕ್ರಮಾಯ ನಮಃ ಓಂ ವಾಮನಾಯ ನಮಃ
ಓಂ ಶ್ರೀಧರಾಯ ನಮಃ, ಓಂ ಹೃಷಿಕೇಶಾಯ ನಮಃ,
ಓಂ ಪದ್ಮನಾಭಾಯ ನಮಃ, ಓಂ ದಾಮೋದರಾಯ ನಮಃ ,
ಓಂ ಸಂಕರ್ಷಣಾಯ ನಮಃ, ಓಂ ವಾಸುದೇವಾಯ ನಮಃ ,
ಓಂ ಪ್ರದ್ಯುಮ್ನಾಯ ನಮಃ, ಓಂ ಅನಿರುದ್ಧಾಯ ನಮಃ,
ಓಂ ಪುರುಷೋತ್ತಮಾಯ ನಮಃ, ಓಂ ಅಧೋಕ್ಷಜಾಯ ನಮಃ,
ಓಂ ನಾರಸಿಂಹಾಯ ನಮಃ, ಓಂ ಅಚ್ಚುತಾಯ ನಮಃ,
ಓಂ ಜನಾರ್ಧನಾಯ ನಮಃ, ಓಂ ಉಪೇಂದ್ರಾಯ ನಮಃ,
ಓಂ ಹರಯೇ ನಮಃ, ಓಂ ಶ್ರೀ ಕೃಷ್ಣಾಯ ನಮಃ,
ಓಂ ಸತ್ಯನಾರಾಯಣ ಸ್ವಾಮಿನೇ ನಮಃ ನಾಮ ಪೂಜಾಂ ಸಮರ್ಪಯಾಮಿ.!
ಲಕ್ಷ್ಮಿ ಪೂಜೆ :-
ಓಂ ಮಹಾಲಕ್ಷ್ಮೈ ನಮಃ, ಓಂ ಕಮಲಾಯ ನಮಃ,
ಓಂ ಪದ್ಮಾಸನಯೈ ನಮಃ, ಓಂ ಸೋಮಾಯೈ ನಮಃ,
ಓಂ ಚಂಡಿಕಾಯೈ ನಮಃ, ಓಂ ಅನಘಾಯೈ ನಮಃ,
ಓಂ ರಮಾಯೈ ನಮಃ, ಓಂ ಪಿತಾಮರಧಾರಿಣ್ಯೈ ನಮಃ
ಓಂ ದಿವ್ಯಗಂಧಾನು ಲೇಪನಾಯೈ ನಮಃ ಓಂ ಹರಿಪ್ರಿಯಾಯೈ ನಮಃ ಓಂ ಇಂದಿರಾಯೈ ನಮಃ, ಓಂ ಲೋಕಮಾತ್ರೇ ನಮಃ, ಓಂ ಮಂಗಲದೇವತಾಯೈ ನಮಃ, ಓಂ ಭಾರ್ಗವ್ಯೈ ನಮಃ,
ಓಂ ಕ್ಷೀರಸಾಗರಕನ್ಯಕಾಯೈ ನಮಃ, ಓಂ ಶುಭದಾಯೈ ನಮಃ,
ಓಂ ನಾರಾಯಣ್ಯೈ ನಮಃ, ಓಂ ದೈತ್ಯದರ್ಪಪರಿಹಾರಿಣ್ಯೈ ನಮಃ,
ಓಂ ಸುರಾಸುರಪೂಜಿತಾಯೈ ನಮಃ, ಓಂ ಲಕ್ಷ್ಮೀಪೂಜಾಂ ಸಮರ್ಪಯಾಮಿ.
ಸತ್ಯನಾರಾಯಣ ಸ್ವಾಮಿ ಅಷ್ಟೋತ್ತರವನ್ನು ಹೇಳಬೇಕು.
ಧೂಪ:- ಊದಿನ ಕಡ್ಡಿ ಹಚ್ಚಬೇಕು. (ಇದಕ್ಕೆಲ್ಲ ಮಂತ್ರ ಇದೆ)
ಧೂಪಂ ದರ್ಶಯಾಮಿ ಅಂದರೆ ಸಾಕು.
ನೈವೇದ್ಯ:- ನಾರಿಕೇಲ, ಕದಲಿ ಫಲ, ಖರ್ಜೂರ, ದ್ರಾಕ್ಷಾದಿ, ಯಥಾವಿಹಿತ ನೈವೇದ್ಯಂ ನಿವೇದಯಾಮಿ! ಸಪಾದ ಭಕ್ಷಂ ನಿವೇದಯಾಮಿ! ಮಧ್ಯಮಧ್ಯ ಪಾನಿಯಂ ಸಮರ್ಪಯಾಮಿ ಪುನರಾಚಮನಿಯಂ ಸಮರ್ಪಯಾಮಿ
ಪೂಗೀಫಲ ತಾಂಬೂಲಮ್ ಸಮರ್ಪಯಾಮಿ,
ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ.
ಮಂಗಳಾರತಿ:- ಕಾಪಾಡು ಶ್ರೀ ಸತ್ಯನಾರಾಯಣ ಪನ್ನಗಶಯನ ಪಾವನ ಚರಣ ನಂಬಿಹೇ ನಿನ್ನ ಕಾಪಾಡು ಶ್ರೀ ಸತ್ಯನಾರಾಯಣ!!
ಪ್ರದಕ್ಷಿಣೆ ನಮಸ್ಕಾರ:
ಅರ್ಪಣೆ:- ಆನೇನ ಶ್ರೀ ಸತ್ಯನಾರಾಯಣ ಪೂಜಾ ವಿಧಾನೇನ ಭಗವಾನ್
ಸರ್ವನಾತ್ಮಕ: ಸರ್ವ ಶ್ರೀ ವಾಸುದೇವಾರ್ಪಣಮಸ್ತು!
ಲೋಪ ದೋಷ ಪ್ರಾಯಶ್ಚಿತ್ತ ಮಂತ್ರ :-
ಪೂಜಾ ಕಾಲೇ ಮಧ್ಯೇ, ಮಂತ್ರ ತಂತ್ರ ಸ್ವರ ವರ್ಣ ಧ್ಯಾನ ನ್ಯೂನತಿರಿಕ್ತ
ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ!!
ಅಚ್ಚುತಾಯ ನಮಃ !ಅನಂತಾಯ ನಮಃ !ಗೋವಿಂದಾಯ ನಮಃ,
ಅಚ್ಚುತಾಯ ನಮಃ !ಅನಂತಾಯ ನಮಃ !ಗೋವಿಂದಾಯ ನಮಃ,
ಅಚ್ಯುತಾಯ ನಮಃ !ಅನಂತಾಯ ನಮಃ! ಗೋವಿಂದಾಯ ನಮಃ
ಅಚ್ಯತಾ- ಅನಂತ- ಗೋವಿಂದೇಭ್ಯೋ ನಮಃ!
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮ ನಾ ನಾ ಪ್ರಕೃತೇ: ಸ್ವಭಾವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣ ಯೇತಿ ಸಮರ್ಪಯಾಮಿ.
ಓಂ ತಸ್ಸತ್ ಶ್ರೀ ಕೃಷ್ಣಾರ್ಪಣಮಸ್ತು .
ಇಲ್ಲಿಗೆ ಪೂಜೆ ಸಂಪನ್ನವಾಯಿತು. ಕಥೆಯ ರೂಪದ ಹಾಡು.
ಶ್ರೀ ಸತ್ಯಗೀತ:- ( ಶ್ರೀ ಸತ್ಯನಾರಾಯಣ ವ್ರತ ಕಥಾ ಸಾರ)
ಜಯ ಸತ್ಯನಾರಾಯಣ ಜಯ ಸತ್ಯಭಾಮೇಶ
ಜಯ ಸತ್ಯ ಗಣಪತಿಯೇ ಜಯತು ಜಯತು!!
1. ನೈಮಿಷಾರಣ್ಯದಲ್ಲಿ ಶೌನಕಾದಿಗಳೊಮ್ಮೆ
ಪ್ರೇಮದಿಂದ ಸೂತರನು ಕೇಳಲಾಗ
ಭೂಮಿಯಲ್ಲಿ ಬಳಲುತಿಹ ಕಲಿಯುಗದ ಜನಗಳಿಗೆ
ಕಾಮಿತವೀವ ಒಂದು ವ್ರತವ ಕೇಳಿದರು.!!
2 . ವ್ರತವಿಹುದು ಸತ್ಯನಾರಾಯಣ ವ್ರತವು
ಸತತ ಕಷ್ಟವನ್ನೆಲ್ಲ ಪರಿಹರಿಸುವುದು
ಕಂತುಪಿತ ನಾರದಗೆ ಪೇಳಿದನು ಮೊದಲಿದನು
ಚಿಂತಿಸಿದ ಫಲಗಳನ್ನು ಕೊಡುವುದಿದುವೇ. ! ಜಯ ಸತ್ಯನಾರಾಯಣ!
3. ಭಕ್ತಿಯಿಂದರ್ಚಿಸುತೆ ಸತ್ಯನಾರಾಯಣನ
ಉಕ್ತ ವಿಧಿಯಂ ಬಿಡದೆ ವರುಷ ನಾಲ್ಕರೊಳು
ಶಕ್ತಿಯಿಂದಾಚರಿಸೆ ನಿಯಮದುದ್ಯಾಪನೆಯ
ಮುಕ್ತಿಯನು ಸುಲಭದಲ್ಲಿ ಪಡೆಯಬಹುದು !!
4. ವಿಪ್ರನೋರ್ವನು ಭಿಕ್ಷೆಯಿಂ- ಜೀವಿಸುತಿರಲು
ವಿಪ್ರವೇಶದಿ ಬಂದು ಕಾರುಣ್ಯ ಸಿಂಧು
ಅಪ್ರಮೇಯನು ಪೇಳಲೀ ವ್ರತವನಾಚರಿಸೆ
ಕ್ಷಿಪ್ರದಲಿ ಸಂಪದವ ಪಡೆದನಾಗ -----! ಜಯ ಸತ್ಯನಾರಾಯಣ!
5. ವಿಪ್ರನೀಪರಿಯಲ್ಲಿ ವ್ರತವನಾಚರಿಸುತಿರೆ
ಕಾಷ್ಟ ವಿಕ್ರಯಿ ಯೋರ್ವ ನೀರಡಿಸಿ ಬಂದು
ಹೊತ್ತ ಸೌದೆಯ ಹೊರೆಯ ನಿಳುಹಿ ಪೂಜೆಯ ಕಂಡು
ವಿಧಿಯನೆಲ್ಲವ ಕೇಳ್ದ ತಾ ಮಾಡಬೇಕೆಂದು !!
6. ಸಂಕಲ್ಪವಂ ಮಾಡಿ ಕಟ್ಟಿಗೆಯ ಮಾರುತಲಿ
ದ್ವಿಗುಣ ಧನವನು ಪಡೆದ ಭಕ್ತಿಯಿಂದ
ಸತ್ಯನಾರಾಯಣನ ಪೂಜಿಸುತಲಿಹಪರದ
ಸಕಲ ಸೌಖ್ಯಂಗಳನು ಪಡೆದ ನಾಗ --- ! ಜಯ ಸತ್ಯನಾರಾಯಣ!
7. ರಾಜನುಲ್ಕಾ ಮುಖನು ಸಂತತಿಯ ಬಯಸುತಲಿ
ವ್ರತವ ನಾಚರಿಸುತಿಹ ವರ್ತಕನ ಕಂಡು
ಮಕ್ಕಳಾದರೆ ನಾನು ವ್ರತವ ಮಾಡುವೆನೆಂದು
ಹರಕೆಯನು ಹೊತ್ತನಾ ಶೆಟ್ಟಿ ಮನದೊಳಗೆ!!
8. ಸತಿಯ ಲೀಲಾವತಿಯು ಗರ್ಭವನು ತಳೆದಳೈ
ಸತ್ಯನಾರಾಯಣನ ಕರುಣೆಯಿಂದ
ಕನ್ನೆಯನು ಪಡೆದಳಾ ಶಿಶು ಕಲಾವತಿಯಂದು
ಶುಕ್ಲ ಶಶಿಯಂದದಲಿ ಬೆಳೆದಳಾಗ ---! ಜಯ ಸತ್ಯನಾರಾಯಣ!
9. ವರುಷ ತುಂಬಲಿ ಎಂದು ಮದುವೆ ಸಮಯದೊಳೊಂದು
ವ್ರತವ ಮುಂದೂಡತಲಿ ಮರೆತನಾಗ
ಸತ್ಯದೇವನು ತಾನು ಧನ ಮದವನಿಳಿಸಲ್ಕೆ
ಶಪಿಸಿದನು ಧಾರುಣದ ಕಷ್ಟ ಬರಲೆಂದು ---!!
10. ವಾಣಿಜ್ಯ ವೃತ್ತಿಯಿಂ ರತ್ನ ಸಾರಾಪುರಕೆ
ಅಳಿಯನೊಂದಿಗೆ ತೆರಳಿ ದುಡಿಯುತಿರಲು
ನೃಪ ಚಂದ್ರ ಕೇತುವಿನ ಧನವ ಚೋರರು ಕದ್ದು
ತಂದಿವರ ಬಳಿ ಇರಿಸಿ ಕಾಣದಾದರು------! ಜಯ ಸತ್ಯನಾರಾಯಣ!
11. ರಾಜ ದೂತರು ಬಂದು ಬಂಧಿಸಿಹರೀರ್ವರನು
ದೇವಮಾಯೆಯೊಳವರ ಮಾತನಾಲಿಸದೆ
ಸೆರೆಯೊಳಿಟ್ಟರು ಸಕಲ ಧನ ಕನಕ ವಸ್ತುಗಳ
ಬೊಕ್ಕಸಕೆ ಸುರಿದರೆಲೆ ಲೆಕ್ಕವಿಲ್ಲದಲೆ -!!
12. ಇತ್ತ ಲೀಲಾವತಿಯ ಮನೆಗೆ ಕಳ್ಳರು ಪೊಕ್ಕು
ವಿತ್ತವನ್ನಪಹರಿಸೆ ತಿರಿದು ತಿನ್ನುತಲಿ
ಬಳಲುತಿರೆ ಮಗಳೊಮ್ಮೆ ತಾಕಂಡ ಪೂಜೆಯನು
ತಾಯಿಗೆ ವಿವರಿಸಲು ವ್ರತದ ಮಹಿಮೆಯನು---! ಜಯ ಸತ್ಯನಾರಾಯಣ!
13. ತಾಯಿ ಮಗಳಿಬ್ಬರೂ ಭಕ್ತಿಯಿಂ ಪೂಜಿಸುತೆ
ತಮ್ಮ ಪತಿ ಅಪರಾಧಗಳ ಮನ್ನಿಸೆಂದು
ತಮ್ಮ ಪತಿಗಳು ಬರಲು ವ್ರತವಮಾಡುವೆನೆಂದು
ಬೇಡೆ ದಯೆ ತೋರಿದನು ಕಾರುಣ್ಯ ಸಿಂಧು!!
14. ಇತ್ತ ಸೆರೆಯೊಳಗಿಟ್ಟ ಬಂಧಿಗಳ ನೀರ್ವರನ
ಬಿಡುತವರ ಧನವ ಕೊಡು ಎಂದು ಕನಸಿನಲ್ಲಿ
ಪ್ರಭು ಪೇಳೆ ನೃಪಬೆದರಿ ಲೆಕ್ಕವಿಲ್ಲದ ರೊಕ್ಕ
ಒಂದಕ್ಕೆ ಹತ್ತಾಗಿ ಕೊಟ್ಟು ಕಳುಹಿದನು.----! ಜಯ ಸತ್ಯನಾರಾಯಣ!
15. ದಂಡಿ ವೇಷದಿ ಬಂದು ಪರೀಕ್ಷಿಸಲು ನಾವೆಯೊಳು
ಸೊಪ್ಪು ಸೆದೆ ಇಹುದೆಂಬುದೇ ಸತ್ಯವಾಯ್ತು
ಕ್ಷಮೆಯ ಬೇಡಲು ಬಳಿಕ ಕೊಟ್ಟನೆಲ್ಲವ ತಿರುಗಿ
ಊರು ಕಾಣಲು ಮನೆಗೆ ಹೇಳಿ ಕಳುಹಿಸಿದರು!!
16. ಪತಿಗಳೈ ಬಂದರೆಂಬುದ ಕೇಳಿ ಸಂಭ್ರಮದಿ
ತಾಯಿ ಹೊರಡಲು ಮಗಳು ಪೂಜೆಯ ಮುಗಿಸಿ
ದೇವಪ್ರಸಾದವನು ಮರೆಯ ತೋಡುತ ನೋಡೆ
ಪತಿಯು ನಾವೇಯ ಸಹಿತ ಕಾಣದಾದರು---!ಜಯ ಸತ್ಯನಾರಾಯಣ!
17. ಗೋಳಿಟ್ಟು ದೇವನೊಳು ಅವರು ಮೊರೆ ಹೋಗಲು
ಕೇಳಿ ಪ್ರಸಾದವನ್ನು ಭುಂಜಿಸಿ ಬರಲು
ತೇಲಿತಾ ನಾವೆಯದು ಪತಿಯೊಡನೆ ಭಕ್ತಿಯಲಿ
ಆಚರಿಸಿ ವ್ರತವನು ಸಕಲ ಸುಖ ಹೊಂದಿದರು!!
18. ರಾಜ ನಂಗ ಧ್ವಜನು ಬೇಟೆಯಾಡುತ ಬಂದು
ಗೊಲ್ಲರಾಚರಿಸುತಿಹ ವ್ರತವ ಕಂಡು
ಗರ್ವದಿಂ ತ್ಯಜಿಸುತ್ತೆ ದೇವಪ್ರಸಾದವನು
ಕಳಕೊಂಡನು ಸಕಲ ಸಿರಿಯ ಸುತರನ್ನು-----!ಜಯ ಸತ್ಯನಾರಾಯಣ!
19. ಮದವಳಿಯೇ ಗೊಲ್ಲರೆಡೆಗೈ ತಂದು ಭಕ್ತಿಯಲಿ
ವ್ರತವ ಮಾಡುತೆ ಗೋಪ ಬಾಲರೊಡನೆ
ಸುತರೊಡನೆ ಸಿರಿಯ ತಾ ಪಡೆದನು ಜಗದಿ
ಸತ್ಯದೇವನ ಮಹಿಮೆ ಪೇಳಲಸದಳವು!!
20. ಸತ್ಯನಾರಾಯಣನೇ ಸತ್ಯಭಾಮಾಧವನೇ
ಸತ್ಯ ಗಣಪತಿ ರೂಪ ಸತ್ಯನಾಥ
ಸತ್ಯ ಮಂಗಳ ನಿತ್ಯ ಸತ್ಯನಾರಾಯಣ ಎನುತ
ಸತ್ಯ ನಿಧಿ ಸತ್ಯೇಶ ಜಯ ಮಂಗಳಂ
ಸತ್ಯ ನಿಧಿ ಸತ್ಯೇಶ ಶುಭ ಮಂಗಳಂ
ಸತ್ಯ ನಿಧಿ ಸತ್ಯೇಶ ಜಯ ಮಂಗಳಂ !!
------------
ಓಂ ತಸ್ಸತ್ ಶ್ರೀ ಕೃಷ್ಣಾರ್ಪಣಮಸ್ತು.
ಕಥೆ ಓದಲು ಸಮಯವಿಲ್ಲದಿದ್ದರೆ ಈ ಹಾಡನ್ನು ಹೇಳಿ ಕೊಳ್ಳಬಹುದು.
ಸತ್ಯನಾರಾಯಣ ಪೂಜೆ ಮಾಡುತ್ತೇವೆ ಎಂದು ಆಗಾಗೆ ಹೇಳಿಕೊಳ್ಳುವ ಮನಸಾಗುತ್ತದೆ. ಆದರೆ ಎಲ್ಲವನ್ನು ಸವರಿಸಿಕೊಳ್ಳಬೇಕು. ಹೇಗೆ ಮಾಡುವುದು
ಎಂದು ಅನಿಸಿದಾಗ ನಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಈ ರೀತಿ ಸರಳವಾಗಿ ಪೂಜೆ ಮಾಡಬಹುದು. ಅನುಕೂಲವಾದಾಗ ಪುರೋಹಿತರನ್ನು ಕರೆಸಿ ಮಾಡಿಕೊಳ್ಳಬಹುದು. ಕೆಲವರು 5, 11, 21, ಅಥವಾ ಒಂದು ವರ್ಷ, ಎರಡು ವರ್ಷ ಹೀಗೆ ಮಾಡುತ್ತೇವೆ ಎಂದು ಹೇಳಿಕೊಂಡಾಗ ಈ ರೀತಿ ಮಾಡಿ.( ನಾನು ಎರಡು ವರ್ಷ ಮಾಡಿದ್ದೆ) ಉಧ್ಯಾಪನೆ ಹೊತ್ತಿಗೆ ಪುರೋಹಿತರನ್ನು ಕರೆಸಿ ಮಾಡಿಸ ಬಹುದು. ಬರೆದಿರುವುದು ಉದ್ದ ಇದೆ ಆದರೆ ಪೂಜೆ ಮಾಡಲು
ಮುಂಚೇಯೇ ತಯಾರಿ ಮಾಡಿ ಕುಳಿತರೆ ಮುಕ್ಕಾಲು ಗಂಟೆಯೊಳಗೆ ಮುಗಿಯುತ್ತದೆ.
(ನಾನು ಪೂಜೆ ಮಾಡುವ ಸರಳ ವಿಧಾನ ಮಾತ್ರ ತಿಳಿಸಿದ್ದೇನೆ. ಪೂಜೆಯ ಅಲಂಕಾರಕ್ಕೆ ಎಷ್ಟು ಬೇಕಾದರೂ ಮಾಡಿಕೊಳ್ಳಬಹುದು. ಯಾವ ರೀತಿ ಬೇಕಾದರೂ ಪ್ರಸಾದ ಮಾಡಿಕೊಳ್ಳ ಬಹುದು.ಅದು ಅವರವರ ಅನುಕೂಲಕ್ಕೆ ಬಿಟ್ಟಿದ್ದು.)
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.