ರಜನೀಕಾಂತ್

SANTOSH KULKARNI
By -
0

    


 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು. ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ. 1968ರಿಂದ 1973ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡ. ಸಿನಿಮಾ ಹುಚ್ಚು. ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತ. ಮುಂದೆ ನಡೆದದ್ದು ಇತಿಹಾಸ ಎನ್ನುತ್ತೀರ. ಉಹುಂ!

    ಸಿನಿಮಾದಲ್ಲಿ ಬದುಕು ಹುಡುಕಿಕೊಂಡು ಎಷ್ಟು ಜನ ಬಂದಿಲ್ಲ. ಎಷ್ಟು ಜನ ಇಲ್ಲವಾಗಿಲ್ಲ. ಈತನ ಜೊತೆ ಸಿನಿಮಾ ತರಬೇತಿ ಪಡೆದ ಸಹಪಾಟಿಗಳಲ್ಲಿ ಕೂಡ ಒಂದೆರಡು ಹೆಸರು ಹೇಳಬೇಕೆಂದರೆ ನೆನಪಾಗುತ್ತಿರುವುದು ಕನ್ನಡದ ಸುಂದರ ನಟ ಅಶೋಕ್ ಮತ್ತು ಹೇಮಾಚೌಧುರಿ. 1975ರಲ್ಲಿ ಶಿವಾಜಿರಾವ್ ಕೆ. ಬಾಲಚಂದರ್ ಅವರ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಒಂದು ಸಣ್ಣ ಪಾತ್ರಕ್ಕೆ ಆಯ್ಕೆಯಾದ. ಹೆಸರು ರಜನೀಕಾಂತ್ ಎಂದು ಬದಲಾಯಿತು. ನಂತರದಲ್ಲಿ ಕನ್ನಡದಲ್ಲಿ ಪುಟ್ಟಣ್ಣ ಕಣಗಾಲರ ‘ಮುನಿತಾಯಿ’ಯಲ್ಲಿ ಒಂದು ಸಣ್ಣ ಪಾತ್ರ. ಈ ಪಾತ್ರಗಳು ಖಳ ಪಾತ್ರಗಳು.

    ಈ ಮಧ್ಯೆ ಒಂದು ಘಟನೆ ಹೇಳಬೇಕು. ಅಂದಿನ ದಿನದಲ್ಲಿ ನಾವು ಬಾಡಿಗೆಗಿದ್ದ ಮನೆಯ ಮಾಲೀಕರು ಚೇತನ್ ರಾಮರಾವ್ ಎಂಬ ನಟರು. ಅವರ ಶಿಫಾರಿಸಿನಲ್ಲಿ ನಾವು ಹುಡುಗರೆಲ್ಲಾ ಪ್ರೀಮಿಯರ್ ಸ್ಟುಡಿಯೋನಲ್ಲಿ ಶೂಟಿಂಗ್ ನೋಡಲು ದಾಳಿ ಇಟ್ಟಿದ್ದೆವು. ನಾವು ಅಲ್ಲಿಗೆ ಹೋದಾಗ ನಡೆಯುತ್ತಿದ್ದ ಎರಡು ಶೂಟಿಂಗುಗಳಲ್ಲಿ ಒಂದು ‘ಹುಡುಗಾಟದ ಹುಡುಗಿ’ ಮತ್ತೊಂದು ‘ಬಾಳು ಜೇನು’. ಈ ‘ಬಾಳು ಜೇನು’ ಚಿತ್ರದ ಶೂಟಿಂಗ್ ಸಮಯದಲ್ಲಿ ಅಲ್ಲಿದ್ದವರು ರಾಮ ಗೋಪಾಲ್ ಎಂಬ ಅಂದಿನ ದಿನಗಳಲ್ಲಿದ್ದ ನಾಯಕ ನಟ, ನಾಯಕಿ ಆರತಿ ಮತ್ತು ನಮಗೆ ಅಂದು ಯಾರು ಎಂದು ಗೊತ್ತಿಲ್ಲದ ಈ ರಜನೀಕಾಂತ್ ಎಂಬ ಸಹನಟ. ನಟ ನಟಿಯರ ಆಟೋಗ್ರಾಫ್ ಪಡೆಯಬೇಕು ಎಂದು ನನ್ನ ಗೆಳೆಯ ಒಂದು ಪುಟ್ಟ ಆಟೋಗ್ರಾಫ್ ಪುಸ್ತಕ ತಂದಿದ್ದ. ಆಗ ತಾನೇ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದ ಆರತಿ ಅವರ ಬಳಿ ಆಟೋಗ್ರಾಫ್ ಪುಸ್ತಕದಲ್ಲಿ ಹಸ್ತಾಕ್ಷರ ಪಡೆದ. ಯಾವುದೇ ಮಾತಿಲ್ಲದೆ, ನಗುಮುಖ, ಉತ್ಸಾಹ ಯಾವುದನ್ನೂ ತೋರದೆ ಆರತಿ ಅವರು ಪುಸ್ತಕದಲ್ಲಿ ಗೀಚಿದರು. ಆರತಿ ಅವರ ಹಿಂದೆಯೇ ಮೆಲ್ಲಗೆ ನಾವೂ ಶೂಟಿಂಗ್ ಜಾಗಕ್ಕೆ ನುಸುಳಿದೆವು. ಆಗಲೇ ಬಂದು ಕುಳಿತಿದ್ದ ರಜನೀಕಾಂತ್.

    ನಮಗೆ ಯಾವ ಗಂಭೀರ ಮುಖ ತೋರಿದ್ದರೋ ಅದಕ್ಕಿಂತ ಬೇರೆ ಯಾವುದೇ ಭಾವ ಇಲ್ಲದೆ ಆರತಿ ಅವರು ರಜನೀಕಾಂತನನ್ನೂ ಓರೆಗಣ್ಣಿನಲ್ಲಿ ನೋಡಿ ಆತನ ಎದುರು ಕುರ್ಚಿಯಲ್ಲಿ ಕುಳಿತರು. ಅಂದು ಆರತಿಯವರಲ್ಲದೆ ನಮಗೆ ಕಂಡ ಮಂಜುಳಾ, ಶ್ರೀನಾಥ್, ದ್ವಾರಕೀಶ್, ಅಂಬರೀಶ್, ನರಸಿಂಹರಾಜು, ಅಶ್ವಥ್, ರಾಮ್ ಗೋಪಾಲ್ ಇವರೆಲ್ಲರ ಹಸ್ತಾಕ್ಷರ ಪಡೆದ ನಮ್ಮ ಗೆಳೆಯನಿಗೆ, ಲೋ ಇವರ ಬಳಿ ಹಸ್ತಾಕ್ಷರ ಪಡೆಯಲಿಲ್ಲ ಎಂದರೆ, ‘ಏ, ಬೇಡ ಬಾರೋ’ ಎಂದದ್ದು ರಜನೀಕಾಂತ್ ಹೆಸರು ನೋಡಿದಾಗಲೆಲ್ಲಾ ನೆನಪಿಗೆ ಬರುತ್ತದೆ. ನಾವು ಯಾವುದನ್ನು ವಜ್ರವೆಂದು ಭಾವಿಸುತ್ತೇವೋ ಅದು ಕೇವಲ ಒಂದು ಕಸದ ಕಲ್ಲಾಗಿರಬಹುದು, ಯಾವುದನ್ನು ಕಸಕ್ಕಿಂತ ಕಡಿಮೆಯಾಗಿ ಕಾಣುತ್ತೇವೋ ಅದು ವಜ್ರವಾಗಿರಬಹುದು. ಈ ನಿಟ್ಟಿನಲ್ಲಿ ಅಮಿತಾಬ್ ಬಚ್ಚನ್ ಮತ್ತು ರಜನೀಕಾಂತ್ ನಮ್ಮ ಕಣ್ಣ ಮುಂದೆ ಇರುವ ಅಪೂರ್ವ ಸಾಕ್ಷಿಗಳು ಎಂದರೆ ತಪ್ಪಾಗಲಾರದು.

ಮುಂದೆ ರಜನೀಕಾಂತ್ ಕೆ. ಬಾಲಚಂದರ್ ಅವರ ‘ಮೂಂಡ್ರು ಮುಡಿಚ್ಚು’ ‘ಅವರ್ಗಳ್’ ಮತ್ತು ಭಾರತೀರಾಜ ಅವರ ‘ಪದಿನಾರುವಯದಿನಿಲೆ’ ಮುಂತಾದ ಕಮಲಹಾಸನ್ ನಾಯಕನಾದ ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸಿ, ಈ ಪಾತ್ರಗಳಲ್ಲೆಲ್ಲಾ ಇದ್ದ ಅವಕಾಶಗಳಲ್ಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಪ್ರಭಾವವನ್ನು ಮೂಡಿಸಿಬಿಟ್ಟಿದ್ದ. ಈತನ ಮುಖಭಾವ, ಸಿಗರೇಟು ಸೇದುವ ಭಂಗಿ, ಸಂಭಾಷಣೆ ಹೇಳುವ ಪರಿ ಇವೆಲ್ಲಾ ಪ್ರೇಕ್ಷಕನಲ್ಲಿ ಸಾಕಷ್ಟು ಹುಚ್ಚು ಹಿಡಿಸಲು ಪ್ರಾರಂಭಿಸಿದ್ದವು.

ಹೀಗಿರುವಾಗ ಆತನಿಗಾಗಿಯೇ ಹಲವು ಪಾತ್ರಗಳು ಸೃಷ್ಟಿಯಾದವು. ‘ಮುಳ್ಳುಮ್ ಮಲರುಂ’ ಚಿತ್ರದಲ್ಲಿನ ಆತನ ಅಭಿನಯ ವಿಮರ್ಶಕರಿಂದ ಪ್ರಶಂಸೆ ಪಡೆಯಿತು. ನಿರ್ದೇಶಕ ಎಸ್.ಪಿ. ಮುತ್ತುರಾಮನ್ ಅವರು ರಜನೀಕಾಂತರಿಗೆ ಖಳ ಪಾತ್ರದಿಂದ ಮುಕ್ತಿ ನೀಡುವ ‘ಭುವನಾ ಒರು ಕೇಳ್ವಿಕ್ಕುರಿ’, ‘ಆರಲಿರುಂದು ಅರವುದುವರೈ’, ‘ಇಳಮೈ ಊಂಜಲಾಡಗಿರದು' ಅಂತಹ ವಿಶಿಷ್ಟ ಚಿತ್ರಗಳನ್ನು ನಿರ್ಮಿಸಿದರು. ಎಸ್. ಪಿ. ಮುತ್ತುರಾಮನ್ ಅವರೇ ರಜನೀಕಾಂತರ ಸುಮಾರು 25 ಚಿತ್ರಗಳನ್ನು ನಿರ್ದೇಶಿಸಿದರು.

ಈ ಮಧ್ಯೆ ರಜನೀಕಾಂತ್ ಕನ್ನಡದಲ್ಲಿ ಸಹಾ ‘ಒಂದು ಪ್ರೇಮದ ಕಥೆ’, ‘ಸಹೋದರರ ಸವಾಲ್’, ‘ಕಿಲಾಡಿ ಕಿಟ್ಟು’, ‘’ಗಲಾಟೆ ಸಂಸಾರ’ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಜನ ಹರ್ಷೋದ್ಘಾರದಿಂದ ಕುಣಿಯುವಂತೆ ಮಾಡಿದ್ದರು. ಆದರೆ, ಅವರು ತಮ್ಮನ್ನು ಕೈಹಿಡಿದು ಮುಂದೆ ತಂದ ತಮಿಳು ಚಿತ್ರೋದ್ಯಮಕ್ಕೆ ನಿಷ್ಠೆ ತೋರಿದ್ದು ಸರಿ ಎಂದು ಎಲ್ಲರೂ ಒಪ್ಪುವಂತೆ ಮುಂದುವರೆದರು. ತಮಿಳು ಚಿತ್ರರಂಗದಲ್ಲಿ ಎಂ.ಜಿ.ಆರ್ ಮತ್ತು ಶಿವಾಜಿಗಣೇಶನ್ ಅವರ ಸ್ಥಾನವನ್ನು ರಜನೀಕಾಂತ್ ಮತ್ತು ಕಮಲಹಾಸನ್ ಪ್ರತಿಭೆಗಳು ಅಪೂರ್ವ ರೀತಿಯಲ್ಲಿ ತುಂಬಿ ತಮಿಳು ಚಿತ್ರರಂಗಕ್ಕೆ ಇನ್ನಿಲ್ಲದ ಶಕ್ತಿಯನ್ನು ತುಂಬಿದರು.

ಮಹಾನ್ ದೈವ ಭಕ್ತರಾದ ರಜನೀಕಾಂತ್ ತಮ್ಮ ನೂರನೆಯ ಚಿತ್ರವನ್ನು ‘ರಾಘವೇಂದ್ರ ಸ್ವಾಮಿಗಳ’ ಪಾತ್ರವನ್ನಾಗಿ ಮಾಡಿಕೊಂಡರು. ಮುಂದೆ ಅವರ ಚಿತ್ರಗಳಾದ ‘ದಳಪತಿ’, ‘ಮನ್ನನ್’, ‘ಅಣ್ಣಾಮಲೈ’, ‘ವೀರ’, ‘ಬಾದ್ಷಾ’, ‘ಮುತ್ತು’, ‘ಪಡಯಪ್ಪ’, ‘ಚಂದ್ರಮುಖಿ’, ‘ಶಿವಾಜಿ’, ‘ಎಂದೀರನ್’, ‘ಕೊಚದಯಾನ್’, ‘ಕಬಾಲಿ’, 2.0, ಕಾಳ, ಪೆಟ್ಟ, ದರ್ಬಾರ್, ಜೈಲರ್ ಚಿತ್ರಗಳು ಇನ್ನಿಲ್ಲದಂತೆ ಒಂದಕ್ಕಿಂತ ಒಂದು ದಾಖಲೆಯ ಪ್ರಸಿದ್ಧಿಯನ್ನು ಪಡೆದು ರಜನೀಕಾಂತರನ್ನು ದೇಶ ವಿದೇಶಗಳಲ್ಲೆಲ್ಲಾ ಪ್ರಖ್ಯಾತರನ್ನಾಗಿಸಿದೆ. ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳವರೆಗೆ ಆತನಿಗೆ ಎಲ್ಲ ರೀತಿಯ ಪ್ರಶಸ್ತಿಗಳೂ ಬಂದಿವೆ. ರಜನೀಕಾಂತ್ ಪಸಿದ್ಧಿಯಲ್ಲಿ ಇರುವಾಗಲೇ ಇದೆಲ್ಲಾ ಏನೂ ಬೇಡ ಎಂದು, ಮಧ್ಯೆ ಸ್ವಲ್ಪ ಕಾಲ ಚಿತ್ರರಂಗ ಬಿಟ್ಟು ದೂರ ಕೂಡ ಇದ್ದುಬಿಟ್ಟಿದ್ದರು.

"ಇಷ್ಟೆಲ್ಲಾ ಪ್ರಸಿದ್ಧಿ ಸಾಕು ಒಬ್ಬ ಮನುಷ್ಯನನ್ನು ಆರ್ಥಿಕವಾಗಿ ಉನ್ನತಿಗೇರಿಸಲು ಮತ್ತು ಮತಿಗೆಟ್ಟರೆ ಅಧಃಪತನಕ್ಕಿಳಿಸಲು." ರಜನೀಕಾಂತ್ ಅವರಲ್ಲಿ “ಆರ್ಥಿಕತೆ ಮತ್ತು ಸ್ಥಾನಮಾನಗಳ ಉನ್ನತಿ, ಉರುಳು ಕೂಡ ಆಗಬಹುದು ಎಂಬ ಜಾಗೃತ ಮನೋಭಾವ” ಸದಾ ಜೊತೆಗಿದೆ. ಸಹ ಕಲಾವಿದರಲ್ಲಿ, ತಾನು ಜೊತೆ ಕಲಿತವರಲ್ಲಿ, ತನ್ನನ್ನು ಬೆಳೆಸಿದವರಲ್ಲಿ, ಜನ ಸಮುದಾಯದಲ್ಲಿ ಹೇಗೆ ಗೌರವಯುತವಾಗಿ ನಡೆದುಕೊಳ್ಳಬೇಕು, ಬದುಕಿನಲ್ಲಿ ಹತ್ತು ಹಲವು ಆಕರ್ಷಣೆಗಳ ಮಧ್ಯೆ ಮನುಷ್ಯ ತನ್ನನ್ನು ತಾನು ಕಳೆದುಕೊಳ್ಳದೆ ಹೇಗೆ ಸೌಜನ್ಯಯುತವಾಗಿ ಬದುಕಬೇಕು ಎಂಬುದಕ್ಕೆ ರಜನೀಕಾಂತರಷ್ಟು ಉತ್ತಮ ಉದಾಹರಣೆಗಳು ಸಿಗುವುದು ಇಂದಿನ ಪ್ರಪಂಚದಲ್ಲಿ ವಿರಳ ಎಂದು ಹೇಳದೆ ವಿಧಿ ಇಲ್ಲದ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ.

ತಾನು ಗೆದ್ದಾಗ ತಾನು ಮಾಡಿದ ಲಾಭವನ್ನು ಕಷ್ಟದಲ್ಲಿದ್ದ ಕಲಾವಿದರಿಗೆ, ತನ್ನ ಜೊತೆ ಕಲಿತು ಯಶಸ್ಸಿನಿಂದ ವಂಚಿತರಾದ ಸಹಪಾಠಿಗಳಿಗೆ ಹುಡುಕಿಕೊಂಡು ಹೋಗಿ ಸಂಪತ್ತನ್ನು ಹಂಚಿದ ವ್ಯಕ್ತಿ ಈತ. ತಾನು ಕಟ್ಟಿದ್ದ ಕಲ್ಯಾಣ ಮಂಟಪವನ್ನು ಜನಹಿತ ಕಾರ್ಯಗಳಿಗೆ ಧಾರೆ ಎರೆದವನೀತ. ತನ್ನ ಚಿತ್ರ ಸೋತಾಗ ಆ ನಷ್ಟವನ್ನು ವಿತರಕರಿಗೆ ತುಂಬಿಕೊಟ್ಟ ಹೃದಯವಂತನೀತ. ಹಾಗೂ ತನ್ನ ‘ಎಂದೀರನ್’ ಚಿತ್ರ ಯಶಸ್ವಿಯಾದ ಹಿನ್ನಲೆಯಲ್ಲಿ ನೂಕು ನುಗ್ಗಲನ್ನು ನಿಯಂತ್ರಿಸಲು ಕಷ್ಟಪಟ್ಟು ಕೆಲಸ ಮಾಡಿದರೆಂದು ಪೊಲೀಸ್ ಸಿಬ್ಬಂಧಿಯನ್ನು ಅವರ ಕೆಲಸದ ಜಾಗಕ್ಕೇ ಹೋಗಿ ದೊಡ್ಡ ದೊಡ್ಡ ಸಿಹಿ ಪೊಟ್ಟಣ ಮುಂದೆ ಹಿಡಿದು ತಮಗಾದ ತೊಂದರೆಗೆ ಕ್ಷಮಿಸಿ ಎಂದು ಹಿರಿಮೆ ಮೆರೆದಾತನೀತ. ತನ್ನ ಹಿರಿಯ ಕಲಾವಿದರಷ್ಟೇ ಅಲ್ಲ, ತನ್ನ ಜೊತೆಗಾರರಾದ ಕಮಲಹಾಸನ್, ವಿಷ್ಣುವರ್ಧನ ಅವರ ಕೂಡ ನಿರಂತರ ಸ್ನೇಹ ಭಾವ ಹೊಂದಿದ್ದಲ್ಲದೆ ಹೋದೆಡೆಯಲ್ಲೆಲ್ಲಾ ಅವರನ್ನು ಹೊಗಳಿ ತನ್ನನ್ನು ಸಾಮಾನ್ಯವಾಗಿಸಿಕೊಂಡಂತಹ ವಿನಯವಂತನೀತ. ಕಮಲಹಾಸನ್ ಅವರ ಸಿನಿಮಾರಂಗದಲ್ಲಿನ 50ನೆಯ ವರ್ಷದ ಹಬ್ಬದ ಆಚರಣೆಯ ಸಂದರ್ಭದಲ್ಲಿ ಆತ ಕಮಲಹಾಸನ್ ಅವರ ಶ್ರೇಷ್ಠತೆಯನ್ನು ಮೆಚ್ಚಿ ತಮ್ಮನ್ನು ಸಾಧಾರಣನೆಂದು ಚಿತ್ರಿಸಿಕೊಂಡ ರೀತಿಯನ್ನು ನೀವೊಮ್ಮೆ ಯೂ ಟ್ಯೂಬ್ ನಲ್ಲಿ ನೋಡಬೇಕು. ಇಂತಹ ಒಬ್ಬ ಸೂಪರ್ ಸ್ಟಾರ್ ಇರಲು ಸಾಧ್ಯವೇ ಎನಿಸುತ್ತದೆ. ಈತನ ಸಜ್ಜನಿಕೆ ನೋಡಿ ಮುಂದಿನ ಸೂಪರ್ ಹೀರೋಗಳಿಗೆ ಒಂದು ಪಾಠ ಮೂಡಿತು ಎಂದೆನಿಸಿದರೆ, ಹಿಂದೆ ಆಗಿ – ಅಳಿದು – ಮೇಲೆ ಸೇರಿರುವ ಸೂಪರ್ ಸ್ಟಾರುಗಳಿಗೆ “ನಾವು ಹೀಗೆ ಬದುಕಲಿಲ್ಲವಲ್ಲ” ಎಂದು ಖಂಡಿತವಾಗಿ ಪಶ್ಚಾತ್ತಾಪವಾದೀತು!

ಕೆಲವು ವರ್ಷಗಳ ಹಿಂದೊಮ್ಮೆ ಇಂದಿನ ಪರಿಸ್ಥಿತಿಯಂತೆಯೇ ಕಾವೇರಿ ನೀರಿನ ವಿವಾದ ಭುಗಿಲೆದ್ದಾಗ ಇಡೀ ತಮಿಳುನಾಡೇ ಕನ್ನಡಿಗರ ವಿರುದ್ಧವೂ, ಕನ್ನಡಿಗರು ತಮಿಳರ ವಿರುದ್ಧವೂ ಆಕ್ರೋಷಪಟ್ಟಾಗ ಪ್ರಜ್ಞೆಯಲ್ಲಿ ನಡೆದ ಏಕಮಾತ್ರನೀತ. ಅದಕ್ಕಾಗಿ ತಮಿಳರು ಅದರಲ್ಲೂ ಆತನ ಸಹೋದ್ಯೋಗಿಗಳು ಆತನ ವಿರುದ್ಧ ಕೆಂಡಕಾರಿದ್ದನ್ನೂ; ಇಡೀ ಜನಸಮುದಾಯದ ಭಾವನೆಗಳು ತನ್ನ ಅನಿಸಿಕೆಯ ವಿರುದ್ಧ ಇದ್ದುದನ್ನೂ ಈತ ಲೆಕ್ಕಿಸಲಿಲ್ಲ. ನೀವು ತಮಿಳುನಾಡಿನಲ್ಲಿ ಕುಳಿತು ಕನ್ನಡಿಗರ ವಿರುದ್ಧವೂ, ಕರ್ನಾಟಕದಲ್ಲಿ ಕುಳಿತು ತಮಿಳರ ವಿರುದ್ಧವೂ ಕೂಗಾಡಿದರೆ ಕರ್ನಾಟಕದಲ್ಲಿರುವ ತಮಿಳರೂ, ತಮಿಳುನಾಡಿನಲ್ಲಿರುವ ಕನ್ನಡಿಗರೂ ಹೇಗೆ ಬದುಕುಬೇಕು ಸರಿಯಾಗಿ ವಿವೇಚಿಸಿ ಎಂದು ಪ್ರಾಜ್ಞನಂತೆ ನುಡಿದ. ಅಷ್ಟೇ ಅಲ್ಲ, ರಾಜಕಾರಣಿಗಳಿಗೆ ನೇರ ಹೇಳಿದ, “ಭಾರತದ ನದಿಗಳನ್ನು ಒಟ್ಟುಗೂಡಿಸಲು ಈಗಲಾದರೂ ಯೋಚಿಸಿ ಅದಕ್ಕಾಗಿ ಮೊದಲ ಹಣ ಹತ್ತು ಕೋಟಿ ನಾನು ಕೊಡುತ್ತೇನೆ ಜೊತೆಗೆ ಭಾರತೀಯರೆಲ್ಲರ ಬಳಿ ಅದಕ್ಕೇ ಬೇಕಿರುವ ಸಂಪನ್ಮೂಲ ಒಟ್ಟುಗೂಡಿಸಲು ಶ್ರಮಿಸುತ್ತೇನೆ. ಬನ್ನಿ ಅದನ್ನು ಈಗಲಾದರೂ ಪ್ರಾರಂಭಿಸೋಣ” ಎಂದು.

ಒಮ್ಮೊಮ್ಮೆ ಅನಿಸುತ್ತದೆ. ಇಂತಹ ಸಹೃದಯವಂತರು ನಮ್ಮ ರಾಜಕೀಯ ನಾಯಕತ್ವವನ್ನು ಹಿಡಿಯಲಿ. ಇನ್ನೊಮ್ಮೆ ಅನಿಸುತ್ತದೆ ಅಯ್ಯೋ, ಈ ಮುಗ್ಧರನ್ನು ನಮ್ಮ ವ್ಯವಸ್ಥೆ ನುಂಗಿ ನೀರುಕುಡಿದು ಮೂರಾಬಟ್ಟೆ ಮಾಡಿ ಬಿಡುತ್ತದೆ ಬೇಡ ಎಂದು. ಅದೇನೇ ಇರಲಿ, “ಒಬ್ಬ ಸಾಮಾನ್ಯ ವ್ಯಕ್ತಿ ಯಾವ ಎತ್ತರಕ್ಕೂ ಏರಬಹುದು, ಹಾಗೆ ಏರಿದರೂ ಸಾಮಾನ್ಯನಾಗಿ ಉತ್ತಮನೂ ಆಗಿರಬಹುದು ಎಂಬ ಕೆಲವೇ ಉದಾಹರಣೆಗಳಲ್ಲಿ ರಜನೀಕಾಂತ್ ಒಬ್ಬರು”.

ಕೆಲ ವರ್ಷದ ಹಿಂದೆ ರಜನೀಕಾಂತ್ ಅಸ್ವಸ್ಥರಾಗಿದ್ದಾಗ ಅವರಿಗಾಗಿ ಸಮಸ್ತ ಲೋಕವೇ ಕಣ್ಣೀರು ಹರಿಸಿ ಎಲ್ಲ ರೀತಿಯ ದೇವರುಗಳಿಗೆ ನಿರಂತರವಾಗಿ ಪ್ರಾರ್ಥನೆ ಹರಿಸಿತು. ಪುನಃ ಅವರು ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಿನಿಮಾಗಳು ಜಯಭೇರಿ ಬಾರಿಸುತ್ತಿವೆ ಎಂಬುದು ಅವರ ಆಪ್ತರಿಗೆ ಸಂತಸ ಕೊಟ್ಟಿದೆ.

ರಜನೀಕಾಂತರಿಗೆ ರಾಜಕೀಯಕ್ಕೆ ಬರಬೇಕೋ ಬೇಡವೋ ಎಂಬ ಕುರಿತು ಸಾಕಷ್ಟು ದ್ವಂದ್ವಗಳಿದ್ದವು. ಅವರ ಆರೋಗ್ಯವೂ ಅಷ್ಟು ಚೆನ್ನಾಗಿಲ್ಲ ಎಂಬ ಮಾತು ಕೂಡಾ ಆಡಿದ್ದರು. ಕಡೆಗೆ ತಮಿಳುನಾಡಿನ ಚುನಾವಣಾ ಕಣಕ್ಕೆ ಇಳಿಯಲು ನಿರ್ಧಾರಮಾಡಿದ್ದ ಅವರು ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ಹೊರಗುಳಿದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡರು.
Tags:

Post a Comment

0Comments

Please Select Embedded Mode To show the Comment System.*