ಪವಮಾನ ಜಗದ ಪ್ರಾಣ ಸಂಕರುಷಣ
ಭವನೇ ಭಯಾರಣ್ಯದಹನಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರೀಯ
ಹೇಮ ಕಚ್ಚುಟ ಉಪವೀತ-ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು ||1||
ವಜ್ರ ಶರೀರ ಗಂಭೀರ-ಮಕುಟಧರ
ದುರ್ಜನವನ ಕುಠಾರ
ನಿರ್ಜರಮಣಿ ದಯಾ ಪಾರಾ-ವಾರ ಉದಾರ
ಸಜ್ಜನರಘ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ-
ಮೂರ್ಜನದಲಿ ಭವವರ್ಜಿತನೆನಿಸೊ ||2||
ಪ್ರಾಣ ಅಪಾನ ಉದಾನ-ವ್ಯಾನ ಸಮಾನ
ಆನಂದ ಭಾರತೀರಮಣ
ನೀನೆ ಯಾಮ ಯಾಮಕೆ ಜ್ಞಾನ
ಧನಪಾಲಿಪ ವರೇಣ್ಯ
ನಾನು ನಿರುತದಲಿ ಏನೇನನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ
ಕೊಡುವುದು ಭಾನು ಪ್ರಕಾಶ ||3||