ಔದುಂಬರ_ವೃಕ್ಷ

SANTOSH KULKARNI
By -
0


ಹಿರಣ್ಯಕಶಿಪುವನ್ನು ಸಂಹರಿಸಲು ನೃಸಿಂಹಸ್ವಾಮಿ ಈ ಔದುಂಬರದಲ್ಲಿಯೇ ಅವತರಿಸಿದನು.

ಹಾಗೆ ಕ್ರುದ್ಧನಾಗಿ ಅವತರಿಸಿದ ವಿಷ್ಣು ಹಿರಣ್ಯಕಶಿಪುವಿನ ಉದರವನ್ನು ತನ್ನ ಉಗುರುಗಳಿಂದ ಬಗೆದು,
ಅವನ ಕರುಳು ತೆಗೆದು ಮಾಲೆಯಂತೆ ಕೊರಳಲ್ಲಿ ಧರಿಸಿ, ನಾರದ ಕಶ್ಯಪ ಪ್ರಹ್ಲಾದಾದಿ ಭಕ್ತರ ಮಾತುಗಳನ್ನು ಸತ್ಯಗೊಳಿಸಿದನು.

ಆ ರಾಕ್ಷಸನ ಹೊಟ್ಟೆ ಅಗೆದು ಕರುಳು ಈಚೆ ತೆಗೆದಾಗ, ಅವನ ಹೊಟ್ಟೆಯಲ್ಲಿದ್ದ ಕಾಲಕೂಟದಂತಹ ವಿಷವು, ನೃಸಿಂಹ ಸ್ವಾಮಿಯ ಉಗುರುಗಳಿಗೆ ಅಂಟಿಕೊಂಡು, ಸಹಿಸಲಸಾಧ್ಯವಾದಂತಹ ಉರಿ ಉಂಟಾಯಿತು. ಆ ವೇದನೆಯನ್ನು ತಡೆಯಲಾರದ ನೃಸಿಂಹಸ್ವಾಮಿಯ ತಾಪವನ್ನು ಶಾಂತಗೊಳಿಸಲು, ಶ್ರೀ ಮಹಾಲಕ್ಷ್ಮಿ, ಔದುಂಬರದ ಹಣ್ಣುಗಳನ್ನು ತಂದು ಅವನ ಉಗುರುಗಳಿಗೆ ಹಚ್ಚಿದಳು. ತಕ್ಷಣವೇ ವಿಷದಿಂದುಂಟಾದ ಉರಿಯು ಶಮನವಾಗಿ, ನೃಸಿಂಹಸ್ವಾಮಿಗೆ ಶಾಂತಿಯುಂಟಾಯಿತು.

ಶಾಂತನಾದ ಆ ಉಗ್ರನೃಸಿಂಹನು, ಶ್ರೀಲಕ್ಷ್ಮಿಯನ್ನು ಆಲಂಗಿಸಿ, ಸಂತುಷ್ಟನಾದನು.
ಆಗ ಆ ದೇವದಂಪತಿಗಳು, ವಿಷದ ಉಗ್ರತೆಯನ್ನು ಶಾಂತಗೊಳಿಸಿದ ಔದುಂಬರಕ್ಕೆ,
"ಎಲೈ ಔದುಂಬರವೇ, ಕಲ್ಪವೃಕ್ಷದಂತೆ ಸದಾ ಫಲಭರಿತವಾಗಿರು. ನಿನ್ನನ್ನು ಶ್ರದ್ಧಾ ಭಕ್ತಿಗಳಿಂದ ಸೇವಿಸುವವರ ಇಷ್ಟಾರ್ಥ ಸಿದ್ಧಿಯಾಗಲಿ, ಅವರ ಪಾಪಗಳೂ ಕ್ಷಯವಾಗಲಿ.
ನಿನ್ನ ದರ್ಶನದಿಂದಲೇ ವಿಷದ ತೀವ್ರತೆ ಶಮನವಾಗುತ್ತದೆ.

ನಿನ್ನ ನಿಜವಾದ ಭಕ್ತರು ಸದಾ ಶಾಂತಿ ಸಂತೋಷಗಳಿಂದ ಆರೋಗ್ಯವಂತರಾಗಿ ಜೀವಿಸುತ್ತಾರೆ.
ನಿಷ್ಠೆಯಿಂದ ನಿನ್ನನ್ನು ಸೇವಿಸುವವರು ಪುತ್ರವಂತರಾಗುತ್ತಾರೆ. ದೀನರು ಶ್ರೀಮಂತರಾಗುತ್ತಾರೆ.
ನಿನ್ನ ಛಾಯೆಯಲ್ಲಿ ಸ್ನಾನವನ್ನಾಚರಿಸಿದವರು ಭಾಗೀರಥಿಯಲ್ಲಿ ಸ್ನಾನ ಮಾಡಿದ ಫಲವನ್ನುಪಡೆಯುತ್ತಾರೆ.

ನಿನ್ನ ನೆರಳಿನಲ್ಲಿ ಜಪತಪಗಳನ್ನಾಚರಿಸಿದವರು ಅನಂತವಾದ ಫಲಗಳನ್ನು ಪಡೆಯುತ್ತಾರೆ.
ಶ್ರದ್ಧಾ ಭಕ್ತಿಗಳಿಂದ ನಿನ್ನನ್ನು ಪೂಜಿಸಿದವರು ಬ್ರಹ್ಮಹತ್ಯಾದಿ ಪಾಪಗಳಿಂದಲೂ ಮುಕ್ತರಾಗುತ್ತಾರೆ.
ಸುಸಂಕಲ್ಪರಾಗಿ ನಿನ್ನನ್ನು ನಂಬಿ ಪೂಜಿಸಿ ಭಜಿಸುವವರ ಇಷ್ಟಕಾಮ್ಯಗಳು ಪೂರ್ಣವಾಗುತ್ತವೆ.
ಲಕ್ಷ್ಮಿದೇವಿ ಸಹಿತನಾದ ನಾನು ಮಿಕ್ಕ ದೇವತೆಗಳೊಡನೆ ನಿನ್ನಲ್ಲಿ ನೆಲಸಿರುತ್ತೇನೆ" ಎಂದು ಅನೇಕ ವರಗಳನ್ನಿತ್ತರು.

ಆದ್ದರಿಂದಲೇ ಕಲಿಯುಗದಲ್ಲಿ ಔದುಂಬರ ವೃಕ್ಷವು ಕಲ್ಪವೃಕ್ಷಕ್ಕೆ ಸಮಾನವಾದದ್ದು.
ಅದೇ ಕಾರಣದಿಂದಲೇ ಶ್ರೀಗುರುವು ಕೂಡಾ ಔದುಂಬರದ ನೆರಳಿನಲ್ಲಿ ನೆಲಸಿರುವರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ . ಶ್ರೀಗುರುವು ನೆಲೆಸಿದ್ದುದರಿಂದ ಅದು ಸರ್ವ ಕಾಮಫಲ ಪ್ರದವಾಯಿತು ಎಂದು ಧಾರ್ಮಿಕ ನಂಬಿಕೆ.

ಓಂ ನೃಸಿಂಹಾಯ ವಿದ್ಮಹೇ ವಜ್ರನಖಾಯ ಧೀಮಹಿ | ತನ್ನೋ ನಾರಸಿಂಹ: ಪ್ರಚೋದಯಾತ್ ||
ಶ್ರೀ ವಿಷ್ಣುವಿನ ಅವತಾರದಲ್ಲಿ ನರಸಿಂಹ ಅವತಾರ

Post a Comment

0Comments

Please Select Embedded Mode To show the Comment System.*