Episode (ಸಂಚಿಕೆ) – 8

SANTOSH KULKARNI
By -
0

     ಯಾಗಶಾಲೆಯ ಭದ್ರಕಾವಲನ್ನು ಬಲತ್ಕಾರದಿಂದ ಭೇದಿಸಲಾಗದು ಎಂದು ಆಸ್ತಿಕನಿಗೆ ಮನವರಿಕೆಯಾಯಿತು. ಹಾಗಿದ್ದರೆ ಜಾಣತನದ ಯುಕ್ತಿ ಮಾರ್ಗದಿಂದ ಸಾಗುವ ಪ್ರಯತ್ನವಾಗಬೇಕೆಂದು ನಿರ್ಧರಿಸಿದನು. ಆಸ್ತಿಕ ನೇರವಾಗಿ ಕಾವಲು ಪಡೆಯ ಬಳಿ ಬಂದು ಅವರ ಕಾರ್ಯ ದಕ್ಷತೆಯನ್ನು ಬಹುವಾಗಿ ಹೊಗಳಿ ಹಾಡಿ ಕೊಂಡಾಡಿದನು. ಜನಮೇಜಯ, ಋಷಿಗಳನ್ನೂ ಛಂದೋಬದ್ದವಾಗಿ ವರ್ಣಿಸಿ ಸುಶ್ರಾವ್ಯವಾಗಿ ಸುಮಧುರ ಕಂಠದಿಂದ ಹೊಗಳತೊಡಗಿದನು. ಹೊಗಳಿ ಶೃತಿಬದ್ದವಾಗಿ ಹಾಡುತ್ತಲೇ ಇದ್ದನು.

    ಇತ್ತ ಮಂತ್ರಘೋಷ, ಘಂಟಾ – ಶಂಖನಾದ ಮೊಳಗುತ್ತಾ ಸಾಗುತ್ತಿದೆ. ಉತ್ತಂಕನ ಆತಂಕ ಹೆಚ್ಚಾಗುತ್ತಿದೆ. ಕಾರಣ ತಕ್ಷಕನ ಸುಳಿವಿಲ್ಲ. ಉತ್ತಂಕನು ಅಸಹನೆಯಿಂದ ತಕ್ಷಕ ಬಂದು ಯಾಗಾಗ್ನಿಗೆ ಬಿದ್ದು ಹೋಮಿಸಲ್ಪಡಲಿ ಎಂದು ಪಠಿಸಲು ಋತ್ವಿಜರಿಗೆ ಸೂಚಿಸಿದನು. ಅಂತೆಯೆ ತಕ್ಷಕನನ್ನು ಸೆಳೆಯುವ ಮಂತ್ರ ಮಂತ್ರಿಸಲ್ಪಟ್ಟಿತು. ಮಂತ್ರಶಕ್ತಿ ಪ್ರಬಲಗೊಳ್ಳುತ್ತಾ ಮೆರೆಯುತ್ತಿದ್ದರೂ ತಕ್ಷಕನ ಸುಳಿವಿಲ್ಲ.

    ಎಲ್ಲರಿಗೂ ಆಶ್ಚರ್ಯ ಜೊತೆಗೆ ಗೊಂದಲವೂ ಆವರಿಸಿತು. ಯಾಗ ಮಂಟಪದಲ್ಲಿ ಕೌತುಕದಿಂದ ಮುಂದೇನು ಎಂದು ತಿಳಿಯಲಾಗದೆ ಮೌನ ಆವರಿಸಿತು. ಕಾರಣ ತಕ್ಷಕನ ಸೆಳೆತದ ಮಂತ್ರ ವಿಫಲವಾಗಿತ್ತು. ಇದನ್ನು ನೋಡಿ ಎಲ್ಲರೂ ಒಮ್ಮೆಲೇ ಸ್ತಬ್ಧರಾದರು. ಈ ನೀರವ ಮೌನ ಆಸ್ತಿಕನ ಸುಂದರ ಕಾವ್ಯ ಪ್ರವಾಹಿಸಿ ಬರಲು ಸುವರ್ಣಾವಕಾಶ ಕಲ್ಪಿಸಿಕೊಟ್ಟಿತು. ರಾಜನ ಗುಣಗಾನದ ಗಾನಸುಧೆ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಜನಮೇಜಯನಿಗೆ ಅತೀವ ಮುದ ನೀಡಿತು. ಕುತೂಹಲದಿಂದ ಆ ಕೂಡಲೇ ರಾಜ ಜನಮೇಜಯ ಆಸ್ತಿಕನನ್ನು ಒಳ ಕರೆಸಿಕೊಂಡು ಉಪಚರಿಸಲು ತೊಡಗಿದನು.

    ಇತ್ತ ಋಷಿಗಳು ದಿವ್ಯ ದೃಷ್ಟಿಯಿಂದ ತಕ್ಷಕನ ಕುರಿತಾಗಿ ಯಾಕೆ ಹೀಗಾಗುತ್ತಿದೆ ಎಂದು ಅವಲೋಕಿಸಿಕೊಂಡರು. ದೇವೇಂದ್ರನ ಆಶ್ರಯದಲ್ಲಿ ತಕ್ಷಕ, ಸಿಂಹಾಸನಕ್ಕೆ ಸುತ್ತಿ ಕುಳಿತಿರುವ ವಿಚಾರದ ಅರಿವಾಯಿತು. ಅಂದರೆ ಪ್ರಾಣಭಯದಿಂದ ತಕ್ಷಕ ಸ್ವರ್ಗವೇರಿ, ದೇವೇಂದ್ರನ ಸಿಂಹಾಸನವನ್ನು ಬಿಗಿಯಾಗಿ ಸುತ್ತಿಕೊಂಡಿದ್ದನು. ಉತ್ತಂಕನಿಗೆ ಈ ವಿಚಾರ ತಿಳಿದು ಆವೇಶಕ್ಕೆ ಒಳಗಾದನು.

    ಇಂದ್ರನ ಸಿಂಹಾಸನ ಸಹಿತ ತಕ್ಷಕ ಬರುವಂತಾಗಲಿ. ಹಾಗೆಂದು ಸಂಕಲ್ಪ ಮಾಡಿ ಮಂತ್ರ ಪಠಿಸಲು ಆಜ್ಞಾಪಿಸಿದನು. ಆಸ್ತಿಕನೊಂದಿಗಿದ್ದ ಜನಮೇಜಯನೂ ಇದಕ್ಕೆ ಸಮ್ಮತಿಸಿದನು. ಋತ್ವಿಜರಿಂದ ಮಂತ್ರ ಪಠಿಸಲ್ಪಟ್ಟಿತು. ಸಿಂಹಾಸನದಲ್ಲಿ ಆ ಸಂದರ್ಭ ಕುಳಿತಿದ್ದ ಇಂದ್ರ ಸಹಿತ ತಕ್ಷಕ ಸೆಳೆಯಲ್ಪಟ್ಟನು. ಅಪಾಯವರಿತ ಇಂದ್ರ ಜಾರಿಕೊಂಡನು. ಈಗ ದೇವೇಂದ್ರನ ಸಿಂಹಾಸನ ಸಹಿತ ಯಾಗ ಕುಂಡಕ್ಕೆ ತಕ್ಷಕ ಸೆಳೆಯಲ್ಪಡುತ್ತಿದ್ದಾನೆ.

    ಒಂದೆಡೆ ಹೀಗಾಗುತ್ತಿದ್ದರೆ ಇತ್ತ ಜನಮೇಜಯ ತಾನು ಕುತೂಹಲದಿಂದ ಕರೆಸಿದ ಬ್ರಹ್ಮ ತೇಜಸ್ಸಿನ ಬಾಲಕ ಆಸ್ತಿಕನಿಂದ ಆಕರ್ಷಿತನಾಗಿ ಸತ್ಕರಿಸುತ್ತಾ, ಯಾಗ ದೀಕ್ಷಿತನಾದ್ದರಿಂದ ಕರ್ಮಾಂಗ ವಿಧಿಯಂತೆ ತಮಗೇನಾಬೇಕು, ತಮ್ಮ ಅಭೀಷ್ಟವೇನೆಂದು ಅಪ್ಪಣೆ ಮಾಡಬೇಕು. ಅದನ್ನು ಪೂರೈಸಬೇಕಾದುದು ನನಗೆ ಧರ್ಮ ಎಂದು ಕರಜೋಡಿಸಿ ಕೇಳಿದನು.

    ಆಗ ಸುಜ್ಞಾನಿಯೂ, ಪ್ರಜ್ಞಾವಂತನೂ ಆಗಿರುವ ಆಸ್ತಿಕ ” *ಯಾಗ ಈ ಕೂಡಲೇ ನಿಲ್ಲಿಸಲ್ಪಡಲಿ* ” ಅದೇ ನನ್ನ ಅಭೀಷ್ಟವಾಗಿದೆ. ನನ್ನ ಆಶಯವನ್ನು ಪೂರೈಸಿಕೊಡು ಎಂದು ನುಡಿದನು. ಮಾತು ನೀಡಿಯಾಗಿದೆ, ವಚನ ಬದ್ಧತೆಯನ್ನು ಪಾಲಿಸಬೇಕಾದ ರಾಜ ಯಾಗವನ್ನು ನಿಲ್ಲಿಸಬೇಕಾಯಿತು. ತಕ್ಷಕ ಬದುಕುಳಿದ ಯಾರಿಗೂ ಕಾಣಿಸದಂತೆ ಅದೃಶ್ಯನಾಗಿ ತಪ್ಪಿಸಿಕೊಂಡು ಬದುಕುಳಿದು ಕಣ್ಮರೆಯಾದನು.

    ಇತ್ತ ಆಸ್ತಿಕ ಋಷಿ ಮುನಿಗಳಿಗೆ ವಂದಿಸಿ, ತನ್ನ ಪರಿಚಯ ವಿವರ ಎಲ್ಲವನ್ನೂ ತಿಳಿಸಿದನು. ರಾಜಾ ಜನಮೇಜಯನಲ್ಲಿ “ಅರಸನೇ ಅನಾವಶ್ಯಕವಾಗಿ ಸಹಸ್ರ ಸಹಸ್ರ ನಿರ್ದೋಷಿ ಸರ್ಪಗಳು ಹೋಮಿಸಲ್ಪಟ್ಟವು. ಇದು ನಿನಗಾಗಲಿ ಅಥವಾ ಇನ್ಯಾರಿಗಾಗಲಿ ಶ್ರೇಯಸ್ಕರವಲ್ಲ.

    ದೋಷಪ್ರದವಾದ ಕಾರ್ಯ ನಿನ್ನಿಂದ ವಿರಚಿಸಲ್ಪಡುತ್ತಿತ್ತು. ತಕ್ಷಕನನ್ನೇ ಗುರಿಯಾಗಿರಿಸಿ ಯಾಗ ಮಾಡಲ್ಪಟ್ಟರೂ ಆತ ಬದುಕುಳಿದ ಅದೇ ದೈವ ಸಂಕಲ್ಪವಾಗಿತ್ತೋ ಏನೋ! ಆತನೊಬ್ಬನ ಮೇಲಿನ ಪ್ರತಿಕಾರಕ್ಕೆ ನಿನ್ನ ಕಾರಣದಿಂದ ನಿರಪರಾಧಿ ಸರ್ಪಗಳು ಹೋಮಿಸಲ್ಪಟ್ಟವು. ಇದು ನಿನಗೆ ಸರ್ಪಹತಿ ದೋಷಕ್ಕೆ ಕಾರಣವಾಗಿದೆ.

    ಭೃಗುವಂಶದ ಯಾಯಾವರ ಋಷಿ ಪೀಳಿಗೆಯಲ್ಲಿ ಹುಟ್ಟಿದ ನನ್ನನ್ನು ಆಧರಿಸಿ ಸತ್ಕರಿಸಿ ನನ್ನ ಅಭೀಷ್ಟ ಪೂರೈಸಿರುವೆ. ನಾಗರಾಜ ವಾಸುಕಿಯ ಅಳಿಯ ನಾನಾಗಿದ್ದೇನೆ. ನನ್ನ ಮಾತೃ ವರ್ಗದ ಬಂಧುಗಳಲ್ಲಿ ಹೋಮಿಸಲ್ಪಡದೇ ಉಳಿದವರು ನಿನ್ನ ಸಜ್ಜನಿಕೆಯಿಂದ ಬದುಕುಳಿಯುವಂತಾಯಿತು. ಇದರಿಂದ ಬಹಳಷ್ಟು ಸಂತುಷ್ಟನಾಗಿದ್ದೇನೆ. ನಿನ್ನ ಕೀರ್ತಿ ಶಾಶ್ವತವಾಗಲಿ. ಲೋಕಕ್ಕೆ ಕ್ಷೇಮವಾಗಲಿ.

    ನಿನ್ನ ಪಿತೃಗಳು ಸದ್ಗತಿಯನ್ನೂ, ಸಂತತಿಯವರು ಸೌಭಾಗ್ಯವನ್ನೂ ಹೊಂದಲಿ. ನಿನ್ನ ಪ್ರಜಾ ಪರಿವಾರಕ್ಕೆ ಸುಖ ಸಂತೋಷ ಪ್ರಾಪ್ತಿಸಲಿ. ನೀನು ನಿನಗಂಟಿದ ದೋಷ ಪರಿಮಾರ್ಜನೆಗೆ ಪ್ರಾಯಶ್ಚಿತ್ತ ಕರ್ಮ ಮಾಡುವವನಾಗು. ಸರ್ವರಿಗೂ ಸನ್ಮಂಗಲವಾಗಲಿ” ಎಂದು ಅನುಗ್ರಹಿಸಿದನು. ತನ್ನ ಮಾತೃ ವರ್ಗದ ಬಂಧುಗಳನ್ನು ರಕ್ಷಿಸುವ ಕಾರ್ಯ ಸಾಧಿಸಿದ ತೃಪ್ತಿಹೊಂದಿದವನಾಗಿ ಆಸ್ತಿಕ ಹೊರಟು ಹೋದನು.

    ಇತ್ತ ಜನಮೇಜಯನಿಗೆ ದ್ವಂದ್ವಭಾವ ಮತ್ತು ಪಶ್ಚಾತ್ತಾಪ ಮನಮಾಡಿದೆ. ಒಂದೆಡೆ ಅರ್ಧಕ್ಕೆ ನಿಂತ ಯಾಗ ಶ್ರೇಯಸ್ಕರವಲ್ಲ. ಇನ್ನೊಂದೆಡೆ ಅನಾವಶ್ಯಕವಾಗಿ ನಿರ್ದೋಷಿ ಸರ್ಪಹತ್ಯಾ ದೋಷ ಅಂಟಿಕೊಂಡ ಭಯ. ಹೀಗೆ ಮನೋಬಲ ಕುಗ್ಗಿ ಭಯ ಪಶ್ಚಾತ್ತಾಪ ಆವರಿಸಿ, ಋಷಿಶ್ರೇಷ್ಟರಲ್ಲಿ ತನ್ನ ಆತಂಕ ವ್ಯಕ್ತಪಡಿಸಿದನು. ಉತ್ತಮರಲ್ಲಿ ವಿಚಾರಿಸದೆ ದುಡುಕಿ ಅನಾಹುತ ಆಯಿತು. ಈ ದೋಷಕ್ಕೆ ಪ್ರಾಯಶ್ಚಿತ್ತವೇನು? ಪೂರ್ಣಾಹುತಿಯಾಗದೆ ಉಳಿದ ಯಾಗಕ್ಕೆ ಸಮಾಪ್ತಿ ಹೇಗೆ ಎಂಬಿತ್ಯಾದಿ ದುಗುಡ ವ್ಯಕ್ತಪಡಿಸಿ, ನೀವೇ ನನಗೆ ದಾರಿ ತೋರಿಸಬೇಕು, ರಕ್ಷಿಸಬೇಕು ಎಂದು ಗೋಗರೆದನು

    ಪ್ರಾಯಶ್ಚಿತ್ತ ರೂಪದ ಹೋಮಗಳನ್ನು ಸೂಚಿಸಿ, ಸರ್ವ ಶಾಂತಿಗಾಗಿ ಶಾಂತಿಯಜ್ಞವನ್ನು ಪೂರೈಸಿ ಸರ್ಪ ದೋಷ ನಿವಾರಣೆಗಾಗಿ ಬಲ್ಲವರಿಂದ ನಿವೃತ್ತಿ ಸಿಗುವವರೆಗೆ ಇದೇ ಅಗ್ನಿಯಲ್ಲಿ ನಿತ್ಯ ಹವನಗಳು ನಡೆಯುತ್ತಿರಲಿ ಎಂದು ಅಂಗೀರಸ ಮಹರ್ಷಿಗಳು ನಿರೂಪಿಸಿದರು.

    ಆ ಬಳಿಕ ರಾಜನನ್ನು ಸಮಾಧಾನಿಸಿ ಋಷಿವರ್ಯರಾದ ಶ್ವೇತಕೇತು ಮುಂದೆ ಬಂದು “ರಾಜಾ ಚಿಂತಿಸಬೇಡ. ಏನು ಆಗಬೇಕಾಗಿತ್ತೋ ಅದು ಆಗಿಹೋಯಿತು. ಹೀಗೆ ಆಗಲು ಕಾರಣಗಳೂ ಇದೆ. ಒಂದೆಡೆ ಸರ್ಪಗಳ ಮಾತೆ ಕದ್ರುವಿನ ಶಾಪ ಸರ್ಪಗಳಿಗಿದ್ದರೆ, ಇನ್ನೊಂದೆಡೆ ದೇವಲೋಕದ ನಾಯಿಯಾದ ಸರಮೆಯ ಶಾಪ ನಿಮಗೆ ಸಹೋದರರಿಗಿತ್ತು. ದೇವಲೋಕದ ನಾಯಿ ಸರಮೆಯ ಮರಿ ಭೂಮಿಗಿಳಿದು ಕುರುಕ್ಷೇತ್ರಕ್ಕೆ ಬಂದಿದ್ದಾಗ ನೀವು ಸರಮೆಯ ಮರಿಯನ್ನು ಬಾಲಿಷ ಬುದ್ದಿಯೋ, ಚೇಷ್ಟೆಯಿಂದಲೋ ವಿನಾ ಕಾರಣ ಹೊಡೆದು ನೋಯಿಸಿದ್ದಿರಿ.

    ಮಾತೃ ಹೃದಯ ಪ್ರತಿಯೊಂದು ಜೀವಿಗೂ ಸಮಾನವಲ್ಲವೇ? ಸರಮೆಯೂ ಇದರಿಂದ ಕೋಪಗೊಂಡು: “ನಿಮಗೆ ಅದೃಷ್ಟವಾದ ಪಶ್ಚಾತ್ತಾಪ ಪಾಪದ ಭೀತಿಯುಂಟಾಗಲಿ” ಎಂದು ಶಪಿಸಿದ್ದಳು. ಹೀಗಾಗಿ ಶಾಪಗಳು ನಿಜವಾಗಬೇಕಲ್ಲವೇ? ರಾಜಾ ನಿನ್ನ ಜೊತೆಗೆ ಉತ್ತಂಕ, ಆಸ್ತಿಕ ಈ ವಿಚಾರಕ್ಕೆ ನಿಮಿತ್ತವೂ, ಪೂರಕರೂ ಆಗಿ ಒದಗುವಂತಾಯಿತು. ಈಗ ವ್ಯಥೆಗೊಳಗಾಗದಿರು” ಎಂದು ಧೈರ್ಯ ತುಂಬಿದರು.

    ಆಗ ಪೂಜ್ಯರಾದ ನಾರದರು “ಇದು ಕಲಿಯುಗದ ಆರಂಭ ಕಾಲ. ಯುಗಧರ್ಮದ ಪ್ರಭಾವ ಇದಕ್ಕೆಲ್ಲಾ ಸೂಕ್ಷ್ಮವಾಗಿ ಕಾರಣವೂ ಹೌದು. ಈ ಯುಗದಲ್ಲಿ ತಪಸ್ಸು ಯಜ್ಞ ಸಾಂಗವಾಗಿ ನಡೆಯುವುದು ಕಷ್ಟ. ಹಾಗಾಗಿ *ಪಾಪ ಪರಿಹಾರಕ್ಕೂ, ಪುಣ್ಯ ಸಂಚಯಕ್ಕೂ ಈ ಕಲಿಯುಗದಲ್ಲಿ ಭಗವದ್ ಭಕ್ತಿಯೇ ಸಾಧನ.

    ಭಗವದ್ ಲೀಲೆಯ ಪುರಾಣ ಕಥಾಶ್ರವಣ, ಮನನ, ಅಧ್ಯಯನದಿಂದ ಪಾಪ ಮುಕ್ತರಾಗಬಹುದು, ಪುರಾಣ ಕಥಾ ಶ್ರವಣ – ಮನನವೇ ಕಲಿಯುಗಕ್ಕೆ ಒಂದು ರೀತಿಯಲ್ಲಿ ಪಾಪ ನಾಶಕ – ಪುಣ್ಯ ಪ್ರದಾಯಕ ಯಜ್ಞ* ಎಂದು ಸೂಚಿಸಿ, ಕಥಾ ಶ್ರವಣ ಯಜ್ಞದ ವಿಧಿ ವಿಧಾನ, ಆಚಾರ ವಿಚಾರಗಳನ್ನು ಸೂಚಿಸಿದರು.

    ಪಾಪಕ್ಕೆ ನಿವೃತ್ತಿ ಹೇಗೆಂದು ನಾರದರಿತ್ತ ಸೂಚನೆ ಆಲಿಸಿ ರಾಜಾ ಜನಮೇಜಯ ವೇದವ್ಯಾಸ ಮಹರ್ಷಿಗಳ ಬಳಿ ಬಂದು, ನಮಸ್ಕರಿಸಿ “ಭಗವಾನ್ ತಾವು ನಮ್ಮ ಹಿರಿಯರ ಕಾಲದಿಂದಲೂ ಇದ್ದವರು. ಕೃಪೆದೋರಿ ನಮ್ಮ ವಂಶವನ್ನು ಉದ್ದರಿಸಬೇಕು ರಕ್ಷಿಸಬೇಕು” ಎಂದು ಪ್ರಾರ್ಥಿಸಿದನು. ಆಗ ವ್ಯಾಸ ಭಗವಾನರು, ಮಹಾರಾಜನನ್ನು ಹರಸಿ- ತಮ್ಮ ಪ್ರಿಯ ಶಿಷ್ಯರಾದ ವೈಶಂಪಾಯನರನ್ನು ಕರೆದು “ಸಹನೆ ಮತ್ತು ಅಸಹನೆಗಳ ಪ್ರತೀಕಗಳೇ ಎನ್ನಬಹುದಾಗಿದ್ದ ಜನಮೇಜಯನ ಹಿರಿಯರಾದ ಪಾಂಡವ – ಕೌರವರ ವೃತ್ತಾಂತವನ್ನೂ, ಭಗವಾನ್ ಶ್ರೀ ಕೃಷ್ಣನ ಮಹಿಮಾತಿಷಯಗಳನ್ನು ನೀನು ನಮ್ಮಿಂದ ಕೇಳಿ ತಿಳಿದಿರುವೆ.

    ಪಾಪಗ್ರಸ್ಥನಾದ ಈ ಮಹಾರಾಜನಿಗೆ ಆ ಎಲ್ಲವನ್ನೂ ವಿಶ್ರುತ ಪಡಿಸು. ಅದನ್ನು ಶೃದ್ಧಾ ಭಕ್ತಿಯಿಂದ ಆಲಿಸಿ ಆ ಮೂಲಕ ಅವನ ಸಕಲ ಪಾಪಗಳೂ ನಾಶವಾಗಲಿ. ದೈವ ಭಕ್ತಿಯ ಪ್ರಚೋದನೆಯಿಂದ ಅವನು ಪಾವನನಾಗಲಿ. ಧರ್ಮ ಮಾರ್ಗವನ್ನು ತಿಳಿದು ಕೃತಾರ್ಥನಾಗಿ ಸಕಲ ಶ್ರೇಯಸ್ಸನ್ನೂ ಹೊಂದಲಿ” ಎಂದು ಆಜ್ಞಾಪಿಸಿದರು.

    ವೈಶಂಪಾಯನರಿಗೆ ಅನಿರೀಕ್ಷಿತ ಅಪ್ಪಣೆಯಾದರೂ ಮನಸ್ಸನ್ನು ಸಿದ್ಧಗೊಳಿಸಿ ವ್ಯಾಸ ಭಗವಾನರಿಗೆ ವಂದಿಸಿ ನಿಂತರು. ಜನಮೇಜಯ ವೈಶಂಪಾಯನ ಮಹರ್ಷಿಗಳ ಪಾದ ತೊಳೆದು ಅರ್ಚನೆ ಮಾಡಿದನು. ಅವರ ಕೈ ಹಿಡಿದು ಸಿದ್ಧವಾಗಿದ್ದ ಪ್ರವಚನ ಪೀಠವನ್ನೇರಿಸಿದ. ಅವರ ಅಪ್ಪಣೆ ಪಡೆದು ಬಳಿಯಲ್ಲೇ ದರ್ಭಾಸನವನ್ನಿಕ್ಕಿ ಕುಳಿತು ಕೊಂಡನು. ತುಂಬಿದ ಸಭೆಯು ಅತ್ಯಂತ ಶೃದ್ಧೆಯಿಂದ ಕುತೂಹಲಭರಿತವಾಗಿ ಮಹಾಕಾವ್ಯವನ್ನು ಆಲಿಸಲು ಸನ್ನದ್ಧವಾಯಿತು.

Post a Comment

0Comments

Please Select Embedded Mode To show the Comment System.*