*ಮಹಾಭಾರತ ಕಥಾರಂಭ*
ಎಲ್ಲರ ಕಣ್ಣು ಕಿವಿಗಳು ಪ್ರವಚನ ಪೀಠಕ್ಕೆ ನೋಟವಾಗಿದ್ದವು. ವೈಶಂಪಾಯನರು ಧ್ಯಾನಸ್ಥರಾಗಿ ಕೈ ಜೋಡಿಸಿಕೊಂಡು ಗುರುದೇವತಾ ಪ್ರಾರ್ಥನೆ ಗೈದು, ಗಣಾಧೀಶನನ್ನು ಸಂಸ್ತುತಿಸಿ, ಸರ್ವರಿಗೂ ಶ್ರವಣಯೋಗ್ಯ ಸ್ವರದಲ್ಲಿ… “ಕೇಳು ಜನಮೇಜಯ ಮಹೀಪತಿ….” ಎಂದು ಮಹಾಕಾವ್ಯ ಕಥನ ಆರಂಭಿಸಿದರು.
ಹಿಂದೆ ಸೂರ್ಯವಂಶದ ಅರಸನಾದ ಸೌದಾಸ ಒಮ್ಮೆ ಕಾಡಿಗೆ ಬೇಟೆಗಾಗಿ ಹೋಗಿದ್ದನು. ಕಾಡಿನಲ್ಲಿ ಮಾಯಾವಿ ರಾಕ್ಷಸರೀರ್ವರು ಆತನಿಗೆ ಇದಿರಾದರು. ಕಾಳಗದಲ್ಲಿ ಓರ್ವ ಮೃತನಾದರೆ, ಮತ್ತೋರ್ವ ಸೋದರನ ಹತ್ಯೆಯ ದ್ವೇಷ ಸಾಧನೆ ಮಾಡಲು ಅದೃಶ್ಯನಾಗಿ ತಪ್ಪಿಸಿಕೊಂಡು ಬದುಕುಳಿದನು.
ಇದು ಆಗಿ ಕೆಲ ಸಮಯ ಸಂದು ಹೋದ ಬಳಿಕ ಮಹಾರಾಜ ಸೌದಾಸ ಪುಣ್ಯಪ್ರದವಾದ ಮಹಾಯಾಗ ಮಾಡಿಸುವ ಮನ ಮಾಡಿದನು. ಕುಲ ಗುರುಗಳಾದ ವಸಿಷ್ಠರನ್ನು ಆಹ್ವಾನಿಸಿ ಯಥೋಚಿತ ಸತ್ಕಾರ ಮಾಡಿ, ಯಾಗದ ಕುರಿತು ನಿವೇದಿಸಿಕೊಂಡನು. ಅವರ ಮಾರ್ಗದರ್ಶನದಂತೆ ಯಜ್ಞಕ್ಕೆ ಬೇಕಾದ ಸಿದ್ದತೆ ಮಾಡತೊಡಗಿದನು. ಪುಣ್ಯ ಫಲದಾಯಿ ಮುಹೂರ್ತದಲ್ಲಿ ಯಾಗ ಆರಂಭಗೊಂಡು ನಿರ್ವಿಘ್ನವಾಗಿ ಸಾಗುತ್ತಿತ್ತು.
ಹೀಗಿರಲು ಒಂದು ದಿನ ವಸಿಷ್ಠರು ಯಾಗವಿಧಿ ಪೂರೈಸಿ ಆಹುತಿ ಅರ್ಪಿಸಿದ ಬಳಿಕ ಮುಂದಿನ ಕರ್ಮಾಂಗಕ್ಕೆ ಸಿದ್ಧರಾಗಿ ಸ್ನಾನಕ್ಕೆ ಹೋಗುತ್ತಾರೆ. ಅದೇ ಸಮಯ ಸಾಧಿಸಿ ಹಗೆ ಸಾಧಿಸಲು ಹೊಂಚು ಹಾಕಿ ಕಾಯುತ್ತಿದ್ದ ರಾಕ್ಷಸ ವಸಿಷ್ಠರ ರೂಪ ಧರಿಸಿ ಸೌದಾಸನ ಮುಂದೆ ಬಂದು ಪ್ರಕಟನಾಗುತ್ತಾನೆ. ನನಗೆ ಮಾಂಸದ ಅಡುಗೆಯ ಊಟ ಸಿದ್ಧಪಡಿಸು, ಇನ್ನು ಮುಂದೆ ಸಾಗುವುದು ತಾಮಸ ಕ್ರಮದ ಯಾಗ.
ಅದಕ್ಕಿಂತ ಮೊದಲು ಮಾಂಸಾಹಾರ ಸೇವಿಸಬೇಕು ಎಂದು ತಿಳಿಸಿ ಆಜ್ಞಾಪಿಸಿದನು. ಅದರಂತೆಯೆ ಸೌದಾಸ ಪಾಕಶಾಲ ಪ್ರವೀಣರಿಗೆ ಭಕ್ಷ್ಯ ಯೋಗ್ಯ ಮಾಂಸದಡುಗೆ ಸಿದ್ಧಪಡಿಸಲು ಸೂಚಿಸಿದನು. ಸಿದ್ಧಗೊಳ್ಳುತ್ತಿದ್ದ ಅಡುಗೆಗೆ ಮಾಯರೂಪಿನಲ್ಲಿ ಬಂದು ರಾಕ್ಷಸ ನರಮಾಂಸವನ್ನು ಸೇರಿಸಿದ.
ಸ್ನಾನ ಆಚಮನಾದಿ ವಿಧಿ ಪೂರೈಸಿ ಮರಳಿ ಬಂದು ಅಶನಕ್ಕೆ ಕುಳಿತ ಗುರು ವಸಿಷ್ಠರಿಗೆ ರಾಜ ಸೌದಾಸನು ಕೈಯಾರೆ ನರಮಾಂಸ ಬಡಿಸಿದನು. ಅರೆ! ಇದೇನು ಎಂದು ಕೋಪೋದ್ರೇಕಕ್ಕೆ ಒಳಗಾದ ಗುರು ವಸಿಷ್ಠರು – “ನನಗೆ ನರ ಮಾಂಸ ಉಣಿಸಲು ಬಡಿಸಿದೆಯಾ? ಪಾಪಿ ನೀನು ನರ ಭಕ್ಷಕ ರಕ್ಕಸನಾಗು” ಎಂದು ಹಿಂದೆ ಮುಂದೆ ಯೋಚಿಸದೆ ಶಪಿಸಿದರು.
ಅಕಾರಣವಾಗಿ ಗುರುಗಳು ಶಪಿಸಿದ್ದನ್ನು ಕಂಡು ಗೊಂದಲಗೊಂಡ ಸೌದಾಸನಿಗೆ ತನ್ನ ತಪ್ಪಿಲ್ಲದೆ ಶಪಿಸಿದ ಗುರುಗಳ ಮೇಲೆ ಕೋಪವೂ ಉಕ್ಕೇರಿತು. ಅವನೂ ಧರ್ಮಾತ್ಮ ಪುಣ್ಯಾತ್ಮನಲ್ಲವೇ? ತನ್ನ ಪುಣ್ಯ ಬಲ ಸಂಚಯ ವಿನಿಯೋಗಿಸಿ ಪ್ರತಿಶಾಪ ನೀಡಲು ಕಮಂಡಲ ಜಲವನ್ನು ಕೈಗೆ ಸುರಿದುಕೊಂಡನು.
ಇದನ್ನು ನೋಡಿದ ಸೌದಾಸನ ಸತಿ ಮದಯಂತಿ ಪತಿಯನ್ನು ತಡೆದು ನಿಲ್ಲಿಸಿದಳು, ಬೇಡಿ ಪ್ರಾರ್ಥಿಸಿ ಪತಿದೇವನನ್ನು ಸಂತೈಸಿದಳು. ತಕ್ಷಣ ಗುರು ವಸಿಷ್ಠರ ಕಾಲಿಗೆರಗಿ ಪ್ರಾರ್ಥಿಸಿ ಅವರಲ್ಲೂ ಬೇಡಿ ಕಾಪಾಡಬೇಕೆಂದು ನಿವೇದಿಸಿದಳು. ಶಾಂತಚಿತ್ತರಾದ ವಸಿಷ್ಠರು ಜ್ಞಾನದಿಂದ ಎಲ್ಲವನ್ನೂ ತಿಳಿದು, ರಕ್ಕಸನ ಕುತಂತ್ರದಿಂದ ಹೀಗಾಗಿ ಬಿಟ್ಟಿತಲ್ಲಾ ಎಂದು ವ್ಯಥೆಗೊಂಡರು.
ಇತ್ತ ಶಪಿಸಲು ಸೌದಾಸ ಹಿಡಿದಿದ್ದ ಜಲದಲ್ಲಿ ಶಾಪಾಗ್ನಿಯ ಉರಿಯೇರಿತ್ತು. ಆದರೂ ನಿಂತು ಅರೆಕ್ಷಣ ವಿವೇಕಿಯಾಗಿ ಯೋಚಿಸಿದ ಸೌದಾಸನಿಗೆ ಗುರುಗಳನ್ನು ಶಪಿಸುವುದು ಅಪರಾಧವೆಂದು ಅರಿವಾಯಿತು. ಆತನ ಕೈಯಲ್ಲಿದ್ದ ಜಲ ಜಾರಿ ಇಳಿದು ಅವನ ಪಾದಕ್ಕೆ ಸುರಿಯಲ್ಪಟ್ಟಿತು. ಕ್ರೋಧಾಗ್ನಿ ತುಂಬಿದ್ದ ಶಾಪಜಲದ ಉರಿಗೆ ಪಾದ ಸುಟ್ಟು ಕರಟಿ ಕಲ್ಮಾಷಪಾದವಾಯಿತು. ಅತ್ತ ವಸಿಷ್ಠರಿಗೂ ತನ್ನ ಪ್ರಮಾದದ ಮನವರಿಕೆಯಾಗಿತ್ತು. ತಾನಿತ್ತ ಶಾಪಕ್ಕೆ ವಿಶಾಪವಾಗಿ “ಹನ್ನೆರಡು ವರ್ಷಗಳ ಕಾಲ ರಕ್ಕಸನಾಗಿರು ನಂತರ ಮರಳಿ ಮಹಾರಾಜನಾಗು” ಎಂದು ಮಿತ ಅವಧಿ ವಿಧಿಸಿದರು.
ಶಾಪವಾಕ್ಯದಂತೆ ಮಹಾರಾಜನಾಗಿದ್ದ ಸೌದಾಸ ರಾಕ್ಷಸನಾಗಿ ಕಾಡಾಡಿಯಾದ. ಅದೇ ಸಂದರ್ಭ ವಸಿಷ್ಠರ ದ್ವೇಷಿ ಕೌಶಿಕ ಮುನಿಯ (ಮತ್ತೆ ವಿಶ್ವಾಮಿತ್ರನಾಗುವವ) ಗಮನಕ್ಕೆ ಈ ಪ್ರಕರಣ ವೇದ್ಯವಾಯಿತು. ಇದೇ ಅವಕಾಶ ಎಂದು ತರ್ಕಿಸಿ ಕಿಂಕರನೆಂಬ ಮಾಯಾ ಶಕ್ತಿಯನ್ನು ಸೃಷ್ಟಿಸಿ ಸೌದಾಸನಲ್ಲಿ ಅವಾಹಿಸಿಬಿಟ್ಟರು. ನರಭಕ್ಷಕ ರಾಕ್ಷಸನೀಗ ಕಿಂಕರನ ದುಮಾರ್ಗದರ್ಶನವೂ ಕೂಡಿ ವಸಿಷ್ಠರ ಪುತ್ರ ಶಕ್ತಿ ಮಹರ್ಷಿಯ ಆಶ್ರಮ ಪ್ರವೇಶಿಸುವಂತೆ ಮಾಡಿತು.
ಅಲ್ಲಿ ವಸಿಷ್ಠ ಪುತ್ರ ಶಕ್ತಿ ಮಹರ್ಶಿಯನ್ನು ಕೊಂದು ತಿಂದು ಬಿಟ್ಟನು. ವಸಿಷ್ಠರು ವಿಚಾರ ತಿಳಿದು ದುಃಖತಪ್ತರಾಗಿ ನಿರ್ದೋಷಿಯನ್ನು ಶಪಿಸಿದ ಕಾರಣ ನನಗಿಂತಹ ಪುತ್ರಶೋಕ ಬಂತೆಂದು ಕೊರಗಿ ಪ್ರಾಣ ತ್ಯಾಗಕ್ಕೆ ಮನ ಮಾಡಿದರು. ಆದರೆ ಹಾಗೆ ಮಾಡದಂತೆ ಏನೋ ತಡೆದಂತಾಯಿತು. ಹಿಂದಿರುಗಿ ನೇರವಾಗಿ ಮಗ ಶಕ್ತಿ ಮಹರ್ಷಿಯ ಆಶ್ರಮದ ಒಳ ಬಂದಾಗ ಶಕ್ತಿ ಮಹರ್ಷಿಯ ಪತ್ನಿ ಅದೃಶ್ಯವಂತಿ ದುಃಖಿತಳಾಗಿದ್ದರೂ, ಮಾವನನ್ನು ಕಂಡು ಅವರಸರದಿಂದ ಎದ್ದು ನಿಂತಳು.
ಆಗ ವಸಿಷ್ಠರಿಗೆ ದಿವ್ಯವಾದ ವೇದಧ್ವನಿಯ ನಾದ ಕೇಳಿಬಂತು. ಅದನ್ನಾಲಿಸಿ ವಿಸ್ಮಯದಿಂದ ಈ ಸ್ವರ ಎಲ್ಲಿಂದ ಬರುತ್ತಿರುವುದು ಎಂದು ಸೊಸೆಯನ್ನು ದಿಟ್ಟಿಸಿದಾಗ ಆಕೆಯಲ್ಲಿ ಗರ್ಭವತಿಯ ಲಕ್ಷಣ ಗಮನಿಸಿದರು. ಪುತ್ರನಳಿದ ದುಃಖ ಒಂದೆಡೆಯಾದರೆ, ಪೌತ್ರ(ಮೊಮ್ಮಗ)ನ ಆಗಮನದ ಸಂತಸ ಮತ್ತೊಂದೆಡೆ. ತನ್ನ ದುಃಖ ಮರೆತು ಸೊಸೆಗೆ ಧೈರ್ಯ ತುಂಬಿ, ಗರ್ಭಕ್ಕೆ ಮಂತ್ರರಕ್ಷೆ ಇತ್ತು ನರಭಕ್ಷಕನಿಂದ ಕಾಪಾಡಿದರು. ಮಾಸಗಳು ತಿರುಗಿ ಒಂದು ದಿನ ಶುಭಗಳಿಗೆಯಲ್ಲಿ ಅದೃಶ್ಯವಂತಿ ಸುಪುತ್ರನಿಗೆ ಜನ್ಮವಿತ್ತಳು.
ವಸಿಷ್ಠರು ತನ್ನ ಜೀವಿತದ ಆಶೆ ತೊರೆದು “ಪರಾಶಾ” ತತ್ಪರನಾಗಿದ್ದಾಗ ಯಾವ ಮಗುವಿನ ಇರುವಿಕೆಯ ವೇದನಾದದಿಂದ ಬದುಕುವ ಆಶೆ ಪಡೆದರೋ ಆ ಪೌತ್ರನಿಗೆ *ಪರಾಶರಾ* ಎಂದು ಹೆಸರಿತ್ತರು. ಸಕಲ ಶಾಸ್ತ್ರ ವೇದ, ವಿದ್ಯಾ ಪಾರಂಗತನಾಗಿ, ಘನ ತಪಸ್ಸಿನ ಮೂಲಕ ಅತಿಶಯ ಜ್ಞಾನ ಪಡೆದು ಕಲಿಯುಗದಲ್ಲಿ ಬದುಕಿಗೆ ಮಾರ್ಗದರ್ಶಿಯಾಗುವ, ಚತುರ್ವರ್ಣಕ್ಕೂ ಬೇಕಾದ ಶಾಸ್ತ್ರವಾದ *ಪರಾಶರ ಸ್ಮೃತಿ* ಯನ್ನು ವಿರಚಿಸಿ ಸ್ಮೃತಿಕಾರನಾದರು.
ಹಿಂದೊಮ್ಮೆ “ಉಪರಿಚರವಸು” ಎಂಬವನು ಇಂದ್ರಾನುಗ್ರಹದಿಂದ ದಿವ್ಯ ವಿಮಾನ ಹೊಂದಿದ್ದನು. ಅದರಲ್ಲಿ ಕುಳಿತು ಆತ ತ್ರಿಲೋಕ ಸಂಚಾರ ಮಾಡುತ್ತಿದ್ದನು. ಹೀಗಿರಲು ಒಂದು ದಿನ ಸ್ವರ್ಗದ ಭೋಗ ಭಾಗ್ಯ ಸಂಭ್ರಮಿಸಿ ತಲ್ಲಿನನಾಗಿದ್ದವ ಥಟ್ಟನೆ ಭೂಲೋಕದೆಡೆ ಸಂಚಾರ ಹೊರಟನು. ಭೂ ವಾತಾವರಣ ಸೇರಿದಾಗ ಶಾಖದಿಂದ ಸಂತ್ರಸ್ತನಾಗಿ ಸಂಪೂರ್ಣ ಬೆವತು ಹೋದನು. ಪರಿಣಾಮ ಉರಿಯೇರಿ ಶಕ್ತಿಪಾತ (ವೀರ್ಯ ಸ್ಖಲನ) ವಾಯಿತು. ಅದು ಯಮುನಾ ತೀರದಲ್ಲಿದ್ದ ಪಕ್ಷಿಯೊಂದರ ಕೊಕ್ಕಿನ ಮೇಲೆ ಬಿದ್ದಿತು.
ಪಕ್ಷಿ ತನ್ನ ಕೊಕ್ಕನ್ನು ಕೊಡವಿ ಚಿಮ್ಮಿದಾಗ ಯಮುನಾ ನದಿಯ ನೀರಿಗೆ ಬಿತ್ತು. ಅದೇ ನದಿ ನೀರಿನಲ್ಲಿ ಬ್ರಹ್ಮ ಶಾಪದಿಂದ ಅದ್ರಿಕೆಯೆಂಬ ಅಪ್ಸರೆ ಮೀನಾಗಿದ್ದವಳು ಆ ಶಕ್ತಿ ಧಾತುವನ್ನು ನುಂಗಿ ಬಿಟ್ಟಳು. ಪರಿಣಾಮ ಗರ್ಭ ತಳೆದು ಒಂದು ಗಂಡು ಒಂದು ಹೆಣ್ಣು ಹೀಗೆ ಎರಡು ಮಕ್ಕಳಿಗೆ ಜನ್ಮವಿತ್ತಳು.
ಶಾಪವಾಕ್ಯದಂತೆ ಆ ಕನ್ಯೆಗೆ ವಿಮೋಚನೆಯಾಗಿ ಅಪ್ಸರೆಯಾದಳು. ಅದ್ರಿಕೆ ಆ ಮಕ್ಕಳಲ್ಲಿ ಹೆಣ್ಣು ಮಗುವನ್ನು ದಾಶರಾಜನ ಕುಟೀರದ ಬಳಿಯೂ, ಗಂಡು ಮಗುವನ್ನು ಕೆಳಗೆ ಬಹುದೂರದ ಮತ್ಸ್ಯೇಶ ಎಂಬ ಅರಸನ ರಾಜಧಾನಿ ಬಳಿಯೂ ಬಿಟ್ಟು ತನ್ನ ಲೋಕ ಸೇರಿದಳು. ದಾಶರಾಜನೂ, ಮತ್ಸ್ಯೇಶನೂ ತಮಗೆ ಸಿಕ್ಕ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಿದ್ದರು.
ದಾಶರಾಜ (ದೋಣಿ ನಡೆಸುವವ) ತಾನು ಸಲಹುತ್ತಿರುವ ಯಮುನೆಯ ತೀರದಲ್ಲಿ ಸಿಕ್ಕಿದ ಸಾಕುಮಗಳಿಗೆ *ಕಾಲಿ* ಎಂದು ಹೆಸರಿಟ್ಟನು. ವಿದ್ಯೆ, ಕುಲಕಸುಬು ಕಲಿಸುತ್ತಾ ಬೆಳೆಸುವಾಗ ಸದ್ಗುಣ, ಸತ್ಯವಂತೆ, ಸುಶೀಲೆಯಾಗಿದ್ದರಿಂದ ಅವಳಿಗೆ *”ಸತ್ಯವತಿ”* ಎಂಬ ಹೆಸರೂ ಸಿದ್ಧವಾಯಿತು. ಶರೀರದಿಂದ ಮೀನಿನ ವಾಸನೆ ಬರುತ್ತಿದ್ದರಿಂದ *ಮತ್ಸ್ಯಗಂಧಿ*, ಈ ವಾಸನೆ ಯೋಜನ ದೂರ ಹಬ್ಬುತ್ತಿದ್ದರಿಂದ *ಯೋಜನಗಂಧಿ* ಹೀಗೆ ಅನ್ವರ್ಥನಾಮಗಳೂ ಇವಳದ್ದಾಯಿತು.