ರಾಜ್ ಕಪೂರ್ ಬಾಲಿವುಡ್ ಜಗತ್ತಿನ ಅಪ್ರತಿಮ ಪ್ರತಿಭಾವಂತ ಕನಸುಗಾರ.
ರಾಜ್ ಕಪೂರ್ 1924ರ ಡಿಸೆಂಬರ್ 14ರಂದು ಜನಿಸಿದರು. ಈತ ತನ್ನ ಬಾಲ್ಯದ ದಿನಗಳಲ್ಲಿ ತಂದೆ ಪೃಥ್ವಿರಾಜ್ ಕಪೂರ್‌ಗೆ "ನಿನ್ನನ್ನು, ನನ್ನ ತಂದೆ ಎಂದು ಈ ಜಗತ್ತು ಗುರುತಿಸುತ್ತದೆಯೇ ವಿನಃ ನನ್ನನ್ನು ಈ ಜಗತ್ತು ನಿನ್ನ ಮಗ ಎಂದು ಗುರುತಿಸುವುದಿಲ್ಲ" ಎಂದು ಹೇಳುತ್ತಿದ್ದರಂತೆ.
ರಾಜ್ ಕಪೂರ್ ಪೃಥ್ವಿ ಥಿಯೇಟರಿನಲ್ಲಿ ಮೊದಲು ಬಾಲ ಕಲಾವಿದನಾಗಿ (ದಿವಾರ್) ನಂತರ ಯುವ ಕಲಾವಿದನಾಗಿ (ಪಠಾಣ್) ಚಿತ್ರದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಸಿನಿಮಾ ಸೆಟ್ ಮತ್ತು ಸಂಗೀತ ಸಂಯೋಜನೆವರೆಗೆ ಆಸಕ್ತಿಯಿಂದ ದುಡಿಯುತ್ತಿದ್ದ. ಪೃಥ್ವಿ ರಾಜ್ ಕಪೂರ್, ದುರ್ಗಾ ಖೋಟೆ ಮತ್ತು ಕೆ. ಸಿ. ದೇವ್ ತಾರಾಗಣದ ಇಂಕ್ವಿಲಾಬ್ ಚಿತ್ರದಲ್ಲಿ ಅಭಿನಯಿಸಿದಾಗ ಆತನಿಗಿನ್ನೂ 11 ವರ್ಷ.
ಅಭಿನಯಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದ ರಾಜ್ ಕಪೂರ್ ನಿರ್ದೇಶಕ ಕೇದಾರ್ ಶರ್ಮಾ ಅವರ ಅಡಿಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಅದೇ ಕೇದಾರ್ ಶರ್ಮಾ ನಿರ್ದೇಶನದ 'ನೀಲ್ ಕಮಲ್' ಚಿತ್ರದಲ್ಲಿ ನಾಯಕ ನಟನಾಗಿ, ಅಂದಿನ ಬಾಲಿವುಡ್ ಜಗತ್ತಿನ ಸ್ನಿಗ್ಧ ಸುಂದರಿ ಮಧುಬಾಲಾಳೊಂದಿಗೆ ಅಭಿನಯಿಸುವ ಅವಕಾಶ ಒದಗಿಬಂತು. ಇದೇ ಚಿತ್ರದಲ್ಲಿ ಬೇಗಂ ಫರಾ ಕೂಡ ಅಭಿನಯಿಸಿದ್ದರು.
ರಾಜ್ ಕಪೂರ್ ಕೇವಲ ನಟ ನಿರ್ದೇಶಕ ಮಾತ್ರವಲ್ಲ, ಗಳಿಸಿದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಚತುರ ವ್ಯಾಪಾರಿ ಮನೋಭಾವದ ವ್ಯಕ್ತಿ ಕೂಡಾ ಆಗಿದ್ದರು. ಕೇದಾರ್ ಶರ್ಮಾರಲ್ಲಿ ಸಹಾಯಕ ನಿರ್ದೇಶಕನಾಗಿದ್ದುಕೊಂಡೇ ಗೌರಿ, ವಾಲ್ಮೀಕಿ ಚಿತ್ರಗಳಲ್ಲಿ ನಟಿಸಿದ್ದರು. ವಿ. ಶಾಂತಾರಾಮ್ ಅವರ ಚಿತ್ರವೊಂದರಲ್ಲಿ ಅಭಿನಯಿಸಿದ್ದಕ್ಕೆ ಕೈತುಂಬ ಹಣವನ್ನು ಪಡೆದರು. ಅದೇ ಹಣದಿಂದ ಚೆಂಬೂರ್‌ನಲ್ಲಿ ಜಾಗ ಖರೀದಿಸಿದರು. ಮುಂದೆ ಅದೇ ಜಾಗದಲ್ಲಿ ಆರ್.ಕೆ. ಸ್ಟುಡಿಯೊ ತಲೆ ಎತ್ತಿ ನಿಂತಿತು.
ಇಂದಿಗೂ ರಾಜ್ ಕಪೂರ್ ಚಿತ್ರಗಳ ಹಾಡುಗಳು ಮನಸ್ಸಿನ ಮೂಲೆಯಲ್ಲಿ ಒತ್ತಾಗಿ ಕುಳಿತಿವೆ. ರಾಜ್ ಹಾಡುಗಳಲ್ಲಿ ಜೀವಸೆಲೆ ಇದೆ. ಅಂದಿನ ಕಲ್ಕತ್ತಾದಲ್ಲಿ ತಮ್ಮ ತಂದೆಯವರ ನ್ಯೂ ಥಿಯೇಟರ್‌ನಲ್ಲಿ ಇದ್ದ ಸಮಯದಲ್ಲಿ ಈತನ ಸಂಗೀತದತ್ತ ಬೆಳೆದ ಒಲವು ಯಾವ ಪರಿ ಇತ್ತು ಎಂದರೆ ಬಂಗಾಲಿ ಗಾಯಕ ಬೊರಾಲ್ ಅವರಲ್ಲಿ ಸಂಗೀತದ ಅಕ್ಷರಾಭ್ಯಾಸ ಪ್ರಾರಂಭ ಮಾಡಿದರು. ಅಂದಿನ ಸಂಗೀತ ಲೋಕದ ದಿಗ್ಗಜರಾದ ಆರ್ ಸಿ. ಬೊರಾಲ್, ಪಂಕಜ್ ಮಲ್ಲಿಕ್, ಕೆ. ಎಲ್ ಸೆಹಗಲ್ ಅವರೊಂದಿಗೆ ತಪ್ಪದೇ ಸಮಯ ಕಳೆಯುತ್ತಿದ್ದರು. ಎಸ್. ಡಿ. ಬರ್ಮನ್ ಮತ್ತು ರಾಜ್ ಕಪೂರ್ ಜೊತೆಯಾಗಿ ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಹಾಡುವ ಮೂಲಕ ಹಾಡುಗಾರನ ಲೋಕಕ್ಕೆ ಸೇರ್ಪಡೆಗೊಂಡರು.
ಖ್ಯಾತ ಗೀತ ರಚನೆಕಾರ ಹಸ್ರತ್ ಜೈಪುರಿ ಹೇಳುವಂತೆ ರಾಜ್ ಕಪೂರ್ ಸ್ವತಃ ಗೀತ ರಚನೆ ಮಾಡುವ ಮೂಲಕ ವಿ. ಶಾಂತಾರಾಮ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಸತ್ಯಜೀತ್ ರಾಯ್ ಸಾಲಿಗೆ ಸೇರಿದ ವಿರಳ ನಿರ್ಮಾಪಕ ನಟರಾದರು. ಅವರ ರಚನೆಯ ಒಂದು ಹಾಡು ಹೀಗಿದೆ:
‘ಮೇರಾ ಜೂತಾ ಹೇ ಜಪಾನಿ
ಯೆ ಪತ್ಲೂನ್ ಇಂಗ್ಲೀಷ್ತಾನಿ
ಸರ್ ಪೆ ಲಾಲ್ ಟೋಪಿ ರೂಸಿ
ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ '
ನನ್ನ ಪಾದುಕೆಗಳು ಜಪಾನ್‌ರದ್ದು
ತೊಟ್ಟ ಚಲ್ಲಣವಿದು ಇಂಗ್ಲಿಷರದು
ನನ್ನ ತಲೆಯಲ್ಲಿರುವ ಕೆಂಪು ಟೋಪಿ ರಷಿಯಾದ್ದು
ಆದರೂ, ಏನೇ ಆಗಲಿ, ನನ್ನ ಹೃದಯ ಮಾತ್ರ ಭಾರತದ್ದು.'
1947 ಫೆಬ್ರವರಿ 6ರಂದು ರಾಜಕಪೂರ್ ತಮ್ಮ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಮುಹೂರ್ತ ಹಾಕಿದರು. ‘ಆಗ್’ ಚಿತ್ರದಲ್ಲಿ ಪ್ರಮುಖ ಸಿನಿಮಾ ನಟಿ ನರ್ಗೀಸ್ ನಟಿಸಿದ್ದರು. ಒಂದು ವರ್ಷದ ನಂತರ "ಆಗ್" ಶಿಮ್ಲಾದಲ್ಲಿ ಬಿಡುಗಡೆಯಾಯಿತು. ಚಿತ್ರ ನಿರ್ಮಾಣಕ್ಕೆ ತಗಲುವ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ತಮ್ಮ ಮೊದಲ ಕಾರನ್ನು ಗಿರವಿ ಇಟ್ಟದ್ದೂ ಅಲ್ಲದೆ ಅದು ಸಾಲದ್ದರ ಪರಿಣಾಮವಾಗಿ ಮನೆ ಆಳು ದ್ವಾರಕನಿಂದ ಕೂಡ ಸಾಲ ಎತ್ತಿದ್ದರು. ವಿತರಕರು ಚಿತ್ರದ ಬಗ್ಗೆ ಅಷ್ಟು ಅಸಕ್ತಿ ತೋರದ ಪರಿಣಾಮವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿತು.
"ಆಗ್" ವೈಫಲ್ಯದ ನಂತರ ರಾಜ್ ಕಪೂರ್ ಅವರ ನಿರ್ಮಾಣದಲ್ಲಿ ಬಂದಿದ್ದು ಬರಸಾತ್ (1949) ಈ ಬಾರಿ ರಾಜ್ ಸೋಲಲಿಲ್ಲ. ಪ್ರೇಮ, ಅಧ್ಯಾತ್ಮ ಮತ್ತು ವಾಸ್ತವಿಕತೆಗಳ ಮೂರಂಶಗಳನ್ನು ಬರಸಾತ್ ಒಳಗೊಂಡಿತ್ತು. ತೀರಾ ಸಾಧಾರಣ ಕಥೆಯನ್ನು ಅದ್ಭುತವಾಗಿ ಹೇಳುವ ಕೈಚಳಕವನ್ನು ಇಲ್ಲಿ ರಾಜ್ ತೋರಿಸಿದರು. ಬರಸಾತ್ ಚಿತ್ರದಲ್ಲಿ ಶಂಕರ್ ಜೈಕಿಶನ್, ಹಸ್ರತ್ ಜೈಪುರಿ ಮತ್ತು ಶೈಲೇಂದ್ರ ಚಿತ್ರದ ಸಂಗೀತದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಇದೇ ಚಿತ್ರದಲ್ಲಿನ ‘ಪ್ಯಾರ್ ಹುವಾ ಇಕರಾರ್ ಹುವಾ ಪ್ಯಾರಸೇ ಫಿರ್ ಕ್ಯೂಂ ಡರತಾ ಹೈ ದಿಲ್’ ಇಂದಿನ ಪೀಳಿಗೆಗೂ ಇಷ್ಟವಾದ ಹಾಡು.
ಬಾಲಿವುಡ್ ಜಗತ್ತು ನಿಧಾನವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವಂತೆ ಹೆಚ್ಚು ಕಡಿಮೆ ಅದರೊಂದಿಗೆ ಬೆಳೆದ ಆರ್. ಕೆ. ಸ್ಟುಡಿಯೊ, ಕಾಲಕ್ರಮೇಣ ಅನೇಕ ಚಿತ್ರಗಳನ್ನು ನೀಡಿತು. ಸ್ವಾತಂತ್ರ್ಯಾನಂತರ ಆರ್. ಕೆ ( ರಾಜ್ ಕಪೂರ್) ತಮ್ಮ ಬ್ಯಾನರಡಿಯ ಚಿತ್ರಗಳಲ್ಲಿ ಸಾಮಾನ್ಯ ಮನುಷ್ಯನ ಬದುಕಿನ ಕಥೆಗಳನ್ನು ಆಯ್ದುಕೊಳ್ಳಲು ಪ್ರಾರಂಭಿಸಿದರು. ಅಲ್ಲದೆ ಅವರ ಹೆಚ್ಚಿನ ಚಿತ್ರಗಳಲ್ಲಿನ ನಾಯಕನ ಹೆಸರು ರಾಜು. ಅಂದರೆ ಸಾಧಾರಣ ಕನಸು ಇರುವ ವ್ಯಕ್ತಿ. ಎಲ್ಲರಿಗೂ ಪ್ರಿಯನಾದವ. ‘ದಾಸ್ತಾನ್’ (1950), ‘ಆವಾರಾ’ (1951), ‘ ಶ್ರೀ 420’ (1955), ‘ಸಂಗಮ್’, ‘ತೀಸ್ರೀ ಕಸಂ’, ‘ಮೇರಾ ನಾಮ್ ಜೋಕರ್’, ‘ಜಿಸ್ ದೇಶ್ ಮೇ ಗಂಗಾ ಬೆಹತೀ ಹೈ’, ‘ಸತ್ಯಂ ಶಿವಂ ಸುಂದರಂ’, ‘ಬಾಬ್ಬಿ’, ‘ರಾಮ್ ತೇರಿ ಗಂಗಾ ಮೈಲಿ’ ಮುಂತಾದವು ಇವರ ಪ್ರಮುಖ ಚಿತ್ರಗಳು. ಮಗ ರಿಷಿ ಕಪೂರ್ ಜೊತೆಗೆ ಡಿಂಪಲ್ ಕಪಾಡಿಯಾಳನ್ನು ಜೋಡಿಯಾಗಿಸಿದ ‘ಬಾಬ್ಬಿ’ 80ರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡಿತು.
ರಾಜ್ ಕಪೂರ್ ಎಂಬ ಹೆಸರನ್ನು ನೆನೆದಾಗಲೆಲ್ಲಾ ಅವರಿಗೆ ಧ್ವನಿಯಾಗಿದ್ದ ಮುಖೇಶ್ ಕೂಡಾ ನೆನಪಿಗೆ ಬರುತ್ತಾರೆ. ಮುಖೇಶ್ ನಿಧನರಾದಾಗ ರಾಜ್ ಕಫೂರ್ ಕೂಡಾ ಅದನ್ನೇ ಹೇಳಿದ್ದರು “ನಾನ್ನು ನನ್ನ ಧ್ವನಿಯನ್ನು ಕಳೆದುಕೊಂಡೆ” ಎಂದು. ಅವರ ಚಿತ್ರದ ಹಾಡುಗಳಾದ ‘ದಿಲ್ ಕಾ ಹಾಲ್ ಸುನ್‌ಲೇ ದಿಲ್‌ವಾಲಾ (ಶ್ರೀ ೪೨೦) ‘, ‘ಆಜಾ ಸನಮ್ ಮಧುರ್ ಚಾಂದನಿ ಮೇ ಹಮ್ (ಚೋರಿ ಚೋರಿ)’, ‘ಜಹಾ ಮೆ ಜಾತಿ ಹೂ ವಹಿ ಚಲೆ ಆತೆ ಹೊ(ಚೋರಿ ಚೋರಿ)’, ‘ಯೇ ರಾತ್ ಭೀಗೀ ಭೀಗೀ, ಯೆ ಮಸ್ತ್ ಫಿಜಾಯೆ (ಚೋರಿ ಚೋರಿ)’, ‘ಮಸ್ತಿ ಭರಾ ಹೆ ಸಮಾ (ಪರ್ವರಿಶ್)’, ‘ಎ ಭಾಯ್, ಜರಾ ದೇಖ್ ಕೆ ಚಲೋ (ಮೇರಾ ನಾಮ್ ಜೋಕರ್) ‘, ‘ಪ್ಯಾರ್ ಹುವಾ ಇಕರಾರ್ ಹುವಾ ಹೈ (ಶ್ರೀ ೪೨೦)’, ‘ಲಾಗಾ ಚುನರಿ ಮೆ ದಾಗ್ (ದಿಲ್ ಹಿ ತೊ ಹೆ)’, ‘ಜಾನೆ ಕಹಾ ಗಯೇ ಓ ದಿನ್’(ಮೇರಾ ನಾಮ್ ಜೋಕರ್), ‘ಸತ್ಯಂ ಶಿವಂ ಸುಂದರಂ’ ಇನ್ನಿಲ್ಲದಂತೆ ಸಂಗೀತ ಪ್ರಿಯರನ್ನು ಆವರಿಸಿವೆ.
ರಾಜ್ ಕಪೂರ್ ಅವರಿಗೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, 3 ರಾಷ್ಟ್ರೀಯ, ಹನ್ನೊಂದು ಫಿಲಂಫೇರ್, ಎರಡು ಕೇನ್ಸ್ ಚಿತ್ರೋತ್ಸವದ ಪ್ರಶಸ್ತಿಗಳು ಸಂದವು. ಸಿನಿಮಾ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿಗೆ ಇವರ ಹೆಸರನ್ನು ಇರಿಸಲಾಗಿದೆ.
ಬಾಲಿವುಡ್ ಜಗತ್ತಿಗೆ ವಿಭಿನ್ನ ಪರಂಪರೆ ನೀಡಿದ ರಾಜ್ ಕಪೂರ್, 1988ರ ಜೂನ್ 2ರಂದು ನಿಧನರಾದರು. ಕಪೂರ್ ವಂಶ ಇಂದೂ ಚಿತ್ರರಂಗವನ್ನು ಮುಂದಿನ ತಲೆಮಾರಿನ ಕಲಾವಿದರೊಂದಿಗೆ ಬೆಳಗುತ್ತಾ ಸಾಗಿದೆ. ರಾಜ್ ಕಪೂರ್ ಹತ್ತು ಹಲವು ನಿಟ್ಟಿನಲ್ಲಿ ಚಿರಸ್ಮರಣೀಯರು.