Episode (ಸಂಚಿಕೆ) – 2

SANTOSH KULKARNI
By -
0

 ಮಹಾರಾಣಿಯ ಆದೇಶದಂತೆ ಸಾಧನೆಗೆ ತೊಡಗಿದ ಉತ್ತಂಕ ರಾತ್ರಿ ಹಗಲು ರಾಣಿಯನ್ನು ಕಾಣಬೇಕೆಂಬ ಛಲದಿಂದ ಅಲ್ಲೆ ಬಿಡಾರ ಬಿಟ್ಟನು. ರಾಣಿಯ ನಿತ್ಯ ದಿನಚರಿಗಳ ಅದೃಶ್ಯ ಚಲನವಲನಗಳನ್ನು ಗಮನಿಸಿ ಒಂದು ದಿನ ರಾಣಿ ಸ್ನಾನಕಾಲದಲ್ಲಿ ಕಿವಿಯೋಲೆ ತೆಗೆದಿರಿಸಿ ಅಭ್ಯಂಗ ಸ್ನಾನಾದಿಗಳನ್ನು ಪೂರೈಸಿ ಬರುವಾಗ ಕಣ್ಣಾರೆ ಮಹಾರಾಣಿಯನ್ನು ಕಂಡು “ಮಹಾತಾಯಿ ನಾನು ಸಾಧಿಸಿದೆ… ಬೇಡಿರುವ ಗುರು ಕಾಣಿಕೆ ನೀಡುವಿರಾ” ಎಂದು ಶಿರಬಾಗಿ ಕರ ಜೋಡಿಸಿ ಬೇಡಿದನು. ಆಗ “ವತ್ಸಾ ನಿನ್ನ ಹಠ ಸಾಧನೆಗೆ ಸಂತೃಪ್ತಳಾಗಿದ್ದೇನೆ. 

ಆದರೆ ಒಂದು ಮಹತ್ತರ ವಿಚಾರ ಹಾಗು ಎಚ್ಚರಿಕೆಯನ್ನು ನಿನಗೆ ತಿಳಿಸಬೇಕಾಗಿದೆ. ಅಷ್ಟಕುಲ ನಾಗ ಸಂಕುಲದ ತಕ್ಷಕ ಈ ಓಲೆಯ ಮೇಲೆ ವ್ಯಾಮೋಹವಿರಿಸಿ ಈಗಾಗಲೆ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದಾನೆ. ಒಂದು ವೇಳೆ ನಾನಿದನ್ನು ನಿನಗಿತ್ತರೆ, ನೀನೇನಾದರು ಅರೆಕ್ಷಣದ ಎಚ್ಚರಿಕೆ ತಪ್ಪಿದರೂ ಈ ದಿವ್ಯ ಓಲೆಗಳು ತಕ್ಷಕನ ಪಾಲಾದೀತು. ಆತ ಅಪಹರಿಸದೆ ಬಿಡಲಾರ” ಎಂದು ಜಾಗ್ರತೆಯ ಮಾತುಗಳನ್ನಾಡಿ ತನ್ನದ್ದಾದ ಮಹಿಮಾನ್ವಿತ ಓಲೆಗಳನ್ನು ನೀಡುತ್ತಾಳೆ.

ಅದ್ಬುತ ಮಹಿಮೆಯ ಓಲೆಗಳನ್ನು ಪಡೆದ ಉತ್ತಂಕನು ಗುರುದಕ್ಷಿಣೆಯನ್ನು ಸಮರ್ಪಿಸಲು ಗುರು ಮಠದತ್ತ ಒಂದೇ ಸಮನೆ ಬರುತ್ತಿರ ಬೇಕಾದರೆ ದಣಿದು ಬಳಲಿ ಬಾಯಾರಿದನು. ಆಯಾಸಗೊಂಡ ಉತ್ತಂಕ ವನಮಧ್ಯದ ದಾರಿಯಲ್ಲಿ ಸಾಗುತ್ತಿರುವಾಗ ಕೆರೆಯೊಂದನ್ನು ಕಂಡು ಹರ್ಷಿತನಾದನು. ತನ್ನ ತೃಷೆ ನಿವಾರಿಸಲು ಒಂದು ಬೊಗಸೆ ನೀರು ಕುಡಿಯುವ ನಿರ್ಣಯ ಮಾಡಿದನು. ಆಗ ರಾಣಿಯ ಮಾತು ಸ್ಮರಣೆಗೆ ತಂದು ತನ್ನ ಸುತ್ತ ಸೂಕ್ಷ್ಮವಾಗಿ ಯಾರಾದರೂ ಇದ್ದಾರೋ ಎಂದು ಅವಲೋಕಿಸಿ ನೋಡಿದನು.


ಯಾರು ಇಲ್ಲದಿರುವುದನ್ನು ಖಚಿತಪಡಿಸಿ, ಸುರಕ್ಷಿತವಾಗಿ ಓಲೆಗಳನ್ನು ತನ್ನ ಬಳಿಯೇ ಒಂದು ಕಲ್ಲಿನ ಮೇಲಿರಿಸಿ ನೀರು ಕುಡಿದನು. ಬಾಯಾರಿಕೆ ನೀಗಿಸಿ ತಿರುಗಿ ನೋಡಿದರೆ ಇಟ್ಟಿರುವ ಓಲೆಗಳಿಲ್ಲ.. ಮಾಯವಾಗಿದೆ. ಅಯ್ಯೋ ಅನರ್ಥವಾಯಿತಲ್ಲಾ… ಕಷ್ಟಪಟ್ಟು ಸಾಧಿಸಿದ ಅತ್ಯಮೂಲ್ಯ ಓಲೆಗಳನ್ನು ಕಳಕೊಂಡೆನಲ್ಲಾ! ಎಂದು ಮಮ್ಮಲ ಮರುಗಿ ದೇವಾದಿ ದೇವತೆಗಳನ್ನು ಗೋಗರೆದು ಬಿನ್ನವಿಸಿ ಅಳತೊಡಗಿದನು.


ಅಷ್ಟ ದಿಕ್ಪಾಲಕರನ್ನು ಸಹಾಯಕ್ಕಾಗಿ ಕರೆದು ರೋದಿಸಿದನು. ಕೊನೆಗೆ ದೇವರಾಜ ಇಂದ್ರನನ್ನೇ ಸ್ತುತಿಸಿ ಅಸಹಾಯಕನಾಗಿ ಪರಿ ಪರಿಯಾಗಿ ಬೇಡಿಕೊಂಡನು. ಆರ್ತನಾಗಿ ಆಕ್ರಂದನಗೈಯುತ್ತಿರುವ ಉತ್ತಂಕನ ಸ್ಥಿತಿ ಕಂಡು ಮನ ಕರಗಿದ ಇಂದ್ರ ಪ್ರಕಟನಾದನು. ದಿವ್ಯವಾದ ಕಿವಿಯ ಓಲೆಗಳು ಏನಾಗಿವೆ, ಅವುಗಳನ್ನು ಮರಳಿ ಪಡೆಯುವ ದಾರಿ ಹೇಗೆ ಎಂದು ಬೋಧಿಸಿದನು. “ಹೇ ಉತ್ತಂಕಾ, ಕಿವಿಯೋಲೆಗಳನ್ನು ತಕ್ಷಕನೆಂಬ ನಾಗ ಅಪಹರಿಸಿ ಪಾತಾಳ ಸೇರಿದ್ದಾನೆ. ನೀನು ಪಾತಾಳಕ್ಕಿಳಿದು ನಾಗರಾಜ ವಾಸುಕಿಯನ್ನು ಬೇಡಿಕೊಳ್ಳಬೇಕು. ಆಗ ಆತ ನಿನಗೊಲಿದು ನೀಡಿದರೆ ನಿನಗೆ ಮರಳಿ ಸಿಕ್ಕೀತು” ಎಂದು ಪರಿಹಾರ ಮಾರ್ಗ ಸೂಚಿಸಿದನು.


ಕರುಣಾಮಯಿಯಾಗಿ ತನಗೊದಗಿದ ಸಂಕಷ್ಟ ಪರಿಹಾರಕ್ಕೆ ದಾರಿ ತೋರಿದ ದೇವೇಂದ್ರನಿಗೆ ನಮಿಸಿ ಕೃತಜ್ಞತೆ ಸಲ್ಲಿಸಿ ಉತ್ತಂಕ ಪಾತಾಳದತ್ತ ಪ್ರಯಾಣ ಬೆಳೆಸಿದನು. ಬಹು ಶ್ರಮದಾಯಕ ಯತ್ನದಿಂದ ನಾಗರಾಜ ವಾಸುಕಿಯನ್ನು ಕಂಡು ಪ್ರಣಾಮಗಳನ್ನು ಸಲ್ಲಿಸಿದನು. ತನ್ನ ಪರಿಭವ ವೇದನೆಯನ್ನು ವಿವರಿಸಿ, ಕರುಣೆ ತೋರಬೇಕೆಂದು ಬೇಡಿಕೊಂಡನು. ನಾಗರಾಜ ವಾಸುಕಿಗೆ ಉತ್ತಂಕನ ಗುರುಭಕ್ತಿ, ನಿಷ್ಠೆ, ಪ್ರಯತ್ನಗಳು ಪ್ರಸನ್ನತೆ ಒದಗಿಸಿದ ಕಾರಣ ಆತ ತಕ್ಷಕನನ್ಮು ಕರೆದು ಓಲೆಗಳನ್ನು ಪುನರಪಿ ಉತ್ತಂಕನಿಗೆ ನೀಡುವಂತೆ ಆದೇಶಿಸಿದನು.


ಓಲೆಗಳು ಸಿಕ್ಕಿದಾಗ ಪರಮಾನಂದಗೊಂಡ ಉತ್ತಂಕ ನಾಗರಾಜ ವಾಸುಕಿಯನ್ನು ಬಹುವಿಧ ವಿಧಾನಗಳಿಂದ ಸಂಸ್ತುತಿಸಿ ಅಲ್ಲಿಂದ ನೇರವಾಗಿ ಗುರು ಮಠದತ್ತ ಹೊರಟನು. ಬಹು ಜಾಗ್ರತೆಯಿಂದ ಓಲೆಗಳ ಮೇಲೆ ನಿಗಾ ಇರಿಸಿ, ಎಲ್ಲೂ ವಿರಮಿಸದೆ ಬಂದು ಗುರು ಪತ್ನಿಗೆ ಗುರುದಕ್ಷಿಣೆಯಾಗಿ ಆಕೆ ಬಯಸಿದ ಮಹಿಮಾನ್ವಿತ ಓಲೆಗಳನ್ನು ಸಮರ್ಪಿಸಿದನು. ಶಿಷ್ಯನ ಸಾಧನೆಯಿಂದ ಸಂತುಷ್ಟರಾದ ಗುರುವರ್ಯ ಹಾಗು ಗುರುಪತ್ನಿಯರಿಬ್ಬರೂ ಆಶೀರ್ವಾದವಿತ್ತು ಕಳುಹಿಸಿದ್ದರು.ಜನಮೇಜಯನ ಆಸ್ಥಾನಕ್ಕೆ ಬಂದಿದ್ದ ಉತ್ತಂಕ ತಾನು ಗುರುದಕ್ಷಿಣೆ ಸಮರ್ಪಿಸಿದ ಸಾಧನಾಮಯ ಕಥೆಯನ್ನು ಮಹಾರಾಜನಿಗೆ ವಿವರಿಸಿ ತಿಳಿಸಿದನು.


ಉತ್ತಂಕ ಈ ಪ್ರಕರಣವನ್ನು ಜನಮೇಜಯನಿಗೆ ತಿಳಿಸುವಲ್ಲಿ ಗುರುತರ ಕಾರಣವಿತ್ತು. ಅದೇನೆಂದರೆ ತಾನೇನೂ ಅನ್ಯಾಯ ಮಾಡದಿದ್ದರೂ ತಕ್ಷಕ ಓಲೆಗಳನ್ನು ಅಪಹರಿಸಿ, ಅತ್ತು ಗೋಗರೆಯುವಂತೆ, ಕಂಗಾಲಾಗಿ ಪರಿತಪಿಸುವಂತೆ ಮಾಡಿದ್ದನು. ಬಳಿಕ ಪಾತಾಳದವರೆಗೆ ಸಾಗುವ ಅಸಂಭವ ಕಾರ್ಯ ಸಾಧಿಸುವ ಪ್ರಯಾಸ ಸೃಷ್ಟಿಸಿದ್ದನು. ಹಾಗಾದರೆ ತನಗೆ ಇಷ್ಟು ಕಷ್ಟವನ್ನು ನೀಡಿದ ತಕ್ಷನ ಮೇಲೆ ಕೋಪಗೊಂಡು, ಒಂದಲ್ಲ ಒಂದು ದಿನ ಸಮರ್ಥನೋರ್ವನನ್ನು ಕಂಡು ದುಷ್ಟ ತಕ್ಷಕನಿಗೆ ತಕ್ಕ ಶಾಸ್ತಿ ಮಾಡಿಯೇ ಮಾಡುತ್ತೇನೆಂಬ ಪಣ ತೊಟ್ಟಿದ್ದನು. ಅಂತಹ ಸಮಯವನ್ನು ಪ್ರತೀಕ್ಷೆ ಮಾಡುತ್ತಾ ಪ್ರತಿಕಾರ ತೀರಿಸಲು ಕಾಯುತ್ತಿದ್ದನು. ಉತ್ತಂಕನಿಗೆ ಜನಮೇಜಯನೇ ಈ ಕಾರ್ಯಕ್ಕೆ ಸಮರ್ಥನೆಂದು ಸ್ಪಷ್ಟವಾದಾಗ ಅದಕ್ಕೆ ಪೂರಕವಾದ ಯೋಜನೆಯೊಂದನ್ನು ರೂಪಿಸಿ ಹಸ್ತಿನಾವತಿ ಸೇರಿದ್ದನು.

Post a Comment

0Comments

Post a Comment (0)