Episode (ಸಂಚಿಕೆ) – 5

SANTOSH KULKARNI
By -
0

 ಪರೀಕ್ಷಿತ ಮಹಾರಾಜ ಹತ ಪ್ರಾಣನಾದದ್ದನ್ನು ಖಚಿತ ಪಡಿಸಿಕೊಂಡು ತಕ್ಷಕ ಮತ್ತವನ ಪಡೆ ಅಲ್ಲಿಂದ ಅದೃಶ್ಯವಾಯಿತು. ಇತ್ತ ಶೋಕ ಸಾಗರದಲ್ಲಿ ಮುಳುಗಿದ ಹಸ್ತಿನಾವತಿಯ ಮಕ್ಕಳಿಗೆ ಪಿತನ, ವೃದ್ದರಿಗೆ ಸುತನ, ಮಹಿಳೆಯರಿಯಗೆ ಗಂಡನ, ಋಷಿವರೇಣ್ಯರಿಗೆ ದಾತಾರನನ್ನು ಕಳೆದುಕೊಂಡ ಸಮಾನ ದುಃಖ ಮಡುಗಟ್ಟಿದೆ. ಎಷ್ಟು ಅತ್ತರೂ ಸತ್ತವರು ಮರಳಿ ಬರುವರೇ? ಅಂತ್ಯ ಸಂಸ್ಕಾರಾದಿ ಅಪರ ಕ್ರಿಯೆಗಳನ್ನು ಪ್ರಾಜ್ಞರ ಸೂಚನೆಯಂತೆ ವಿಧಿವತ್ತಾಗಿ ಪೂರೈಸಿಯಾಯಿತು.

ಕೆಲಕಾಲದ ಬಳಿಕ ರಾಜ್ಯಕ್ಕೆ ಅರಾಜಕತೆ ಬರಬಾರದೆಂದು ಮಂತ್ರಿಮಂಡಲದ ತೀರ್ಮಾನದಂತೆ ಬಾಲಕನಾದ ಅರಸು ಕುಮಾರ ಜನಮೇಜಯ ನಿನಗೆ ಪಟ್ಟಾಭಿಷೇಕ ಮಾಡಿಸಿದ್ದರು. ಮಂತ್ರಿಗಳ ಮಾರ್ಗದರ್ಶನದಲ್ಲಿ ರಾಜ್ಯಭಾರ ಸಾಗುತ್ತಿತು. ಬಾಲಕನಾದ ನಿನಗೆ ಪರೀಕ್ಷಿತರಾಜನ ಸಾವಿಗೆ ಶೃಂಗಿಯ ಶಾಪವೇ ಕಾರಣವೆಂದು ಹಿರಿಯರು ಹೇಳಿರುವುದರಿಂದ ತಕ್ಷಕನ ದ್ರೋಹ ಮರೆಗೆ ಸರಿದು ಹೋಯಿತು. ತಕ್ಷಕನ ಘೋರವಿಷವನ್ನೂ ಹೀರಬಲ್ಲ ವಿಷವೈದ್ಯ, ಮಂತ್ರ ಪ್ರವೀಣ ಕಾಶ್ಯಪ ತಕ್ಷಕನಿಂದ ಪ್ರಲೋಭನೆಗೆ ಒಳಗಾಗಿ ರಾಜನ ಪ್ರಾಣರಕ್ಷೆಗಿಂತಲೂ ತನಗಿತ್ತ ಹೇರಳ ದ್ರವ್ಯಕ್ಕೆ ತೃಪ್ತನಾಗಿ ಹಿಂದಿರುವಂತೆ ಮಾಡಿದ್ದು ಮಹಾ ಕುತಂತ್ರ. ಈ ವಿಚಾರ ಜನರಿಗಾಗಲಿ, ನಿನಗಾಗಲಿ ಅರಿಯದೇ ಉಳಿದು ಹೋಯಿತು.

ತಕ್ಷಕನಿಂದ ನಿನ್ನ ಪಿತನನ್ನು ಕಾಪಾಡುವ ಶಕ್ತಿ ಕಾಶ್ಯಪನಿಗಿತ್ತು. ಏನು ಮಾಡೋಣ ಆ ತಕ್ಷಕ ಇದನ್ನು ಅರಿತು ಷಡ್ಯಂತ್ರ ವಿರಚಿಸಿ ವಂಚಿಸಿದ. ಪರೀಕ್ಷಿತ ಮಹಾರಾಜನಿಂದ ತಕ್ಷಕನಿಗೇನೂ ಅಪಚಾರವಾಗಿರಲಿಲ್ಲ. ದ್ವೇಷ ಕಾರಣವೂ ಇರಲಿಲ್ಲ. ನಿನ್ನನ್ನು ಅನಾಥನನ್ನಾಗಿಸಿದ. ಚಂದ್ರವಂಶದ ದೊರೆ ಅಳಿದು ಹೋಗುವಂತೆ ಮಾಡಿದ. ಪ್ರಜಾರಂಜಕನಾದ ಸಾಮ್ರಾಟ ಆತನ ದುರ್ಬುದ್ಧಿಗೆ ಬಲಿಯಾಗುವಂತಾಯಿತು. ನಿನ್ನ ತಾಯಿ ಯೌವನದಲ್ಲೇ ವಿಧವೆಯಾದಳು. ಪಿತೃ ವಾತ್ಸಲ್ಯದಲ್ಲಿ ಬೆಳೆಯುವ, ರಾಜನೀತಿಯನ್ನು, ಬಹುವಿಧ ಜ್ಞಾನವನ್ನು ನಿನ್ನ ತಂದೆಯಿಂದ ಕಲಿಯುವ ಸುಯೋಗ ಇನ್ನಿಲ್ಲವಾಗಿ ನೀನೂ ನತದೃಷ್ಟನಾಗುವಂತಾಯಿತು. ಇದಕ್ಕೆಲ್ಲ ಕಾರಣೀಕರ್ತನಾದವ ತಕ್ಷಕ.

ಇಂತಹ ದುಷ್ಕೃತಿ ಎಸಗಿರುವ ನಿನ್ನ ಪಿತೃಘಾತಕನನ್ನು ಶಿಕ್ಷಿಸುವ ಪೂರ್ಣಾಧಿಕಾರಿಯೂ, ಸರ್ವ ಸಮರ್ಥನೂ ನೀನಾಗಿರುವೆ. ಉತ್ತಂಕ ನಾಮಕ ನಾನಾದರೋ ಕೇವಲ ಬಡ ಬ್ರಾಹ್ಮಣನಾಗಿರುವೆ. ನಿನಗೆ ಈ ವಿಚಾರ ತಿಳುಹಿಸಿ ಪುತ್ರ ಧರ್ಮದ ಪಾಲನೆಗೆ ನಿನ್ನನ್ನು ಜಾಗೃತಗೊಳಿಸುವುದಕ್ಕಾಗಿ ಬಂದಿರುವೆ. ಆ ನೀಚ ತಕ್ಷಕನನ್ನು ಶಿಕ್ಷಿಸಿ ತಕ್ಕ ಶಾಸ್ತಿ ಮಾಡಿದರೆ ನಿನ್ನ ಗತಿಸಿದ ಪಿತನಿಗೂ ಶಾಂತಿಯಾದೀತು. ಪಿತೃ ಸಂತೃಪ್ತಿ ಮಗನಾದವನಿಗೆ ಆದ್ಯ ಕರ್ತವ್ಯವೂ ಹೌದು. ನಿನ್ನನ್ನು ಹುರಿದುಂಬಿಸುವುದಲ್ಲ ದುಷ್ಟ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುತ್ತಿದ್ದೇನೆ.

ಮಹಾರಾಜ ನೀನು ಈಗಾಗಲೇ ಅದೆಷ್ಟೋ ಯಾಗ ಯಜ್ಞ ಮಾಡಿದವನಿದ್ದಿಯಾ… ಪಿತೃ ಮನಃಶಾಂತ್ಯರ್ಥ ಮಹಾ ಸರ್ಪಯಾಗ ಮಾಡಿ ಪೀಡಕರಾದ ಸರ್ವ ಸರ್ಪ ಸಂಕುಲವನ್ನೇ ಹೋಮಿಸಿ ಬಿಡು. ನಿನಗೂ ಕೀರ್ತಿ ನನಗೂ ನೆಮ್ಮದಿ ಎಂದು ಪ್ರೇರೇಪಿಸಿದನು. ಉತ್ತಂಕನ ಮಾತುಗಳು ಸತ್ಯವೇ ಹೌದಾದರೂ ಇದರೊಳಗೆ ತನಗಾದ ಅನ್ಯಾಯದ ವಿರುದ್ಧ ಪ್ರತಿಕಾರ ತೀರಿಸುವ ಉದ್ದೇಶವೂ ಸಮ್ಮಿಳಿತವಾಗಿತ್ತು.

ಜನಮೇಜಯನಿಗೆ ಈ ವಿಚಾರ ಕೇಳಿದಾಗ ಕೋಪದಿಂದ ಸೆಟದು ನಿಂತನು. ಸೇಡಿನ ಕಿಚ್ಚು ಮನಸ್ಸಿಗಾವರಿಸಿತು. ಮಂತ್ರಿವರೇಣ್ಯರ ಮಾತಿನಂತೆ ಸತ್ಯಾಸತ್ಯತೆಯ ಚಿಂತನೆ, ವಿಚಾರಣೆ, ಪರಿಶೀಲನೆಗೈದಾಗ ತಕ್ಷಕನ ಕೃತಿಗಳು ನಿಜವೆಂದು ತಿಳಿಯಿತು. ಈಗ ಜನಮೇಜಯನನ್ನು ತಡೆಯುವವರು ಯಾರೂ ಉಳಿದಿಲ್ಲ. ಉತ್ತಂಕ ಸೂಚಿಸಿದಂತೆ ಸರ್ಪಯಾಗ ವಿರಚಿಸುವ ನಿರ್ಣಯ ಕೈಗೊಂಡಿದ್ದೇನೆ. ಅದಕ್ಕೆ ಬೇಕಾದ ಸಕಲ ಸಿದ್ದತೆಗಳು ನಡೆಯಲಿ ಎಂದು ಆದೇಶಿಸಿದನು. ತನ್ನ ಸಂಕಲ್ಪ ಕಾರ್ಯ ಸಿದ್ದಿಯ ಮುಹೂರ್ತಕ್ಕಾಗಿ ಉತ್ತಂಕ ಉತ್ಸುಕನಾಗಿ ಕಾತರಗೊಂಡನು. ರಾಜಾ… ಈ ಯಾಗ ಸಮಾಪ್ತಿವರೆಗೆ ಇಲ್ಲೇ ಇದ್ದು ಅಗತ್ಯವಿದ್ದಲ್ಲಿ ಸೂಕ್ತ ಸಲಹೆ ಸೂಚನೆ ನೀಡುತ್ತಿರುತ್ತೇನೆ ಎಂದು ಸಲಹೆಗಾರನಾಗಿ ಉತ್ತಂಕ ಉಳಿದು ಕೊಂಡನು.

Post a Comment

0Comments

Post a Comment (0)