Episode (ಸಂಚಿಕೆ) – 11

SANTOSH KULKARNI
By -
0

     ಕನಸಿನಂತೆ ನಡೆದು ಹೋದ ಘಟನೆಯನ್ನು ಜ್ಞಾಪಿಸಿ ಭಯಗೊಂಡ ಸತ್ಯವತಿ ಚಿಂತೆಗೊಂಡಳು. ಆಗ ಪರಮ ಋಷಿವರೇಣ್ಯರಾದ ಪರಾಶರರು ಸಮಾಧಾನ ಪಡಿಸಿ ” ಇಲ್ಲೇನು ನಡೆದಿದೆಯೋ ಅದು ರಹಸ್ಯವಾಗಿರಲಿ. ಮುಂದೆ ಕಾಲ ಕೂಡಿ ಬಂದಾಗ ಈ ರಹಸ್ಯ ತನ್ನಿಮದ ತಾನೆ ಬಯಲಾಗಲಿದೆ. ಅಲ್ಲಿಯವರೆಗೆ ಚಿಂತಿಸ ಬೇಡ” ಎಂದು ಸಂತೈಸಿದರು. ನಿನ್ನ ಚಿಂತೆಗೆ ಕಾರಣ ನಷ್ಟಗೊಂಡಿರುವ ನಿನ್ನ ಕನ್ಯತ್ವ, ಅದು ಯಾವ ತರಹದ ನ್ಯೂನ್ಯತೆಯೂ ಇಲ್ಲದಂತೆ ಪುನರ್ ಪ್ರಾಪ್ತಿಯಾಗುವಂತೆ ಅನುಗ್ರಹಿಸುತ್ತೇನೆ.

    ಈ ವರೆಗೆ ಮತ್ಸ್ಯಗಂಧಿಯಾಗಿದ್ದ ನೀನು ಇಂದಿನಿಂದ ನಿನ್ನ ಶರೀರದಿಂದ ಸೂಸುವ ಸುಗಂಧ ಯೋಜನಾಂತರದವರೆಗೆ ಹಬ್ಬುವ ಕಾರಣದಿಂದ ಯೋಜನ ಗಂಧಿ ಎಂದು ಪ್ರಸಿದ್ಧಳಾಗು. ನಿನಗೆ ಶ್ರೇಯಸ್ಸಾಗಲಿ ಎಂದು ಆಶೀರ್ವದಿಸಿದರು. ಇದಿಷ್ಟಾಗುವಾಗ ಆಕೆಯ ಮನದ ತುಮುಲ ಶಾಂತವಾಗಿತ್ತು. ಕಾಲಚಕ್ರದ ಚಲನೆಗೋ, ವಿಧಿ ಸಂಕಲ್ಪವೋ ಆಗಬೇಕಾಗಿದ್ದದ್ದು ಆಗಿ ಬಿಟ್ಟಿತ್ತು.

    ಪರಾಶರ ಮಹರ್ಷಿಗಳು ನದಿಯ ಆ ತೀರ ಸೇರಿದರೆ ಸತ್ಯವತಿ ತಿರುಗಿ ಮನೆ ಸೇರಿದಳು. ಮಗಳ ಶರೀರದ ಕಂಪನ್ನು ಆಗ್ರಾಣಿಸಿ ಅಪ್ಪ ದಾಶರಾಜ ಪ್ರಶ್ನಿಸಿದಾಗ ಮಹಾತ್ಮ ತಪಸ್ವಿಗಳ ಅನುಗ್ರಹ ಎಂದಷ್ಟೇ ಹೇಳಿ ಸಂತಸಪಟ್ಟು, ಏನೂ ನಡದೇ ಇಲ್ಲವೆಂಬಂತೆ ಸತ್ಯವತಿ ಸುಮ್ಮನಾದಳು. ಕಾಲ ಸಾಗುತ್ತಿತ್ತು.

    ಹೀಗಿರಲು ಪರಾಶರ ಪುತ್ರರಾದ ಕೃಷ್ಣ ದೈಪಾಯಾನರು ಬದರಿಕಾಶ್ರಮ ಸೇರಿದವರು ಬಹುಕಾಲ ತಪಸ್ಸನ್ನಾಚರಿಸಿ ಪಿತ್ರಾರ್ಜಿತ ದಿವ್ಯ ಜ್ಞಾನದ ಸರ್ವವನ್ನೂ ಸಿದ್ಧಿಸಿಕೊಂಡು ಬದರಿಕಾಶ್ರಮದವರಾದ *ಬಾದರಾಯನ* ರೆಂದು ಕೀರ್ತಿವಂತರಾದರು.

    ಹೀಗೆ ತಪಃ ನಿಷ್ಟರಾಗಿಯೂ ಶಿಷ್ಯೋತ್ತಮರಿಗೆ ಬೋಧಿಸುತ್ತಾ ಇರುತ್ತಿರಲೊಂದು ದಿನ ವೇದಗಳ ಕುರಿತಾದ ದಿವ್ಯಜ್ಞಾನ ಪ್ರಾಪ್ತಿಯಾಯಿತು. ಅಖಂಡವಾಗಿ ಆರ್ಜನೆಗೆ ಕಷ್ಟಕರವಾಗಿದ್ದ ವೇದ ಬಳಕೆಗೆ ಸರಳವಾಗಿರದೆ ಜಟಿಲವಾಗಿತ್ತು. ಆಳವಾದ ಅಧ್ಯಯನ ಮಾಡಿ ಸಂಸ್ಕರಿಸಿ, ಪರಿಷ್ಕರಿಸಿ ಅನಂತ ವೃತ್ತದಂತಿದ್ದ ವೇದವನ್ನು ವ್ಯಾಸ ಅಂದರೆ ಅರ್ಧ – ಮತ್ತೆ ಪುನರರ್ಧರ್ಧ ಅಂದರೆ ನಾಲ್ಕು ಭಾಗ ಮಾಡಿ ಸರಳ ಮಾಡಿದರು. ಈಗ ವೇದದ ಬಳಕೆಯು ಉದ್ದೇಶಾನುಸಾರ ವಿಭಜನೆಯಾಯ್ತು. ಇದರ ಜೊತೆ ಕೆಲ ಉಪವೇದಗಳನ್ನೂ ಸೃಜಿಸಿದರು.

    ಅವರ ನಾಲ್ಕು ಶಿಷ್ಯರಿಗೆ ವ್ಯಾಸವಾಗಿ ವಿಭಜಿತ ಈ ನಾಲ್ಕು ವೇದಗಳನ್ನು ಬೋಧಿಸಿದರು. *ಋಗ್ವೇದ* ವನ್ನು (ಯಜ್ಞಗಳಲ್ಲಿ ದೇವತೆಗಳನ್ನು ಆಹ್ವಾನಿಸುವ ಋಕ್ಕು- ಪ್ರಾರ್ಥನಾ ಮಂತ್ರ) ಶಿಷ್ಯ *ಪೈಲ ಮುನಿ* ಗಳಿಗೆ, *ಯಜುರ್ವೇದ* ವನ್ನು ( ಯಜ್ಞಗಳಲ್ಲಿ ದೇವತೆಗಳಿಗೆ ಆಹುತಿ ಇಕ್ಕುವ ಋಕ್ಕು ) ನನಗೂ ( *ವೈಶಂಪಾಯನ* ರಿಗೆ), *ಸಾಮ ವೇದ* ವನ್ನು ( ದೇವತೆಗಳನ್ನು ಸ್ತೋತ್ರ ಮಾಡುವ ನಾನಾ ವಿಧದ ಋಕ್ಕು) *ಜೈಮಿನಿ ಮುನಿ* ಗಳಿಗೂ, ಅಥರ್ವ ವೇದವನ್ನು ( ಶಾಂತಿಕ, ಪೌಷ್ಟಿಕ, ಅಭಿಚಾರಿಕ ಮಂತ್ರ ಹಾಗು ಹೋಮ ಹವನಾದಿಗಳ ವಿಚಾರ.) *ಸುಮಂತು* ಮುನಿಗಳಿಗೆ ಅಧ್ಯಯನ ಮಾಡಿಸಿದರು.

    ಇನ್ನೂ ಹಲವು ಉಪವೇದಗಳನ್ನೂ ವಿಭಾಗಿಸಿದ ಇವರನ್ನು ವೇದವ್ಯಾದ ಅಥವಾ ವ್ಯಾಸ ಭಗವಾನರೆಂದು ಪ್ರಾಜ್ಞರು ಕೊಂಡಾಡಿದರು. ಇಂತಹ ಮಹಾತ್ಮ ವ್ಯಾಸ ಭಗವಾನರು- ಬದುಕಿನ ಏಳುಬೀಳುಗಳಿಗೆ ಕಾರಣವಾದ, ಶ್ರೇಯಸ್ಸು, ಇಹ- ಪರಗಳೆರಡನ್ನೂ ಸಾಧಿಸಬಲ್ಲ ಒಂದು ಇತಿಹಾಸ ವಿಶೇಷವನ್ನು ಗ್ರಂಥರೂಪಕ್ಕಿಳಿಸುವ ಮನಮಾಡಿ ಅದನ್ನು ಬರೆಯುವರಾರೆಂದು ಚಿಂತೆಗೊಳಗಾದಾಗ ಬ್ರಹ್ಮ ದೇವರೇ ಬಂದು ಸಿದ್ಧಿ ಬುದ್ಧಿ ಪ್ರದಾಯಕ ವಿಘ್ನ ವಿನಾಶಕ “ವಿನಾಯಕ ಗಣಪತಿ” ದೇವರನ್ನು ಈ ಕಾರ್ಯಕ್ಕೆ ಆಹ್ವಾನಿಸಿ ಸುಜ್ಞಾನದಿಂದ ಸಿದ್ದಗೊಳಿಸಿ ಕಳುಹಿಸಿಕೊಟ್ಟರು.

    ವ್ಯಾಸ ಭಗವಾನರೂ ವಿನಾಯಕ ದೇವರೂ ಪರಸ್ಪರ ಕುಶಲೋಪರಿ ವಿಚಾರಿಸಿ, ಕಾರ್ಯ ಕಾರಣವರಿತು ಒಂದು ಒಪ್ಪಂದ ಮಾಡಿಕೊಂಡರು. ಅದರಂತೆ ವ್ಯಾಸರು ಶ್ಲೋಕರೂಪದಲ್ಲಿ ಅಸ್ಖಲಿತವಾಗಿ ಗತ ಕಥಾಸಾರವನ್ನು ಹೇಳಿಕೊಂಡು ಹೋಗುವಾಗ ಗಣೇಶ ದೇವ ಶ್ಲೋಕವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ವಿರಮಿಸದೆ ನಿರಂತರ ಬರೆಯುತ್ತಿರಬೇಕು……..

Post a Comment

0Comments

Please Select Embedded Mode To show the Comment System.*