*ದತ್ತನ ಕಾರ್ಯ*
ದತ್ತ ವಿಷ್ಣುವಿನ ಅವತಾರವಾಗಿದ್ದು ಅವನ ಕಾರ್ಯ ಸೃಷ್ಟಿಯ ರಕ್ಷಣೆ, ಜನರಲ್ಲಿ ಭಕ್ತಿಯ ಆಕರ್ಷಣೆಯನ್ನು ನಿರ್ಮಿಸುವುದು ಹಾಗೂ ಜನರಿಗೆ ಆದರ್ಶ ಮತ್ತು ಆನಂದಮಯ ಜೀವನ ನಡೆಸಲು ಕಲಿಸುವುದಾಗಿದೆ.
*ದತ್ತನ ಗುರುಗಳು*
ದತ್ತನು ೨೪ ಗುರುಗಳನ್ನು ಸ್ವೀಕರಿಸಿದನು. ಇದರಿಂದ ದತ್ತ ನಮಗೆ ‘ನಿರಂತರವಾಗಿ ಕಲಿಯುವ ಸ್ಥಿತಿಯಲ್ಲಿರಬೇಕು', ಎಂಬುದನ್ನು ಕಲಿಸುತ್ತಾನೆ. ಯಾರು ಕಲಿಯುವ ಸ್ಥಿತಿಯಲ್ಲಿರುತ್ತಾರೆಯೋ, ಅವರೇ ಜ್ಞಾನಗ್ರಹಿಸಲು ಸಾಧ್ಯ. ಈ ದತ್ತ ಜಂತಿಗೆ ನಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಆನಂದಮಯ ಜೀವನ ನಡೆಸಲು ನಿರ್ಧರಿಸೋಣ. ಅದಕ್ಕಾಗಿ ನಾವು ದತ್ತನು ಸ್ವೀಕರಿಸಿದ ಕೆಲವು ಗುರುಗಳ ಮಾಹಿತಿಯನ್ನು ನೋಡೋಣ.
ಅ ಪೃಥ್ವಿ : ನಾವು ಪೃಥ್ವಿಯ ಹಾಗೆ ಸಹನಶೀಲರಾಗಿರಬೇಕು. ಚಿಕ್ಕ ಮಗು ತಾಯಿಯ ಮಡಿಲಲ್ಲಿರುವಾಗ ಅವಳಿಗೆ ತುಳಿಯುತ್ತದೆ, ಮೈ ಮೇಲೆ ಮಲ-ಮೂತ್ರ ವಿಸರ್ಜಿಸುತ್ತದೆ, ಆದರೂ ತಾಯಿ ಅದರ ಮೇಲೆ ಕೋಪಿಸಿಕೊಳ್ಳುವುದಿಲ್ಲ. ನಾವು ಕೂಡ ಭೂಮಿಯ ಮೇಲೆ ಮಲ-ಮೂತ್ರ ವಿಸರ್ಜಿಸುತ್ತೇವೆ. ಭೂಮಿಯನ್ನು ನೇಗಿಲಿನಿಂದ ಉಳುತ್ತೇವೆ. ಆದರೂ ಭೂಮಿ ತಾಯಿಯು ಯಾವತ್ತೂ ದೂರುವುದಿಲ್ಲ. ತದ್ವಿರುದ್ಧ ನಾವು ಬಿತ್ತಿದ ಧಾನ್ಯಕ್ಕಿಂತ ಅನೇಕಪಟ್ಟು ಹೆಚ್ಚು ಧಾನ್ಯವನ್ನು ನಮಗೆ ನೀಡುತ್ತಾಳೆ. ಅದೇ ರೀತಿ ನಮಗೆ ಯಾರಾದರೂ ಅಪಶಬ್ದಗಳಿಂದ ಮಾತನಾಡಿದರೆ, ಅಥವಾ ಯಾರಾದರೂ ನಮಗೆ ಅವಮಾನ ಮಾಡಿದರೆ, ನಾವು ಕೋಪಿಸಿಕೊಳ್ಳದೆ ಅವರನ್ನು ಕ್ಷಮಿಸಿ ಅವರೊಂದಿಗೆ ಪ್ರೇಮದಿಂದ ವರ್ತಿಸಬೇಕು. ಪೃಥ್ವಿಯ ಈ ಗುಣವನ್ನು ಕಲಿಯುವ ಪ್ರಯತ್ನ ಮಾಡಿದರೆ ನಾವು ಇತರರಿಗೆ ಆನಂದ ನೀಡಬಹುದು.
ಆ. ವಾಯು : ಗಾಳಿ ಎಲ್ಲಿಯೇ ಹೋದರೂ, ಅದು ವಿರಕ್ತ ಆಗಿರುತ್ತದೆ. ನಾವು ಕೆಟ್ಟ ಹುಡುಗರೊಂದಿಗೆ ಹೋದರೆ ತಕ್ಷಣ ಅವರಂತೆಯೇ ಆಗುತ್ತೇವೆ. ನಾವು ಕೂಡ ಗಾಳಿಯಂತೆ ವಿರಕ್ತ ಆಗಿರಬೇಕು.
ಇ. ಆಕಾಶ : ಆತ್ಮವು ಆಕಾಶದಂತೆ ಚರಾಚರದಲ್ಲಿನ ವಸ್ತುಗಳನ್ನು ವ್ಯಾಪಿಸಿಕೊಂಡಿದೆ. ಅದು ಎಲ್ಲರೊಂದಿಗೆ ಸಮಭಾವದಿಂದ ವರ್ತಿಸುತ್ತದೆ. ಯಾರೊಂದಿಗೂ ಶತ್ರುತ್ವ ಇಲ್ಲದಿರುವುದರಿಂದ ಅದು ನಿರ್ಮಲವಾಗಿದೆ. ನಾವು ಕೂಡ ಮನಸ್ಸಿನಿಂದ ನಿರ್ಮಲವಾಗಿರಲು ಪ್ರಯತ್ನಿಸಬೇಕು.
ಈ. ನೀರು : ನಾವು ನೀರಿನಂತೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕು. ನೀರು ಯಾರೊಂದಿಗೂ ಭೇದಭಾವ ಮಾಡುವುದಿಲ್ಲ. ಎಲ್ಲರೊಂದಿಗೂ ಸಮಾನವಾಗಿ ವರ್ತಿಸುತ್ತದೆ. ನಾವು ಯಾವ ಪಾತ್ರೆಯಲ್ಲಿ ನೀರನ್ನು ಇಡುತ್ತೇವೆಯೋ, ನೀರು ಅದೇ ಆಕಾರವನ್ನು ಹೊಂದುತ್ತದೆ. ಹಾಗೆಯೇ ನಾವು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ನೀರು ಎತ್ತರದ ಸ್ಥಳವನ್ನು ತ್ಯಜಿಸಿ ತಗ್ಗು ಪ್ರದೇಶವನ್ನು ಸ್ವೀಕರಿಸುತ್ತದೆ. ಅದೇ ರೀತಿ ನಾವು ಕೂಡ ನಮ್ಮಲ್ಲಿನ ಅಹಂಮನ್ನು ತ್ಯಾಗ ಮಾಡಿ ಶರಣಾಗತರಾಗಬೇಕು.
ಉ. ಅಗ್ನಿ : ಅಗ್ನಿ ಅಂಧಕಾರವನ್ನು ಹೋಗಲಾಡಿಸುತ್ತದೆ. ನಾವು ಕೂಡ ನಮ್ಮಲ್ಲಿರುವ ಹಾಗೂ ಇತರರ ಜೀವನದಲ್ಲಿನ ಅಹಂಕಾರ ಸ್ವರೂಪದ ಅಜ್ಞಾನವನ್ನು ನಾಶಗೊಳಿಸಬೇಕು. ಹಾಗೆ ಮಾಡಿದರೆ ಮಾತ್ರ ನಾವು ಮತ್ತು ಸಮಾಜ ಆನಂದಮಯ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಅಗ್ನಿಯ ಜ್ವಾಲೆ ಕ್ಷಣದಲ್ಲಿಯೇ ನಾಶವಾಗುತ್ತದೆ. ಅದೇ ರೀತಿ ನಮ್ಮ ದೇಹವೂ ಕ್ಷಣಭಂಗುರವಾಗಿದೆ (ನಶ್ವರವಾಗಿದೆ). ಅದರ ಬಗ್ಗೆ ಸುಳ್ಳು ಅಭಿಮಾನವನ್ನಿಟ್ಟುಕೊಳ್ಳುವುದಕ್ಕಿಂತ ದೇವರ ಅಸ್ಥಿತ್ವವನ್ನು ಮನ್ನಿಸಬೇಕು. 'ದೇಹ ಇಂದು ಇದೆ ನಾಳೆ ಇರುವುದಿಲ್ಲ; ಆದರೆ ನಮ್ಮಲ್ಲಿರುವ ಆತ್ಮ ಚಿರಂತನವಾಗಿದೆ', ಎಂಬುದನ್ನು ಜಾಗೃತಗೊಳಿಸುವ ದಿನವೇ ದತ್ತ ಜಯಂತಿ.
ಊ. ಚಂದ್ರ : ಚಂದ್ರ ತನ್ನ ಶೀತಲ ಕಿರಣಗಳಿಂದ ಇತರರಿಗೆ ಆನಂದ ನೀಡುತ್ತಾನೆ. ನಾವು ನಮ್ಮ ಪ್ರತಿಯೊಂದು ಕೃತಿಯಿಂದ ಇತರರಿಗೆ ಆನಂದವನ್ನು ನೀಡಬೇಕು. ಇಂದು ನಾವು ಅದನ್ನು ತಿಳಿದುಕೊಂಡು ಪ್ರಾರ್ಥನೆ ಮಾಡಬೇಕು, ‘ನೀನು ಹೇಗೆ ನಿನ್ನ ಕಿರಣಗಳಿಂದ ಇತರರಿಗೆ ಆನಂದ ನೀಡುತ್ತಿಯೋ, ಹಾಗೆಯೇ ನನಗೆ ನನ್ನ ವರ್ತನೆ ಮತ್ತು ಮಾತಿನಿಂದ ಇತರರಿಗೆ ಆನಂದ ನೀಡಲು ಸಾಧ್ಯವಾಗಲಿ?' ದತ್ತನ ಚರಣಗಳಲ್ಲಿ ಈ ಮುಂದಿನಂತೆ ಕ್ಷಮೆಯಾಚನೆ ಮಾಡಬೇಕು, ‘ಹೇ ದತ್ತಾತ್ರೇಯಾ, ನಾನು ಇಂದಿನ ತನಕ ನನ್ನ ಕೃತಿಯಿಂದ ಯಾರಿಗಾದರೂ ನೋಯಿಸಿದ್ದರೆ, ನನ್ನನ್ನು ಕ್ಷಮಿಸು' ಎಂದು.