ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮಕಮ್ಮಗೋಲನವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ ಅಮ್ಮಯ್ಯ
ಮೋರೆ ಕಪ್ಪಿನಭಾವ ಮೊರದಗಲದ ಕಿವಿ
ಕೋರೆದಾಡೆಯನ್ಯಾರಮ್ಮ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ ಅಮ್ಮಯ್ಯ
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣವು
ಧಿಟ್ಟ ತಾನಿವನ್ಯಾರಮ್ಮ
ಪಟ್ಟದರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ
ರಾಶಿವಿದ್ಯೆಯ ಬಲ್ಲ ರಮಣಿಹಂಬಲನೊಲ್ಲ
ಬಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ
ಕೇಶವನ ದಾಸ ಕಾಣೇ ಅಮ್ಮಯ್ಯ