Showing posts with label songs. Show all posts
Showing posts with label songs. Show all posts

Thursday, January 16, 2025

ಎನಿತು ಇನಿದು ಈ ಕನ್ನಡ ನುಡಿಯು


ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು!
ಗಾನವ ಬೆರೆಯಿಸಿ
ವೀಣೆಯ ದನಿಯೊಳು
ವಾಣಿಯ ನೇವುರ
ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು !
ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿರುಳಲಿ
ಸಂಗೀತವನೊರೆದಂಗವಿದೇನೋ?
ಎನಿತು ಇನಿದು ಈ ಕನ್ನಡ ನುಡಿಯು!
ಗಿಳಿಗಳು ಉಲಿಯುವ
ಮೆಲುಮಾತುಗಳೋ
ಕಳಕಂಠಗಳಾ
ಚೆಲುವಿನ ಕುಕಿಲೊ?
ಅಳಿಗಳ ಬಳಗದ ಬೆಳಗಿನ ಉಲಿಯೋ?
ಎನಿತು ಇನಿದು ಈ ಕನ್ನಡ ನುಡಿಯು!
ಕವಿತೆ: ಕನ್ನಡ ನುಡಿ
ಸಾಹಿತ್ಯ: ಆನಂದಕಂದ

Wednesday, January 8, 2025

ಗುಮ್ಮನ ಕರೆಯದಿರಿ ಅಮ್ಮಾ ನೀನು



ಗುಮ್ಮನ ಕರೆಯದಿರಿ ಅಮ್ಮಾ ನೀನು

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ

ಹೆಣ್ಣುಗಳಿರುವಲ್ಲಿ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೇನು ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಬಾವಿಗೆ ಹೋಗಿ ಕಾಣೆ ಅಮ್ಮಾ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೊಡ ಕರುಗಳ ಬಿಡೆನೋಡೆ
ದೇವರಂತೆ ಒಂದು ಠಾವಿಯಲಿ ಕೂಡುವೆ

ಮಗನ ಮಾತುಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರ ವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

Monday, January 6, 2025

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು



ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು

ಕಲ್ಲುಸಕ್ಕರೆ ಕೊಳ್ಳಿರೋ
ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಫುಲ್ಲಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿಗೆ ಗೋಣಿಯೊಳು ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ದರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ

ಸಂತೆ ಸಂತೆಗೆ ಹೋಗಿ ಶ್ರಮಪಡಿಸುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತರ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

Saturday, January 4, 2025

ಎಂಥ ಅಂದ ಎಂಥ ಚೆಂದ ಶಾರದಮ್ಮ

 


ಎಂಥ ಅಂದ ಎಂಥ ಚೆಂದ ಶಾರದಮ್ಮ

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ॥

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ |
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ || ॥ ಎಂಥ ॥
ಅಭಯ ಹಸ್ತ ನೋಡಿ ಜೀವ ಕುಣಿಯತಮ್ಮ |
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ |
ನಿನ್ನ ನೋಡಿ ಹಾಡೋ ಆಸೆ ನನಗೆ ಬಂದಿತಮ್ಮ || ॥ ಎಂಥ ॥
ರತ್ನದಂತ ಮಾತುಗಳನ್ನೇ ಆಡಿಸಮ್ಮ |
ಒಳ್ಳೇ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ|
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ ॥ ಎಂಥ ॥

Friday, January 3, 2025

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

 


ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ
ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ
ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ
ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ
ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ
ಕಮಲನಯನೆ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ
ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ
ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನೇ ತಾರೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

 

ಚಿತ್ರ : ನಿನಗಾಗಿ

ಗಾಯನ : ಕೆ ಎಸ್ ಚಿತ್ರಾ

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದೂ
ಓ..ಓ..ಓ.....ಓ...ಓ...ಓ...
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ....

ಹೊಸದಾಗಿ ಶುರುವಾಯಿತಾ
ನಮ್ಮೊಳಗೆ ಈ ಗೆಳೆತನ
ನಿನ್ನೆಗಳ ನೆರಳಿಲ್ಲದೆ
ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ
ಮರೆಯಲಾಗದು ಆ ನೋವ
ನೋವು ಎದೆಯೊಳಗೆ ಬಚ್ಚಿಟ್ಟು
ಲಾಭವೇನಿದೆ ಓ ಜೀವಾ
ಹೃದಯದಾ ಮಾತನೂ..
ಒಮ್ಮೆ ಕೇಳಬಾರದೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ
ಹೇಳಬಾರದೆ

ಬಾನೇರೊ ಆಮೋಡ ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರೀಲಿ ರೆಕ್ಕೆಯಿಲ್ಲದಆ ಈ ಪಯಣ..
ನಾನಾ ರೂಪದ ತಿರುವಲ್ಲಿ ಎಲ್ಲೊ ಕಾಣದೂ ನಿಲ್ದಾಣ
ಮರುಳು ಗೂಡ ಕದಡುವಾಸೆ ಇನ್ನೂ ತೀರಲಿಲ್ಲವೆ..
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಎರಡು ಮನಸಲೂ ಒಂದೇ ಮಾತಿದೆ
ಯಾಕೀ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ
ನಂಬುವುದೆ ಈ ಮನಸೂ
ಓ...ಓ..ಓ...ಓ...ಓ...ಓ...
🌻

Thursday, January 2, 2025

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ

 


ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,

ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ
ಕೈಹಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳಿದೊಡನೆಯೆ – ಸಾಕು ನನಗೊಂದು ಹೆಜ್ಜೆ.
ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; ಇನ್ನು,
ಕೈಹಿಡಿದು ನಡೆಸು ನೀನು.
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.
ಇಷ್ಟು ದಿನ ಸಲಹಿರುವೆ ಮರ‍್ಖನನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ ?
-ಬಿ.ಎಂ.ಶ್ರೀಕಂಠಯ್ಯ

ರಾಮನಾಮ ಪಾಯಸಕ್ಕೆ

 



ರಾಮನಾಮ ಪಾಯಸಕ್ಕೆ

ಕೃಷ್ಣ ನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ||1||
ಬಾಯಿ ಚಪ್ಪರಿಸಿರೋ

ಒಮ್ಮನ ಗೋಧಿಯ ತಂದು ||2||
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು
ಸಣ್ಣ ಸೇವಗೆ ಹೊಸೆದು

ಹೃದಯವೆಂಬೊ ಪಾತ್ರೆಯೊಳಗೆ ||3||
ಭಾವವೆಂಬೊ ಎಸರು ಇಟ್ಟು
ಬುದ್ಧಿಯಿಂದ ಪಕ್ವವ ಮಾಡಿ
ಹರಿವಾಣದೊಳಗೆ ನೀಡಿ

ಆನಂದ ಆನಂದವೆಂಬೊ||4||
ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ

Wednesday, January 1, 2025

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

 

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

ಬೀಸು ಗಾಳಿಗೆ ಬೀಳು ಹೇಳುವ ತೆರೆಯ ಮೇಗಡೆ ಹಾರಲಿ !
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ !
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ !
ಮಿಂಚುತರ‍್ಪುವು ಮೂಡುತೈತರೆ ಬಾಲಕೋಮಲ ದಿನಮಣಿ !
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ !
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ, ಅಂತ ತೇಲುತ ದೋಣಿಯಾಟವ ನೋಡಿರಿ!
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ !
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.


ಕುವೆಂಪು






ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು



ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ಯತ್ತೆಗಳ ಕಾಡು
ಪಾವನೆಯರಾ ಕೃಷ್ಣ ಭೀಮೆಯರ ತಾಯ್ತಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

–ಹುಯಿಲುಗೋಳ ನಾರಾಯಣರಾಯರು




ನಿತ್ಯೋತ್ಸವ


ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ,

ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ…

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ –

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ-

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…

– ಕೆ. ಎಸ್. ನಿಸಾರ್ ಅಹಮದ್‌

ಯಾವ ಮೋಹನ ಮುರಳಿ


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? (2)

ಯಾವ ಬೃ೦ದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು….?

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ…(2)

ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ:….

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? (1)

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ…(2)

ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? (1)

ವಿವಶವಾಯಿತು ಪ್ರಾಣ; ಹಾ ! ಪರವಶವು ನಿನ್ನೀ ಚೇತನ…..(2)

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೋಲೆ ನಿನ್ನನು..?

ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೋಲೆ ನಿನ್ನನು..?(1)

-ಗೋಪಾಲಕೃಷ್ಣ ಅಡಿಗ

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ

 


ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ |

ನಾಮ ಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ || ರಾಘವೇಂದ್ರ ||
ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ |
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ |
ಹೇಗೆ ಇರಲಿ ಎಲ್ಲೆ ಇರಲಿ ಅವನ ಸ್ಮರಣೆ ಮಾಡಿರಿ |
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ || ರಾಘವೇಂದ್ರ ||
ಮನಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ |
ಗುರುವೆ ನಿನ್ನ ಕರುಣೆಯೊಂದೆ ಸಾಕು ನಮಗೆ ಎನ್ನಿರಿ |
ಕಲ್ಲೋ ಮುಳ್ಳೋ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ|
ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ || ರಾಘವೇಂದ್ರ ||
ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು |
ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು || ರಾಘವೇಂದ್ರ ||