ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು!
ಗಾನವ ಬೆರೆಯಿಸಿ
ವೀಣೆಯ ದನಿಯೊಳು
ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು !
ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿರುಳಲಿ
ಸಂಗೀತವನೊರೆದಂಗವಿದೇನೋ?
ಎನಿತು ಇನಿದು ಈ ಕನ್ನಡ ನುಡಿಯು!
ಗಿಳಿಗಳು ಉಲಿಯುವ
ಮೆಲುಮಾತುಗಳೋ
ಕಳಕಂಠಗಳಾ
ಚೆಲುವಿನ ಕುಕಿಲೊ?
ಅಳಿಗಳ ಬಳಗದ ಬೆಳಗಿನ ಉಲಿಯೋ?
ಎನಿತು ಇನಿದು ಈ ಕನ್ನಡ ನುಡಿಯು!
ಕವಿತೆ: ಕನ್ನಡ ನುಡಿ
ಸಾಹಿತ್ಯ: ಆನಂದಕಂದ