ಹಿಂದೊಂದು ಕಾಲದಲ್ಲಿ ಆಫ್ರಿಕಾ ಖಂಡವನ್ನು ಡಾರ್ಕ್ ಕಾಂಟಿನೆಂಟ್ ಎಂದು ಕರೆಯುತ್ತಿದ್ದರು. ಇಲ್ಲಿ ಡಾರ್ಕ್ ಎಂದರೆ ಅಜ್ಞಾತ ಎಂಬರ್ಥ.
ಈ ಹೆಸರನ್ನು ಬಹುಶಃ ಮೊದಲ ಬಾರಿಗೆ 1878ರಲ್ಲಿ ಹೆನ್ರಿ ಸ್ಟಾನ್ಲಿ ಎಂಬ ಅನ್ವೇಷಕ ಬರೆದ Through the Dark Continent ಮತ್ತು In Darkest Africa ಎಂಬ ಪುಸ್ತಕಗಳಲ್ಲಿ ಪ್ರಯೋಗವಾಗಿತ್ತು. ಪುಸ್ತಕಗಳ ಮಾರಾಟ ಹೆಚ್ಚಿಸಲು ಡಾರ್ಕ್ ಎಂದು ಕರೆಯಲಾಗಿತ್ತು ಅಷ್ಟೇ. ಈ ಪುಸ್ತಕಗಳನ್ನು ಬರೆಯಲು ಸ್ಟಾನ್ಲಿ ಆಫ್ರಿಕಾದ ಬಗ್ಗೆ ಅದಾಗಲೇ 130 ಪುಸ್ತಕಗಳನ್ನು ಓದಿದ್ದನಂತೆ!
ಈ ಸ್ಟಾನ್ಲಿ ಯಾರು ಅಂತೀರಾ! ಬೆಲ್ಜಿಯಂ ನ ಕ್ರೂರ ದೊರೆ ಲಿಯೊಪೊಲ್ಡ್ ಆಫ್ರಿಕಾ ಖಂಡದಲ್ಲಿ ಕಾಂಗೋ ದೇಶವನ್ನು ತನ್ನ ವೈಯಕ್ತಿಕ ಸಂಪತ್ತು ಎಂಬಂತೆ ಅಲ್ಲಿ ಸಿಗುತ್ತಿದ್ದ ನೈಸರ್ಗಿಕ ಉತ್ಪನ್ನಗಳನ್ನು ದೋಚಿ ತನ್ನ ದೇಶಕ್ಕೆ ಒಯ್ಯುತ್ತಿದ್ದ. ಆಫ್ರಿಕಾ ಜನರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿದ್ದ. ಅಂತಹ ಸರ್ವಾಧಿಕಾರಿ ರಾಜನ ಸೆಕ್ರೆಟರಿ ಆಗಿದ್ದವನು ಸ್ಟಾನ್ಲಿ.
ಆಫ್ರಿಕಾ ಖಂಡದ ಒಳಭಾಗಗಳ ಬಗ್ಗೆ ಪಶ್ಚಿಮ ದೇಶಗಳಿಗೆ ಹೆಚ್ಚು ತಿಳಿದಿರಲಿಲ್ಲ ಎಂದು ಸೂಚಿಸುವ ಈ ಅಡ್ಡ ಹೆಸರು ಆ ಖಂಡದ ಬಗ್ಗೆ ಎಲ್ಲ ವಿವರಗಳು ತಿಳಿದ ಮೇಲೂ ಹಾಗೆಯೇ ಉಳಿದುಕೊಂಡಿರಬಹುದು.
ಯೂರೋಪಿನ ಜನರಿಗೆ ಗೊತ್ತಿರಲಿಲ್ಲ ಎಂದ ಮಾತ್ರಕ್ಕೆ ಆಫ್ರಿಕಾ ಖಂಡಕ್ಕೆ ಅಸ್ತಿತ್ವವೇ ಇರಲಿಲ್ಲ ಎಂದಲ್ಲ. ಮಾನವ ಸಂತತಿ ಪ್ರಾರಂಭವಾದದ್ದೇ ಆ ಖಂಡದಲ್ಲಿ. ಅಲ್ಲಿಂದಲೇ ಇಡೀ ಪ್ರಪಂಚಕ್ಕೆ ಮನುಷ್ಯನ ಸಂತತಿ ಹರಡಿದ್ದು. ಆಫ್ರಿಕಾ ದೇಶದವರು ಮಧ್ಯ ಪೂರ್ವದ ಮತ್ತು ಏಷ್ಯಾದ ಅನೇಕ ದೇಶಗಳೊಂದಿಗೆ ಎರಡು ಸಾವಿರ ವರ್ಷಗಳ ಹಿಂದಿನಿಂದ ವ್ಯಾಪಾರದ ಸಂಬಂಧ ಇಟ್ಟುಕೊಂಡಿದ್ದರು.
ಡಾರ್ಕ್ ಎಂದರೆ ಕಗ್ಗತ್ತಲು ಕೂಡಾ ಹೌದು.
ಕಗ್ಗತ್ತಲು ಇದ್ದದ್ದು ವಸಾಹತುಶಾಹಿಗಳ ಹೃದಯಗಳಲ್ಲಿ. ಆಫ್ರಿಕಾ ಖಂಡವನ್ನು ಲೂಟಿಮಾಡಿ ಜನರನ್ನು ಅಶಿಕ್ಷಿತರನ್ನಾಗಿಯೇ ಉಳಿಸಿ ವಸಾಹತು ಬಿಟ್ಟು ಹೋದ ಯೂರೋಪಿನ ರಾಜರುಗಳ ಹೃದಯಗಳಲ್ಲಿ. ಯೂರೋಪಿನ ಜನರು ತಮ್ಮ ರಾಕ್ಷಸೀ ವರ್ತನೆಗೆ ಆಫ್ರಿಕಾ ಡಾರ್ಕ್ ಖಂಡ ಆಗಿದ್ದುದೇ ಕಾರಣ ಎಂದು ಆಫ್ರಿಕಾದ ಮೇಲೆ ದೋಷ ಹೊರಿಸುತ್ತಿದ್ದರು.
ಆಫ್ರಿಕಾ ದೇಶಗಳು ಅಧೋಗತಿಯಲ್ಲಿವೆ, ಅವುಗಳನ್ನು ನಾವು ಉದ್ಧಾರ ಮಾಡುವ ಘನ ಉದ್ದೇಶದಿಂದ ವಸಾಹತುಗಳನ್ನಾಗಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬಿಂಬಿಸಲು ಯೂರೋಪಿನ ಜನರು ಆಫ್ರಿಕಾದ ಬಗ್ಗೆ ಹೆದರಿಕೆ ಹುಟ್ಟಿಸುವಂತಹ ಕಟ್ಟುಕತೆಗಳನ್ನು ಹರಡುತ್ತಿದ್ದರು.
ಗುಲಾಮ ಪದ್ಧತಿಯನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ರದ್ದುಪಡಿಸಿದ ಮೇಲೆ ಆಫ್ರಿಕಾದ ಜನರು ಗುಲಾಮರಾಗಿರಲು ವಿರೋಧಿಸುತ್ತಿದ್ದರು. ಅಂತಹವರನ್ನು ಬ್ರಿಟಿಷರು ತುಂಬಾ ಕೀಳಾಗಿ ನೋಡುತ್ತಿದ್ದರು.
ಯೂರೋಪಿನ ಕ್ರಿಶ್ಚಿಯನ್ ಮಿಶನರಿಗಳು ಆಫ್ರಿಕಾ ದೇಶದ ಆದಿವಾಸಿಗಳನ್ನು ಕ್ರೈಸ್ತ ಮತಕ್ಕೆ ಬದಲಾಯಿಸಲು ತುಂಬಾ ಪ್ರಯತ್ನ ಪಟ್ಟರು. ಆದರೆ ಯಶಸ್ಸು ಸಿಗಲಿಲ್ಲ. ಕ್ರಿಸ್ತ ಧರ್ಮ ಎಂಬ ಬೆಳಕನ್ನು ಬಯಸದೆ ತಮ್ಮ ಓಬಿರಾಯನ ಕಾಲದ ಆಚರಣೆಗಳನ್ನು ಮುಂದುವರಿಸಿದ ಆ ಜನರು ಕತ್ತಲಲ್ಲಿಯೇ ಇದ್ದಾರೆ ಎಂಬ ಧೋರಣೆಯೂ ಇತ್ತು ಪಶ್ಚಿಮ ದೇಶದ ಜನರಲ್ಲಿ.
ಡಾರ್ಕ್ ಎಂದರೆ ಕಪ್ಪುಬಣ್ಣ. ಆಫ್ರಿಕಾ ಖಂಡದ ಜನರ ಬಣ್ಣ ಕಪ್ಪು ಎಂಬ ಅರ್ಥದಲ್ಲಿ ಕೂಡಾ ಆ ಖಂಡವನ್ನು ಡಾರ್ಕ್ ಖಂಡ ಎಂದು ಕರೆದಿರಲು ಸಾಧ್ಯ. ವರ್ಣಭೇದ ನೀತಿಯ ತುಚ್ಛ ಉದಾಹರಣೆ ಇದು.
ಭ್ರಷ್ಟಾಚಾರ, ಬಡತನ, ಪ್ರಕೃತಿ, ಕಾಡುಗಳು, ಪ್ರಾಣಿಪಕ್ಷಿಗಳಿಗೆ ಇನ್ನೊಂದು ಹೆಸರಾದ ಆಫ್ರಿಕಾ ಖಂಡಕ್ಕೆ ಡಾರ್ಕ್ ಖಂಡ ಎಂಬ ಅಡ್ಡ ಹೆಸರು ಉಳಿದುಕೊಂಡು ಬಿಟ್ಟಿದೆ.