ನಾವೆಲ್ಲರೂ ಎಷ್ಟು ಪುಣ್ಯವಂತರು ಎಂದರೆ 496 ವರ್ಷಗಳ ನಂತರ ಅಂದರೆ 22 ಜನವರಿ 2024 ರಂದು ಅಯೋಧ್ಯೆಯಲ್ಲಿ ಭವ್ಯ ಹಾಗೂ ದಿವ್ಯ ಶ್ರೀ ರಾಮ ಮಂದಿರ ಮರು ನಿರ್ಮಾಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೆವು, ಅದೇ ರೀತಿ 144 ವರ್ಷಗಳ ನಂತರ ಪ್ರಯಾಗ್ರಾಜ್ನಲ್ಲಿ ಈ ವರ್ಷ ಮಹಾ ಕುಂಭಮೇಳ ನಡೆಯಲಿದ್ದು ವಿಶ್ವಾದ್ಯಂತ ಕೋಟ್ಯಂತರ ಜನರು ಇತಿಹಾಸ ನಿರ್ಮಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಕುಂಭಮೇಳ ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ.
ಕುಂಭ ಎಂದರೆ ಮಡಕೆ ಎಂದು ಅರ್ಥ. ಸಮುದ್ರ ಮಂಥನದ ಸಮಯದಲ್ಲಿ ನಾಲ್ಕು ಹನಿ ಅಮೃತವು ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿದ್ದವು ಎಂಬ ಪ್ರತೀತಿ ಇದೆ.
ಆ ಪವಿತ್ರ ತೀರ್ಥ ಕ್ಷೇತ್ರಗಳು ಯಾವುವು ಎಂದರೆ,
1.ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ..
2.ಗಂಗಾ, ಯಮುನಾ ಮತ್ತು ಸರಸ್ವತಿ ಸೇರುವ ಪ್ರಯಾಗರಾಜ್.
3.ಮಧ್ಯಪ್ರದೇಶದ ಉಜ್ಜೈನಿಯ ಕ್ಷಿಪ್ರ ನದಿ
4.ನಾಸಿಕದಲ್ಲಿರುವ ಗೋದಾವರಿ ನದಿ.
ಒಟ್ಟು ಭಾರತದಲ್ಲಿ ನಾಲ್ಕು ರೀತಿಯ ಕುಂಭಮೇಳ ನಡೆಯುತ್ತದೆ:
1)ಕುಂಭ ಮೇಳ (4 ವರ್ಷಗಳಿಗೊಮ್ಮೆ)(ಹರಿದ್ವಾರ, ಪ್ರಯಾಗ್ ರಾಜ್, ಉಜ್ಜೈನ್ ಹಾಗೂ ನಾಸಿಕ್).
2)ಅರ್ಧ ಕುಂಭ ಮೇಳ (6 ವರ್ಷಗಳಿಗೊಮ್ಮೆ)(ಪ್ರಯಾಗ್ ರಾಜ್ ಮತ್ತು ಹರಿದ್ವಾರ್)
3)ಪೂರ್ಣ ಕುಂಭ ಮೇಳ (12 ವರ್ಷಗಳಿಗೊಮ್ಮೆ)(ಪ್ರಯಾಗ್ ರಾಜ್)
4)ಮಹಾಕುಂಭ ಮೇಳ (144 ವರ್ಷಗಳಿಗೊಮ್ಮೆ(12*12))(ಪ್ರಯಾಗ್ರಾಜ್)
ಈ ಬಾರಿಯ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯಲಿದ್ದು 13 ಜನವರಿ 2025ರ ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾಗಲಿದ್ದು 26 ಫೆಬ್ರವರಿ 2025 ರ ಮಹಾ ಶಿವರಾತ್ರಿಯಂದು ಮುಕ್ತಾಯವಾಗಲಿದೆ.
ಕುಂಭ ಮೇಳೆ ನಡೆಯುವ ಸಂಧರ್ಭದಲ್ಲಿ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಬಾರಿ ಶಾಹಿ ಸ್ನಾನ ನಡೆಯುವ ದಿನಗಳು ಈ ಕೆಳಗಿನಂತಿವೆ
ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29(ಮೌನಿ ಅಮಾವಾಸ್ಯೆ ಸ್ನಾನ)
ಫೆಬ್ರುವರಿ 03(ಬಸಂತ್ ಪಂಚಮಿ ಸ್ನಾನ)
ಫೆಬ್ರುವರಿ 12(ಮಾಘಿ ಹುಣ್ಣಿಮೆ ಸ್ನಾನ)
ಫೆಬ್ರುವರಿ 26(ಮಹಾ ಶಿವರಾತ್ರಿ ಸ್ನಾನ)
ಈ ಬಾರಿಯ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾಕುಂಭ ಮೇಳದಲ್ಲಿ ಭಾಗವಹಿಸುವ ನಾಗ ಸಾಧುಗಳ ಜೀವನವು ಸಾಮಾನ್ಯ ಜನರಿಂದ ಪ್ರತ್ಯೇಕವಾಗುವುದರೊಂದಿಗೆ ನಿಗೂಢವಾಗಿರುತ್ತದೆ. ಲೌಕಿಕ ಭೋಗಗಳಿಂದ ದೂರವಿದ್ದು ದೇವರ ಆರಾಧನೆಯಲ್ಲಿ ಆಳವಾಗಿ ತಲ್ಲೀನರಾಗುವ ಈ ಸಾಧುಗಳಲ್ಲಿ 13 ಅಖಾಡಗಳಿವೆ(ಪಂಗಡ), ಅದರಲ್ಲಿ ಏಳು ಶೈವ(ಶಿವನ ಆರಾಧಕರು) ಮತ್ತು ತಲಾ ಮೂರು ವೈಷ್ಣವ(ವಿಷ್ಣುವಿನ ಆರಾಧಕರು) ಹಾಗೂ ಉದಾಸೀನ(ಸಿಖ್) ಅಖಾಡಗಳಿವೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ.
ಸನಾತನ ಜೀವನ ವಿಧಾನವನ್ನು ಸಂರಕ್ಷಿಸಲು ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಈ ಅಖಾಡಗಳನ್ನು ಸ್ಥಾಪಿಸಿದರು.
ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭ ಮೇಳ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ಈ ಮಹಾ ಕುಂಭ ಮೇಳಕ್ಕೆ ವಿಶೇಷ ಮುತುವರ್ಜಿ ವಹಿಸಿದ್ದು, ಮಹಾ ಕುಂಭಮೇಳ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಸುಮಾರು 7,550ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು ಇದರ ಜೊತೆಗೆ ಪ್ರಯಾಗ್ರಾಜ್ ವಿಮಾನ ನಿಲ್ದಾಣದಿಂದ ಸಂಗಮ ಕ್ಷೇತ್ರಕ್ಕ 550ಕ್ಕೂ ಹೆಚ್ಚು ಶೆಟಲ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಂಚಾರ ನಿರಂತರವಾಗಿ ನಡೆಸಲಿದೆ. ದೇಶಾದ್ಯಂತ ಮಹಾ ಕುಂಭಮೇಳಕ್ಕೆ ಸಾವಿರಾರು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಗರಾಜ್ ರೈಲ್ವೆ ನಿಲ್ದಾಣದಿಂದ ಕುಂಭಮೇಳ ಕಾರ್ಯಕ್ರಮಕ್ಕೆ ತಲುಪಲು ಆಟೋ-ರಿಕ್ಷಾಗಳು, ಬಸ್ಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ಹಲವಾರು ಸಾರಿಗೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
ಮಹಾಕುಂಭ ಮೇಳ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಉಳಿದುಕೊಳ್ಳಲು ಸುಮಾರು 1.6 ಲಕ್ಷ ಟೆಂಟ್ಗಳನ್ನು ನಿರ್ಮಿಸಲಾಗಿದೆ.
ಸುಮಾರು 4 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮಹಾಕುಂಭ ಮೇಳ ನಡೆಯುವ ಪ್ರದೇಶದಲ್ಲಿ 67,000 ಎಲ್ಇಡಿ ಮತ್ತು 2000 ಸೋಲಾರ್ ಹೈಬ್ರಿಡ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಕೋಟ್ಯಾಂತರ ಭಕ್ತರು ಸುಗಮ ಮತ್ತು ಸುರಕ್ಷಿತವಾಗಿ ಪ್ರಯಾಣ ಮಾಡಲು ಮಹಾ ಕುಂಭಮೇಳ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ ಸುಮಾರು 400 ಕಿ.ಮೀ.ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ಹಾಗೂ 14 ನೂತನ ಫ್ಲೈ ಓವರ್ಗಳನ್ನು ನಿರ್ಮಾಣ ಮಾಡಲಾಗಿದೆ.
ಸುಮಾರು 30 ಪಾಂಟೂನ್ ಸೇತುವೆಗಳನ್ನು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ, ಸುಮಾರು 1850 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 1.5 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಇದು "ಡಿಜಿಟಲ್ ಮಹಾಕುಂಭ ಮೇಳವಾಗಿದ್ದು" ವಿಶೇಷವಾಗಿ 328 ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿರುವ ಸಿಸಿಟಿವಿಗಳು ಸೇರಿ ಒಟ್ಟು 2600 ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಜೊತೆಗೆ ಹೊಸ ತಂತ್ರಜ್ಞಾನ ಹೊಂದಿರುವ ನೀರಿನ ಒಳಗಡೆ ಚಲಿಸುವ ಡ್ರೋನ್ ಗಳನ್ನು ಈ ಬಾರಿ ಬಳಸಲಾಗುತ್ತಿದೆ. ಮಹಾಕುಂಭಕ್ಕೆ ಬರುವ ಭಕ್ತರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್ಗಳನ್ನು ಒದಗಿಸಲಾಗುತ್ತದೆ ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
ಮಹಾ ಕುಂಭಮೇಳದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಐಸಿಯು ಸೌಲಭ್ಯ ಹೊಂದಿರುವ ಆಂಬ್ಯುಲೆನ್ಸ್ಗಳನ್ನು ನದಿ ನೀರಿನ ಮೇಲೆ ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ, ಈ ಆಂಬ್ಯುಲೆನ್ಸ್ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳು ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್ಗಳ ಸೌಲಭ್ಯಗಳನ್ನು ಒದಗಿಸಲಾಗಿದೆ, ಇದರ ಜೊತೆಗೆ ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷಿತ ದೃಷ್ಟಿಯಿಂದ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್ಟೇಬಲ್ (PAC) ಹಾಗೂ 150 ಎಸ್ಡಿಆರ್ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸುಮಾರು 37 ಸಾವಿರ ಪೋಲಿಸರನ್ನು ಹಾಗೂ 14 ಸಾವಿರ ಹೋಮ್ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. 10,200 ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗಿದೆ.
ಮಹಾ ಕುಂಭಮೇಳ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೌರಾಣಿಕ ಪ್ರಾಮುಖ್ಯತೆಯನ್ನು ಸಾರುವ 30 ವಿವಿಧ ಕಮಾನುಗಳನ್ನು ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ದೇವ ಲೋಕದ ದಿವ್ಯ ದರ್ಶನ ಅನುಭವವಾಗಲಿದೆ.
ಸುಮಾರು 12 ಕಿ.ಮೀ ನಲ್ಲಿ ತಾತ್ಕಾಲಿಕ ಘಟ್ಗಳನ್ನು ನಿರ್ಮಾಣ ಮಾಡಲಾಗಿದೆ, 450 ಕಿ.ಮೀ ನಷ್ಟು ಪೈಪ್ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಅದ್ಭುತವಾದ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲು ಅಮೆರಿಕ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 82 ದೇಶಗಳು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿವೆ.
ಈ ಮಹಾ ಕುಂಭಮೇಳದ ಬಗ್ಗೆ ನನಗೆ ಸಿಕ್ಕಷ್ಟು ಹಾಗೂ ತಿಳಿದಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಈ ಐತಿಹಾಸಿಕ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ನಾವೆಲ್ಲರೂ ಆಶೀಸೋಣ.