ಪಿತೃಗಳಿಗೆ ತಿಲ(ಕಪ್ಪು ಎಳ್ಳು) ತರ್ಪಣವೇಕೆ ?

SANTOSH KULKARNI
By -
0


ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವು ನಡೆಯಲು ಕಾರಣವಾಗಿವೆ. ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ ಹದಿನೈದು ದಿನ ರಾತ್ರಿ, ಕೃಷ್ಣಪಕ್ಷದ ಹದಿನೈದು ದಿನ ಹಗಲು ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿವಾರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.


ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?

ದರ್ಬೆ, ಕುಶ, ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ‌ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಭೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆಯೂ, ಬೆವರಿನಿಂದ ಎಳ್ಳೂ ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ.

Post a Comment

0Comments

Please Select Embedded Mode To show the Comment System.*