ಅಣುಗಳು ಅಥವಾ ಪರಮಾಣುಗಳು ಒತ್ತೊತ್ತಾಗಿ ಬಹಳ ಹತ್ತಿರದಲ್ಲಿ ಜೋಡಿಸಿಕೊಂಡಿದ್ದರೆ ಅದು ಘನವಸ್ತು. ಇಲ್ಲಿ ಅವುಗಳ ಚಲನಾಶಕ್ತಿಯು (Kinetic energy) ಕಡಿಮೆ ಪ್ರಮಾಣದಲ್ಲಿರುತ್ತದೆ. ಆದ್ದರಿಂದಲೇ ಅವು ಒಂದನ್ನೊಂದು ಬಿಟ್ಟು ದೂರ ಚಲಿಸಲಾರವು.
ಈಗ ನೀವು ಆ ಘನವಸ್ತುವಿನ ತಾಪಮಾನವನ್ನು ಹೆಚ್ಚಿಸಿದರೆ, ಅಣುಗಳು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡು ಸ್ವಲ್ಪ ದೂರ ಸರಿಯಲಾರಂಭಿಸುತ್ತವೆ; ಆದರೂ ಸಂಪೂರ್ಣ ಒಂದರಿಂದ ಮತ್ತೊಂದು ಸ್ವತಂತ್ರವಾಗಿರುವುದಿಲ್ಲ. ಇದುವೇ ದ್ರವ ಸ್ಥಿತಿ.
ತಾಪವನ್ನು ಇನ್ನಷ್ಟು ಹೆಚ್ಚಿಸಿ, ಅಥವಾ ಅಣುಗಳಿಗೆ ಇನ್ನಷ್ಟು ತೀವ್ರವಾದ ಚೈತನ್ಯವನ್ನು ಕೊಟ್ಟಲ್ಲಿ ಅವು ಒಂದರ ಪ್ರಭಾವದಿಂದ ಮತ್ತೊಂದು ಬೇರೆಯಾಗಿ (ಬಹಳ ಕ್ಷೀಣವಾದ ನಂಟನ್ನು ಉಳಿಸಿಕೊಂಡು) ಹೆಚ್ಚುಕಮ್ಮಿ ಸ್ವತಂತ್ರವಾಗಿ, ತಮಗೆ ದೊರೆತ ಶುದ್ಧವಾದ ಚಲನಾಶಕ್ತಿಯ ಎಲ್ಲ ಸಾಧ್ಯತೆಗಳಲ್ಲಿ, ಮಿಜಿಮಿಜಿಗುಟ್ಟುತ್ತಾ ಅಸ್ತವ್ಯಸ್ತವಾಗಿ ಓಡಾಡಲಾರಂಭಿಸುತ್ತವೆ. ಈಗ ಆ ವಸ್ತುವನ್ನು ಅನಿಲ ಎನ್ನುತ್ತೇವೆ. ಇಂತಹ ಅನಿಲದಲ್ಲಿ ಕ್ರಮೇಣ ಹೆಚ್ಚಾದ ಶಕ್ತಿಯು ಅದರ ಅನಿಲ ಸ್ವಭಾವವನ್ನು ಮೀರಿಸಿ, ಅದರೊಳಗಿನ ಅವಯವಗಳೆಲ್ಲ ಬೇರಾಗಿ, ಅತ್ಯಂತ ವೇಗವಾಗಿ ಚಲಿಸುವ ಚಾರ್ಜುಳ್ಳ ಕಣಗಳು/ಅಣುಗಳು/ಅಯಾನುಗಳು ಒಂದು ಸೀಮಿತ ವ್ಯಾಪ್ತಿಯ ಪ್ಲಾಸ್ಮಾ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಅನಿಲದ ಸ್ವಭಾವವಿರುವುದಿಲ್ಲ.
ನಮ್ಮ ದೈನಂದಿನ ಬದುಕಿನಲ್ಲಿ ಕಂಡುಬರುವ ಬೆಂಕಿಯ ಜ್ವಾಲೆ, ಟ್ಯೂಬ್ ಲೈಟಿನ ಬೆಳಕು, ಮಿಂಚಿನ ಕೋಲಿನಲ್ಲಿ ಕೋರೈಸುವ ಪ್ರಖರತೆ,
aurora borealis ಎಂಬ ಧ್ರುವಪ್ರಭೆ, ನಿಯಾನ್ ಬೋರ್ಡುಗಳು, ಪ್ಲಾಸ್ಮಾ ಬಾಲ್ ಎಂಬ ಅಲಂಕಾರಿಕ ವಸ್ತು, ಅಣುಬಾಂಬಿನ ಸ್ಫೋಟದಲ್ಲಿ ಎದ್ದೇಳುವ ಪ್ರಖರ ಬೆಳಕು, ಪ್ಲಾಸ್ಮಾ ಟಿವಿಯ ಪರದೆ, ಇಲ್ಲೆಲ್ಲ ಕಂಡುಬರುವುದೂ ಇಂತಹಾ ನಿರುಪದ್ರವಿಯಾದ, ನಮ್ಮ ಕೈಲಿ ಸಂಭಾಳಿಸಲು ಸಾಧ್ಯವಿರುವ ಪ್ಲಾಸ್ಮಾ……
ಆದರೆ ನಾನಿಲ್ಲಿ ಹೇಳಹೊರಟಿರುವುದು ಇದಕ್ಕಿಂತಲೂ ಬಹಳ ಉನ್ನತ ಮಟ್ಟದ ಪ್ಲಾಸ್ಮಾ ಬಗ್ಗೆ.
ಇಂತಹಾ ಅನಿಲವೊಂದನ್ನು ತೆಗೆದುಕೊಂಡು, ಅದನ್ನು ಬಿಸಿ ಮಾಡುತ್ತಾ ಹೋಗಿ…..ಎಲ್ಲಿಯವರೆಗೆ ಎಂದರೆ; ಅಸ್ತವ್ಯಸ್ತವಾಗಿ ಚಲಿಸುತ್ತಿರುವ ಅಣುಗಳೆಲ್ಲ ವೇಗವಾಗಿ ಧಾವಿಸುತ್ತಾ, ಪರಸ್ಪರ ಢಿಕ್ಕಿ ಹೊಡೆದುಕೊಳ್ಳುತ್ತಾ, ಒಬ್ಬರನ್ನು ಕಂಡರೆ ಮತ್ತೊಬ್ಬರು ಮುಖ ತಿರುಗಿಸಿಕೊಳ್ಳುವ ಪ್ರೋಟಾನುಗಳು ಸಹ- ಅದರ ರಭಸಕ್ಕೆ ಸಿಲುಕಿ ಹತ್ತಿರ ಬರುವಂತಾಗಬೇಕು.
ಪರಮಾಣುಗಳ ಬೀಜದಲ್ಲಿ ಪಾಸಿಟಿವ್ ಚಾರ್ಜಿರುವ ಪ್ರೋಟಾನುಗಳಿರುತ್ತವೆಯಲ್ಲ, ಅವು ಮತ್ತೊಂದು ಪರಮಾಣುವಿನ ಹತ್ತಿರ ಬಂದಾಗ, ಅದರಲ್ಲಿನ ಪಾಸಿಟಿವ್ ಚಾರ್ಜಿಗೆ ವಿಕರ್ಷಣೆ ಹೊಂದಿ ದೂರ ಸರಿಯುತ್ತವೆ. ಹಾಗಾಗಿ ಇವುಗಳ ವಿಕರ್ಷಣೆಯನ್ನೂ ಮೀರಿಸಬಲ್ಲ ಪ್ರಬಲವಾದ ಚಲನಾ ಶಕ್ತಿಯೊಂದನ್ನು ನಮ್ಮ ಮಾಮೂಲಿ ದೈನಂದಿನ ಪರಿಸ್ಥಿಯಲ್ಲಿ ತಂದುಕೊಳ್ಳಲಿಕ್ಕೆ ಸಾಧ್ಯವಿಲ್ಲ. ವಿಶ್ವವನ್ನು ವ್ಯಾಪಿಸಿರುವ ಪ್ಲಾಸ್ಮಾ ಬಗ್ಗೆ ಮಾತಾಡುತ್ತಿದ್ದೇವೆ ಈಗ ನಾವು. ಇಂತಹ ಶರವೇಗದ ಶಕ್ತಿಯ ಕಣಗಳು ಸುತ್ತಾ ತಿರುಗುತ್ತಿರುವ ಎಲೆಕ್ಟ್ರಾನುಗಳನ್ನು ಕಿತ್ತು ಹಾರಿಸುತ್ತಾ, ಕಡೆಗೆ ಬೀಜಕೇಂದ್ರದ ಕೋಟೆಯೊಳಗೂ ನುಗ್ಗಿ, ಅಲ್ಲಿರುವ ಪ್ರೋಟಾನು, ನ್ಯೂಟ್ರಾನುಗಳ ಬಂಧವನ್ನು ಧ್ವಂಸ ಮಾಡಿ, ಅವೆಲ್ಲಾ ಒಡೆದುಹೋದ ಲಾಡು ಉಂಡೆಯಂತೆ ಚೆಲ್ಲಾಪಿಲ್ಲಿಯಾಗಿ, ಬೇರೆಯಾಗಿ… ಇಡೀ ವಸ್ತುವಿನ ರಾಸಾಯನಿಕ ಚಹರೆ ನಶಿಸಿ ಹೋಗಿ, ಎಲ್ಲವೂ ಒಂದೇ ಆಗಿರುವ ಒಂದೇ ಪರಿಪಾಕದ- ಶುದ್ಧಚಲನೆಯನ್ನು ಮಾತ್ರ ಹೊಂದಿರುವ, ಚಂಡವೇಗದ ಕಣಗಳ ಬಿಸೀ ಸಾರಿನಂತೆ ಆಗಿಬಿಡಬೇಕು…. ಈ ಏಕೋದ್ರವ್ಯ ಸ್ಥಿತಿಯೇ ಪ್ಲಾಸ್ಮಾ.
ಇಂತಹಾ ಒಂದೆರಕದ ಸ್ಥಿತಿಗೆ ವಸ್ತುವನ್ನು ತಾರಲಿಕ್ಕೆ ನಿಮಗೆ ತಗುಲುವ ಕಾವುಮಟ್ಟದ ಪ್ರಮಾಣ ಸುಮಾರು ನೂರುಕೋಟಿ ಡಿಗ್ರಿ ಸೆಲ್ಸಿಯಸ್ಸುಗಳು! (ಕೆಲ್ವಿನ್) ಇಷ್ಟು ಅಗಾಧವಾದ ಉಷ್ಣತೆಯನ್ನು ತರುವುದು ಬಹಳ ದುಸ್ತರ.
ಅನಿಲಗಳಿಗೆ ತಮ್ಮದೇ ಆದ ರಾಸಾಯನಿಕ ಚಹರೆ ಇರುತ್ತದೆ. ಜಲಜನಕದ ಅನಿಲದ ಗುಣವೇ ಬೇರೆ, ಆಮ್ಲಜನಕ ಅನಿಲದ ಗುಣವೇ ಬೇರೆ, ಇಂಗಾಲದ ಡೈ ಆಕ್ಸೈಡ್ ಗುಣವೇ ಬೇರೆ. ಆದರೆ ಇವೆಲ್ಲದರ ಪ್ಲಾಸ್ಮಾ ಮಾತ್ರ ಒಂದೇ ಆಗಿರುತ್ತದೆ. ಇಲ್ಲಿ ಧಾತುಗಳ ಎಲ್ಲಾ ವಿಶಿಷ್ಟವಾದ ಗುಣಗಳೂ ನಶಿಸಿ ಹೋಗಿ ಬಿಟ್ಟಿರುತ್ತವೆ. ಅದೊಂದು ಪ್ರಚಂಡ ವೇಗದಲ್ಲಿ ಪ್ರವಹಿಸುತ್ತಿರುವ ಮೂಲಭೂತ ಕಣಗಳ ಮಿಶ್ರಣ ಮಾತ್ರವಾಗಿರುತ್ತದೆ. ಪ್ಲಾಸ್ಮಾದಲ್ಲಿ ಪರಮಾಣುಗಳು ಇರುವುದಿಲ್ಲ, ಅವುಗಳ ಬೀಜವೂ ಇರುವುದಿಲ್ಲ
ನೀವೇನಾದರೂ ಕುತೂಹಲಕ್ಕೆ ಪ್ಲಾಸ್ಮವನ್ನು ಮುಟ್ಟಿದರೆ ಮುಗೀತು. ಸುಮ್ಮನೆ ಥಂಡಿ ಹಿಡಿದು ಒತ್ತಿಗೆ ಕುಳಿತಿದ್ದ ನಿಮ್ಮ ದೇಹದ ಅಣುಗಳಿಗೂ ಅದರ ಪ್ರಚಂಡ ಚಲನಾ ಶಕ್ತಿಯು ವರ್ಗಾವಣೆಯಾಗಿ, ಮರುಕ್ಷಣದಲ್ಲೇ ನಿಮ್ಮ ದೇಹದಲ್ಲಿದ್ದ ಅಣು ಪರಮಾಣುಗಳೆಲ್ಲ ತಮ್ಮ ಬಂಧವನ್ನು ಕಳಚಿಕೊಂಡು ನೀವೂ ಸಹ ಏಕೋಭವ- ಪ್ಲಾಸ್ಮಾ ಆಗಿಬಿಡುವಿರಿ! (ಆಗ ಅಹಂ ಪ್ಲಾಸ್ಮಾಸ್ಮಿ ಎಂಬ ಅದ್ವೈತವು ಸಂಭವಿಸುವುದು😉)
ಈ ಕಾರಣಕ್ಕಾಗಿಯೇ ಅನಿಲಗಳನ್ನು ಕುಕ್ಕರಿನಲ್ಲೋ, ಬಲೂನಿನಲ್ಲೋ ಬಂಧಿಸಿದ ಹಾಗೆ- ಪ್ಲಾಸ್ಮಾವನ್ನು ಯಾವುದೇ ಪಾತ್ರೆಯಲ್ಲಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ಪ್ಲಾಸ್ಮಾವನ್ನು ಸೋಕಿದ ಯಾವುದೇ ಭೌತಿಕ/ಸ್ಥೂಲದ್ರವ್ಯವನ್ನು ಹೊಂದಿದ ವಸ್ತುವೂ ಸಹ ತನ್ನ ಮೂಲರೂಪದಲ್ಲಿ ಉಳಿಯಲು ಸಾಧ್ಯವಿಲ್ಲ. ಅದನ್ನು ಮುಟ್ಟಿದ ಲೋಹ, ಕಲ್ಲು, ದ್ರವ, ಮಣ್ಣು, ಮರ, ಅನಿಲ ಏನೇ ಆಗಿದ್ದರೂ ಅದೂ ಸಹ ಪ್ಲಾಸ್ಮಾವೇ ಆಗಿಬಿಡುತ್ತದೆ. ಹಾಗಾಗಿ ನಮ್ಮ ಭೂಮಿಯಂತಹ ಗ್ರಹಗಳ ಮೇಲಾಗಲಿ, ಕ್ಷುದ್ರಗ್ರಹ, ಉಪಗ್ರಹ ಅಥವಾ ನೀಹಾರಿಕೆಗಳ ಮೇಲಾಗಲೀ ಇಂತಹಾ ಪ್ರಲಯಸ್ವರೂಪಿ ಪ್ಲಾಸ್ಮಾವು ಇರಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಪ್ಲಾಸ್ಮಾ ನಿರ್ಮಾಣವಾಗಲು ಬೇಕಾದಷ್ಟು ಕಾವು ಈ ಆಕಾಶಕಾಯಗಳ ಮೇಲೆ ಇರುವುದಿಲ್ಲ. ಪ್ಲಾಸ್ಮಾ ಕೇವಲ ಅಂತಹಾ ಪ್ರಚಂಡ ಕಾವನ್ನು ಹೊಂದಿರುವ ( ಕೆಲ್ವಿನ್) ತಾರೆಗಳ ಅಥವಾ ಗೆಲಾಕ್ಸಿಗಳ ಗರ್ಭದಲ್ಲಿ ಮಾತ್ರ ಇರಲು ಸಾಧ್ಯ. ಅದೂ ಅಲ್ಲದೆ ಪ್ರಶ್ನೆಯಲ್ಲಿ ಕೇಳಿದಂತೆ ಅದು ಬ್ರಹ್ಮಾಂಡದಲ್ಲಿ ವ್ಯಾಪಿಸಿಕೊಂಡರಂತೂ ಮುಗಿದೇ ಹೋಯಿತು.
ಆದರೆ ವಿಶ್ವದಲ್ಲಿ ಪ್ಲಾಸ್ಮಾ ಅಗಾಧವಾದ ಪ್ರಮಾಣದಲ್ಲಿದೆ ಎನ್ನಬಹುದು; ಇದೊಂದು ಬಹಳ ಮುಖ್ಯವಾದ ವಿಷಯ. ನಮಗೆ ಕಣ್ಣಿಗೆ ಕಂಡುಬರುವ 99% ಪದಾರ್ಥವೇನಿದೆ, ಅದು ಈ ಪ್ಲಾಸ್ಮಾ.
ತಾರೆಗಳಲ್ಲಿ ಅಗಾಧವಾದ ಪ್ರಮಾಣದಲ್ಲಿ ಹೈಡ್ರೋಜನ್ ಇರುತ್ತದೆ ಎಂದು ಕೇಳಿದ್ದೇವೆ. ಆದರೆ ಅದು ಭೂಮಿಯ ಮೇಲಿನ ಹಾಗೆ ಅನಿಲ ರೂಪದಲ್ಲಿರುವುದಿಲ್ಲ. ಅದು ಪ್ಲಾಸ್ಮಾ ಆಗಿರುತ್ತದೆ. ಹೈಡ್ರೋಜನ್ ಪರಮಾಣುವಿನ ಬೀಜಗಳು (ಅಂದರೆ, ಶುದ್ಧ ಪ್ರೋಟಾನು-ನ್ಯೂಟ್ರಾನುಗಳ ಉಂಡೆಗಳು) ತಾರೆಗಳ ಗರ್ಭದಲ್ಲಿನ ತಾಪಮಾನದ ಪ್ರಚಂಡ ವೇಗದಲ್ಲಿ ಎದುರುಬದುರು ಧಾವಿಸಿ ಬರುತ್ತಾ ಢಿಕ್ಕಿ ಹೊಡೆಯಲು ಓಡಿ ಬರುವ ಟಗರುಗಳಂತೆ ಸನಿಹಕ್ಕೆ ಬರುತ್ತಿರುತ್ತವೆ.
ಆದರೆ ಪ್ರೋಟಾನುಗಳು ಒಂದೇ ಜಾತಿಯ ಚಾರ್ಜುಗಳಾದ್ದರಿಂದ, ಅವು ಕೇವಲ ಒಂದು ನಿಗದಿತ ಅಂತರದವರೆಗೆ ಮಾತ್ರ ಹತ್ತಿರ ಬರಬಲ್ಲವು. ಒಂದು ನಿರ್ದಿಷ್ಟವಾದ ಹತ್ತಿರಕ್ಕೆ ಬಂದ ಕೂಡಲೇ, ( ಮೀ) ಒಂದಕ್ಕೊಂದು Strong nuclear force ಗಳ ಬಂಧಕ್ಕೆ ಒಳಗಾಗಿ, ಅವುಗಳಿಂದ ಜಲಜನಕಕ್ಕಿಂತ ದೊಡ್ಡದಾದ ಹೀಲಿಯಂ ಧಾತುವಿನ ಬೀಜ ಸೃಷ್ಟಿಯಾಗುತ್ತದೆ. ಮತ್ತು ಬಹಳ ಮುಖ್ಯವಾಗಿ ಈ ಅಣುಗಳ ಸಂಯೋಗ ಕ್ರಿಯೆಯಲ್ಲಿ ಭಾರೀ ಪ್ರಮಾಣದ ಶಕ್ತಿಯೂ ಸಹ ಬಿಡುಗಡೆಯಾಗುತ್ತದೆ. ತಾರೆಗಳ ಚೈತನ್ಯದ ಮೂಲವಿರುವುದು ಇಂತಹಾ ಪ್ಲಾಸ್ಮಾ ಕೃಪಾ ಪೋಷಿತ Thermo nuclear fusion reaction ಅರ್ಥಾತ್ ಉಷ್ಣಾಣು ಬೆಸುಗೆಯ ಕ್ರಿಯೆ ಯಲ್ಲಿ.
ಹಾಗಾಗಿ ಬ್ರಹ್ಮಾಂಡದಲ್ಲಿನ ತಾರೆಗಳ ಕುಲುಮೆ ಉರಿಯಬೇಕೆಂದರೆ, ಅಲ್ಲಿ ಅಣುಗಳ ಬೆಸುಗೆಯಾಗಬೇಕು, ಬೆಸುಗೆ ಹಾಕಲಿಕ್ಕೆ ಅಲ್ಲಿರುವ ದ್ರವ್ಯರಾಶಿಯೆಲ್ಲ ಪ್ಲಾಸ್ಮಾ ಸ್ಥಿತಿಯಲ್ಲಿ ಇರಬೇಕು. ವಿಶ್ವದಲ್ಲಿ ಇದಕ್ಕೆ ಪ್ರಮುಖವಾದ ಸ್ಥಾನವಿದೆ, ಹಾಗೂ ಎಲ್ಲೆಲ್ಲಿ ಉರಿಯುವ ನಕ್ಷತ್ರ, ಗೆಲಾಕ್ಸಿಗಳು ಇವೆಯೋ ಅಲ್ಲೆಲ್ಲ ಪ್ಲಾಸ್ಮಾ ಇರಲೇಬೇಕು, ಇದ್ದೇ ಇರುತ್ತದೆ.
ಸೂರ್ಯನ ಮೇಲೆ ನೀವೇನು ಪದಾರ್ಥವನ್ನು ನೋಡುತ್ತಿರುವಿರೋ ಅದು ಪ್ಲಾಸ್ಮಾ ಅಲ್ಲದೆ ಬೇರೇನಲ್ಲ.
ಪ್ಲಾಸ್ಮಾವನ್ನು ಕೃತಕವಾಗಿ ಸೃಷ್ಟಿಸಿ ಅಧ್ಯಯನ ಮಾಡುವ ಕ್ಷೇತ್ರವನ್ನು high energy physics ಅಥವಾ plasma physics ಎಂದೇ ಕರೆಯುತ್ತಾರೆ.