ಕಡಲೆಕಾಯಿ ಪರಿಷೆ ಬೆಂಗಳೂರಿನ ಪಾರಂಪರಿಕ ಹಬ್ಬ ಮತ್ತು ಜಾತ್ರೆ, ಇದು ಈ ಊರಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉತ್ಸವ ಎಂದರೆ ತಪ್ಪಾಗಲಾರದು.
ಇದು ನಡೆಯುವುದು ಬೆಂಗಳೂರಿನ ಬಸವನಗುಡಿಯಲ್ಲಿ. ದೊಡ್ಡ ಗಣೇಶ ಮತ್ತು ಬಸವನ ದೇವಸ್ಥಾನದ ಮುಂದೆ ಇರುವ ರಸ್ತೆಯಲ್ಲಿ ಇದನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪರಿಷೆ ನಡೆಯುತ್ತೆ, ಇಡೀ ವಾರ ಹಬ್ಬದ ವಾತಾವರಣ.
ಎಲ್ಲೆಲ್ಲೂ ಕಡಲೆಕಾಯಿಯ ರಾಶಿ, ಬತ್ತಾಸು, ಕಡಲೆಪುರಿ, ಇನ್ನಿತಿರ ತಿಂಡಿ ತಿನಿಸುಗಳ ಮಾರಾಟ. ದೂರ ಊರುಗಳಿಂದ ರೈತರು ಇಲ್ಲಿಗೆ ಬಂದು ತಾವು ಬೆಳೆದ ಬೆಳೆಯನ್ನು ದೇವರಿಗೆ, ಅಂದರೆ ಗಣಪತಿಗೆ ಮತ್ತು ಬಸವನಿಗೆ ಅರ್ಪಿಸಿ ಅದನ್ನು ಮಾರುತ್ತಾರೆ.
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.
ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಬಿಎಂಎಸ್ ಕಾಲೇಜುವರೆಗೂ ಕಡಲೆಕಾಯಿ, ಕಳ್ಳೆಪುರಿ, ತಿಂಡಿ-ತಿನಿಸು, ಆಟಿಕೆ ಸಾಮಾನುಗಳು, ಗೃಹಾಲಂಕಾರ ವಸ್ತುಗಳು, ಬಲೂನ್ ಅಂಗಡಿಗಳು ಇರುತ್ತವೆ.
ಹಸಿ ಕಡಲೆಕಾಯಿ, ಹುರಿದ, ಬೇಯಿಸಿದ ಕಡಲೆಕಾಯಿ, ಖಾರ- ಮಂಡಕ್ಕಿ, ಬಾಂಬೆ ಮಿಠಾಯಿ ತಿನಿಸುಗಳು ರಸ್ತೆ ತುಂಬಾ ಸಿಗುತ್ತವೆ. ಕೊಲಂಬಸ್, ಜಯಂಟ್ ವ್ಹೀಲ್, ಮಕ್ಕಳಿಗಾಗಿ ಜೋಕಾಲಿ, ಪುಟಾಣಿ ರೈಲು ಮನರಂಜನೆ ನೀಡುತ್ತವೆ. ಬೆಂಗಳೂರಿನ ಹೃದಯ ಭಾಗದಲ್ಲಿ ಹಳ್ಳಿ ಸೊಗಡು ತಲೆ ಎತ್ತಿದ ಹಾಗೆ ಕಾಣುತ್ತದೆ.
ಪೌರಾಣಿಕ ಹಿನ್ನೆಲೆ
ಬೆಂಗಳೂರಿನ ಬಸವನಗುಡಿ ಬಡಾವಣೆಗೆ ಹಿಂದೆ ಸುಂಕೇನಹಳ್ಳಿ ಎಂಬ ಹೆಸರಿತ್ತು. ಇದರ ಸುತ್ತಮುತ್ತ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಮೊದಲಾದ ಹಳ್ಳಿಗಳಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು ಬಸವ ಬಂದು ರೈತರು ಕಷ್ಟಪಟ್ಟು ಬೆಳೆಸಿದ ಕಡಲೆಕಾಯಿಯನ್ನು ತಿಂದುಕೊಂಡು ಹೋಗುತ್ತಿತ್ತು. ಒಂದು ದಿನ ಕಾವಲಿದ್ದ ರೈತರು ಈ ಬಸವನನ್ನು ಹಿಡಿಯಲು ಪ್ರಯತ್ನ ಪಟ್ಟರು. ಆ ಬಸವ ಬಹಳ ವೇಗವಾಗಿ ಓಡಿ ಒಂದು ಗುಡ್ಡ ಏರಿ ಮಾಯವಾಯಿತು. ಹಿಂಬಾಲಿಸಿ ಬಂದ ರೈತರು ಈ ಬಸವ ಗುಡ್ಡದಲ್ಲಿ ಮಾಯವಾದದ್ದನ್ನು ಕಂಡರು. ಅವರು ಈ ಬಸವ ಆ ಗುಡ್ಡದಲ್ಲಿ ಕಲ್ಲಾಗಿ ನಿಂತಿದ್ದನ್ನು ಕಂಡು ಆಶ್ಚರ್ಯ ಪಟ್ಟರು. ಅಷ್ಟೇ ಅಲ್ಲ ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆದ. ಇದೇ ಕಲ್ಲಿನ ಬಸವ ಈಗ ಇಲ್ಲಿರುವ ದೊಡ್ಡ ಬಸವಣ್ಣ. ಅಸ್ತ್ರಗಳೊಡನೆ ಬಂದಿದ್ದ ಜನ, ಈ ಕಲ್ಲು ಬಸವನನ್ನು ನೋಡಿ ದಂಗಾದರು. ಈಶ್ವರನ ವಾಹನವಾದ ನಂದಿಯೇ ಆ ಬಸವನೆಂದು ತಿಳಿದು ಭಕ್ತಿಯಿಂದ ಅಡ್ಡ ಬಿದ್ದರು. ಈಶ್ವರನೇ ತಮ್ಮ ರಕ್ಷಣೆಗೆ ತನ್ನ ವಾಹನವನ್ನು ಕಳಿಸಿದ್ದಾನೆಂದು ತಿಳಿದರು. ಅವನನ್ನು ಪೂಜಿಸಲು ಪ್ರಾರಂಭಿಸಿದರು. ಬಸವನಿಗೆ ಪ್ರಿಯವಾದ ಕಡಲೆಕಾಯಿಯನ್ನು ತಿನ್ನುತ್ತಿದ್ದನೆಂದು ತಿಳಿದು, ಅದನ್ನು ತಪ್ಪಿಸಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿದರು. ಅಲ್ಲಿ ಅವನಿಗೆ ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿದರು. ನಂತರ ಬೆಂಗಳೂರಿನ ನಿರ್ಮಾತರಾದ ಕೆಂಪೇಗೌಡರು ದಕ್ಷಿಣ ಶೈಲಿಯಲ್ಲಿರುವ ಈಗಿನ ದೇವಸ್ಥಾನ ಕಟ್ಟಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಯಿಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಂದು ಅಲ್ಲಿಗೆ ಬರುವ ಭಕ್ತರು ಸಹ ಕಡಲೆಕಾಯಿಯನ್ನು ಕೊಂಡು ಬಸವಣ್ಣನಿಗೆ ಅರ್ಪಿಸುತ್ತಾರೆ. ಆಗ ಕಲ್ಲಾದ ಬಸವ ಬೆಳೆಯುತ್ತಲೇ ಹೋದ. ಆತ ಇನ್ನು ಬೆಳೆದರೆ ಪೂಜಿಸಲು ಆಗುವುದಿಲ್ಲವೆಂದು ಆತನ ತಲೆಮೇಲೆ ದೊಡ್ಡ ಮೊಳೆ ಹೊಡೆದಿದ್ದಾರೆ. ಅಂದಿನಿಂದ ಅವನ ಬೆಳವಣಿಗೆ ನಿಂತಿದೆ. ಆ ಮೊಳೆ ತ್ರಿಶೂಲದ ರೂಪದಲ್ಲಿ ಇದೆ