ಕನ್ನಡ ಸಾಹಿತ್ಯಕ್ಕೆ ಕಾಸರಗೋಡು ನೀಡಿದ ಕೊಡುಗೆ ಏನು?

SANTOSH KULKARNI
By -
0

 ರಾಷ್ಟ ಕವಿ ಮಂಜೇಶ್ವರ ಗೋವಿಂದ ಪೈ

ಜನನ : ೨೩-೩-೧೮೮೩

ತಂದೆ: ತಿಮ್ಮ ಪೈ

ತಾಯಿ: ದೇವಕಿ ಅಮ್ಮ

ಅವರು ತಮ್ಮ ಬದುಕಿನ ಬಹಳಷ್ಟು ಸಮಯವನ್ನು ತಾಯಿಯ ತವರೂರಾದ ಮಂಜೇಶ್ವರದಲ್ಲಿ ಕಳೆದರು.1904 ರಲ್ಲಿ ಅವರ ಮೊದಲ ಕವನ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಗಿಳಿವಿಂಡು,ನಂದಾದೀಪ,ಹೃದಯರಂಗ- ಅವರ ಕವನ ಸಂಕಲನಗಳು.ಚಿತ್ರ ಭಾನು ಅಥವಾ 1942 ಮತ್ತು ಹೆಬ್ಬೆರಳು ಅವರು ಬರೆದ ನಾಟಕಗಳು. ಜಪಾನಿ ಭಾಷೆಯ ನೋ ನಾಟಕವನ್ನು ಅವರು ಅನುವಾದಿಸಿದ್ದಾರೆ. "ಕನ್ನಡದ ಮೊರೆ" ಅವರ ಲೇಖನ ಸಂಗ್ರಹ. ಗೋಲ್ಗೊಥಾ,ವೈಶಾಖ,ಪ್ರಭಾಸ, ದೆಹಲಿ- ಎಂಬ ಖಂಡ ಕಾವ್ಯಗಳನ್ನು ಬರೆದಿದ್ದಾರೆ.ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬಹಳಷ್ಟು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಅವರು ಜಗತ್ತಿನ ಸುಮಾರು 22 ಭಾಷೆಗಳನ್ನು ಬಲ್ಲವರಾಗಿದ್ದರು.ಅವರ ಸ್ವಂತ ಪುಸ್ತಕ ಭಂಡಾರದಲ್ಲಿ 40 ಭಾಷೆಗಳ 4334 ಪುಸ್ತಕಗಳಿದ್ದವು. ಅವು ಈಗ ಉಡುಪಿಯಲ್ಲಿ "ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ"ದಲ್ಲಿವೆ.1949 ರಲ್ಲಿ ಮದರಾಸು ಸರಕಾರವು ಅವರಿಗೆ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿತು.1950ರಲ್ಲಿ ಮುಂಬೈ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1963 ಇಸವಿ ಸಪ್ಟೆಂಬರ್ 3ರಂದು ಅವರು ಇಹಲೋಕವನ್ನು ತ್ಯಜಿಸಿದರು. ಅವರು ಬಾಳಿ ಬದುಕಿ ಸಾಹಿತ್ಯ ಸಾಧನೆ ನಡೆಸಿದ ಮನೆ ಈಗಲೂ ಮಂಜೇಶ್ವರದಲ್ಲಿದೆ.

ಅದು ಈಗ ಗೋವಿಂದ ಪೈ ಸ್ಮಾರಕವೆನಿಸಿದೆ. ಅವರ ನೆನಪಿಗಾಗಿ ಕೇರಳ ಸರಕಾರವು ಮಂಜೇಶ್ವರದಲ್ಲಿ ಗೋವಿಂದ ಪೈ ಸ್ಮಾರಕ ಕಾಲೇಜನ್ನು ಸ್ಥಾಪಿಸಿದೆ.

ನಾಡೋಜ ಕವಿ ಕಯ್ಯಾರ ಕಿಞ್ಞಣ್ಣ ರೈ

ಕಯ್ಯಾರ ಕಿಞ್ಞಣ್ಣ ರೈ ರವರು ಕಳ್ಳಕಳಿಯ ದುಗ್ಗಪ್ಪ ರೈ ಮತ್ತು ಕಯ್ಯಾರ ದೆಯ್ಯಕ್ಕೆ ದಂಪತಿಗಳ ಮಗನಾಗಿ ೧೯೧೫ ಜೂನ್ ೮ರಂದು ಪೆರಡಾಲ ದಲ್ಲಿ ಜನಿಸಿದರು.ಬದಿಯಡ್ಕದಲ್ಲಿ ಪ್ರಾರ್ಥಮಿಕ ಶಿಕ್ಷಣ ಪೂರೈಸಿ ನೀರ್ಚಾಲಿನ ಸಂಸೃತ ಮಹಾಜನ ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದರು.1935 ರಲ್ಲಿ ಕನ್ನಡ-ಸಂಸೃತ ಉಭಯ ಭಾಷೆಗಳಲ್ಲಿ ವಿದ್ವಾನ್ ಪದವಿಯನ್ನು ಪಡೆದರು. 1944ರಲ್ಲಿ ಪೆರಡಾಲದ ನವ ಜೀವನ ಹೈ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಶ್ರೀ ಮುಖ , ಐಕ್ಯಗಾನ, ಚೇತನ, ಪಂಚಮಿ, ಗಂಧವತಿ, ಶತಮಾನದ ಗಾನ -ಅವರ ಕವನ ಸಂಕಲನಗಳು. ವಿರಾಗಿಣಿ(ನಾಟಕ). ಮಲೆಯಾಳಂ ಕವಿ ಕುಮಾರನ್ ಆಶಾನ್ ರ ಮೂರು ಖಂಡ ಕಾವ್ಯಗಳನ್ನು ಗದ್ಯಾನುವಾದ ಮಾಡಿದ್ದಾರೆ."ದುಡಿತವೇ ನನ್ನ ದೇವರು" ಅವರ ಆತ್ಮ ಕಥನ.

1969ರಲ್ಲಿ ಭಾರತ ಸರಕಾರದಿಂದ ಶ್ರೇಷ್ಟ ಅಧ್ಯಾಪಕ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್,ನಾಡೋಜ ಪ್ರಶಸ್ತಿ,ಪಂಪ ಪ್ರಶಸ್ತಿ -ಇವರಿಗೆ ಸಂದ ಗೌರವಗಳು.9–8–2015 ರಲ್ಲಿ ಅವರು ನಿಧನರಾದರು.

ಸಾರಾ ಅಬೂಬಕ್ಕರ್

ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು ಜೂನ್ ೩೦, ೧೯೩೬ರಂದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಎಂಜಿನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. "ಚಂದ್ರಗಿರಿಯ ತೀರದಲ್ಲಿ" ಅವರ ಮೊದಲ ಕಾದಂಬರಿ.ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ,ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ ಅವರ ಇತರ ಕಾದಂಬರಿಗಳು . ಐಶಾರಾಮದಲ್ಲಿ - ಅವರ ಪ್ರವಾಸ ಕಥನ, ಮುಸ್ಲಿಂ ಮಹಿಳೆಯರ ಏಳಿಗೆಗಾಗಿ ಪ್ರಯತ್ನಿಸಿದರು.

ಡಾ। ಉಪ್ಪಂಗಳ ರಾಮ ಭಟ್ಟ

ಡಾ। ಉಪ್ಪಂಗಳ ರಾಮ ಭಟ್ಟರು ಕಾಸರಗೋಡು ಕುಂಬ್ಡಾಜಿ ಗ್ರಾಮದಲ್ಲಿ ಉಪ್ಪಂಗಳ ಪರಮೇಶ್ವರ ಭಟ್ಟ ಹಾಗೂ ಲಕ್ಷ್ಮಿ ದಂಪತಿಯ ಪುತ್ರನಾಗಿ 1940 ಫೆಬ್ರವರಿ 8 ರಂದು ಜನಿಸಿದರು. ಕಲ್ಲಿಕೋಟೆ ವಿಶ್ವವಿದ್ಯಾಲಯದ ಎಂ ಎ ಪರೀಕ್ಷೆಯಲ್ಲಿ ಮೊದಲ ರೇಂಕ್ ನೊಂದಿಗೆ ಉತ್ತೀರ್ಣರಾಗಿ ಮೈಸೂರು ವಿಷ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದರು.

ಉಡುಪಿಯ ಎಂ ಜಿ ಯಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರಾಷ್ಟಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ಅಕಲಂಕ' ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿನ್ ತನ್ಮೂಲಕ ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಾರೆ.

ಮಾನಸ,ಅಂತರಂಗ, ಪಂಚವಟಿ,ಗಡಿನಾಡು ಕಾಸರಗೋಡು,ಕರ್ನಾಟಕ ಶಬ್ದಾನುಶಾಸನ ವಿವೇಚನೆ , ಸಂಚಾರ ಸಂಪುಟ, ನೆಲ ಸಂಪಿಗೆ, ಪುಕ್ಕದೊಳಗಿನ ಹಕ್ಕಿ ಅವರ ಪ್ರಮುಖ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಹಾ. ಮಾ ನಾ ದತ್ತಿ ಪ್ರಶಸ್ತಿ,ಕಡೆಂಗೋಡ್ಲು ಕಾವ್ಯ ಪ್ರಶಸ್ತಿ,ಮಾಸ್ತಿ ಕಥಾ ಪ್ರಶಸ್ತಿ ಅವರಿಗೆ ಲಭಿಸಿದೆ.

ಡಾ। ನಾ ದಾಮೋದರ ಶೆಟ್ಟಿ

ಕುಂಬಳೆಯ ನಾಯ್ಕಾಪಿನಲ್ಲಿ 2–8–1951 ರಲ್ಲಿ ಜನಿಸಿದರು. 1975 ರಲ್ಲಿ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ 2011ರಲ್ಲಿ ನಿವೃತ್ತರಾದರು. ಒಡೆದ ಮುತ್ತುಗಳು, ಹಾಡು ಮನವೇ ಹಾಡು ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ದೇವರ ವಿಕರಾಳಗಳು,ಅಶ್ವತ್ಥಾಮ,ಮೂರು ಹೆಜ್ಜೆ ಮೂರು ಲೋಕ -ಅವರ ಇತರ ಕೃತಿಗಳು. ಸುಳಿವಿನೊಳಗೆ,ಸರದಿ -ಇವರು ಬರೆದ ಕಾದಂಬರಿಗಳು. ಅರ್ಪಣೆ,ಹೂಮನಸು,ಪ್ರಜೆ- ಇವರು ಬರೆದ ನಾಟಕಗಳು.

ರಾಮ್ ಎಲ್ಲಂಗಳ

ರಾಮರಾಯ ಶಾನುಭೋಗರ ಕಾವ್ಯನಾಮ ರಾಮ್ ಎಲ್ಲಂಗಳ.30–5–1958 ರಲ್ಲಿ ಕಾಸರಗೋಡಿನ ಮಧೂರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಂಕರ ನಾರಾಯಣ ಶಾನುಭೋಗ್ ಮತ್ತು ತಾಯಿ ಪದ್ಮಾವತಿ. ಅವರು ಉಡುಪಿಯ ಎಮ್ ಜಿ ಎಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ್ ಆರಂಭಿಸಿ ವಾಮಂಜೂರಿನ ಸೈಂಟ್ ರೇಮಂಡ್ಸ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಕ್ರ ಸಂಚಾರ್,ಹೊಂಬೆಳಕು,ಅಪ್ಪಿಕೋ, ಬೆಳಕು ,ಬಹುಮಾನ ಮುಂತಾದವು ಅವರ ಕೃತಿಗಳು. ರತ್ನವರ್ಮ ಹೆಗ್ಡೆ ಪ್ರಶಸ್ತಿ,ಕಾಸರಗೋಡು ಜಿಲ್ಲಾ ಸಾಹಿತ್ಯ ಚುಟುಕು ಪ್ರಶಸ್ತಿ, ಕಲಾ ಪ್ರತಿಭಾ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಶ್ರೀ ಪಡ್ರೆ

1955 ರಲ್ಲಿ ಕಾಸರಗೋಡಿನಲ್ಲಿ ಜನಿಸಿದರು.ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಅವರು 1985 ರಲ್ಲಿ ಅಡಿಕೆಯ ಬೆಲೆ ಪಾತಾಳಕ್ಕಿಳಿದಾಗ ಅಡಿಕೆ ಪತ್ರಿಕೆಯನ್ನು ಪ್ರಕಟಿಸಿದರು,ನೀರಿನ ಸಮಸ್ಯೆ ,ಅಂತರ್ಜಲ ಮಟ್ಟ ಏತರಿಸುವುದು,ಹಲಸಿನ ಹಣ್ಣಿನ ಪ್ರಚಾರ ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವೆಂಕಟರಾಜ ಪುಣಿ೦ಚತ್ತಾಯ

ವೆಂಕಟರಾಜ ಪುಣಿ೦ಚತ್ತಾಯ ರು 1936 ಅಕ್ಟೋಬರ್ 1 ರಂದು ಕಾಸರಗೋಡು ಜಿಲ್ಲೆಯ ಪುಂಡೂರು ಮನೆತನದಲ್ಲಿ ಜನಿಸಿದರು. ಇವರ ತಂದೆ ದಾಮೋದರ ಪುಣಿಂಚತ್ತಾಯ. ತಾಯಿ ಸರಸ್ವತಿ ಅಮ್ಮ.ಎಡನೀರಿನ ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಸಾಹಿತ್ಯ,ನಾಟಕ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಶೈಲೂಷಿ,ಸುಭಾಷಿತ,ಲಹರಿ, ಜೋಕಾಲಿ,ಅಲಡೆ- ಅವರ ಕವನ ಸಂಕಲನಗಳು. ತುಳು ಶಾಸನ,ಗ್ರಂಥ,ಲಿಪಿ ಗಳ ಬಗ್ಗೆಸಂಶೋಧನೆ ಮಾಡಿದ್ದಾರೆ. ಶ್ರೀ ಭಾಗವತೊ,ಕಾವೇರಿ ,ಮಹಾಭಾರತೊ ಮುಂತಾದ ಪ್ರಾಚೀನ ತುಳು ಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅವರು 2012 ಜುಲೈ 13 ರಂದು ಇಹಲೋಕವನ್ನು ತ್ಯಜಿಸಿದರು.

Post a Comment

0Comments

Post a Comment (0)