ಈ ಹಿಂದೆ ಹೇಳಿದಂತೆ ಭಾರತದಲ್ಲಿ ಹಲವು ಸಂಪ್ರದಾಯಗಳು ಪ್ರಚಲಿತದಲ್ಲಿದ್ದವು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ್ಯ, ಕಾಪಾಲಿಕ ಹೀಗೆ ಹತ್ತು ಹಲವು. ಎಲ್ಲವೂ ವೇದಾರಿತವಾಗಿ ಇದ್ದರೂ ಆಚಾರ ವಿಚಾರಗಳಲ್ಲಿ ಭೇದ ಇದ್ದವು. ಅಲ್ಲದೇ ಅಸಮಾನತೆ ಕೂಡ ತಾರಕದಲ್ಲಿತ್ತು. ಇವುಗಳ ಲಾಭ ಬೌದ್ಧ ಧರ್ಮಕ್ಕೆ ಆಯಿತು. ಬಹುಪಾಲು ಯುವಕರು ಬೌದ್ಧ ದೀಕ್ಷೆ ಪಡೆದು ಬಿಕ್ಕುಗಳಾಗುತ್ತಿದ್ದರು. ಹಲವು ರಾಜರು ಕೂಡಾ ಬೌದ್ಧ ಧರ್ಮ ಸ್ವೀಕರಿಸಿ ಪ್ರಸಾರ ಮಾಡುತ್ತಿದ್ದರು. ಇದರಿಂದಾಗಿ ವೈದಿಕ/ತಾಂತ್ರಿಕ ಧರ್ಮ ಕ್ರಮೇಣ ನಶಿಸಲಾರಂಭಿಸಿತು. ಇಂತಹ ಪರಿಸ್ಥಿತಿಯಲ್ಲಿ ಆದಿಶಂಕರರ ಅವತಾರವಾಯಿತು.
ಶಂಕರಾಚಾರ್ಯರು ವೇದ ಉಪನಷತ್ತುಗಳಲ್ಲಿನ ಅದ್ವೈತ ಸಾರವನ್ನು ಅರ್ಥಮಾಡಿಕೊಂಡರು. ಬ್ರಹ್ಮ ಒಂದೇ ಸತ್ಯ. ಈ ಜಗತ್ತು ಮಿಥ್ಯೆ ಎಂದು ಅವರು ಹೇಳಿದರು. ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವು ಪಂಥಗಳ ಮುಖಂಡರನ್ನು ಸೋಲಿಸಿ ಅವರಿಗೇ ಅದ್ವೈತ ದೀಕ್ಷೆ ನೀಡಿ ಅವರನ್ನು ಸ್ಮಾರ್ತರನ್ನಾಗಿಸುತ್ತಿದ್ದರು. ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಶೈವ, ವೈಷ್ಣವ, ಶಾಕ್ತ, ಗಾಣಪತ್ಯ ಮತ್ತು ಸೂರ್ಯ ಪಂಥವನ್ನು ಏಕೀಕರಿಸಿ ಪಂಚಾಯತನ ಎಂಬ ಹೊಸ ಪೂಜಾ ಪದ್ದತಿಯನ್ನು ತಂದರು.
ಈ ಪಂಚಾಯತನ ಪೂಜೆಯಲ್ಲಿ ಶಿವ, ವಿಷ್ಣು, ಅಂಬಿಕೆ, ಗಣಪತಿ ಮತ್ತು ಸೂರ್ಯ ದೇವರನ್ನು ಸಮಾನವಾಗಿ ಪೂಜಿಸುತ್ತಾರೆ. ಸಂಪ್ರದಾಯಬದ್ಧ ಸ್ಮಾರ್ತರ ಮನೆಯಲ್ಲಿ ಈ ಪದ್ಧತಿ ಕಾಣಬಹುದು. ಇಲ್ಲಿ ದೇವರ ವಿಗ್ರಹ ಅಥವಾ ಅವರಿಗೆ ಸಂಬಂಧಿಸಿದ ಶಿಲೆಯನ್ನು ಇಟ್ಟು ಪೂಜಿಸುತ್ತಾರೆ. ಅಂದರೆ
ಶಿವ - ಬಾಣಲಿಂಗ/ನರ್ಮದಾಲಿಂಗ
ವಿಷ್ಣು - ಸಾಲಗ್ರಾಮ
ದೇವಿ - ಸ್ವರ್ಣಮುಖಿ
ಗಣಪತಿ - ಸೋನಭದ್ರ ಶಿಲೆ
ಸೂರ್ಯ - ಶುದ್ಧ ಸ್ಫಟಿಕ ಶಿಲೆ
ಆದರೆ ಇಲ್ಲೂ ಹಲವು ವಿಧಗಳಿವೆ. ನಾವು ಎಷ್ಟೇ ಎಲ್ಲಾ ದೇವರು ಒಂದೇ ಎಂದರೂ ಯಾವುದೋ ಒಂದು ಸ್ವರೂಪ ನಮಗೆ ಇಷ್ಟವಾಗುತ್ತದೆ. ಇದೇ ಇಷ್ಟ ದೈವ. ಇನ್ನು ನಮ್ಮ ಕುಲದೇವರು ಕೂಡ ಇರುತ್ತಾರೆ. ಯಾವುದೇ ರೂಪವಾಗಲಿ ಈ ಪಂಚ ದೇವತೆಗಳ ಸ್ವರೂಪದಲ್ಲೇ ಬರುತ್ತವೆ. ವೀರಭದ್ರ, ಮೈಲಾರಲಿಂಗ ಇತ್ಯಾದಿ ಎಲ್ಲರೂ ಶಿವ ರೂಪಗಳು. ಲಕ್ಷ್ಮೀ, ಕಾಳಿ, ಸರಸ್ವತಿ, ಮಾರಮ್ಮ, ಯಲ್ಲಮ್ಮ ಎಲ್ಲರೂ ದೇವಿ ರೂಪ. ಹಾಗೆ ರಾಮ, ಕೃಷ್ಣ, ನರಸಿಂಹ ಎಲ್ಲರೂ ವಿಷ್ಣು ರೂಪ. ಇನ್ನು ತಮಿಳು ಪ್ರಾಂತ್ಯದಲ್ಲಿ ಸೂರ್ಯನ ಬದಲು ಸ್ಕಂದನ ಪೂಜೆ ಇರುತ್ತದೆ.
ಹೀಗೆ ನಮ್ಮ ಇಷ್ಟ/ಕುಲ/ಉಪಾಸ್ಯ ದೇವತೆಯನ್ನು ಮಧ್ಯದಲ್ಲಿ ಇರಿಸಿ ಉಳಿದ ನಾಲ್ಕು ದೇವತೆಗಳನ್ನು ಆ ಮೂಲ ವಿಗ್ರಹದ ಸುತ್ತಲೂ ಇರಿಸಿ ಪೂಜಿಸಲಾಗುತ್ತದೆ. ಅಂದರೆ ಮಧ್ಯದಲ್ಲಿ ಇರುವ ದೈವವು ಪರಬ್ರಹ್ಮ ಸ್ವರೂಪ ಆಗಿದ್ದು ಉಳಿದ ದೇವತೆಗಳು ಆ ಮೂಲ ಸ್ವರೂಪದ ರೂಪಗಳು ಎಂದು ಪೂಜಿಸುತ್ತಾರೆ. ಇದೇ ಪಂಚಾಯತನ ಪೂಜಾ ಪದ್ದತಿ. ಪೂರ್ವಜರು ವೈಷ್ಣವರಾಗಿದ್ದು ಶಂಕರರ ಪ್ರಭಾವದಿಂದ ಸ್ಮಾರ್ತರಾಗಿದ್ದರೆ ಅವರು ವಿಷ್ಣು ಪಂಚಾಯತನ ಪಾಲಿಸುತ್ತಾರೆ. ಹೀಗೆ ಶಿವ ಪಂಚಾಯತನ, ದೇವಿ ಪಂಚಾಯತನ, ಗಣೇಶ ಪಂಚಾಯತನ, ಸೂರ್ಯ/ಸ್ಕಂದ ಪಂಚಾಯತನ ಇವೆ
ಶಿವ ಪಂಚಾಯತನ
ದೇವಿ ಪಂಚಾಯತನ
ವಿಷ್ಣು ಪಂಚಾಯತನ
ಗಣೇಶ ಪಂಚಾಯತನ
ಸೂರ್ಯ ಪಂಚಾಯತನ
ಅಪರೂಪದ ಸ್ಕಂದ ಪಂಚಾಯತನ
ಹೀಗೆ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಈ ಪೂಜಾ ಪದ್ದತಿ ಎಲ್ಲಾ ದೇವತೆಗಳನ್ನು ಸಮಾನವಾಗಿ ಗೌರವಿಸುವ ಪದ್ಧತಿಯಾಗಿದೆ. ಸ್ಮಾರ್ತರಲ್ಲದಿದ್ದರೂ(ಬ್ರಾಹ್ಮಣ) ಈ ಪೂಜಾ ಪದ್ದತಿಯನ್ನು ಎಲ್ಲರೂ ಪಾಲಿಸಬಹುದು.