ಈ ಪ್ರಶ್ನೆಗೆ ಸಮಾನ್ಯವಾಗಿ ಕಾಣಿಸುವ ಉತ್ತರ, ಸತಿ ಸುಲೋಚನಾ,ತೆರೆ ಕಂಡ ದಿನಾಂಕ 04/03/1934.ಚಿತ್ರಮಂದಿರ ಬೆಂಗಳೂರು ನಗರದ ಪ್ಯಾರಾಮೌಂಟ್. ಇಲ್ಲಿಂದ ಕನ್ನಡದ ವಾಕ್ತ್ಚಿತ್ರ ಪರಂಪರೆ ಆರಂಭ. ಸದ್ಯ ಟಾಕೀ ಯುಗಕ್ಕೆ 90ವರ್ಷಗಳ ಇತಿಹಾಸ.ಇಲ್ಲಿಂದಾಚೆಗೆ ಸಿನಿಮಾಗಳ ಬಿಡುಗಡೆ, ನಿರ್ಮಾಣ ಇತ್ಯಾದಿ ಮಾಹಿತಿಗಳು ಲಭ್ಯವಿದೆ .
ಭಾರತೀಯ ಚಿತ್ರ ರಂಗದಲ್ಲಿ ಮಾತಿನ ಸಿನಿಮಾ ಯುಗ ಆರಂಭಗೊಂಡದ್ದು ಹಿಂದಿ (ಆಲಂ ಅರಾ )1931ಅದೇ ರೀತಿಯಲ್ಲಿ ತಮಿಳು, ತೆಲುಗು ಮತ್ತು ಬಂಗಾಳಿ ಚಿತ್ರರಂಗ ಕೂಡಾ ಇದೇ ವರ್ಷದಲ್ಲಿ ಮಾತಿನ ಸಿನಿಮಾ ಕಂಡವು. 1932ರಲ್ಲಿ ಗುಜರಾತಿ ಮತ್ತು ಮರಾಠಿ ಚಿತ್ರ ರಂಗದಲ್ಲಿ ಮಾತಿನ ಯುಗ ಆರಂಭಗೊಂಡಿತು. 1934 ಕನ್ನಡದ ಸರದಿ.
ನೆನಪಿಡಿ,ಇದಕ್ಕೂ ಮುನ್ನ ಮೂಕಿ ಚಿತ್ರಗಳ ಯುಗವಿತ್ತು.ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ.ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಿನಿಮಾ ಇತಿಹಾಸ ಅಪೂರ್ಣ. ಜಾಗತಿಕ ಮಟ್ಟದಲ್ಲಿ ಈ ಯುಗ 1895ರಲ್ಲಿ ಆರಂಭಗೊಂಡಿದೆ ಎನ್ನಲಾದರೆ ಭಾರತದಲ್ಲಿ 1913ರಿಂದಲೇ ಸಿನಿಮಾ ಲೋಕದ ಬೆಳವಣಿಗೆ ಕಾಣಬಹುದು.ಭಾರತದ ಬಹುಪಾಲು ಮೂಕಿ ಚಿತ್ರಗಳು ಕರ್ನಾಟಕದಲ್ಲಿಯೇ ನಿರ್ಮಾಣಗೊಂಡವು ಎನ್ನುವುದು ಗಮನಾರ್ಹ ಸಂಗತಿ.
ಈ ಹಾದಿಯಲ್ಲಿ ಕನ್ನಡ ಚಿತ್ರ ರಂಗದ ಹೆಜ್ಜೆಗಳು ಹೀಗಿದೆ. ಮಾತಿಲ್ಲದ ಚಿತ್ರ ಎಂದಮೇಲೆ ನಮ್ಮಲ್ಲಿಯೇ ನಿರ್ಮಾಣವಾ ದ ದೃಷ್ಟಿಯಿಂದ ಅದು ನಮ್ಮಚಿತ್ರ ರಂಗದ ಪರಂಪರೆ ಎನ್ನಬಹುದು. 1921ರಿಂದ 1933ರ ವರೆಗೂ ಸಾಕಷ್ಟು ಚಿತ್ರ ನಿರ್ಮಾಣಗೊಂಡಿದೆ. ಮಾತಿಲ್ಲದ ಕಾರಣಕ್ಕೆ ಇವು ಭಾರತದ ಹಲವೆಡೆ ಪ್ರದರ್ಶನ ಕಂಡು ಗೆಲುವು ಕಂಡಿದೆ ಎಂಬ ಮಾಹಿತಿಯೂ ಕಾಣಿಸಿದೆ . ಇವುಗಳ ಪೈಕಿ 54 ಚಿತ್ರಗಳ ಹೆಸರುಗಳ ಪಟ್ಟಿಯೂ ಇದೆ ಎನ್ನಲಾಗಿದೆ. ಆ ಕಾಲದಲ್ಲಿ ತಾಂತ್ರಿಕ ಸೌಲಭ್ಯಗಳು ಇಲ್ಲದಿದ್ದ ಕಾರಣಕ್ಕೆ ಹಲವು ಚಿತ್ರಗಳು ಅಲ್ಲಲ್ಲಿ ಪ್ರದರ್ಶನಗೊಂಡ ನಾಟಕಗಳನ್ನೇ ಚಿತ್ರೀಕರಣ ಮಾಡುವ ಮೂಲಕ ಸಿನೆಮಾ ರೂಪ ಕಂಡವು.ಇದು ಆ ಕಾಲದ ಒಂದು ನಿರ್ಮಾಣದ ಪದ್ಧತಿ.
1921ರಲ್ಲಿ ನಿರ್ಮಾಣವಾದ ಮೂಕಿ ಸಿನಿಮಾ ನಿರು ಪಮ. ಎ. ವಿ. ವರದಾಚಾರ್ಯರು ನಾಯಕನಾಗಿ ನಟಿಸಿದರು. ಅಂದಿನ ಮೈಸೂರು ಯುವರಾಜ ಕಂಠೀರವ ನರಸರಾಜ ಒಡೆಯರ್ ನಿರ್ಮಾಣ ಮಾಡಿದರು.ಇದೇ ಮೊದಲ ಪ್ರಯೋಗ ಎನ್ನಬಹುದೇನೋ……ಆದರೆ ಅದನ್ನೂ ಖಚಿತವಾಗಿ ಹೇಳಲಾಗದು. ಕಾರಣ ಉಳಿದ ಸಿನಿಮಾಗಳ ಮಾಹಿತಿ ಹೆಚ್ಚು ತಿಳಿದಿಲ್ಲ.
ದಿ. ಆರ್. ನಾಗೇಂದ್ರ ರಾಯರ ಕುರಿತು ಅವರ ಪುತ್ರ ನಿರ್ದೇಶಕ, ಛಾಯಾಗ್ರಾಹಕ ಆರ್. ಎನ್. ಕೃಷ್ಣ ಪ್ರಸಾದ್ ಲೇಖನ ಒಂದರಲ್ಲಿ ತಂದೆಯವರು 1930 -34ರ ವರೆಗೆ ಮುಂಬಯಿಯಲ್ಲಿಕೆಲ ಕನ್ನಡ ತಮಿಳು,ತೆಲುಗು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರು ಎಂದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದರಲ್ಲಿ ಮೂಕಿ ಚಿತ್ರ ಕೂಡಾ ಇರಬಹುದು.
1925 ರಲ್ಲಿ ತರೀಕೆರೆಯಲ್ಲಿ ಪ್ರದರ್ಶನ ಕಂಡ ನಾಟಕ ಮಹಾತ್ಮ ಕಬೀರ್. ಈ ನಾಟಕವನ್ನು ಚಿತ್ರೀಕರಣ ಮಾಡಿ ಸಿನಿಮಾ ರೂಪಕ್ಕೆ ತರಲಾಗಿತ್ತು.
1928 -33ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಸೂರ್ಯ ಫಿಲಂ ಕಂಪನಿ ಸುಮಾರು 40ಮೂಕಿ ಚಿತ್ರಗಳನ್ನು ನಿರ್ಮಾಣ ಮಾಡಿತ್ತು ಎನ್ನ ಲಾಗಿದೆ. ಈ ಸಂಸ್ಥೆಯ ಪ್ರಥಮ ಚಿತ್ರ "ರಾಜ ಹೃದಯ "ಈ ಚಿತ್ರದಲ್ಲಿ ಮೊದಲ ವಾಕ್ತ್ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಲಕ್ಷ್ಮಿ ಬಾಯಿ ನಾಯಕಿ. ಇದೇ ಅವರ ಮೊದಲ ಸಿನಿಮಾ. ಈ ಚಿತ್ರದ ಅದ್ಭುತ ಗೆಲುವು ಮುಂದೆ ಇದೇ ಸಂಸ್ಥೆಯ 15 ಚಿತ್ರಗಳಲ್ಲಿಇವರಿಗೆ ನಾಯಕಿಯಾಗಿ ನಟಿಸುವಂತೆ ಮಾಡಿತು. ಇವರ ಯಶಸ್ಸು ಮುಂದೆ ಇವರ ತಂಗಿ ಕಮಲಾ ಬಾಯಿ ಕೂಡಾ ನಟನೆಯತ್ತ ಬರುವಂತೆ ಮಾಡಿತು.
ಸೂರ್ಯ ಕಂಪನಿಯ ಯಶಸ್ಸು ಮತ್ತು ಸಾಹಿತಿ ದೇವುಡು ನರಸಿಂಹ ಶಾಸ್ತ್ರೀ ಅವರ ಒತ್ತಾಸೆಯಂತೆ ಮುಂದೆ ಗುಬ್ಬಿ ವೀರಣ್ಣ ನವರು ಚಿತ್ರ ರಂಗದತ್ತ ಬಂದರು.ಕರ್ನಾಟಕ ಪಿಕ್ಚರ್ ಕಾರ್ಪೋರೇಶನ್ ಎಂಬ ಸಂಸ್ಥೆ ಹುಟ್ಟು ಹಾಕಿ ಮೊದಲಿಗೆ ಹರಿಮಾಯ (1929)ಚಿತ್ರ ನಿರ್ಮಿಸಿದರು. ಈ ಚಿತ್ರದ ನಿರ್ದೇಶಕರು ವೈ. ವಿ. ರಾವ್. ಇವರು ತಾರೆ ಲಕ್ಷ್ಮಿ ಅವರ ತಂದೆ. ನಂತರ ದೇವುಡು ಅವರ ಕಳ್ಳರ ಕೂಟ ನಾಟಕ ಆಧಾರಿಸಿ "ಹಿಸ್ ಲವ್ ಅಫೇರ್ (1930)"ಮತ್ತು ಮತ್ತು ಅವರದೇ ಕತೆ ಅಧರಿಸಿ " ಸಾಂಗ್ ಆಫ್ ಲೈಫ್ (1931)ಎಂಬ ಚಿತ್ರ ನಿರ್ಮಾಣ ಮಾಡಿದರು.ಆದರೆ ಇವರ ಪ್ರಯತ್ನಗಳು ಯಶಸ್ಸು ಕಾಣಲಿಲ್ಲ.ಇಲ್ಲಿ ಹಿನ್ನಡೆಯಾಗಿತ್ತು.
ಮೂಕಿ ಚಿತ್ರಗಳ ಸಾಲಿನಲ್ಲಿ ಗಮನಾರ್ಹ ಚಿತ್ರ ವಸಂತ ಸೇನಾ (1925)ಮೋಹನ್ ಭವನಾನಿ ನಿರ್ಮಿಸಿ ಅಜ್ಜoಪುರ ಸೀತಾರಾಮ್ ಟಿ. ಪಿ. ಕೈಲಾಸಂ ಶಕಾರನ ಪಾತ್ರದಲ್ಲಿ ನಟಿಸಿದ್ದ ಚಿತ್ರ. ಮೃಚ್ಚ ಕಟಿಕ ನಾಟಕ ಆಧರಿಸಿದ ಚಿತ್ರ. ಇದು ಶ್ರೀರಂಗ ಪಟ್ಟಣ ಲಾಲ್ ಬಾಗ್, ಬೇಲೂರು, ಹಳೇಬೀಡು ಮೊದಲಾಡೆದೆ ಚಿತ್ರೀಕರಣವಾಯಿತು. ಮೂರು ತಿಂಗಳು ನಿರ್ಮಾಣ ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಚಿತ್ರ ಐದು ಲಕ್ಷ ಗಳಿಸಿತ್ತು.ಕರ್ನಾಟಕ ಮಾತ್ರವಲ್ಲ, ದೇಶ ವಿದೇಶದಲ್ಲಿ ಪ್ರದರ್ಶನ ಕಂಡಿತು. ಅಲ್ಲಿಗೆ ಈ ಕಾಲದಲ್ಲಿ ಬಡ ಬಡಿಸುವ ಪ್ಯಾನ್ಇಂಡಿಯಾ ಕಲ್ಪನೆಯನ್ನು ಈ ಚಿತ್ರದಲ್ಲಿಯೇ ಕಾಣಬಹುದೇನೋ……! ಈ ಚಿತ್ರ ಮಾತ್ರವಲ್ಲ ಅನೇಕ ಮೂಕಿ, ಟಾಕೀ ಸಿನಿಮಾಗಳ ನೆಗೆಟಿವ್ಈಗ ಉಳಿದಿಲ್ಲ.
ಕಡೆಯದಾಗಿ ಡಾ. ಕೆ. ಶಿವರಾಮ ಕಾರಂತರು 1930ರಲ್ಲಿ ಡೊಮಿoಗೋ ಎಂಬ ಚಿತ್ರದಲ್ಲಿ ನಟಿಸಿ ನಿರ್ಮಿಸಿ ನಿರ್ದೇಶನ ಮಾಡಿದರೆ,1931ರಲ್ಲಿ ಭೂತ ರಾಜ್ಯಎಂಬ ಚಿತ್ರೀಕರಣ ಮಾಡಿದರು. ಇವು ಮೂಕಿ ಚಿತ್ರಗಳಕಾಲದ ಕೆಲ ಮಾಹಿತಿಗಳು .ನಂತರದ ಮಾಹಿತಿ ಟಾಕೀ ಸಿನೆಮಾಗಳದ್ದು.