ಅಕ್ಕಮಹಾದೇವಿ ಎಂದು ಪ್ರಸಿದ್ಧರಾಗಿರುವ ಮಹಾದೇವಿಯಕ್ಕ ಕನ್ನಡದ ಶ್ರೇಷ್ಠ ಕವಯಿತ್ರಿ. ಇವರ ಸ್ಥಳ ಬಳ್ಳಿಗಾವೆ ಸಮೀಪದ ಉಡುತಡಿ. ಇವರು ನಿರ್ಮಲಶೆಟ್ಟಿ ಮತ್ತು ಸುಮತಿ ದಂಪತಿಗಳ ಮಗಳು. ವಚನ ಸಾಹಿತ್ಯದ ಉಜ್ವಲ ನಕ್ಷತ್ರ ಇವರು. ತನ್ನ ಆದರ್ಶಕ್ಕಾಗಿ ಸಾಮಾಜಿಕ ವ್ಯವಸ್ಥೆ ಮತ್ತು ರಾಜಪ್ರಭುತ್ವ ಎರಡನ್ನೂ ಏಕಕಾಲಕ್ಕೆ ಧಿಕ್ಕರಿಸಿ ನಿಂತ ಮಹಾ ದಿಗ್ಗಜ. ಪುರುಷಪ್ರಧಾನ ಸಮಾಜವಾಗಿದ್ದ ಅಂದಿನ ಕಾಲದಲ್ಲಿ ಸ್ತ್ರೀ ಮಹತ್ವ ಮತ್ತು ಹೆಣ್ಣಿಗೆ ಒಂದು ಗೌರವನ್ನು ತಂದುಕೊಟ್ಟಂತಹ ವಚನಕಾರ್ತಿ.
ಇವರು ತಮ್ಮ 16ರ ವಯಸ್ಸಿನಲ್ಲಿ ಒಲ್ಲದ ಮನಸ್ಸಿನಿಂದ ಕೌಶಿಕ ಎಂಬ ರಾಜನೊಡನೆ ವೈವಾಹಿಕ ಬಂಧನಕ್ಕೆ ಒಳಗಾಗಿ ನಾನಾ ರೀತಿಯ ಮಾನಸಿಕ ಯಾತನೆಯಿಂದ ಬೇಸತ್ತು ತನ್ನ ಭೋಗಭಾಗ್ಯ ವನ್ ಎಲ್ಲಾ ತ್ಯಜಿಸಿ ವಿರಕ್ತ ದಿಗಂಬರ ಆಗುತ್ತಾಳೆ.
ಅಲೌಕಿಕ ಗಂಡನನ್ನು ಹರಸುತ್ತಾ ಹೊರಟ ದಿಟ್ಟ ಧೀಮಂತೆ.
ಅಂದಿನ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಇದ್ದ ಕಿರುಕುಳ ,ನಿಷ್ಕೃಷ್ಟತೆ , ಹಿಂಸೆಗಳ ವಿರುದ್ಧ ಹೋರಾಡಿದ ಮಹಾ ಹೋರಾಟಗಾರ್ತಿ.
ಇಲ್ಲಿಯವರೆಗೂ ಅಕ್ಕನ ಸುಮಾರು 434 ವಚನಗಳು ಲಭ್ಯವಾಗಿವೆ.
ಅಕ್ಕನ ವಚನಗಳಲ್ಲಿ ತಮ್ಮ ಜೀವನ ಅನುಭವ, ಸಾಮಾಜಿಕ ಕಾಳಜಿ ನೋಡಬಹುದು.
ಇವರ ವಚನಗಳ ಅಂಕಿತ ಚನ್ನಮಲ್ಲಿಕಾರ್ಜುನ.
ತನ್ನ ಇಷ್ಟದೈವವನ್ನು ಗಂಡನಾಗಿ ಸ್ವೀಕರಿಸಿ ಸಮಾಜದ ಉದ್ಧಾರಕ್ಕಾಗಿ ದುಡಿದವರು.
ಶರಣ ಸತಿ ಲಿಂಗ ಪತಿ ಎಂಬ ಭಾವವನ್ನು ಸ್ಥಾಯಿಯಾಗಿ ವಚನಗಳನ್ನು ಬರೆದರು.
ಅಕ್ಕಮಹಾದೇವಿ ತನ್ನ ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದಳು. ಕೌಶಿಕ ಅವಳನ್ನು ಬಿಟ್ಟಿರಲಾರದೆ ಶಿವ ಭಕ್ತನಂತೆ ವೇಷಧರಿಸಿ ತಾನೀಗ ಪರಿಶುದ್ಧ ನೆಂದು ಅಕ್ಕಮಹಾದೇವಿಯ ಬಳಿ ಬಂದು ತನ್ನನ್ನು ಒಪ್ಪಿಕೊಳ್ಳುವಂತೆ ಎಷ್ಟೇ ಪ್ರಯತ್ನ ಮಾಡಿದರೂ ವಿಫಲನಾದ ಎಂದು ಹೇಳುತ್ತಾರೆ.
ವಚನಗಳಲ್ಲದೆ ಯೋಗಾಂಗತ್ರಿವಿಧಿ ಎಂಬ ಕೃತಿಯನ್ನು ಸಹ ರಚಿಸಿದ್ದಾರೆ. ಮೂಲತಹ ಇದು ತ್ರಿಪದಿಯಲ್ಲಿ ರಚಿತವಾದ ಕೃತಿ . ಇದರಲ್ಲಿ ಒಟ್ಟು 67 ತ್ರಿಪದಿಗಳು ಇವೆ.
ಅಂದಿನ ಕಾಲದಲ್ಲಿಯೇ ಸ್ತ್ರೀ ಶಕ್ತಿ ಯನ್ನು ತೋರಿಸಿ. ಹೆಣ್ಣು ಸಮಾಜದ ಕಣ್ಣು ಎಂದು ತೋರಿಸಿಕೊಟ್ಟವರು ಅಕ್ಕಮಹಾದೇವಿ. ಹುಟ್ಟಿನಿಂದ ಸಾಯುವವರೆಗೂ ಸಮಾಜಕ್ಕಾಗಿ ದುಡಿದ ತ್ಯಾಗಮಯಿ.