Episode (ಸಂಚಿಕೆ) – 15

SANTOSH KULKARNI
By -
0

     ಇತ್ತ ಸೃಷ್ಟಿಯ ಹೊಣೆಹೊತ್ತ ಬ್ರಹ್ಮ ದೇವ ಬಹು ಮಂದಿಯನ್ನು ಸೃಷ್ಟಿಸಿ ಕಾರ್ಯದಲ್ಲಿ ನಿಯೋಜಿಸಿದ್ದನು. ಇಷ್ಟೇ ಸಾಲದು ಸಕಲ ವಿದ್ಯೆಗೆ ಒಬ್ಬ ಅಧಿದೇವತೆ ಬೇಕೆಂದು ತನ್ನ ಮುಖದಿಂದಲೇ ಓರ್ವಳನ್ನು ಸೃಷ್ಟಿ ಮಾಡಿ “ಸರಸ್ವತಿ” ಎಂದು ಹೆಸರಿಟ್ಟು ಸಕಲ ವಿದ್ಯೆಗಳನ್ನು ನಿಕ್ಷೇಪಿಸಿ ತನ್ನ ಸಂಕಲ್ಪ ಪೂರೈಸಿದನು.

    ಅದೇ ಸಮಯದಲ್ಲಿ ವಿಷ್ಣು ಭಗವಾನ್ ಪಾಲನಾ ಕಾರ್ಯಕ್ಕೆ ಸಹಾಯಕ ಬೇಕೆಂಬ ಸತ್ಯವರಿತು, ರಕ್ಷಣೆ ಮಾಡಬೇಕಾದರೆ ಆಸೆಯ ಉತ್ಪತ್ತಿಯಾಗಬೇಕು. ಆಸೆ ಉಂಟಾಗಲು ಪ್ರೀತಿ ಹುಟ್ಟಬೇಕು. ಆಸೆ ಪ್ರೀತಿ ಜೊತೆಯಾಗಿರುವ ಕಾಮ ಈ ಜಗತ್ತಿಗೆ ಬೇಕೆಂದು ತರ್ಕಿಸಿದನು. ಮುಂದೆ ಪ್ರಜಾಸೃಷ್ಟಿಗೂ ಇದರ ಅವಶ್ಯಕತೆ ಇದೆ ಎಂದು ಅರಿತನು. ಸರ್ವಾಂಗ ಸುಂದರನನ್ನು ತನ್ನ ಮನಸ್ಸಿಂದಲೇ ಪಡೆದು ಆತನಿಗೆ “ಮನ್ಮಥ” ಎಂದು ಹೆಸರಿಟ್ಟನು.

    ಹೀಗಿರಲು ಲಯಕಾರಕ ಪರಶಿವ ತಾನು ಎಲ್ಲವನ್ನೂ ನಾಶ ಮಾಡುವವ. ಹಾಗೆಂದು ತನ್ನ ನಾಶದಿಂದ ಉಂಟಾಗಬಲ್ಲ ದುಃಖವನ್ನೂ ನಾಶ ಮಾಡಬೇಕೆಂದು ಬಯಸಿದ. ನಾದವೂ , ವಾದನವೂ, ಕುಣಿತವೂ ಜೊತೆಯಾದರೆ ಆನಂದ ಉಕ್ಕೇರುತ್ತದೆ. ಇದನ್ನರಿತು ಅನೇಕ ಋಷಿವರೇಣ್ಯರನ್ನು ಆಮಂತ್ರಿಸಿ ಡಮರುಗ ಪಾಣಿಯಾಗಿ ನರ್ತನ ಮಾಡಲಾರಂಭಿಸಿದ. ರುದ್ರ ನರ್ತನ ತಾಂಡವ ಅದ್ಬುತವಾಗಿ ಸಾಗಿತು.

    ರಸೋದ್ದೀಪಕಗಳಾದ ಹಲವು ನಾಟ್ಯಗಳನ್ನಾಡಿದಾಗ ನವರಸಗಳೂ ವ್ಯಕ್ತವಾದವು. ಹರನ ನಾಟ್ಯದ ತಾಳ, ಗತಿಗಮನ, ಅಕ್ಷರ, ಲಯ, ಸಂಕೇತಗಳನ್ನು ಋಷಿಗಳು ಗುರುತಿಸಿ ನಾಟ್ಯ ಶಾಸ್ತ್ರಕ್ಕೆ ಸಂಗ್ರಹಿಸಿಕೊಂಡರು. ಶಿವಾನುಗ್ರಹವೂ ಸಂಗ್ರಹಕ್ಕೆ ಪ್ರಾಪ್ತವಾಯಿತು. ಹೀಗೆ ತ್ರಿಮೂರ್ತಿಗಳಿಂದ ದೈವೀ ಸಂಪತ್ತಿಗಳು ಮೂರ್ತಗೊಂಡವು.

    ಸರಸ್ವತಿ ದೇವಿ ವಿದ್ಯಾಧಿದೇವತೆಯಾಗಿ ಬ್ರಹ್ಮ ಸಂಕಲ್ಪ ಈಡೇರಿದರೂ, ಜಗದಲ್ಲಿ ಸ್ತ್ರೀ ಪುರುಷ ಸಂಯೋಗದಿಂದಲೇ ಪ್ರಜಾಸಮೃದ್ಧಿಯಾಗಬೇಕೆಂಬ ಹೊಸ ಅಕಾಂಕ್ಷೆಯೊಂದು ಮೂಡಿತು. ಇದಕ್ಕೆ ಪೂರಕ ಕಾರಣನಾಗಿ ಮನ್ಮಥ ತನ್ನ ಕರ್ತವ್ಯವೆಸಗಿದ್ದ. ಮದನ(ಮನ್ಮಥ)ನ ಮಾಟ ಸರಸ್ವತಿಗೂ ಪರಿಣಮಿಸಿ ಬ್ರಹ್ಮ – ಸರಸ್ವತಿ ಸತಿ ಪತಿಗಳಾದರು.

    ಈ ವಿಷಯ ತಿಳಿದ ದಂಡಾಧಿಕಾರಿ ಲಯಕರ್ತ ಶಿವನಿಗೆ ಕೋಪ ಆವರಿಸಿತು. ತಂದೆ ಮಗಳು ಈಗ ಹೊಸ ಸಂಬಂಧ ರೂಪಿಸಿ ಸಲ್ಲಾಪ ನಿರತರಾಗಿರುವುದನ್ನು ಒಪ್ಪಲಾಗಲಿಲ್ಲ. ಆಕ್ಷೇಪಿಸಿ ಶಿಕ್ಷಿಸಲು ಮುಂದಾದಾಗ, ಮದೋನ್ಮತ್ತನಾಗಿದ್ದ ಚತುರ್ಮುಖ ಬ್ರಹ್ಮ – ಪರಮೇಷ್ಠಿಯಾದ ನನ್ನನ್ನು ಪ್ರಶ್ನಿಸಲು ನೀನ್ಯಾರು ಎಂಬ ಭಾವ ತಳೆದನು. ಅರೆಕ್ಷಣ ಮದ ಬ್ರಹ್ಮನ ಶಿರವೇರಿದ ಪರಿಣಾಮ ಐದನೇ ಶಿರವಾಗಿ ಮೂಡಿಬಂತು.

    ಕುಪಿತನಾದ ಪರಶಿವ ಮೂಡಿದ ಅಹಂಭಾವದ ಐದನೇ ಶಿರ ಛೇದನ ಮಾಡಲು ಮುಂದಾದನು. ನಿನ್ನ ಈ ಕೃತ್ಯ ಬ್ರಹ್ಮ ದ್ವೇಷಕ್ಕೆ ಕಾರಣವಾಗಿ ಭಿಕ್ಷಾಟನೆ ಪ್ರಾಪ್ತಿಯಾದೀತು ಎಂದು ಬ್ರಹ್ಮ ಎಚ್ಚರಿಸಿದನು. ಪ್ರತಿಯೊಂದು ಘಟನೆಗೂ ಕಾರಣವಿದೆ, ಆಗಬೇಕಾದದ್ದು ಆಗಲಿ ನನ್ನ ಕರ್ತವ್ಯ ಮಾಡುತ್ತೇನೆಂದು ಶಿವ ಮುಂದುವರಿದನು. ರಭಸದಿಂದ ಅಧಿಕ ಶಿರವನ್ನು ತನ್ನ ಕೈಗಳಿಂದ ಒತ್ತಿ ಕಿತ್ತನಾದರೂ, ಹಾಗೆ ಸೆಳೆಯುವಾಗ ಕೀಳಲ್ಪಟ್ಟ ಶಿರ ಬಾಯ್ತೆರೆದು ಶಿವನ ಕೈಯನ್ನು ನುಂಗುವಂತೆ ಕಚ್ಚಿ ರಕ್ತ ಹೀರ ತೊಡಗಿತು.

    ಬ್ರಹ್ಮ ಕಪಾಲ ಪರಮೇಶ್ವರ ಕರದಲ್ಲಿ ತೃಪ್ತನಾಗದೇ ಹರನ ಹಸಿರಕ್ತ ಹೀರತೊಡಗಿತು. ನೋವು ತಾಳಲಾರದೆ ಮಹಾದೇವ ಘರ್ಜಿಸಿದ, ಚೀರಿ ಕೂಗಾಡಿದ. ಬಸವಳಿದು ಬೇಡಿದ. ಜಗದ ಆನಂದಕ್ಕಾಗಿ ತಾಂಡವವಾಡಿದ್ದ ಶಿವನೇ ದುಃಖಿತನಾಗಿದ್ದಾನೆ. ಲೋಕ ಲೋಕ ಅಲೆದಾಡಿ “ಭವತಿ ಭಿಕ್ಷಾಂದೇಹಿ” ಎಂದು ಬೇಡಲಾರಂಭಿಸಿದ. ಹರನಿಗೇನು ಬೇಕು? ಸ್ಮಶಾನ ವಾಸಿಗೆ ಜಗದಲಂಕಾರ ಬೇಕೇ? ಅನ್ನ ಪಾನಾದಿ ಭೋಜ್ಯಗಳು ಬೇಕೇ? ಯಾವ ಭಿಕ್ಷೆ ಹರ ಬೇಡುತ್ತಿದ್ದಾನೆ? ಬಂಧನದ ಮುಕ್ತಿ ಎಲ್ಲೂ ಕಾಣದಾದ.

    ಬಸವಳಿದು ನಿತ್ರಾಣನಾಗಿ ಮೂರ್ಛಿತನಾಗಿ ಬಿದ್ದು, ಎಚ್ಚೆತ್ತುಕೊಂಡ. ನಾವು ತ್ರಿಮೂರ್ತಿಗಳು. ನಮ್ಮೊಳಗೆ ಇಬ್ಬರ ನ್ಯಾಯದ ಪರಿಹಾರಕ್ಕೆ ಉಳಿದಿರುವ ಹರಿಯೇ ಸೂಕ್ತ ಎಂದು ಆತನನ್ನೇ ಸ್ಮರಿಸಿ ಧ್ಯಾನಿಸಿದ. ಮೈದೋರಿದ ವಿಷ್ಣು ಹರನ ಪರಿಭವಕ್ಕೆ ಮರುಗಿದ. ವಿಚಾರವನ್ನು ಅರಿತು ಮುಗುಳ್ನಗೆ ಸೂಸಿದ. ವಿಮೋಚನೆಗೆ ಮುಂದಾಗಿ, ಬ್ರಹ್ಮ ಕಪಾಲವನ್ನು ಕುರಿತು ಹೇ! ಬ್ರಹ್ಮ ಶಿರವೇ.. ರುದ್ರನ ರುಧಿರವನ್ನು ಈಗಾಗಲೇ ಹೀರಿ ಸಿಪ್ಪೆ ಮಾಡಿ ನೀ ಹಿಗ್ಗಿರುವೆ.

    ಇನ್ನೇನು ಉಳಿದಿದೆ ಅಲ್ಲಿ? ಇಲ್ಲಿ ಬಾ ನನ್ನ ಕೈಗೆ. ನದಿಯಂತೆ ಹರಿಯುವ ರಕ್ತ ಸ್ರೋತವಿದೆ. ಕುಡಿದು ಸಂತೃಪ್ತನಾಗು ಎಂದು ಕೈ ಚಾಚಿದನು. ಆಗ ಕಪಾಲಕ್ಕೆ ಏನು ಕಂಡಿತೋ, ಹರನ ಹಸ್ತವನ್ನು ಬಿಟ್ಟು ಚಾಚಿದ ಹರಿಯ ಹಸ್ತದತ್ತ ನೆಗೆಯಿತು.

Post a Comment

0Comments

Please Select Embedded Mode To show the Comment System.*