Episode (ಸಂಚಿಕೆ) – 14

SANTOSH KULKARNI
By -
0

     ಪ್ರಚೇತಸರಿಂದ ಸೃಷ್ಟಿ ಕಾರ್ಯಕ್ಕೆ ನಿಯುಕ್ತನಾದ ದಕ್ಷ ಬ್ರಹ್ಮ ಪ್ರಜಾಪತಿ ಅಸಿಕ್ನಿ ಎಂಬ ಪತ್ನಿಯಲ್ಲಿ ಹರ್ಯಶ್ವರರೆಂಬ ಮಕ್ಕಳನ್ನು (೫೦೦೦ ಮಕ್ಕಳು ಎಂಬ ಉಲ್ಲೇಖ ಇದೆ) ಪಡೆದನು. ಅವರನ್ನು ಸೃಷ್ಟಿ ಕಾರ್ಯಕ್ಕೆ ನಿಯೋಜಿಸಿದನು ಆದರೆ ನಾರದ ಮಹರ್ಷಿ ಹರ್ಯಶ್ವರರಿಗೆ ಆಧ್ಯಾತ್ಮ ತತ್ವ ಬೋಧಿಸಿ ತಪಸ್ಸಿಗೆ ಕಳುಹಿಸಿದರು.

    ಇದಾದ ಬಳಿಕ ದಕ್ಷ ಮತ್ತೆ ಶಬಲಾಶ್ವರು ಎಂಬ ಮಕ್ಕಳನ್ನು (೧೦೦೦ ಎಂಬ ಉಲ್ಲೇಖವಿದೆ) ಈ ಕಾರ್ಯಕ್ಕೆ ನಿಯೋಜಿಸಿದಾಗ ಅವರೂ ನಾರದರ ಉಪದೇಶದಿಂದ ತಪೋಮುಖರಾದರು. ಇದರಿಂದ ಸಿಟ್ಟುಗೊಂಡ ದಕ್ಷ ನಾರದರಿಗೆ – “ನೀನು ಒಂದೆಡೆ ನಿಂತರಲ್ಲವೇ ಉಪದೇಶ ಮಾಡಲಾಗುವುದು, ಇನ್ನು ನೀನು ನಿಂತಲ್ಲಿ ನಿಲ್ಲದೇ ಇರು” ಎಂದು ಶಾಪವಿತ್ತ ಪರಿಣಾಮವೇ ನಾರದರು ಸದಾ ಸಂಚಾರ ನಿರತರಾದರು.

    ಇದಾದ ನಂತರ ದಕ್ಷನ 60 ಮಂದಿ ಪುತ್ರಿಯರಲ್ಲಿ ಹತ್ತು ಮಂದಿಯನ್ನು ಧರ್ಮ ಮಹರ್ಷಿಗಳಿಗೂ 13 ಮಂದಿಯನ್ನು ಕಶ್ಯಪ ಮಹರ್ಷಿಗಳಿಗೂ ವಿವಾಹ ಮಾಡಿಕೊಟ್ಟರು.

    ಸೃಷ್ಟಿ ಕಾರ್ಯಕ್ಕೆ ನಿಯೋಜಿತರಾದ ಕಶ್ಯಪರು ದಕ್ಷ ಪುತ್ರಿಯರ ಮಾಧ್ಯಮ ವಿಧ ವಿಧ ಸಂತತಿ ಸೃಷ್ಟಿಸಿದರು. ದಿತಿ ದೇವಿಯಲ್ಲಿ ದೈತ್ಯರು, ಅದಿತಿಯಲ್ಲಿ ದೇವತೆಗಳು, ದನುವಿನಲ್ಲಿ ದಾನವರು, ದನಾಯುವಿನಲ್ಲಿ ಸಿದ್ಧರು, ಪಾದಳಲ್ಲಿ ಗಂಧರ್ವರು, ಮುನಿ ಎಂಬವಳಲ್ಲಿ ಅಪ್ಸರೆಯರು, ಸುರಸೆಯಲ್ಲಿ ಯಕ್ಷರು ಮತ್ತು ಮಹಾನಾಗರು, ಇಲಾ ಎಂಬವಳಲ್ಲಿ ವೃಕ್ಷ ಲತಾದಿಗಳು, ಕ್ರೋಧವಶಾಳಲ್ಲಿ ಮಾಂಸಾಹಾರಿ ಮೃಗಗಳು, ತಾಮ್ರಾ ಎಂಬವಳಲ್ಲಿ ಅಶ್ವ ಮತ್ತು ತತ್ಸಮಾನ ಗರ್ಭಧಾರಣೆ ಮಾಡುವ ಪ್ರಾಣಿಗಳು, ಕಪಿಲಾ ಎಂಬವಳಲ್ಲಿ ಗೋವುಗಳು, ವಿನತೆಯಲ್ಲಿ ಅರುಣ, ಗರುಡಾದಿ ಖಗ ಪಕ್ಷಿಗಳು, ಕದ್ರುವಿನಲ್ಲಿ ಸರ್ಪಗಳು… ಹೀಗೆ ನಾನಾ ವಿಧ ಸೃಷ್ಟಿಗಳಾದವು.

    ದಕ್ಷ ಪ್ರಜಾಪತಿಯಿಂದ ನಿಯುಕ್ತರಾದವರಲ್ಲಿ ಮತ್ತೋರ್ವ ಅತ್ರಿ ಮುನಿ. ಸೃಷ್ಟಿ ಕಾರ್ಯದ ಅರ್ಹತೆಗಾಗಿ ದೀರ್ಘ ತಪಸ್ಸನ್ನು ಮಾಡಿ ಕಣ್ಣು ತೆರೆದಾಗ ಹೊರಹೊಮ್ಮಿದ ತೇಜಸ್ಸಿನ ಕಾಂತಿ ಕ್ಷೀರ ಸಾಗರ ಸೇರಿತು. 

    ಆ ತೇಜಸ್ಸಿಗೆ ಬ್ರಹ್ಮದೇವರು ಪುರುಷಾಕೃತಿ ನೀಡಿದಾಗ ಹಾಲ್ಗಡಲಿನಿಂದ ಬಂದ ದಿವ್ಯ ಪುರುಷನಿಗೆ ಚಂದ್ರನೆಂದು ಹೆಸರಿಟ್ಟು ಗ್ರಹಾಧಿಪತ್ಯ ನೀಡಿದರು. ದಕ್ಷ ಪ್ರಜಾಪತಿ ತನ್ನ 60 ಮಂದಿ ಪುತ್ರಿಯರಲ್ಲಿ ಉಳಿದ 27 ಮಂದಿಯನ್ನು ಚಂದ್ರನಿಗೆ ವಿವಾಹ ಮಾಡಿ ಕೊಟ್ಟರು. ಆಶ್ವಿನಿ ಭರಣಿ ರೋಹಿಣಿಯಾದಿ 27 ನಕ್ಷತ್ರಗಳೇ ಚಂದ್ರನ ಪತ್ನಿಯರು. ಆದರೆ ಚಂದ್ರ ಮಾತ್ರ ರೋಹಿಣಿಯನ್ನೇ ಅತಿ ಪ್ರೀತಿ ಮಾಡಿ ಅವಳೊಂದಿಗೇ ಇದ್ದಾಗ, ಬೇಸತ್ತ ಉಳಿದ 26 ಮಂದಿ ತಮ್ಮ ತಂದೆ ದಕ್ಷ ಪ್ರಜಾಪತಿಗೆ ದೂರಿತ್ತರು. ದಕ್ಷನು ಕ್ರುದ್ಧನಾಗಿ ತಾರತಮ್ಯ ತೋರಿದ “ಚಂದ್ರನಿಗೆ ಕ್ಷಯ ರೋಗ ಬರಲಿ” ಎಂದು ಶಪಿಸಿದನು.

    ಇದರಿಂದ ಭಯಗೊಂಡ ಚಂದ್ರನು ಭಕ್ತಿಯಿಂದ ಶಿವ ಪರಮಾತ್ಮನಿಗೆ ಶರಣಾದಾಗ, ಆರ್ತನಿಗೆ ಅಭಯ ಪ್ರದಾನವಾಯಿತು. ಬ್ರಹ್ಮ – ನಾರಾಯಣರು ಜೊತೆ ಸೇರಿ ಪರಶಿವನೊಡನೆ ವಿಚಾರ ವಿನಿಮಯ ಮುಖೇನ ಹದಿನಾರು ಕಲೆ ತುಂಬಿ ಅಕ್ಷಯ ಪ್ರಭೆ ಹೊಂದಿದ್ದ ಚಂದ್ರನ ಒಂದು ಕಲೆಯ ಅಂಶವನ್ನು ಶಿವನ ಜಟೆಯಲ್ಲಿ ಧಾರಣೆ ಮಾಡಿಸಿ ಶಿವನ ರಕ್ಷೆಯ ವಾಗ್ದಾನ ಉಳಿಸಿದರು.

    ಹಾಗೆಯೇ ಉಳಿದ ಹದಿನೈದು ಅಂಶ ದಕ್ಷ ಶಾಪದಂತೆ ದಿನಕ್ಕೊಂದೊಂದು ಕಲೆಗಳು ಕ್ಷಯದಿಂದ ನಷ್ಟವಾಗುತ್ತಾ ಸಾಗಿ ಶೂನ್ಯವಾಗಿ ಮತ್ತೆ ಪುನರಪಿ ಒಂದೊಂದೇ ಕಲೆಗಳು ವೃದ್ಧಿಗೊಳ್ಳುತ್ತಾ ಸಾಗುವಂತೆ ಮಾಡಿ ದಕ್ಷ ಶಾಪವನ್ನೂ ನಿಜವಾಗಿಸಿ ಚಂದ್ರನು ಪ್ರತಿದಿನ ಅನುಭವಿಸುವಂತೆ ಮಾಡಿದರು. ಇದರಿಂದ ಪೌರ್ಣಮಿ ಅಮವಾಸ್ಯಾದಿ ತಿಥಿಗಳು ಉಂಟಾದವು.

Post a Comment

0Comments

Please Select Embedded Mode To show the Comment System.*